Sunday, 27th October 2024

ದೇವರಾಜ ಅರಸು ನೀರಾವರಿಗೆ ಆದ್ಯತೆ‌ ನೀಡಿದ್ದರು: ಸಂಸದ ಜಿ.ಎಸ್.ಬಸವರಾಜು

ತುಮಕೂರು: ಬ್ರಿಟಿಷರ ಕಾಲದಿಂದಲೂ ನೀರಾವರಿಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದ ಹಳೆ ಮೈಸೂರು ಭಾಗಕ್ಕೆ ಸೇರಿದ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ಕುಡಿಯಲು ಮತ್ತು ನೀರಾವರಿಗೆ ಅದ್ಯತೆ ನೀಡಿದವರು ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಜಿಲ್ಲಾ ಜಲ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ದಿ.ಹುಚ್ಚು ಮಾಸ್ತಿಗೌಡ ಒತ್ತಾಯದ ಫಲವಾಗಿ ಹೇಮಾವತಿ ಜಲಾಶಯ ನಿರ್ಮಾಣಕ್ಕೆ ದೇವರಾಜ ಅರಸು ಮುಂದಾದರು.ಇದರ ಭಾಗವಾಗಿ ತುಮಕೂರು ಜಿಲ್ಲೆಯ ಹಲವು ತಾಲೂಕು ಗಳಲ್ಲಿ ಸಂವೃದ್ದಿಯ ಕೃಷಿ, ತೋಟಗಾರಿಕೆ ಜೊತೆಗೆ, ಕುಡಿಯುವ ನೀರಿನ ಬರ ಹಿಂಗಿದೆ. ಇದರ ಜೊತೆಗೆ ಎಸ್.ಎಂ.ಕೃಷ್ಣ ಅವರು ಸಹ ಸಾಕಷ್ಟು ಅನುದಾನ ವನ್ನು ನೀಡಿ. ನೀರಾವರಿ ಅಭಿವೃದ್ದಿಗೆ ಕಾರಣರಾಗಿದ್ದಾರೆ ಎಂದರು.
ನೀರಾವರಿ ವಿಚಾರದಲ್ಲಿ ಮೊದಲಿನಿಂದಲೂ ಕರ್ನಾಟಕ ಮತ್ತು ತೆಮಿಳುನಾಡು ನಡುವೆ ವೈಮನಸ್ಸು ಇದ್ದೇ ಇದೆ.ಇದಕ್ಕೆ ಪೂರಕವೆಂಬ೦ತೆ ಕೆಲ ಅಧಿಕಾರಿಗಳು ಸಹ ವರ್ತನೆ ಮಾಡಿದ್ದರ ಫಲವಾಗಿ ಹಲವಾರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಅಲ್ಲದೆ ಕಾವೇರಿ ಟ್ರುö್ಯಬುನಲ್ ಮುಂದೆ ಸಮರ್ಥವಾಗಿ ಅಂಕಿ ಅಂಶಗಳ ಮೂಲಕ ರಾಜ್ಯದ ನೀರಾವರಿ ಅವಶ್ಯ ಕತೆಗಳ ಬಗ್ಗೆ ವಾದ ಮಂಡಿಸಲು ವಕೀಲರನ್ನು ನೇಮಿಸುವಲ್ಲಿಯೂ ಸರಕಾರಗಳು ವಿಫಲವಾಗಿವೆ.
ಡಾ.ಜಿ.ಪರಮಶಿವಯ್ಯ ಅವರ ವರದಿಯನ್ನಾಧರಿಸಿ ಜಾರಿಗೆ ಬರುತ್ತಿರುವ ಭದ್ರಾ ಮೇಲ್ದಂಡೆ,ಎತ್ತಿನಹೊಳೆ ಯೋಜನೆಗಳಿಂದ ಜಿಲ್ಲೆಗೆ ಹೆಚ್ಚು ನೀರು ತರಲು ಅವಕಾಶವಿದೆ.ರೈತರು ಭತ್ತ, ಕಬ್ಬು ಸೇರಿದಂತೆ ಆಹಾರ ಬೆಳೆಗಳಿಗೆ ಪ್ಲಡ್ ಇರಿಗೇಷನ್ ಬದಲಿಗೆ ಹನಿ ನೀರಾವರಿಗೆ ಒತ್ತು ನೀಡಿದರೆ ಮತ್ತಷ್ಟು ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸಬಹುದು ಎಂದು ಸಂಸದ  ತಿಳಿಸಿದರು.
ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತು ಪಿಪಿಟಿ ಮೂಲಕ ಮಾಹಿತಿ ನೀಡಿದ ದಿಶಾ ಕಮಿಟಿ ರಾಜ್ಯಮಟ್ಟದ ಸದಸ್ಯ ಹಾಗೂ ಶಕ್ತಿಪೀಠದ ಸಿಇಓ ಕುಂದರನಹಳ್ಳಿ ರಮೇಶ್, ಜಿಲ್ಲೆಯಲ್ಲಿ ಸುವರ್ಣಮುಖಿ,ಗರುಡಾಚಲ,ಶಿಂಷಾ, ನಾಗಿನಿ ಹಾಗೂ ಉತ್ತರ ಪಿನಾಕಿನಿ ನದಿಗಳು ಹುಟ್ಟುತ್ತವೆ.ಆದರೆ ಇವುಗಳ ಸಮರ್ಪಕ ಬಳಕೆ ಸಾಧ್ಯವಾಗಿಲ್ಲ. ಜಿಲ್ಲೆಯ ಕಾವೇರಿ,ಕೃಷ್ಣಾ ಮತ್ತು ಉತ್ತರ ಪಿನಾಕಿನಿ ನದಿಪಾತ್ರಗಳಿಗೆ ಸೇರಿದ್ದು,ಮಳೆಯಿಂದ ಪ್ರತಿವರ್ಷ ಸುಮಾರು 40 ಟಿ.ಎಂ.ಸಿ ನೀರು 13 ಉಪನದಿಗಳ ಮೂಲಕ ಮೂರು ನದಿ ಪಾತ್ರಗಳಿಗೆ ಸೇರುತ್ತದೆ.
ಜಿಲ್ಲೆಯ ಒಟ್ಟಾರೆ ಭೂ ಪ್ರದೇಶಕ್ಕೆ ಕುಡಿಯಲು ಮತ್ತು ನೀರಾವರಿಗೆ 37.77 ಟಿ.ಎಂ.ಸಿ ನೀರು ಬೇಕಾಗಿದ್ದು, ವಿವಿಧ ಯೋಜನೆ ಗಳಿಂದ 27.79 ಟಿ.ಎಂ.ಸಿ ಲಭ್ಯವಿದ್ದು, ಇನ್ನೂ 14 ಟಿ.ಎಂ.ಸಿ ನೀರಿನ ಕೊರತೆ ಇದೆ. ಕೆರೆ ಕಟ್ಟೆಗಳಿಲ್ಲದ 550 ಹಳ್ಳಿಗಳನ್ನು ಸೇರಿಸಿ ಕೊಂಡು,ಊರಿಗೊ೦ದು ಕೆರೆ, ಆ ಕೆರೆಗೆ ನದಿ ನೀರು ಎಂಬ ಪರಿಕಲ್ಪನೆಯಡಿ ಎತ್ತಿನಹೊಳೆ,ಭದ್ರಾ ಮೇಲ್ದಂಡೆ ಹಾಗೂ ಇನ್ನಿತರ ಯೋಜನೆಗಳ ಮೂಲಕ ನೀರಿನ ಕೊರತೆಯನ್ನು ನೀಗಿಸಿಕೊಳ್ಳಲು ರೈತರು, ಪ್ರಗತಿಪರರು, ಸಾರ್ವಜನಿಕರು ಹೋರಾಟ ರೂಪಿಸ ಬೇಕಾಗಿದೆ ಎಂದರು.
ಜಿಲ್ಲಾ ಜಲ ಸಂವಾದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ,ಮುಂಬರುವ ದಿನಗಳಲ್ಲಿ ಮದ್ಯ ಕರ್ನಾಟಕ ಸೇರಿದಂತೆ ಇಡೀ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಬೃಹತ್ ಜಲ ಸಮ್ಮೇಳನ ಏರ್ಪಡಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಶಕ್ತಿಪೀಠದ ಜೊತೆಗೆ ಸೇರಿ ಜಿಲ್ಲೆಯ ನೀರಾವರಿ ಸಮಸ್ಯೆಗಳ ಕುರಿತು ಜಲ ಸಂವಾದ ಆಯೋಜಿಸಲಾಗಿದೆ.ಆ ಮೂಲಕ ಜಲ ಸಾಕ್ಷರತೆಯನ್ನು ಮೂಡಿಸುವ ಪ್ರಯತ್ನ ಇದಾಗಿದ್ದು,ಕಸಾಪ ಸಾಹಿತ್ಯ ಕ್ಷೇತ್ರದ ಹೊರತಾಗಿಯೂ ಜನರನ್ನು ತಲುಪಲು ಮುಂದಾಗಿದೆ.ಜಿಲ್ಲೆಯಲ್ಲಿ ಹುಟ್ಟುವ ನದಿಗಳು ಅದೃಶ್ಯ ಸ್ಥಿತಿಯಲ್ಲಿದ್ದು, ಇವುಗಳ ಪುನರ್ ಜೀವನದ ಜೊತೆಗೆ,ನೀರಿನ ಸಮರ್ಪಕ ಬಳಕೆ ಕುರಿತು ಇದೊಂದು ಪ್ರಯತ್ನ ಎಂದರು.
ವೇದಿಕೆಯಲ್ಲಿ ಪತ್ರಕರ್ತ ಎಸ್.ನಾಗಣ್ಣ, ಸಾಹಿತಿ ಡಾ.ಕವಿತಾಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ,ಹಾಲಪ್ಪ ಪೌಂಢೇಷನ್‌ನ ಮುರುಳೀಧರ ಹಾಲಪ್ಪ,ರೈತ ಸಂಘದ ಚಂದ್ರಕಲಾ,ಕೆ.ಜಿ.ಶಂಕರಪ್ಪ, ನಾಗಭೂಷಣ್ ರೆಡ್ಡಿ, ಸಿಐಟಿಯುನ ಎನ್.ಕೆ.ಸುಬ್ರಮಣ್ಯ,ಕುಂದರನಹಳ್ಳಿ ರಮೇಶ್,ಆರಳೀಕೆರೆ ಶಿವಯ್ಯ,ಕಸಾಪದ ಮಹದೇವಪ್ಪ,ಡಾ.ಯೋಗೀಶ್ವರಪ್ಪ, ಉಮಾ ಮಹೇಶ್,ರಾಣಿ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಸಂವಾದ ನಡೆಸಿದರು.