ಸಾರ್ಥಕ್ಯ
ಡಾ||ಕೆ.ಪಿ.ಪುತ್ತೂರಾಯ
drputhuraya@yahoo.co.in
ಮಹಾಭಾರತ ಯುದ್ಧ ಮುಗಿದಿತ್ತು. ಜಯಶಾಲಿಗಳಾದ ಪಾಂಡವರನ್ನು ಕರೆದು ಕೃಷ್ಣ ಕೇಳುತ್ತಾನೆ. ನಿಮ್ಮ ಜಯಕ್ಕೆ ಕಾರಣ ವಾದ ವಿಷಯ ಯಾವುದು? ಧರ್ಮಧಾರಿತವಾದ ನನ್ನ ನೀತಿ ಎಂಬುದಾಗಿ ಧರ್ಮರಾಯನು ಹೇಳಿದರೆ, ಭೀಮಸೇನನೆಂದ ಸರಿಸಾಟಿಯಿಲ್ಲದ ನನ್ನ ಬಾಹುಬಲ ಅರ್ಜುನನೆಂದ ಪರಮ ಶ್ರೇಷ್ಠನಾದ ನನ್ನ ಪರಾಕ್ರಮ? ನಕುಲ ಸಹದೇವರೆಂದರು ನಮ್ಮ ಮೇಲಿನ ನಿನ್ನ ಕೃಪಾಕಟಾಕ್ಷ ಕೃಷ್ಣಾ ಎಲ್ಲರನ್ನೂ ಕೇಳಿಸಿಕೊಂಡ ಕೃಷ್ಣ ಇವೆಲ್ಲಕ್ಕಿಂತಲೂ ಬಹು ಮುಖ್ಯವಾಗಿ ಕರ್ಣನ ದಾನವೇ ಕಾರಣ ಎಂದು ಹೇಳುತ್ತಾ ಅವನ ದಾನದ ಮಹಿಮೆಯನ್ನು ಕೊಂಡಾಡುತ್ತಾನೆ.
ಈ ದಾನ ನನ್ನ ಜೀವರಕ್ಷಣೆಯನ್ನೇ ಕಸಿದು ಕೊಂಡೀತು ಎಂದು ತಿಳಿದಿದ್ದರೂ, ಕರ್ಣ ತನ್ನ ವಜ್ರ ಕವಚವನ್ನು ಕರ್ಣ ಕುಂಡಲಗಳನ್ನು ಬೇಡಿದವರಿಗೆ ದಾನ ಮಾಡಿದ. ಇಲ್ಲ ವಾದರೆ, ಅವನನ್ನು ಕೊಲ್ಲುವುದಾಗಲೀ, ಈ ಮಹಾಭಾರತ ಯುದ್ಧವನ್ನು ನೀವುಗಳು ಗೆಲ್ಲವು ದಾಗಲೀ ನಿಮಗೆ ಅಸಾಧ್ಯವಾಗುತ್ತಿತ್ತು. ಆದುದರಿಂದಲೇ ಆತ ದಾನಶೂರ ಕರ್ಣನೆಂದೆನಿಸಿಕೊಂಡ ಎನ್ನುತ್ತಾ ದಾನ ಧರ್ಮಗಳ ಮಹಿಮೆಯನ್ನು ತಿಳಿ ಹೇಳುತ್ತಾನೆ.
ಹಾಗೆ ನೋಡಿದರೆ, ನಾವು ಹಲವರ ದಾನ ಧರ್ಮಗಳಿಂದಲೇ ಬದುಕಿ ಬಾಳುತ್ತಿದ್ದೇವೆ. ನಮ್ಮ ತಂದೆಯು ನೀಡಿದ ವೀರ್ಯ ದಾನದಿಂದ ಮತ್ತು ತಾಯಿಯು ನೀಡಿದ ಗರ್ಭದಾನ ಮತ್ತು ರಕ್ತದಾನದಿದ ಜನಿಸಿದ ನಾವು ಮುಂದೆ ಅಮ್ಮ ತನ್ನ ಎದೆ ಹಾಲಿನ ಮೂಲಕ ನೀಡಿದ ಕ್ಷೀರ ದಾನದಿಂದ ಹಾಗೂ ಅಪ್ಪನು ದುಡಿದು ತಂದು ಹಾಕಿದ ಅನ್ನದಾನದಿಂದ ಬೆಳೆದು ದೊಡ್ಡವರಾಗುತ್ತೇವೆ. ಜತೆಗೆ ಈ ಇಳೆ-ಮಳೆ-ಬೆಳೆ ಈ ನಮ್ಮ ಜೀವ ಜೀವನ ಭಗವಂತನ ದಾನವಲ್ಲವೇ? ಶಾಲಾ ಕಾಲೇಜುಗಳಲ್ಲಿ ಗುರುಗಳು ನೀಡಿದ ವಿದ್ಯಾದಾನ ದಿಂದ ನೌಕರಿ ಪಡೆಯುವಷ್ಟು ವಿದ್ಯಾವಂತರಾಗಿ, ಮತ್ತೆ ಅತ್ತೆ ಮಾವನವರು ಕೆಲವೊಮ್ಮೆ ಸ್ವಲ್ಪ ಸುವರ್ಣ ದಾನದೊಂದಿಗೆ ನೀಡುವ ಕನ್ಯಾದಾನದಿಂದ ಸಂಸಾರ ಹೂಡುವಂತರಾಗಿ ಮುಂದೆ ಅನೇಕರ ದಾನ ಧರ್ಮಗಳಿಂದ ಬದುಕಿ ಬಾಳುತ್ತೇವೆ. ಹೀಗೆ ಜೀವನದಲ್ಲಿ ಬರೀ ದಾನಗಳನ್ನಷ್ಟೇ ಸ್ವೀಕರಿಸುತ್ತಿದ್ದರೆ ನಾವು ದಾನ ಮಾಡೋದು ಯಾವಾಗ? ಪತ್ರ ಹಾಗೂ ಪರಮ ಶ್ರೇಷ್ಠ ವಾದುದು.
ನಾವು ದಾನ ಧರ್ಮಗಳನ್ನು ಏಕೆ ಮಾಡಬೇಕು? ? ‘ಅ ಸಂಗ್ರಹವೇ ಧರ್ಮ’ ಎಂದು ಋಷಿಮುನಿಗಳು ಹೇಳಿದರೆ, ‘ತೇನ ತ್ಯಕ್ತೇನ ಭುಂಜಿತಾ’ ಅಂದರೆ, ಮೊದಲು ಇತರರಿಗೆ ನೀಡಿ, ತದನಂತರ ನೀನು ಅನುಭವಿಸು ಎನ್ನುತ್ತದೆ ಕಠೋಪನಿಷತ್ತು. ಇಸ್ಲಾಂ ಧರ್ಮ ದಲ್ಲಂತೂ ದಾನ ಅಥವಾ ‘ಜ್ಹಕಾತ್’ ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವೆನ್ನಲಾಗಿದೆ. ತಮ್ಮ ಆದಾಯದ ಮೂರನೇ ಒಂದಂಶವನ್ನು ಬಡಬಗ್ಗರಿಗೆ ದಾನ ಮಾಡಬೇಕೆಂದು ಇಸ್ಲಾಂ ಧರ್ಮ ಹೇಳುತ್ತದೆ. ಸ್ವಾಮಿ ವಿವೇಕಾನಂದರು ತ್ಯಾಗ ಮತ್ತು ಸೇವೆ ನಮ್ಮ ಧರ್ಮದ ಜೀವಾಳವೆಂದರು.
ದಾನವೂ ತ್ಯಾಗದ ಒಂದು ರೂಪ. ರೂಢಿಯಲ್ಲಿರುವ ದಾನ ಧರ್ಮವೆಂಬ ಪದ ಪುಂಜದಲ್ಲಿ ಧರ್ಮ ಸಮ್ಮತವಾದ ಜೀವನದ ಜತೆ ದಾನವನ್ನೂ ಸೇರಿಸಲಾಗಿದೆ. ದಾನ ಮಾಡೋದು ದೈವೀಗುಣ, ದಾನ ಮಾಡದೆ ಸಂಪತ್ತನ್ನು ಸಂಗ್ರಸೋದು ಅಸುರೀ ಗುಣ.
?‘ದ್ರವ್ಯ ಮೂಲಾನಿ ಪಾಪಾನಿ’ ಎಂಬ ಸೂಕ್ತಿಯಂತೆ ಎಷ್ಟೇ ಪ್ರಾಮಾಣಿಕವಾಗಿ ಸಂಪತ್ತನ್ನು ಗಳಿಸಿದ್ದರು ನಾವು ಸಂಪಾದಿಸಿದ ಸಂಪತ್ತಿನಲ್ಲಿ ನಮ್ಮ ಅರಿಗೆ ಬಾರದ ಒಂದಂಶ ಪಾಪದ ಹಣವೂ ಸೇರಿರುತ್ತದೆಯಂತೆ. ತಿಳಿಯದೆ ಮಾಡಿದ ಈ ಪ್ರಾಯಶ್ಚಿತಕ್ಕೆ ದಾನವೇ ಪರಿಹಾರವೆನ್ನುತ್ತದೆ ಧರ್ಮ ಶಾಸ್ತ್ರ.
? ‘ಸತ್ಯಂ ಕಂಠಸ್ಯ ಭೂಷಣಂ, ದಾನಂ ಹಸ್ತಸ್ವ ಭೂಷಣಂ’ ಎನ್ನುತ್ತದೆ ನಮ್ಮ ನೀತಿ ಶಾಸ. ಅರ್ಥಾತ್, ಸತ್ಯವನ್ನು ನುಡಿಯು ವುದೇ ಕೊರಳಿಗೆ ಭೂಷಣ, ದಾನವನ್ನು ನೀಡುವುದೇ ಬೆರಳಿಗೆ ಭೂಷಣ. ‘ಈವಂಗೆ ದೇವಂಗೆ ಆವುದಂತರವಯ್ಯಾ ಕೈಯ್ಯಾರೆ ಈವವನೇ ದೇವ ಸರ್ವಜ್ಞ’ ಎಂಬುದಾಗಿ ಸರ್ವಜ್ಞ ಕವಿಯು ತಿಳಿಸಿದ.
? ಸಂಪತ್ತಿನ ಸೂಕ್ತ ವಿತರಣೆಯೂ ದಾನಧರ್ಮಗಳಿಂದಲೇ ಮಾತ್ರ ಸಾಧ್ಯ. ಸಂಪತ್ತಿಗೆ ೩ ಹಂತಗಳಿವೆ. ಭೋಗ-ತ್ಯಾಗ ಹಾಗೂ ನಾಶ. ಅಂದರೆ ನಾವು ಗಳಿಸಿದ ಸಂಪತ್ತನ್ನು ನಮಗಾಗಿ ಮತ್ತು ನಮ್ಮವರಿಗಾಗಿ ಬಳಸಿಕೊಳ್ಳೋಣ. ಇದು ಸಹಜ ಸ್ವಾಭಾವಿಕ ಹಾಗೂ ನ್ಯಾಯಸಮ್ಮತ. ಆದರೆ ಗಳಿಸಿದ ಸಂಪತ್ತಿನಲ್ಲಿ ಒಂದಂಶವನ್ನು ದಾನ ಧರ್ಮಗಳಿಗೆ ವಿನಿಯೋಗಿಸುವುದು ಅಷ್ಟೇ ಧರ್ಮ ಸಮ್ಮತ. ತಾನೂ ಭೋಗಿಸದೆ ಇತರರಿಗೂ ದಾನ ಮಾಡದವನ ಸಂಪತ್ತು ಅನ್ಯರ ಪಾಲಾಗುತ್ತದೆ.
ಹೀಗಾಗದಂತೆ ಈ ಜಗತ್ತಿನಲ್ಲಿ ಕೊಟ್ಟು ಕೆಟ್ಟವರಿಲ್ಲ; ಬಿಟ್ಟು ಹೋಗೋದಕ್ಕಿಂತ ಕೊಟ್ಟು ಹೋಗೋದು ಲೇಸಯ್ಯ ಎಂಬ ಕಿವಿ ಮಾತನ್ನು ಪುರಂದರದಾಸರು ಹೇಳಿದರು, ? ಪುಣ್ಯ ಸಂಪಾದನೆಗೆ ದಾನ ದರ್ಮಗಳೇ ಅತ್ಯುತ್ತಮ ಮಾರ್ಗಗಳು. ನಾವು ಮಾಡಿದ ದಾನ ಧರ್ಮಗಳು ನಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಏಕೆ ಮುಂದಿನ ಪೀಳಿಗೆಗೆ ಒಳಿತನ್ನು ಉಂಟು ಮಾಡುತ್ತದೆ. ಈ ಸತ್ಯವನ್ನೇ ಗಂಡ ಮಾಡಿದ ಪಾಪ ಪುಣ್ಯದಲ್ಲಿ ಹೆಂಡತಿಗೆ ಸಮಪಾಲು, ಹೆಂಡತಿ ಮಾಡಿದ ಪಾಪ ಪುಣ್ಯದಲ್ಲಿ ಗಂಡನಿಗೆ ಸಮಪಾಲು, ಆದರೆ ಅಪ್ಪ ಅಮ್ಮ ಇಬ್ಬರೂ ಕೂಡಿ ಮಾಡಿದ ಪಾಪ ಪುಣ್ಯದಲ್ಲಿ ಮಕ್ಕಳಿಗೆ ಎಲ್ಲಾ ಪಾಲು.
ಇದರಲ್ಲಿ ಇಲ್ಲ ಬೇರೆಯವರಿಗೆ ಏನು ಪಾಲು ಎಂಬ ಮಾತಿನಲ್ಲಿ ಹೇಳಲಾಗಿದೆ. ಪುರಂದರ ದಾಸರು, ತನ್ನ ಸರ್ವ ಸಂಪತ್ತನ್ನು ತೊರೆದು ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಕಾಲದಲ್ಲಿ ಒಮ್ಮೆ ತನ್ನ ಮನೆಯತ್ತ ಇವರು ಬರುವುದನ್ನು ನೋಡಿದ ಗೃಹಿಣಿಯೊಬ್ಬಳು ದಢಾರನೆ ಮನೆಯ ಬಾಗಿಲನ್ನು ಮುಚ್ಚುತ್ತಾಳೆ. ಇದನ್ನು ಕಂಡ ದಾಸರು ಮಾರ್ಮಿಕವಾಗಿ ಹೀಗೆ ಹಾಡುತ್ತಾರೆ.
‘ಕದವ ಮುಚ್ಚಿದಳು ಮೂಳಿ ಗಯ್ಯಾಳಿ ತನ್ನ ಮನೆಯೊಳಗಿನ ಪಾಪ ಹೊರಗೆ ಹೋದೀತೆಂದು ಇನ್ನೊಂದು ಕಡೆ ಭಿಕ್ಷೆ ಬೇಡಲು ಬಂದ ದಾಸರನ್ನು ಕಂಡು’ ಮನೆಯಾಕೆ ಕುಂಟು ನೆಪವೊಂದನ್ನು ಹೇಳುತ್ತಾಳೆ. ಇಕ್ಕಲಾರೆನು ದಾಸಯ್ಯ ಕೈಎಂಜಲು ಪ್ರತಿಯಾಗಿ ದಾಸರೆನ್ನುತ್ತಾರೆ, ‘ಇಕ್ಕಲಾರದ ಕೈ ಎಂಜಲು ತಾಯಿ’.
? ಸಾಮಾಜಿಕ ನ್ಯಾಯ ಒದಗಿಸಲು ದಾನ ಧರ್ಮಗಳು ನೆರವಾಗುತ್ತವೆ. ಕಾರಣ ಸಮಾಜದಲ್ಲಿ ಎಲ್ಲರೂ ಅದೃಷ್ಟವಂತರಾಗಿರೋ ದಿಲ್ಲ. ಭಾಗ್ಯಶಾಲಿಗಳಾಗಿರೋದಿಲ್ಲ. ಕೆಲವರು ಹುಟ್ಟಿನಿಂದಲೇ ನತದೃಷ್ಟ ದರಿದ್ರರಾಗಿರುತ್ತಾರೆ. ಅಂತಹವರಿಗೆ ಉಳ್ಳವರು ದಾನಮಾಡಲೇಬೇಕು. ಈ ಕಟುಸತ್ಯವನ್ನು ದಾನಿಯೊಬ್ಬನು ಹೀಗೆ ಹೇಳುತ್ತಾನೆ. ನಾನು ದಾನ ಮಾಡುತ್ತೇನೆ. ‘ನನ್ನಲ್ಲಿ ಹೆಚ್ಚಾಗಿದೆ ಎಂದಲ್ಲ| ಇಲ್ಲವಾದಾಗ ಅದರ ಕಷ್ಟ ಎಷ್ಟು? ಏನು? ಎಂಬುದು ನನಗೆ ಚೆನ್ನಾಗಿ ಗೊತ್ತು!’
ದಾನ ಧರ್ಮಗಳನ್ನು ಹೇಗೆ ಮಾಡಬೇಕು? ? ದಾನಗಳಲ್ಲಿ ಸಾತ್ವಿಕ, ರಾಜಸ, ತಾಮಸ ದಾನಗಳೆಂಬ ಧಗಳಿವೆ. ಇವುಗಳಲ್ಲಿ ಸಾತ್ವಿಕ ದಾನವೇ ಶ್ರೇಷ್ಟ. ಅನ್ಯಾಯ- ಅಧರ್ಮ, ಅಕ್ರಮದಿಂದ ಸಂಪಾದಿಸಿದ ಹಣ ದಾನ ಧರ್ಮಗಳಿಗೆ ಯೋಗ್ಯವಲ್ಲ. ಇದನ್ನೇ ಬಸವಣ್ಣನವರು ಹೀಗೆ ಹೇಳಿದರು. ‘ಪಾಪಿಯ ಹಣ ಪ್ರಾಯಶ್ಚಿತಂಗಲ್ಲದೆ ಸತ್ಪಾತ್ರರಿಗೆ ಸಲ್ಲದಯ್ಯ, ನಾಯಿಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ?’
?ಕೊಡುವುದಾದರೆ ನಿನ್ನಲ್ಲಿ ಉಳಿದಿದ್ದನ್ನು ಕೊಡಬೇಡ, ಉಳಿಸಿ ಕೊಡು; ಮಿಕ್ಕಿದ್ದನ್ನು ಕೊಡಬೇಡ, ಮುಗಿಸಿಕೊಡು ಎನ್ನುತ್ತದೆ ನೀತಿ.
? ಯಾವುದೇ ಪ್ರಚಾರ ಪ್ರತಿಫಲಾಪೇಕ್ಷೆಳಿಲ್ಲದೆ ಪ್ರತ್ಯುಪಕಾರವನ್ನು ಬಯಸದೆ ದೇಶ ಕಾಲ ಪಾತ್ರಗಳನ್ನರಿತು ಮಾಡುವ ದಾನವೇ ಸಾತ್ವಿಕ ದಾನ. ಕೊಟ್ಟಿದ್ದು ಗುಪ್ತವಾಗಿರಲಿ ಕೊಟ್ಟು ಮೌನವಾಗಿರು. ಕೊಟ್ಟರೆ ದೇವರು ಕೊಟ್ಟಂತೆ ಕೊಡು. ದೇವರು ನಮಗೆ ನಾವು ಕೇಳದೇನೆ ಏನೆಲ್ಲಾ ಕೊಟ್ಟಿದ್ದಾನೆ! ಎಷ್ಟೆಲ್ಲ ಕೊಟ್ಟಿದ್ದಾನೆ! ಅವನು ಕೊಟ್ಟ ಯಾವುದಾದರೂ ವಸ್ತುವಿನ ಮೇಲೆ ಅವನ ಹೆಸರಿದೆಯಾ? ನಾವು ಕೊಟ್ಟಿದ್ದು ದೇವರಿಗೊಬ್ಬನಿಗೆ ಗೊತ್ತಾದರೆ ಸಾಕು.
ಈ ತತ್ವವನ್ನೇ ಡಿವಿಜಿಯವರು ‘ಇಳೆಯಿಂದ ಮೊಳಕೆಯೊಗೆದುದು ತಮಟೆಗಳಿಲ್ಲ; ಫಲಮಾಗುವಂದು ತುತ್ತೂರಿ ದನಿಯಿಲ್ಲ: ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ. ಹೊಲಿ ನಿನ್ನ ತುಟಿಗಳನ ಮಂಕುತಿಮ್ಮ’ ಎಂಬುದಾಗಿ ತಿಳಿಸಿದರು. ‘ಒಟ್ಟಿನಲ್ಲಿ ಮಾಡಿದಂತಿರಬೇಕು. ಮಾಡದಂತಿರ ಬೇಕು. ಮಾಡಿದ ಮಾಟದೊಳಗೆ ತಾನಿಲ್ಲದಂತಿರಬೇಕು’ ಎಂಬ ವಚನಕಾರರ ಮಾತಿನಂತೆ ನಮ್ಮ ದಾನಧರ್ಮಗಳಿರಬೇಕು.
?ಸತ್ಪಾತ್ರರಿಗೆ ಮಾತ್ರ ದಾನವನ್ನು ಮಾಡತಕ್ಕದ್ದು. ಆಪಾತ್ರರಿಗೆ ಅಯೋಗ್ಯರಿಗೆ ದಾನವನ್ನು ನೀಡಬಾರದು. ಅಬಲರಿಗೆ ಅಸಹಾ ಯಕರಿಗೆ ಬಡವರಿಗೆ, ದೀನದಲಿತರಿಗೆ ಮಾಡುವ ದಾನವೇ ಸರ್ವ ಶ್ರೇಷ್ಠವಾದುದು.
? ದಾನ ಧರ್ಮಗಳನ್ನು ಸಂತೋಷದಿಂದ ಮಾಡಬೇಕು. ಕೊಟ್ಟಮೇಲೆ ಕೊರಗಬಾರದು. ಮರುಗಬಾರದು. ‘ಇದಂ ನ ಮಮಃ’ ಅಂದರೆ ಕೊಟ್ಟಿದ್ದು ಇನ್ನು ಮುಂದೆ ನಿನಗೆ ಸೇರಿದ್ದು. ನನಗಲ್ಲ ಎಂಬ ಭಾವದಿಂದ ಮಾಡಬೇಕು. ಇದೇ ಸತ್ಯವನ್ನು ಬಸವಣ್ಣ ನವರು ಹೀಗೆ ಹೇಳಿದರು.
‘ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ; ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ, ಮಾಡುವ ನೀಡುವ ನಿಜಗುಣವುಳ್ಳೊಡೆ ಕೂಡಿ ಕೊಂಬನೆಮ್ಮ ಕೂಡಲಸಂಗಮ ದೇವಾ’. ಒಟ್ಟಿನಲ್ಲಿ ಮಾಡಬೇಕೋ ಮಾಡಬೇಡವೋ ಎಂಬ ಅನುಮಾನದಿಂದ ದಾನ
ಮಾಡಬಾರದು. ಮನಃ ಪೂರ್ವಕವಾಗಿ ಮಾಡಬೇಕು.
? ‘ಸತಾಯಿಸಿ ಸತಾಯಿಸಿ ದಾನ ಮಾಡಬಾರದು. ಆಗ ಬಾ, ಈಗ ಬಾ, ಹೋಗಿ ಮತ್ತೇ ಬಾ ಎನದೆ ಆಗಲೇ ಕರೆದು ಕೊಡುವವನ ದಾನ ಹೊನ್ನಾಗದೇ ಇರದು’ ಎನ್ನುತ್ತಾನೆ ಸರ್ವಜ್ಞ.
? ಫಲಾನುಭಗಳಿಗೆ ನೆರವಾಗುವಂತೆ ಸಕಾಲದಲ್ಲಿ ಹಾಗೂ ಸಮಪ್ರಮಾಣದಲ್ಲಿ ದಾನ ಧರ್ಮಗಳನ್ನು ಮಾಡಬೇಕು.
? ತಮ್ಮಲ್ಲಿ ಅಧಿಕವಾದುದ್ದು ಇಲ್ಲವೇ ಅನುಪಯುಕ್ತವಾದುದ್ದನ್ನು ನೀಡೋದು ದಾನವೆಂದೆನಿಸದು. ಉಪಯುಕ್ತವಾದುದ್ದನ್ನು ನೀಡೋದೇ ದಾನ. ಗೊಡ್ಡೆಮ್ಮೆಯನ್ನು ನೀಡಿ ಗೋದಾನ ಮಾಡಿದೆನೆಂದೆನಬಾರದು.
?ಅಂಗಡಿಗಳಿಗೆ ಹೋದರೆ ತಿನ್ನುವ ತುಪ್ಪ ಹೋಮದ ತುಪ್ಪ- ದಾನದ ತುಪ್ಪ, ಅಂತೆಯೇ ಮನೆಯ ತೆಂಗಿನ ಕಾಯಿ, ತಾಂಬೂಲದ ಕಾಯಿಗಳೆಂಬ ವಿಧಗಳಿವೆ. ಇದು ತರವಲ್ಲ. ನಾವು ತಿನ್ನುವ ತುಪ್ಪವೇ ದಾನದ ತುಪ್ಪವೂ ಆಗಬೇಕು, ನಾವು ತಿನ್ನುವ ಕಾಯಿಯೇ ತಾಂಬೂಲದ ಕಾಯಿಯೂ ಆಗಬೇಕು.
? ದಾನವೆಂದರೆ ಭಿಕ್ಷೆ ಅಲ್ಲ; ನಮ್ಮ ಸಂಪತ್ತಿನ ಪ್ರದರ್ಶನವೂ ಅಲ್ಲ; ಇಲ್ಲವೇ ನಾವು ಗೈದ ಪಾಪಗಳಿಗೆ ಪ್ರಾಯಶ್ಚಿತವೂ
ಅಲ್ಲ. ಅದು ಒಂದು ಪವಿತ್ರ ಕಾರ್ಯ. ಆದುದರಿಂದಲೇ ‘ಶ್ರದ್ಧಾಯ ದೇಯಂ; ಅಶೃದ್ಧಾಯ ಅದೇಯಂ’ (ಶ್ರದ್ಧಾಭಾವದಿಂದ ನೀಡು; ಅಶ್ರದ್ಧೆಯಿಂದ ನೀಡದಿರು) ‘ಶ್ರೀ ಯಾದೇಯಂ (ನಿನ್ನ ಐಶ್ವರ್ಯಕ್ಕೆ ತಕ್ಕಂತೆ ನೀಡು) ಭಿಯಾ ದೇಯಂ (ಭಯ ಭಕ್ತಿ ಭಾವದಿಂದ ನೀಡು) ಹ್ರಿಯಾ ದೇಯಂ (ನಮ್ರತೆಯಿಂದ ನೀಡು) ಸಂಧಾ ದೇಯಂ (ಮಿತ್ರ ಭಾವದಿಂದ) ನೀಡು’ ಎನ್ನುತ್ತದೆ ನಮ್ಮ ಧರ್ಮ.
?ಅಂತೆಯೇ ನಾವು ಇತರರಿಗೆ ಕೊಟ್ಟಿದ್ದನ್ನು ಮರೆತು ಬಿಡಬೇಕು. ಆದರೆ, ಇತರರು ನಮಗೆ ಕೊಟ್ಟಿದ್ದನ್ನು ಮರೆಯಬಾರದು. ಹಾಗೆ ಮರೆತರೆ ಅದು ಮಹಾಪಾಪ ಅಂತಹವರಿಗೆ ಸದ್ಗತಿಯೂ ಇಲ್ಲ. (ಕೃತಘನಸ್ಯ ನಾಸ್ತಿ ನಿಷ್ಮತಿಃ) ದಾನ ಧರ್ಮಗಳನ್ನು ಗೈಯ್ಯುವು ದರಿಂದ ಏನು ಲಾಭ? ದಾನ ಧರ್ಮಗಳನ್ನು ಲಾಭ ನಷ್ಟಗಳ ಲೆಕ್ಕದಲ್ಲಿ ಮಾಡುವಂತಿಲ್ಲ; ಮಾಡಬಾರದು. ಆದರೆ ದಾನಧರ್ಮ ಗಳನ್ನು ಮಾಡೋದರಿಂದ ಆಗುವ ಒಳಿತುಗಳೆಂದರೆ; ಅಪರಿಮಿತವಾದ ಆತ್ಮಾನಂದ; ಪರಲೋಕದಲ್ಲಿ ಚಾಲ್ತಿಯಲ್ಲಿರುವ
ಪುಣ್ಯವೆಂಬ ಛ್ಞ್ಚಿqsಯ ಸಂಪಾದನೆ, ಸಂಪಾದಿಸಿದ ಸಂಪತ್ತಿನ ಸೂಕ್ತ ವಿತರಣೆ ಹಾಗೂ ಜೀವನದ ಸಾರ್ಥಕತೆ.
ಕಾರಣ ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ. ಸಾರ್ಥಕತೆ ಇಲ್ಲದೆ ಬದುಕಿದರೆ ಬದುಕಿಗೇ ಅವಮಾನ. ಹಾಗೂ ಅನ್ನವನು ಇತ್ತವನು ಆಶ್ರಯವ ಕೊಟ್ಟವನು, ಕಷ್ಟದಲಿ ಆದವನು, ಕಣ್ಣೀರ ತಡೆದವನು ದಾನ ಧರ್ಮವ ಮಾಡಿದವನು ಹೋಮ ಹವನ ಮಾಡದೇನೇ ಸ್ವರ್ಗಕ್ಕೆ ಹೋದಾನು ಎಂಬ ಮಾತು ಕೂಡಾ ಹುಸಿಯಲ್ಲ.