ಬೆಂಗಳೂರು:
ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಸಾತೇನಹಳ್ಳಿ ಗ್ರಾಮದ ವ್ಯಕ್ತಿಯೋರ್ವನಿಗೆ ಕರೊನಾ ಸೋಂಕು ಧೃಡಪಟ್ಟಿರುವ ಹಿನ್ನೆಲೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಂಗಳವಾರ ಭೇಟಿ ನೀಡಿ ಗ್ರಾಮಸ್ಥರ ಜತೆ ಸಮಾಲೋಚನೆ ನಡೆಸಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಗ್ರಾಮದ ಶಾಲಾ ಆವರಣದಲ್ಲಿ ಗ್ರಾಮಸ್ಥರ ಜತೆ ಸಮಾಲೋಚಿಸಿದ ಜಿಲ್ಲಾಧಿಕಾರಿ, ಗ್ರಾಮಸ್ಥರಿಗೆ ಭಯಪಡುವುದು ಬೇಡ, ಜಾಗೃತರಾಗಿರೋಣ, ಆತಂಕಕ್ಕೊಳಗಾಗುವುದು ಬೇಡ. ಪ್ರತಿಯೊಬ್ಬರು ಪೌಷ್ಟಿಕ ಆಹಾರ ಸೇವಿಸುವ ಜತೆಗೆ ಮನೆಯಲ್ಲಿ ತಮ್ಮನ್ನು ತಾವು ಬೇರ್ಪಡಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿದೆ. ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾದರೂ ತಕ್ಷಣವೇ ಆರೋಗ್ಯ ಸಿಬ್ಬಂದಿಯವರಿಗೆ ತಿಳಿಸಿ. ಈಗಾಗಲೇ ಎರಡು ತಿಂಗಳ ಪಡಿತರ ವಿತರಣೆ ಮಾಡಲಾಗಿದ್ದು, ಮುಂದಿನ ಎರಡು ತಿಂಗಳಿಗೆ ನೀಡಲಾಗುವ ಪಡಿತರ ವಿತರಣೆಯಲ್ಲಿ ಸಾತೇನಹಳ್ಳಿ ಗ್ರಾಮಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಪ್ರತಿನಿತ್ಯ ಹಾಲು ಹಾಕಲು ಸಮಸ್ಯೆಯಾಗುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದರಿಂದ ಮನೆ ಮನೆಗೆ ತೆರಳಿ ಹಾಲು ಸಂಗ್ರಹಿಸಲು ಯೋಜನೆ ರೂಪಿಸಲಾಗುವುದು. ಕೆಎಂಎಫ್ ಅಧಿಕಾರಿಗಳ ಜತೆ ಮಾತನಾಡಿ ಆರ್ಥಿಕವಾಗಿ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಗಳು ಸಂಪೂರ್ಣವಾಗಿ ಗುಣಮುಖರಾಗುತ್ತಿದ್ದಾರೆ ಆದ್ದರಿಂದ ಸಾತೇನಹಳ್ಳಿ ಗ್ರಾಮದ ನಿವಾಸಿಗಳು ಯಾವುದೇ ಆತಂಕಗೊಳ್ಳುವುದು ಬೇಡ ಎಂದು ಅಭಯ ನೀಡಿದರು.
*ಸೋಂಕಿತನ ಪತ್ನಿಯಿಂದ ಮಾಹಿತಿ ಪಡೆದ ಡಿಸಿ:*
ಸೋಂಕಿತ ವ್ಯಕ್ತಿ ಪೇಷೆಂಟ್ ಸಂಖ್ಯೆ 505 ರ ವ್ಯಕ್ತಿಯ ಮನೆ ಬಳಿಗೆ ತೆರಳಿ ಸೋಂಕಿತನ ಪತ್ನಿಯಿಂದ ಬಾಂಬೆಯಿಂದ ಬಮದಿರುವ ಕುರಿತಾಗಿ ಹಾಗೂ ಬಾಂಬೆಯಲ್ಲಿ ಕೆಲಸ ಮಾಡಿರುವ ಕುರಿತಾಗಿ ಮತ್ತು ಸೋಂಕಿತ ವ್ಯಕ್ತಿ ಕುಟುಂಬದ ಸದಸ್ಯರೊಡನೆ ಯಾವ ರೀತಿ ಇದ್ದ ಎಂಬಿತ್ಯಾದಿ ಮಾಹಿತಿಗಳನ್ನು ಪಡೆದು ಸೋಂಕಿತನ ಪತ್ನಿಯ ಆರೋಗ್ಯ ವಿಚಾರಿಸಿದರು. ಈ ಸಂದರ್ಭ ಸೋಂಕಿತ ವ್ಯಕ್ತಿ ನಡೆಸುತ್ತಿದ್ದ ಹೋಟೇಲ್‍ನ ಕಾರ್ಮಿಕರ ಮಾಹಿತಿ ಪಡೆದು ನಂತರ ಬಾಂಬೆಯಲ್ಲಿ ಹೋಟೇಲ್ ಹೊಂದಿದ್ದ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಗೆ ನಮ್ಮ ಜಿಲ್ಲಾಡಳಿತದ ವತಿಯಿಂದ ಕಾರ್ಮಿಕರ ಹಿತಾದೃಷ್ಟಿಯಿಂದ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಗ್ರಾಮಸ್ಥರ ಜತೆ ಸಮಾಲೋಚಿಸಿ, ಗ್ರಾಮಸ್ಥರಿಗೆ ಧೈರ್ಯ ತುಂಬುವ ಜತೆಗೆ ಅಧಿಕಾರಿಗಳ ತಂಡದೊಂದಿಗೆ ಗ್ರಾಮದ ಸುತ್ತಲಿನ ಸೀಲ್ಡ್‍ಡೌನ್ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳು ಖುದ್ದು ವೀಕ್ಷಿಸಿ ವಯೋವೃದ್ದರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭ ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ, ತಹಸೀಲ್ದಾರ್ ಕುಂಞ ಅಹಮದ್, ತಾಲೂಕು ಆರೋಗ್ಯಾಧಿಕಾರಿ ಡಾ.ಧನಂಜಯ, ವೃತ್ತನಿರೀಕ್ಷಕ ರಾಜೇಂದ್ರ, ತಾ.ಪಂ.ಇಒ ಅನಂತರಾಜು, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಬಿಂಡಿಗನವಿಲೆ ಪಿಎಸ್ಸೈ ಬಸವರಾಜು ಇದ್ದರು.