Saturday, 23rd November 2024

ಯಾಹಿ ಬುಡಕಟ್ಟಿನ ಕೊನೆಯ ವ್ಯಕ್ತಿ ಇಶಿ

ಶಶಾಂಕಣ

shashidhara.halady@gmail.com

ಒಂದು ಜನಾಂಗವನ್ನು, ಸಂಸ್ಕೃತಿಯನ್ನು ನಾಶ ಮಾಡಬಹುದೇ ಎಂಬ ಪ್ರಶ್ನೆಗೆ ಯಾಹಿ ಬುಡಕಟ್ಟಿನ ಅವನತಿಯ ವಿವರ ಉತ್ತರವಾಗ ಬಹುದು. ನಿರಂತರವಾಗಿ ಬಿಳಿ ಜನರ ‘ಜಿನೋಸೈಡ್’ಗೆ ಗುರಿಯಾದ ಯಾಹಿ ಬುಡಕಟ್ಟು, ಇಪ್ಪತ್ತನೆಯ ಶತಮಾನದ ಮೊದಲ ದಶಕ ದಲ್ಲಿ ನಶಿಸಿ ಹೋಯಿತು.

ಅಮೆರಿಕದಲ್ಲಿ ಅದಾಗಲೇ ನಾಗರಿಕತೆ ಆವರಿಸಿದ್ದ ಕಾಲ ಅದು. ಇಪ್ಪತ್ತನೆಯ ಶತಮಾ ನದ ಮೊದಲ ಭಾಗ. 29 ಆಗಸ್ಟ್ 1911ರ ಒಂದು ಬೆಳಗು. ಕ್ಯಾಲಿಫೋರ್ನಿಯಾದ ಒರೋವಿಲ್ಲೆ ಪಟ್ಟಣದ ಹೊರವಲಯದಲ್ಲಿ ಒಬ್ಬ ಮೂಲನಿವಾಸಿ, ಹಸಿದು ನಿಂತಿದ್ದ. ಪಟ್ಟಣದ ಷರೀ-ನಿಗೆ ಸುದ್ದಿ ಹೋಯಿತು. ಆತ ತನ್ನ ಸಿಬ್ಬಂದಿ ಮತ್ತು ಗನ್ ಹೊಂದಿದ್ದ ಪೊಲೀಸರೊಂದಿಗೆ ಹೋಗಿ ನೋಡಿದರೆ, ಈ ವ್ಯಕ್ತಿ ನಸುನಗುತ್ತಾ, ಅಸಹಾಯಕನಾಗಿ ನಿಂತಿದ್ದ.

ನೋಡಿದ ತಕ್ಷಣ ಗೊತ್ತಾಗುತ್ತಿತ್ತು, ಆತನೊಬ್ಬ ಮೂಲನಿವಾಸಿ ಮತ್ತು ಹಸಿವಿನಿಂದ ಬಳಲಿಹೋಗಿದ್ದ ಎಂದು. ತಕ್ಷಣ ಅವನ ಕೈಗೆ ಕೋಳ ಹಾಕಿ ಜೈಲಿಗೆ ಹಾಕಲಾಯಿತು. ‘ನಿನ್ನ ಹೆಸರೇನು?’ ಎಂದು ಕೇಳಿದಾಗ, ಆ ವ್ಯಕ್ತಿ ಹೇಳಿದ ‘ನನಗೆ ಹೆಸರಿಲ್ಲ. ಏಕೆಂದರೆ, ನನ್ನನ್ನು ಹೆಸರಿಟ್ಟು ಕರೆಯುವ ನನ್ನ ಕುಲದ ಯಾರೂ ಈಗ ಬದುಕುಳಿದಿಲ್ಲ’. ಅವನ ಕುಲದ ಪದ್ಧತಿಯ ಪ್ರಕಾರ, ಅವರ ಹೆಸರನ್ನು ಸ್ವತಃ ಅವರೇ ಹೇಳುವಂತಿಲ್ಲ. ಬೇರೆಯವರು ಪರಿಚಯ ಮಾಡಿಕೊಟ್ಟಾಗ ಮಾತ್ರ ವ್ಯಕ್ತಿಯ ಹೆಸರು ಹೊರ ಜಗತ್ತಿಗೆ ಗೊತ್ತಾಗುತ್ತದೆ. ಆ ಮೂಲನಿವಾಸಿ ಯ ಕುಲದವರು ಬೇರಾರೂ ಬದುಕಿ ಉಳಿಯದೇ ಇರುವುದರಿಂದಾಗಿ, ಆತನ ನಿಜವಾದ ಹೆಸರು ಶಾಶ್ವತವಾಗಿ ಇತಿಹಾಸದ ಗರ್ಭದಲ್ಲಿ ಹೂತು ಹೋಯಿತು.

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮಾನವಶಾಸ ತಜ್ಞರು ಅವನನ್ನು ತಮ್ಮ ವಶಕ್ಕೆ ಪಡೆದುಕೊಂಡು, ಅವನ ಕುಲವನ್ನು
ಮೇಲ್ನೋಟದಿಂದ ಪತ್ತೆ ಹಚ್ಚಿ, ಅವನಿಗೊಂದು ಹೆಸರು ಕೊಟ್ಟರು. ‘ಇಶಿ’. ಇಶಿ ಎಂದರೆ ಅಮೆರಿಕದ ಯಾನಾ ಇಂಡಿಯನ್ ಭಾಷೆಯಲ್ಲಿ ‘ಮಾನವ’ ಎಂದರ್ಥ. ಇಶಿಯನ್ನು ಕ್ಯಾಲಿಫೋರ್ನಿಯಾದ ಜೈಲಿನಲ್ಲಿ ಪತ್ತೆ ಹಚ್ಚಿದ ಅಮೆರಿಕದ ಪತ್ರಕರ್ತರು ಅವನಿಗೆ ‘ಅಮೆರಿಕದ ಕೊನೆಯ ಕಾಡು ಮನುಷ್ಯ’ ಎಂಬ ಹೊಸ ಹೆಸರು ಕೊಟ್ಟು, ಕಾಡುಪ್ರದೇಶದಲ್ಲಿ ಬದುಕುಳಿದಿರುವ ಕೊನೆಯ ಅಮೆರಿಕನ್ ಇಂಡಿಯನ್ ಎಂದು ವ್ಯಾಪಕ ಪ್ರಚಾರ ನೀಡಿದರು.

ಅವನು ಎಲ್ಲಿ ಹೋದರೂ ಹಿಂಬಾಲಿಸಿ, ಫೋಟೋ ಬರೆದು ‘ಸ್ಟೋರಿ’ ಮಾಡಿದರು. ಇತ್ತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮಾನವ ಶಾಸ್ತ್ರ ತಜ್ಞರು, ಅವನ ಗೆಳೆತನ ಬೆಳೆಸಿ, ಯಾನಾ ಬುಡಕಟ್ಟು ಜನಾಂಗದ ಸಂಸ್ಕೃತಿಯ ವಿವರಗಳನ್ನು ಕಲೆಹಾಕತೊಡಗಿದರು. ಏಕೆಂದರೆ, ಆ ಬುಡಕಟ್ಟಿನ ಯಾಹಿ ಕವಲಿನ ಕೊನೆಯ ವ್ಯಕ್ತಿಯೇ ಇಶಿ. ಇಶಿಯನ್ನು ವಿಶ್ವವಿದ್ಯಾನಿಲಯದ ಮ್ಯೂಸಿಯಂನಲ್ಲಿ ಇರಿಸಿ ಕೊಂಡು, ಅವನಿಗೊಂದು ಕೆಲಸ ಕೊಟ್ಟರು.

1916ರ ತನಕ ಬದುಕಿದ್ದ ಇಶಿಯು, ಅವರ ಅಧ್ಯಯನಕ್ಕೆ ಅನುಕೂಲವಾಗುವಂತೆ, ತನಗೆ ಗೊತ್ತಿದ್ದದ್ದೆಲ್ಲವನ್ನೂ ಅವರಿಗೆ ತಿಳಿಸಿದ.
ಇಶಿಯು ಆ ಕುಲದ ಕೊನೆಯ ವ್ಯಕ್ತಿ ಹೇಗಾದ? ಸುದ್ದಿದಾಹದ ಅಮೆರಿಕನ್ ಜನರ ದೃಷ್ಟಿಯಲ್ಲಿ ‘ಕೊನೆಯ ಕಾಡು ಮನುಷ್ಯ’ ಎಂಬ ಬಿರುದನ್ನು ‘ಇಶಿ’ಗೆ ಏಕೆ ಕೊಡಲಾಯಿತು? ಇವೆಲ್ಲಾ ವಿವರಗಳನ್ನು ಹುಡುಕುತ್ತಾ ಹೋದರೆ, ಅಮೆರಿಕದ ರಕ್ತ ಚರಿತ್ರೆಯ ಹಾಳೆಗಳು ಒಂದೊಂದಾಗಿ ಹೊರಬರುತ್ತವೆ, ಇನ್ನೂ ಅಲ್ಲಿನ ರಕ್ತದ ಕಲೆಗಳು ಆರಿಲ್ಲವೇನೋ ಎಂಬಂತಹ ಹಸಿ ಹಸಿ ವಿವರಗಳು ತಲ್ಲಣವನ್ನು
ಹುಟ್ಟಿಸುತ್ತವೆ. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಅಮೆರಿಕದ ಯುರೋಪಿಯನ್ ಮೂಲದ ಬಿಳಿ ಜನರು, ಸ್ಥಳೀಯ ಇಂಡಿಯನ್ ರನ್ನು ಪ್ರಾಣಿಗಳಂತೆ ಬೇಟೆಯಾಡಿ, ಇಡೀ ಕುಲವನ್ನೇ ನಾಶ ಮಾಡಿದ ‘ಹತ್ಯಾಕಾಂಡ’ ಅಥವಾ ಜಿನೋಸೈಡ್ ಕಥನಗಳು ಬಿಚ್ಚಿಕೊಳ್ಳುತ್ತವೆ.

ಇಶಿ ಎಂಬ ಅಮೆರಿಕದ ಕೊನೆಯ ‘ಕಾಡು ಮನುಷ್ಯ’ನು ಅಲ್ಲಿನ ಯಾಹಿ ಬುಡಕಟ್ಟಿಗೆ ಸೇರಿದವನು. ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿ ಯಾನಾ ಭಾಷೆಯನ್ನಾಡುವ ನಾಲ್ಕು ಬುಡಕಟ್ಟುಗಳಿದ್ದವು. ಉತ್ತರ ಯಾನಾ, ಮಧ್ಯ ಯಾನಾ, ದಕ್ಷಿಣ ಯಾನಾ ಮತ್ತು ಯಾಹಿ. ಸಾ.ಶ.1770ರ ಹೊತ್ತಿಗೆ ಯಾನಾ ಜನಸಂಖ್ಯೆ 1500 ಆಗಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಈ ಸಂಖ್ಯೆ 3000ಕ್ಕೆ ಏರಿತ್ತು. ಅಮೆರಿಕದ ಕ್ಯಾಲಿಫೋರ್ನಿಯಾ ಸುತ್ತಮುತ್ತಲಿನ ವಿಶಾಲ ಬಯಲು, ಕಾಡು ಪ್ರದೇಶವೇ ಅವರ ವಾಸಸ್ಥಳ.

ಅದು ಸುಮಾರು 2400 ಚದರ ಮೈಲಿ ವಿಸ್ತೀರ್ಣದ ಬೆಟ್ಟ, ಗುಡ್ಡ, ತೊರೆ, ಹುಲ್ಲುಗಾಲುಗಳಿಂದ ತುಂಬಿತ್ತು. ನಿರಂತರವಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತಿದ್ದ ಯಾನಾ ಬುಡಕಟ್ಟು ಜನರು ಬೇಟೆಯಾಡಿ, ಹಣ್ಣು ಮತ್ತು ಗಡ್ಡೆಗಳನ್ನು
ತಿಂದು ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು. ಇವರ ಪೈಕಿ ಯಾಹಿ ಬುಡಕಟ್ಟಿಗೆ ಸೇರಿದವರ ಸಂಖ್ಯೆ ಸುಮಾರು 400. ತಮ್ಮದು ಎಂದು ಗುರುತಿಸಿಕೊಂಡ ಬೆಟ್ಟ ಗುಡ್ಡ ಪ್ರದೇಶಗಳನ್ನು ಯಾವ ಕಾರಣಕ್ಕೂ ಇತರರಿಗೆ ಬಿಟ್ಟುಕೊಡುತ್ತಿರಲಿಲ್ಲ.

ಬಿಲ್ಲು, ಬಾಣ ಉಪಯೋಗಿಸಿ ಯುದ್ಧ ಮಾಡುತ್ತಿದ್ದರು. ಚಿನ್ನವನ್ನು ಹುಡುಕುತ್ತಾ ಬಂದ ಅಮೆರಿಕದ ಬಿಳಿಯರು ಕ್ಯಾಲಿಫೋರ್ನಿಯಾದ ಇವರ ಜಾಗದ ಮೇಲೆ ಕಣ್ಣು ಹಾಕಿದಾಗ, ಯಾಹಿ ಜನರ ಸಂತತಿಗೆ ಕುತ್ತು ಬಂತು. ಬಿಳಿ ಜನರ ಬಳಿ ಬಂದೂಕುಗಳಿದ್ದವು, ಇವರ ಬಳಿ ಇರಲಿಲ್ಲ. ಅಷ್ಟೆ, ಕಥೆ. ಅಮೆರಿಕದ ಸೈನ್ಯ, ಪೊಲೀಸರು ಮತ್ತು ಕೌಬಾಯ್‌ಗಳು ಯಾಹಿ ಜನರ ನೆಲೆಗಳ ಮೇಲೆ ದಾಳಿ ಮಾಡತೊಡಗಿ ದರು. ಬಿಲ್ಲು ಬಾಣ ಹಿಡಿದು ಎದುರಿಸುತ್ತಿದ್ದ ಯಾಹಿ ಜನರ ಮೇಲೆ ಗುಂಡು ಚಲಾಯಿಸಿ, ಮನಬಂದಂತೆ ಸಾಯಿಸಿದರು.

ಕ್ಯಾಲಿಫೋರ್ನಿಯಾದಲ್ಲಿ ಚಿನ್ನ ದೊರೆಯುತ್ತದೆ ಎಂದು ಗೊತ್ತಾದಾಗ, ದಾಳಿಯ ತೀವ್ರತೆ ಜಾಸ್ತಿಯಾಯಿತು. ಇದು 1850-1900ರ ನಡುವೆ ನಡೆದದ್ದು. ಕ್ಯಾಲಿಫೋರ್ನಿಯಾ ಸುತ್ತ ಮುತ್ತ, ಬಿಳಿಯರಿಗೆ ವಿಶೇಷ ಪ್ರತಿರೋಧ ಇರಲಿಲ್ಲ. ಇಂಡಿಯನ್ ಜನರ ಬಳಿ ಇದ್ದ ಆಯುಧಗಳೆಂದರೆ ಬಿಲ್ಲು ಮತ್ತು ಬಾಣ ಮಾತ್ರ. ಅಮೆರಿಕದ ಸೈನ್ಯವೇ ನಡೆಸುತ್ತಿದ್ದ ಈ ಕೊಲೆಗಳನ್ನು ‘ಜಿನೋಸೈಡ್’ ಎಂದು ನಂತರ
ಗುರುತಿಸಲಾಗಿದೆ. ಎಥ್ನಿಕ್ ಕ್ಲೀನ್ಸಿಂಗ್ ಎಂದೂ ಕರೆಯಲಾಗಿದೆ. ಒಮ್ಮೊಮ್ಮೆ ಅಮೆರಿಕ್ ಇಂಡಿಯನ್ ದಾಳಿಗೆ ಒಬ್ಬಿಬ್ಬರು ಬಿಳಿಯರು ಸಾಯುತ್ತಿದ್ದರು, ಅದಕ್ಕೆ ಪ್ರತೀಕಾರವಾಗಿ ನೂರಾರು ಇಂಡಿಯನ್ ರನ್ನು ಗುಂಡಿಟ್ಟು ಸಾಯಿಸಲಾಗುತ್ತಿತ್ತು.

1865ರಲ್ಲಿ ರಾಬರ್ಟ್ ಆಂಡರ್‌ಸನ್ ಎಂಬಾತನ ನೇತೃತ್ವದಲ್ಲಿ ಬಂದೂಕು ಹಿಡಿದ ಬಿಳಿಯರು ಯಾಹಿ ಜನರ ಮೇಲೆ ದಾಳಿ ಮಾಡಿ, ಸುಮಾರು 70 ಜನರನ್ನು ಸಾಯಿಸಿದರು. ಆಗ ಯಾಹಿ ಜನರ ಸಂಖ್ಯೆ 100ಕ್ಕಿಂತ ಕಡಿಮೆ ಸಂಖ್ಯೆಗೆ ಇಳಿಯಿತು. 6 ಆಗಸ್ಟ್ 1865ರ ನಸುಕಿನಲ್ಲಿ ಮತ್ತೊಮ್ಮೆ ಬಿಳಿಯ ಬಂದೂಕುಧಾರಿಗಳು ಯಾಹಿ ಜನರ ಗ್ರಾಮದ ಮೇಲೆ ಎರಗಿ, ನಿದ್ರಿಸಿದ್ದವರ ಮೇಲೆ ಗುಂಡು ಹಾರಿಸಿ, 17 ಜನರನ್ನು ಸಾಯಿಸಲಾಯಿತು.

1867ರಲ್ಲಿ ಮಿಲ್ ಕ್ರೀಕ್ ಎಂಬಲ್ಲಿ ಗುಹೆಯೊಂದರಲ್ಲಿ ಅಡಗಿದ್ದ ಯಾಹಿ ಜನರನ್ನು ಪತ್ತೆ ಹಚ್ಚಿ, 33 ಜನರನ್ನು ಕೊಲ್ಲಲಾಯಿತು. 1871ರಲ್ಲಿ ನಾಲ್ವರು ಕೌಬಾಯ್‌ಗಳು ಕಿಂಗ್ಸಲೇ ಗುಹೆಯಲ್ಲಿ 30 ಜನ ಯಾಹಿಗಳನ್ನು ಗುಂಡಿಟ್ಟು ಸಾಯಿಸಿದರು. 1800ರ ಸಮಯದಲ್ಲಿ ಕ್ಯಾಲಿ ಫೋರ್ನಿಯಾ ಸುತ್ತಮುತ್ತ ಸುಮಾರು 300000 ಜನ ಸ್ಥಳೀಯ ಇಂಡಿಯನ್ ಇದ್ದರು. 1900ರ ಸಮಯಕ್ಕೆ ಅವರಲ್ಲಿ ಬದುಕಿ ಉಳಿದದ್ದು 20000 ಮಾತ್ರ.

ಇವೆಲ್ಲಾ ದಾಳಿಯಿಂದ ತಪ್ಪಿಸಿಕೊಂಡು ಸಣ್ಣ ಸಂಖ್ಯೆಯ ಯಾಹಿ ಜನರು ಬದುಕಿ ಉಳಿದಿದ್ದರು. 1865ರ ತ್ರೀ ನೋಲ್ಸ್ ಹತ್ಯಾಕಾಂಡದಲ್ಲಿ 40 ಜನ ಯಾಹಿ ಜನರು ಮೃತಪಟ್ಟಾಗ, 33 ಜನ ತಪ್ಪಿಸಿಕೊಂಡು, ಬೆಟ್ಟ ಗುಡ್ಡಗಳನ್ನು ಸೇರಿದರು. ಮುಂದಿನ 44 ವರ್ಷಗಳ ಕಾಲ ಆ ತಂಡ ನಾಗರಿಕ (ಬಿಳಿ) ಜಗತ್ತಿನ ಕಣ್ತಪ್ಪಿಸಿ ಓಡಾಡುತ್ತಿತ್ತು. ಕ್ರಮೇಣ ಅವರಲ್ಲಿ ಹೆಚ್ಚಿನವರು ಸತ್ತು, ನಾಲ್ವರು ಮಾತ್ರ ಬದುಕಿ ಉಳಿದರು. ಅವರಲ್ಲಿ ಇಶಿಯೂ ಒಬ್ಬ. 1908ರಲ್ಲಿ ಬಿಳಿಯರ ಒಂದು ಸರ್ವೇ ತಂಡಕ ನಾಲ್ವರು ಬುಡಕಟ್ಟು ಇಂಡಿಯನ್ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದರು. ಇವರೇ, ಇಶಿ, ಆತನ ಮಾವ, ಆತನ ತಂಗಿ ಮತ್ತು ತಾಯಿ. ಬಿಳಿಯರ ಸರ್ವೇ ತಂಡವನ್ನು ಕಂಡ ತಕ್ಷಣ, ಇಶಿ, ಮಾವ ಮತ್ತು ತಂಗಿ ತಪ್ಪಿಸಿಕೊಂಡು ಕಾಡುಪ್ರದೇಶ ಹೊಕ್ಕರು.

ವಯಸ್ಸಾಗಿದ್ದ ತಾಯಿಯು ಹೊದಿಕೆಯೊಂದನ್ನು ಹೊದ್ದು ಅಡಗಿ ಕುಳಿತಳು. ಕೆಲವು ಸಮಯದ ನಂತರ ಇಶಿ ವಾಪಸಾದ. ಆದರೆ ಮಾವ ಮತ್ತು ತಂಗಿ ವಾಪಸಾಗಲೇ ಇಲ್ಲ. ಕೆಲವೇ ದಿನಗಳಲ್ಲಿ ಇಶಿಯ ತಾಯಿಯು ಅನಾರೋಗ್ಯದಿಂದ ಸತ್ತುಹೋದಳು. ಈಗ ಇಶಿ ಒಬ್ಬಂಟಿ ಯಾದ. ನಾಲ್ಕು ವರ್ಷ ಆತ ಕಾಡು ಮೇಡು ಅಲೆದ. ಆದರೆ, ಆಹಾರ ಹುಡುಕುವುದೇ ಕಷ್ಟ ಎನಿಸತೊಡಗಿತು. ಆಗ ಅವನಿಗೆ ಸುಮಾರು 50 ವರ್ಷ ವಯಸ್ಸು. ಏಕಾಂಗಿಯಾಗಿ ಕಾಡು ಪ್ರದೇಶದಲ್ಲಿ ಓಡಾಡುವುದು ದುಸ್ತರವಾಗಿ, 29 ಆಗಸ್ಟ್ 1911ರಂದು ಒರೋವಿಲಿ ಪಟ್ಟಣದ ಹೊರವಲಯದಲ್ಲಿ ಸುಮ್ಮನೆ ಬಂದು ನಿಂತ. ಪಟ್ಟಣದ ಷರೀಫ ಅವನನ್ನು ಬಂಧಿಸಿ, ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯಕ್ಕೆ ಹಸ್ತಾಂತರ ಮಾಡಿದ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ಮ್ಯೂಸಿಯಂನ ಉದ್ಯೋಗಿಯಾಗಿ ಪರಿವರ್ತನೆ ಹೊಂದಿದ ಇಶಿಯು, ಹೊರ ಜಗತ್ತಿನ ಕಣ್ಣಿನಲ್ಲಿ ಒಂದು ‘ಮ್ಯೂಸಿಯಂ ಪೀಸ್’ ಆಗಿದ್ದ ಎಂದರೆ ತಪ್ಪಾಗದು. ಅವನ ಜತೆ ಸ್ನೇಹ ಬೆಳೆಸಿದ ವಿಶ್ವವಿದ್ಯಾಲಯದ ಮಾನವ ಶಾಸ್ತ್ರಜ್ಞರು, ಯಾಹಿ ಬುಡಕಟ್ಟು ಜನರ ಸಂಸ್ಕೃತಿಯ ವಿವರಗಳನ್ನು ಕಲೆಹಾಕಿದರು. ತಮ್ಮವರು ಬಿಲ್ಲು ಬಾಣ ಮಾಡುವ ಕಲೆ ಯನ್ನು ಆತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಹೇಳಿಕೊಟ್ಟ. ಆದರೆ, ಅದಾಗಲೇ ಆ ಬುಡಕಟ್ಟು ಸಂಸ್ಕೃತಿ ಅವನತಿಯಲ್ಲಿತ್ತು.

ಕಾಡುಪ್ರದೇಶದಲ್ಲಿ 44ವರ್ಷ ಅಡಗಿ ಕುಳಿತಿದ್ದಾಗ, ಹೆಚ್ಚಿನ ಪದ್ಧತಿಗಳು ಮರೆತುಹೋಗಿದ್ದವು. 1915ರಲ್ಲಿ ಆತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಜತೆ ಮೂರು ತಿಂಗಳು ವಾಸಿಸಿದ್ದ. ಜೀವಮಾನವಿಡೀ ಕಾಡಿನಲ್ಲೇ ಇದ್ದುದರಿಂದ, ಆತನಲ್ಲಿ ಸಾಮಾನ್ಯ ರೋಗಗಳಿಗೂ ಪ್ರತಿರೋಧ ಶಕ್ತಿ ಇರಲಿಲ್ಲ. ಆದ್ದರಿಂದ, ನಾಗರಿಕರೊಡನೆ ಒಡನಾಡಿದ ತಕ್ಷಣ ಅವನನ್ನು ಹಲವು ಕಾಯಿಲೆಗಳು ಕಾಡಿದವು. ಪ್ರಾಧ್ಯಾ ಪಕರು ಚಿಕಿತ್ಸೆ ಕೊಡಿಸಿದರು. ಬಿಳಿ ಜನರ ಸಂಪರ್ಕಕ್ಕೆ ಬಂದು ನಾಲ್ಕು ವರ್ಷಗಳ ಕಾಲ ಬದುಕಿದ್ದ ಇಶಿಯು, 25 ಮಾರ್ಚ್ 1916 ರಂದು ಕ್ಷಯರೋಗದಿಂದ ನಿಧನವಾದ.

ಅಮೆರಿಕದ ಕೊನೆಯ ‘ಕಾಡು ಮನುಷ್ಯ’, ಇಶಿಯ ಕುರಿತು ಪುಸ್ತಕಗಳು ಬಂದಿವೆ, ಸಿನಿಮಾ ಆಗಿವೆ. ಕ್ಯಾಲಿಫೋರ್ನಿಯಾದ ಪ್ರದೇಶದಲ್ಲಿ
ಮತ್ತು ಇತರ ಕಡೆ ಬಿಳಿಯ ಜನರು ಅಮೆರಿಕನ್ ಇಂಡಿಯನ್‌ರ ಮೇಲೆ ನಡೆಸಿದ ದಬ್ಬಾಳಿಕೆ, ಕೊಲೆ, ಕ್ರೌರ್ಯವನ್ನು ಈಚಿನ ದಿನಗಳಲ್ಲಿ ಗುರುತಿಸಲಾಗಿದ್ದು, ಜಿನೊಸೈಡ್ ಅಥವಾ ಹತ್ಯಾಕಾಂಡ ಎಂದು ಹೆಸರಿಸಲಾಗಿದೆ. ನಮ್ಮ ದೇಶದಲ್ಲಿ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ನಂತರ, ಬ್ರಿಟಿಷ್ ಸರಕಾರವು ನೇರವಾಗಿ ಆಡಳಿತವನ್ನು ಕೈಗೆತ್ತಿಕೊಂಡು, ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುತ್ತಿರುವ ಸಮಯದಲ್ಲೇ, ದೂರದ ಅಮೆರಿಕದಲ್ಲಿ ಬಿಳಿಯರ ಸೈನ್ಯವು ಸ್ಥಳೀಯ ಇಂಡಿಯನ್ ಜನಾಂಗವನ್ನು ಬಂದೂಕಿನಿಂದ ಬೇಟೆಯಾಡಿ, ಸಾಯಿಸುತ್ತಿತ್ತು.

ಒಂದು ಜನಾಂಗವನ್ನು, ಸಂಸ್ಕೃತಿಯನ್ನು ನಾಶ ಮಾಡಬಹುದೇ ಎಂಬ ಪ್ರಶ್ನೆಗೆ ಯಾಹಿ ಬುಡಕಟ್ಟಿನ ಅವನತಿಯ ವಿವರ ಉತ್ತರವಾಗ ಬಹುದು. ನಿರಂತರವಾಗಿ ಬಿಳಿ ಜನರ ‘ಜಿನೋಸೈಡ್’ಗೆ ಗುರಿಯಾದ ಯಾಹಿ ಬುಡಕಟ್ಟು, ಇಪ್ಪತ್ತನೆಯ ಶತಮಾನದ ಮೊದಲ ದಶಕದಲ್ಲಿ ನಶಿಸಿ ಹೋಯಿತು. ಆ ಬುಡಕಟ್ಟಿನ ಕೊನೆಯ ವ್ಯಕ್ತಿ ಇಶಿಯ ಕಥನವು, ಸಮಸ್ತ ಅಮೆರಿಕನ್ ಇಂಡಿಯನ್ ಬುಡಕಟ್ಟು ಜನರ ಅವನತಿಯ
ಪ್ರತೀಕವಾಗಿ ಕಾಣುತ್ತದೆ.