Sunday, 27th October 2024

ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆ ವಾಪಸ್

ಬೆಂಗಳೂರು:
ಕಲಬುರಗಿ ಜಿಲ್ಲಾಧಿಕಾರಿ ಶರತ್ ಅವರ ವರ್ಗಾವಣೆ ಆದೇಶಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ತಡೆ ನೀಡಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆಗೆ ಅಧಿಕಾರಿ ವಲಯದಲ್ಲಿ ಭಾರಿ ಅಸಮಾಧಾನ ವ್ಯಕ್ತವಾದ್ದರಿಂದ ವರ್ಗಾವಣೆ ಆದೇಶದ ಹೊರಡಿಸಿದ ಎರಡು ಗಂಟೆಯೊಳಗೆ ಅದನ್ನು ಸಿಎಂ ಬಿಎಸ್ವೈ ತಡೆಹಿಡಿಯಲು ಸೂಚನೆ ನೀಡಿದ್ದಾರೆ. ಮಂಗಳವಾರ ಸಂಜೆ ಏಳು ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿ ಬಿ ಶರತ್ ರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಇವರ ಜಾಗಕ್ಕೆ ಸುರಾಲ್ಕರ್ ವಿಕಾಸ್ ಕಿಶೋರ್ ಎಂಬುವರನ್ನು ನೇಮಿಸಲಾಗಿತ್ತು.

ಡಿ.ಸಿ ಶರತ್ ವರ್ಗಾವಣೆಗೆ ಅಧಿಕಾರಿ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಸಿಎಂ ಬಿಎಸ್‌ವೈ ಅವರು ಡಿಸಿ ಶರತ್ ಜೊತೆ ದೂರವಾಣಿ ಮೂಲಕ ಸಂಪರ್ಕಿಸಿ, ಅವರ ಕಾರ್ಯವೈಖರಿಯನ್ನು ಪ್ರಶಂಸಿದರು. ಜತೆಗೆ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದೀರಿ, ಮುಂದುವರಿಸಿ, ಸದ್ಯ ನಿಮ್ಮನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದೆ. ಇಲ್ಲಿ ಕೊರೋನಾ ವೈರಸ್ ತಹಬದಿಗೆ ಬರುತ್ತಿಲ್ಲ. ನಾವು ಹೇಳಿದ ಮಾತನ್ನು ಜಿಲ್ಲಾಧಿಕಾರಿ ಬಿ ಶರತ್ ಕೇಳುತ್ತಿಲ್ಲ. ಹಾಗಾಗಿ ಇವರನ್ನು ಎತ್ತಂಗಡಿ ಮಾಡಿ ಎಂದು ಸಂಸದ ಉಮೇಶ್ ಜಾಧವ್ ಮತ್ತು ಶಾಸಕ ದತ್ತಾತ್ರೇಯ ಪಾಟೀಲ್ ಸಿಎಂ ಬಳಿ ಪಟ್ಟು ಹಿಡಿದಿದ್ದರು. ಹೀಗಾಗಿ ಶರತ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಶರತ್ ಅವರನ್ನು ಸಂಸದ ಹಾಗೂ ಶಾಸಕರ ಒತ್ತಡಕ್ಕೆ ವರ್ಗಾವಣೆ ಮಾಡಿದ್ದರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಈ ಸಮಯದಲ್ಲಿ ವರ್ಗಾವಣೆ ಮಾಡಿದರೆ ಸರಕಾರಕ್ಕೆ ಕೆಟ್ಟ ಹೆಸರು ಬರಲಿದೆ ಎಂಬ ಕಾರಣಕ್ಕೆ ಶರತ್ ಅವರ ವರ್ಗಾವಣೆ ಆದೇಶವನ್ನು ಸರಕಾರ ಹಿಂಪಡೆದಿದೆ.