Sunday, 15th December 2024

ಅಧಿಕಾರಕ್ಕಾಗಿ ಬಿಜೆಪಿ ಹೊಸ ತಂತ್ರಗಾರಿಕೆ !

ವರ್ತಮಾನ

maapala@gmail.com

ಅಭಿವೃದ್ಧಿ, ಆಡಳಿತದಿಂದ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದೆ. ಹೀಗಾಗಿ ಜನರ ಭಾವನೆಗಳನ್ನು ಕೆರಳಿಸುವ ವಿವಾದಗಳಿಗೆ ಆದ್ಯತೆ ನೀಡಿ, ಆ ಮೂಲಕ 2023ರಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಎಲ್ಲ ಪ್ರಯತ್ನ ಗಳನ್ನು ಮಾಡುತ್ತಿದೆ.

ಸುವರ್ಣ ಚತುಷ್ಪತ ರಸ್ತೆ. ಈ ಹೆಸರು ಕೇಳುತ್ತಿದ್ದಂತೆ ಕಣ್ಣ ಮುಂದೆ ಬರುವುದು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಮುಖ.

20 ಪಕ್ಷಗಳನ್ನು ಒಟ್ಟಿಗಿಟ್ಟುಕೊಂಡು ಅಧಿಕಾರ ನಡೆಸುವುದೇ ದೊಡ್ಡ ಸಾಹಸ. ಅಂತಹದ್ದರಲ್ಲಿ 1999ರಿಂದ 2004ರವರೆಗೆ ಐದು ವರ್ಷ ಅಧಿಕಾರದಲ್ಲಿರಲು ಕಾರಣ ಇದೇ ವಾಜಪೇಯಿ. ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದೇ ಕಷ್ಟ ಎನ್ನುವ ಪರಿಸ್ಥಿತಿ ಯಲ್ಲೂ ಉತ್ತಮ ಆಡಳಿತ, ಅಭಿವೃದ್ಧಿ ವಾಜಪೇಯಿ ಸರಕಾರ ದಲ್ಲಿ ಆಗಿತ್ತು ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅಭಿವೃದ್ಧಿ, ಆಡಳಿತದ ವಿಚಾರವನ್ನೇ ಪರಿಗಣಿಸಿ ಜನ ಮತ ಹಾಕುವುದಿದ್ದರೆ 2004ರಲ್ಲಿ ಎನ್‌ಡಿಎ ಸೋಲುತ್ತಿರಲಿಲ್ಲ. ಕಾಂಗ್ರೆಸ್ ಅಽಕಾರಕ್ಕೆ ಬರುತ್ತಿರಲಿಲ್ಲ.

ಆಗಲೇ ಅಧಿಕಾರಕ್ಕೆ ಬರಲು ಕೇವಲ ಉತ್ತಮ ಆಡಳಿತ, ಅಭಿವೃದ್ಧಿ ಮಾತ್ರ ಸಾಲದು ಎಂಬುದನ್ನು ಬಿಜೆಪಿ ಅರ್ಥೈಸಿಕೊಂಡಿತು. ಹಾಗಿದ್ದರೆ ಏನು ಮಾಡಬೇಕು ಎಂದು ಯೋಚಿಸಿದಾಗ ಹೊಳೆದ ಸಂಗತಿ ಎಂದರೆ, ಜನರನ್ನು ಭಾವನಾತ್ಮಕವಾಗಿ ತಮ್ಮೊಂದಿಗೆ ಇಟ್ಟುಕೊಳ್ಳಬೇಕು, ಈ ದೇಶದ ಬಹುಸಂಖ್ಯಾತರನ್ನು ಸಮಾಧಾನ ಪಡಿಸಬೇಕು ಎಂಬುದು. ಗುಜರಾತ್ ಮುಖ್ಯಮಂತ್ರಿ ಯಾಗಿದ್ದ ನರೇಂದ್ರ ಮೋದಿ ಎಂಬ ವ್ಯಕ್ತಿ ಈ ದೇಶದ ಪ್ರಧಾನಿಯಾಗಲು ಕಾರಣವಾದ ಪ್ರಮುಖ ಅಂಶವಿದು.

ಅಭಿವೃದ್ಧಿಯೊಂದಿಗೆ ಬಹುಸಂಖ್ಯಾತ ಹಿಂದೂ ಸಮುದಾಯವನ್ನು ತಮ್ಮತ್ತ ಒಲಿಸಿಕೊಂಡು ಗುಜರಾತ್ ಮಾದರಿ ರೂಪಿಸಿದ ಮೋದಿ 2014ರಲ್ಲಿ ದೇಶದ ಪ್ರಧಾನಿಯಾದರು. ಒಂದೊಮ್ಮೆ ನರೇಂದ್ರ ಮೋದಿ ಮತ್ತು ತಂಡ ಕೇವಲ ಅಭಿವೃದ್ಧಿ, ಆಡಳಿತ ಎಂದುಕೊಂಡಿದ್ದರೆ 2019ರಲ್ಲಿ ಗೆಲ್ಲಲು ಸಾದ್ಯವಾಗುತ್ತಿರಲಿಲ್ಲವೇನೋ. ಆದರೆ, ಆಡಳಿತದ ಜತೆಗೆ ಜನರ ಭಾವನೆಗಳನ್ನು ಗೆದ್ದರು. ಬಹುಸಂಖ್ಯಾತ ಹಿಂದೂಗಳನ್ನು ಒಟ್ಟುಗೂಡಿಸಿ, ವೋಟ್‌ಬ್ಯಾಂಕ್ ಆಗಿ ಪರಿವರ್ತಿಸಿಕೊಂಡರು.

ಹಿಂದುತ್ವದ ವಿಚಾರ ಪ್ರಸ್ತಾಪವಾದಾಗಲೆಲ್ಲಾ ಬಿಜೆಪಿ ಜನರ ಜತೆ ನಿಂತಿತು. ಅಯೋಧ್ಯೆ ವಿವಾದ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ, ಅಲ್ಪಸಂಖ್ಯಾತರ ತುಷ್ಠೀಕರಣದಿಂದ ಅಸಮಾಧಾನಗೊಂಡಿದ್ದ ಹಿಂದೂಗಳನ್ನು ಆಡಳಿತದ ಮೂಲಕ, ಮಹತ್ವದ ನಿರ್ಧಾರದ ಮೂಲಕ ಸಮಾಧಾನಪಡಿಸಿದರು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಇವೆಲ್ಲವೂ ಬಗೆಹರಿಯುತ್ತದೆ ಎಂದು ಜನ ಭಾವಿಸಿದರು. ಹೀಗಾಗಿ ೨೦೧೯ರಲ್ಲೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂತು.

ಮೋದಿ ಸರಕಾರ ಭಾವನಾತ್ಮಕವಾಗಿ ಜನರನ್ನು ಎಷ್ಟು ಸೆಳೆದಿತ್ತು ಎಂದರೆ ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ದರೂ ಅನೇಕರು ತಲೆಕೆಡಿಸಿಕೊಳ್ಳಲಿಲ್ಲ. ಈಗಲೂ ತಲೆಕೆಡಿಸಿಕೊಂಡಿಲ್ಲ. ಈಗ ಚುನಾವಣೆ ನಡೆದರೂ ಮತ್ತೆ ಬಿಜೆಪಿ ನೇತೃತ್ವದ ಸರಕಾರವೇ ಅಧಿಕಾರಕ್ಕೆ ಬರುತ್ತದೆ ಎಂಬ ಪರಿಸ್ಥಿತಿ ಇದೆ. ಸದ್ಯಕ್ಕೆ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ. ಇದಕ್ಕೆ ಕಾರಣವಾಗಿರುವುದು ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ಕೆರಳಿಸಿ, ನಮಗೆ ನ್ಯಾಯ ಸಿಗಬೇಕಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯನ್ನು ಮೂಡಿಸಿರುವುದು.

ರಾಜ್ಯದ ವಿಚಾರಕ್ಕೆ ಬಂದರೆ 2014ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಉದಾಹರಣೆ ಯಾಗಿ ತೆಗೆದುಕೊಳ್ಳಬಹುದು. ಇತ್ತೀಚಿನ ವರ್ಷಗಳಲ್ಲಿ ಕಂಡುಬಂದ ಅತ್ಯುತ್ತಮ ಆಡಳಿತವನ್ನು ಸಿದ್ದರಾಮಯ್ಯ ಸರಕಾರ ನೀಡಿತ್ತು. ಅದರಲ್ಲೂ ಆ ಸರಕಾರದಲ್ಲಿ ನೀಡಿದ ‘ಭಾಗ್ಯ’ ಗಳನ್ನು ಯಾರೂ ನೀಡಲಿಲ್ಲ. ಪಕ್ಷ ಅಧಿಕಾರದಿಂದ ಇಳಿದು ನಾಲ್ಕು ವರ್ಷ ಕಳೆದರೂ ಈಗಲೂ ಜನ ಸಿದ್ದರಾಮಯ್ಯ ಸರಕಾರದ ಯೋಜನೆಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ, 2018 ರಲ್ಲಿ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಆ ಸರಕಾರ ಎಷ್ಟೇ ಉತ್ತಮ ಆಡಳಿತ ನೀಡಿದರೂ ಸರಕಾರದ ಕಾರ್ಯವೈಖರಿ ಹಿಂದೂಗಳ ಅಸಮಾಧಾನಕ್ಕೆ ಕಾರಣ ವಾಗಿತ್ತು.

ಅಲ್ಪಸಂಖ್ಯಾತರನ್ನು ಓಲೈಸಿತು. ಜಾತಿಗಳ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಿತು. ಅದರಲ್ಲೂ ಕೋಮು ಗಲಭೆಗೆ ಸಂಬಂಧಿಸಿ ದಂತೆ ಅಲ್ಪಸಂಖ್ಯಾತರ ಮೇಲೆ ದಾಖಲಾಗಿದ್ದ ಪ್ರಕರಣ ವಾಪಸ್ ಪಡೆದಿದ್ದು, ಮತೀಯವಾದಿಗಳಿಂದ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಗಂಭೀರವಾಗಿ ಪರಿಗಣಿಸದೇ ಇರುವುದು ಬಹುಸಂಖ್ಯಾತ ಹಿಂದೂಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ೨೦೧೮ರಲ್ಲಿ ಕಾಂಗ್ರೆಸ್ಸನ್ನು ಸೋಲಿಸಿದರು. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರಕ್ಕೇರುವಷ್ಟು ಸ್ಥಾನ ಸಿಗಲಿಲ್ಲ.

ಇಷ್ಟೆಲ್ಲಾ ಹಿನ್ನೆಲೆ ಹೇಳಲು ಮುಖ್ಯ ಕಾರಣ, ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಕಳೆದ ಆರು ತಿಂಗಳ ಆಡಳಿತ ವೈಖರಿ. 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೇಳಿಕೊಳ್ಳುವಂತಹ ಆಡಳಿತ ನೀಡಲು ಸಾಧ್ಯವಾಗಿಲ್ಲ. ಮತ್ತೊಂದೆಡೆ ಪ್ರತಿಪಕ್ಷ ಕಾಂಗ್ರೆಸ್ ಕೂಡ ಶಕ್ತಿಯುತವಾಗಿರುವುದರಿಂದ ಪ್ರಸ್ತುತ ಸನ್ನಿವೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟಸಾಧ್ಯ ಎನ್ನುವಂತಿದೆ. ಹೀಗಾ ಗಿಯೇ ಕಳೆದ ಆರು ತಿಂಗಳಿನಿಂದ ಭಾವನಾತ್ಮಕವಾಗಿ ಹಿಂದೂಗಳನ್ನು ಸಂಘಟಿಸುವ ಕಾರ್ಯ ಮಾಡುತ್ತಿದೆ. ಇದಕ್ಕೆ ಊದಾಹರಣೆಗಳೇ ಹಿಜಾಬ್ ವಿವಾದ, ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ನಿರ್ಬಂಧ, ಹಲಾಲ್‌ವಿವಾದ, ಲೌಡ್ ಸ್ಪೀಕರ್ ಬಳಕೆ ಮುಂತಾದ ವಿವಾದಗಳಲ್ಲಿ ಬಹುಸಂಖ್ಯಾತ ಹಿಂದೂಗಳ ಪರವಾಗಿ ನಿಂತಿದ್ದು.

ಹೇಗಾದರೂ ಮಾಡಿ ಅಽಕಾರಕ್ಕೆ ಬರಲೇ ಬೇಕು ಎಂದು ಹೋರಾಟಕ್ಕಿಳಿದಿರುವ ಕಾಂಗ್ರೆಸ್, ಈ ಎಲ್ಲಾ ಸಂದರ್ಭದಲ್ಲೂ ಅನಿವಾರ್ಯ ವಾಗಿ ಅಲ್ಪಸಂಖ್ಯಾತನ್ನು ಓಲೈಸಲು ಮುಂದಾಯಿತು. ಎಲ್ಲಾ ವಿವಾದಗಳ ಸಂದರ್ಭದಲ್ಲೂ ಅಲ್ಪಸಂಖ್ಯಾತರ ಪರ ನಿಂತಿತು. ಹೀಗಾಗಿ ಹಿಂದೂಪರ ಸಂಘಟನೆಗಳು ಹೋರಾಟಕ್ಕಿಳಿದವು. ಆಗೆಲ್ಲಾ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವ ಮೂಲಕ ಹಿಂದೂ ಪರ ಸಂಘಟನೆಗಳನ್ನು ಪರೋಕ್ಷವಾಗಿ ಬೆಂಬಲಿಸಿದರು.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಿತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಕೋರ್ಟ್ ಮೆಟ್ಟಿಲೇರಿದರೂ ಪ್ರಯೋಜನ ವಾಗಲಿಲ್ಲ. ಆದರೆ, ಅದಕ್ಕೆ ಮೊದಲೇ ಸರಕಾರ ಧಾರ್ಮಿಕ ವಸಗಳನ್ನು ಶಾಲೆಗಳಲ್ಲಿ ಧರಿಸುವಂತಿಲ್ಲ ಎಂಬ ಆದೇಶ ಹೊರಡಿಸಿದ್ದರಿಂದ ಬಹುಸಂಖ್ಯಾತ ಹಿಂದೂಗಳು ಸರಕಾರವನ್ನು ಬೆಂಬಲಿಸಿದರು. ಆಜಾನ್ ವಿಚಾರದಲ್ಲೂ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್
ಆದೇಶ ಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್‌ಗಳಿಗೆ ನಿರ್ಬಂಧ ವಿಧಿಸಿತು.

ದೇವಸ್ಥಾನಗಳ ಆವರಣದಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರ ನಿರ್ಬಂಧ ಕುರಿತಂತೆ 2002-03ರಲ್ಲಿ ಜಾರಿಗೊಳಿಸಿದ್ದ ನಿಯಮವನ್ನು
ತೋರಿಸಿ, ಹಿಂದೂಪರ ಸಂಘಟನೆಗಳನ್ನು ಪರೋಕ್ಷವಾಗಿ ಬೆಂಬಲಿಸಿತು. ಇದೆಲ್ಲದರ ಪರಿಣಾಮ ಹಿಂದುತ್ವ, ಬಿಜೆಪಿಗೆ ನೆಲೆಯೇ
ಇಲ್ಲದಂತಿದ್ದ ಮಂಡ್ಯದಂತಹ ಜಿಲ್ಲೆಗಳಲ್ಲಿ ಮಕ್ಕಳ ಹೆಗಲಿನಲ್ಲಿ ಕೇಸರಿ ಶಾಲು ಕಾಣಿಸಿತು. ಇದುವರೆಗೂ ಹಸರಿ ಬಣ್ಣದಲ್ಲೇ ಇದ್ದ ಕೋಲಾರದ ಕ್ಲಾಕ್ ಟವರ್ ಕೇಸರಿ, ಬಿಳಿ, ಹಸಿರು ಬಣ್ಣದಿಂದ ಕಂಗೊಳಿಸಿತು. ಇದಾದ ಬಳಿಕ ಇದೀಗ ಮಸೀದಿ ಮತ್ತು ದೇವಾಲಯಗಳ ವಿಚಾರದಲ್ಲಿ ಸಂಘರ್ಷ ಕಾಣಿಸಿಕೊಳ್ಳುತ್ತಿದೆ.

ಮಂಗಳೂರು, ಬಸವಕಲ್ಯಾಣ, ಶ್ರೀರಂಗಪಟ್ಟಣದ ಮಸೀದಿ- ದೇವಾಲಯ ವಿವಾದಗಳು ಹಿಂದೂ-ಮುಸ್ಲಿಮರ ಮಧ್ಯೆ ಭಾವನಾತ್ಮಕ ಸಂಘರ್ಷಕ್ಕೆ ಕಾರಣವಾಗಿದೆ. ಈ ಎಲ್ಲಾ ಪ್ರಕರಣಗಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯದ ಪರ ನಿಂತಿರುವುದನ್ನೇ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕೆ ಕಾರಣ ಇಷ್ಟೆ, ಆಡಳಿತದಲ್ಲಿ ಏನೇ ಕಸರತ್ತು ಮಾಡಿದರೂ ಮತ್ತೆ ಅಧಿಕಾರಕ್ಕೇ ರಲು ಸಾಧ್ಯವಿಲ್ಲ ಎಂಬುದು.

ಏಕೆಂದರೆ, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ವರ್ಷದ ಆರಂಭದಲ್ಲಿ ಮಾಡಿದ್ದ ಪಕ್ಷದ ಆಂತರಿಕ ಸಮೀಕ್ಷೆ ಹೇಳಿದೆ. ಹೀಗಾಗಿ ಹಿಂದುತ್ವದ ಮೊರೆ ಹೋಗಿದೆ. ಹಿಂದೂಗಳ ಧಾರ್ಮಿಕ ಭಾವನೆ ಇನ್ನಷ್ಟು ಗಟ್ಟಿ ಮಾಡಿ, ಬಿಜೆಪಿಯತ್ತ ವಾಲುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಪಠ್ಯ ಪುಸ್ತಕ ವಿವಾದ. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತ ಸಮಿತಿ ಪರಿಷ್ಕರಣೆ ಮಾಡಿದ ಪಠ್ಯ ಅಂಶಗಳು ವಿವಾದ ಸೃಷ್ಟಿಸುತ್ತಿದ್ದಂತೆ, 2017- 18ರಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮಾಡಿದ್ದ ಯಡವಟ್ಟುಗಳನ್ನು ಜನರ ಮುಂದಿ ಡುತ್ತಿದೆ.

ಬರಗೂರು ಸಮಿತಿ ಪರಿಷ್ಕರಿಸಿದ ಪಠ್ಯದಲ್ಲಿ ಹಿಂದೂಗಳ ಅವಹೇಳನ, 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ದಂಗೆ ಎಂದು ಕರೆದಿದ್ದು, ಹಿಂದೂ ದೊರೆಗಳು, ವೀರ ಯೋಧರ ಪಠ್ಯಗಳನ್ನು ಮುಸ್ಲಿಂ ದೊರೆಗಳನ್ನು ವೈಭವೀಕರಿಸಲಾಗಿದೆ. ಅದನ್ನು ಸರಿ
ಪಡಿಸಿದ್ದಕ್ಕಾಗಿ ನಮ್ಮ ಸರಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಎಂದು ಹೇಳಿಕೊಂಡು ಭಾವನಾತ್ಮಕವಾಗಿ ಹಿಂದೂ ಗಳನ್ನು ಸಂಘಟಿತಗೊಳಿಸುತ್ತಿದೆ. ಹಾಗೇನಾದರೂ ಬಿಜೆಪಿಯ ಮಾತುಗಳನ್ನು ನಂಬಿ ಜನ ಮತ ಹಾಕಿದರೆ ಮತ್ತೆ ಅಧಿಕಾರಕ್ಕೆ
ಬರುತ್ತದೆ ಎಂಬ ವಿಶ್ವಾಸ ಬಿಜೆಪಿ ನಾಯಕರದ್ದು. ಅದಕ್ಕಾಗಿಯೇ ಈ ವಿಚಾರಗಳನ್ನು ಮುಂದಿಟ್ಟುಕೊಂಡು 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದೆ.

ಲಾಸ್ಟ್ ಸಿಪ್: ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ, ತಂತ್ರಗಾರಿಗೆ ಗೊತ್ತಿದ್ದವನಿಗೆ ಸೋಲು ಇಲ್ಲ.