ಏಕವಚನದಲ್ಲೇ ಹೆಚ್ಡಿಕೆ ವಿರುದ್ಧ ವಾಸು ಗರಂ
ಶಾಸಕರ ಮನೆ ಮುಂದೆ ಪ್ರತಿಭಟನೆ
ತುಮಕೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ವಿಚಾರ ಸಂಬಂಧ ಶಾಸಕ ಮತ್ತು ಮಾಜಿ ಸಿಎಂ ನಡುವೆ ಕಿತ್ತಾಟ ತಾರಕಕ್ಕೇರಿದೆ.
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ನಾಲಗೆ ಹರಿಬಿಟ್ಟ ಗುಬ್ಬಿ ಶಾಸಕ ಶ್ರೀನಿವಾಸ್, ತಾಕತ್ತಿ ದ್ದರೆ ನನ್ನ ಎದುರು ಚುನಾವಣೆ ಸ್ಪರ್ಧಿಸಿ ಗೆಲ್ಲಲಿ. ಇವನೇನಾದರೂ ಗೆದ್ದರೆ ನನ್ನ ಜೀವನ ಪೂರ ಆತನ ಮನೆಯಲ್ಲೇ ಕೂಲಿ ಮಾಡುವೆ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಹಾಕಿದ ಗುಬ್ಬಿ ಶ್ರೀನಿವಾಸ್ ವಿರುದ್ಧ ಎಚ್‌ಡಿಕೆ ಕಿಡಿಕಾರಿದ್ದರು. ಇದೇ ವಿಚಾರ ವಾಗಿ ಶನಿವಾರ ಗರಂ ಆದ ಶ್ರೀನಿವಾಸ್, ನಾನು ಸೋತರೂ ಪರವಾಗಿಲ್ಲ. ನನ್ನ ಕ್ಷೇತ್ರದಲ್ಲಿ ಇವನ ಅಭ್ಯರ್ಥಿಯನ್ನು ಗೆಲ್ಲಲು ನಾನು ಬಿಡಲ್ಲ ಎಂದು ಸವಾಲು ಹಾಕಿದ್ದಾರೆ. ಇವನು ಉತ್ತಮನಾ? ಇವನು ಯಾವುದರಲ್ಲಿ ಉತ್ತಮ? ಬೆಳಗ್ಗೆ ಒಂದು ಹೇಳ್ತಾನೆ, ಸಂಜೆ ಒಂದು ಹೇಳ್ತಾನೆ. ಇವನನ್ನು ಯಾರಾದ್ರೂ ಲೀಡರ್ ಅಂತಾ ಹೇಳ್ತಾರಾ? ನಾನು ಬ್ಯಾಲೆಟ್ ಪೇಪರ್ ತೋರ್ಸಿದ್ದೇನೆ.
ಇವನೇನು ಕತ್ತೆ ಕಾಯುತ್ತಿದ್ದನಾ? ಹೆಬ್ಬೆಟ್ಟು ತೆಗಿ ಅನ್ನಬೇಕಿತ್ತು. ನನಗಿರುವ ಮಾಹಿತಿ ಪ್ರಕಾರ ಕುಮಾರಸ್ವಾಮಿ ಮನೆಯವರೇ ನಾಟಕ ಮಾಡ್ತಿದ್ದಾರೆ. ನನ್ನನ್ನು ಮುಗಿಸಬೇಕು ಅಂತ ಅವರೇ ಕ್ರಾಸ್ ವೋಟಿಂಗ್ ಮಾಡಿಸಿ, ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನನಗೂ-ಇವರಿಗೂ ಆಗಲ್ಲ ಅನ್ನೋದು ಗೊತ್ತು. ನಾನು ಇವನಿಗೆ ಹೆದರಿಕೊಂಡು ಅಥವಾ ಬೇರೆ ಯಾರಿಗೋ ಹೆದರಿಕೊಂಡು ಯಾರಿಗೂ ಕಚ್ಚೆ ಕಟ್ಟಲ್ಲ ನನ್ನ ಮನಃಸಾಕ್ಷಿ ವಿರುದ್ಧ ನಾನು ನಡೆಯಲ್ಲ. ಇವನಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಘಳಿಗೆಗೊಂದು ಹೇಳಿಕೊಂಡು ತಿರುಗುತ್ತಾನೆ. ಇವನನ್ನು ಯಾರಾದ್ರೂ ಲೀಡರ್ ಅಂತಾ ಹೇಳ್ತಾರಾ? ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ನಾನು ಬಿಜೆಪಿಯನ್ನು ಪ್ರಾರಂಭದಿಂದಲೂ ವಿರೋಧ ಮಾಡಿಕೊಂಡು ಬಂದಿದ್ದೇನೆ. ಆಪರೇಷನ್ ಕಮಲ ನಿಲ್ಲಿಸಿದ್ನದು ನಾನು. ನನ್ನ ವಿರುದ್ಧ ಅಭ್ಯರ್ಥಿಯನ್ನು ಹಾಕಿದ ಮೇಲೆ ನಾನ್ಯಾಕೆ ಅವನಿಗೆ ಹೆದರಿಕೊಳ್ಳಲಿ? ಅವನು ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಆದವನು. ಇನ್ನೊಂದು ಜನ್ಮ ಎತ್ತಿ ಬಂದರೂ ಅವನ ಪಕ್ಷಕ್ಕೆ ಬಹುಮತ ಬರಲ್ಲ.
ಒಕ್ಕಲಿಗರನ್ನ ತುಳಿಯೋದೇ ಇವನ ಒನ್ ಪಾಯಿಂಟ್ ಅಜೆಂಡಾ. ಒಳ್ಳೆಯ ಕಾರು, ಒಳ್ಳೆಯ ಬಟ್ಟೆ ಹಾಕಿಕೊಂಡು ಹೋದರೆ ಅವನ ಕೆಂಗಣ್ಣಿಗೆ ಗುರಿಯಾಗಿ ಹೋಗ್ತಿವಿ, ಪಕೀರರು, ಪೇಪರ್ ಆಯೋರು ಇರ್ತಾರಲ್ಲ ಆ ಥರಾ ಇವನ ಮುಂದೆ ಇರಬೇಕು. ಇನ್ನು ಮುಂದೆ ನೋಡಲಿ, ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಕಿಡಿಕಾರಿದರು.
ಅವನಿಗೆ ಕಚ್ಚೆ ಸರಿಯಿಲ್ಲ. ಬಾಯಿ ಸರಿ ಇಲ್ಲ. ಏನು ನೈತಿಕತೆ ಇದೆ. ಇನ್ನೊಬ್ಬರ ಬಗ್ಗೆ ಮಾತನಾಡೋಕೆ. ಇವನ ವಿರುದ್ಧ ಹೋರಾಟ ಮಾಡೋದೆ ನನ್ನ ಮುಂದಿನ ನಡೆ, ನಾನು ಸೋತರೂ ಪರವಾಗಿಲ್ಲ. ಇವನ ಅಭ್ಯರ್ಥಿಯನ್ನು ಗೆಲ್ಲೋಕೆ ಮಾತ್ರ ನಾ ಬಿಡಲ್ಲ. ಅವನೇ ಬಂದು ನಿಂತರೂ ಗೆಲ್ಲಲ್ಲ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ
ಶಾಸಕ ಶ್ರೀನಿವಾಸ್ ಮನೆ ಮುಂದೆ ಶನಿವಾರ ನೂರಾರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು. ಜೆಡಿಎಸ್ ಪಕ್ಷದಲ್ಲಿ ಬೆಳೆದು, ದ್ರೋಹ ಮಾಡಿದ ಶಾಸಕರ ನಡೆ ಸರಿಯಿಲ್ಲ. ಪಕ್ಷ, ಕಾರ್ಯಕರ್ತರಿಗೆ ಮೋಸ ಮಾಡಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜಿನಪ್ಪ ದೂರಿದರು. ಪ್ರತಿಭಟನೆ ವೇಳೆ ಮನೆಯಿಂದ ಹೊರಬಂದ ಶಾಸಕ ಶ್ರೀನಿವಾಸ್ ಮತ್ತು ಕಾರ್ಯ ಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಶಾಸಕಗೆ ಶ್ರದ್ಧಾಂಜಲಿ
ಶಾಸಕ ಶ್ರೀನಿವಾಸ್ ವಿರುದ್ದ ಗರಂ ಆಗಿರುವ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿರುವ ಪೋಸ್ಟರ್ ಅನ್ನು ಜಾಲತಾಣದಲ್ಲಿ ಹರಿಬಿಟ್ಟು ಟೀಕಿಸಿದ್ದಾರೆ.