Monday, 25th November 2024

ನೂತನ ರಾಷ್ಟ್ರಪತಿ ಆಯ್ಕೆ: ಜುಲೈ 18ರಂದು ಚುನಾವಣೆ

ನವದೆಹಲಿ: ನೂತನ ರಾಷ್ಟ್ರಪತಿ ಆಯ್ಕೆಗೆ ಜುಲೈ 18ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ದಿನಾಂಕ ಘೋಷಿಸಿದರು.

ಜುಲೈ 18ರಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಧಿಕಾರಾವಧಿ ಅಂತ್ಯ ವಾಗುತ್ತಿರುವ ಹಿನ್ನೆಲೆಯಲ್ಲಿ ಆಯೋಗ ಹೊಸ ರಾಷ್ಟ್ರಪತಿ ಆಯ್ಕೆಗೆ ದಿನಾಂಕ ನಿಗದಿ ಮಾಡಿದೆ.

ಈ ಬಾರಿ ಸಂಸದರ ಮತದ ಮೌಲ್ಯ 700 ಆಗಿದೆ. ಬಂಧನದಲ್ಲಿರುವ ಜನಪ್ರತಿನಿಧಿಗಳಿಗೂ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಜೈಲಿನಲ್ಲಿರುವವರು ಪೆರೋಲ್‌ಗೆ ಅರ್ಜಿ ಸಲ್ಲಿಸಬೇಕು ಮತ್ತು ಪೆರೋಲ್ ಪಡೆದರೆ ಅವರು ಮತ ಚಲಾಯಿಸ ಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ಜುಲೈ 24ರಂದು ರಾಮನಾಥ್‌ ಕೋವಿಂದ್‌ ಅಧಿಕಾರಾವಧಿ ಅಂತ್ಯಗೊಳ್ಳಲಿದೆ. ಸಾಮಾನ್ಯವಾಗಿ ಅಧಿಕಾರಾವಧಿಗಿಂತ ಮುನ್ನವೇ ಚುನಾವಣೆ ನಡೆಯುತ್ತದೆ ಮತ್ತು ಮುಂದಿನ ರಾಷ್ಟ್ರಪತಿಗಳನ್ನು ಹಾಲಿ ರಾಷ್ಟ್ರಪತಿ ಸ್ವಾಗತಿಸಿ ನಂತರ ನಿರ್ಗಮಿಸುತ್ತಾರೆ. 2017ರ ಜುಲೈ 17ರಂದು ರಾಮನಾಥ್‌ ಕೋವಿಂದ್‌ ರಾಷ್ಟ್ರ ಪತಿಯಾಗಿ ಆಯ್ಕೆಯಾಗಿದ್ದರು.

ರಾಷ್ಟ್ರಪತಿ ಚುನಾವಣೆಯಲ್ಲಿ 4,809 ಮತದಾರರು ಮತ ಚಲಾಯಿಸಲಿದ್ದಾರೆ. ಯಾವುದೇ ರಾಜಕೀಯ ಪಕ್ಷವು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಎಲ್ಲಾ ಸಂಸದರು ಮತ್ತು ಶಾಸಕರ ಮತಗಳಲ್ಲಿ ಎನ್‌ಡಿಎ ಶೇಕಡಾ 48.9 ರಷ್ಟು ಮತಗಳನ್ನು ಹೊಂದಿದೆ.

2017 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು ಶೇ.50 ರಷ್ಟು ಮತಗಳು ಎನ್‌ಡಿಎ ಪರವಾಗಿ ಇದ್ದವು. ಒಟ್ಟು 4,880 ಮತದಾರರಲ್ಲಿ 4,109 ಶಾಸಕರು ಮತ್ತು 771 ಸಂಸದರು ಮತ ಚಲಾಯಿಸಿದ್ದರು.

776 ಸಂಸದರು ಮತ್ತು 4,809 ಶಾಸಕರು ರಚಿಸಿದ ಚುನಾವಣಾ ಕಾಲೇಜಿನಿಂದ ಭಾರತದ ರಾಷ್ಟ್ರಪತಿಯನ್ನು ಆಯ್ಕೆ ಮಾಡಲಾಗುತ್ತದೆ. ಚುನಾವಣಾ ಕಾಲೇಜಿನ ಒಟ್ಟು ಸಾಮರ್ಥ್ಯ 10,98,903 ಮತಗಳು. ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನ ಮತ ಪಡೆದ ಅಭ್ಯರ್ಥಿಯನ್ನು ಭಾರತದ ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ.