Sunday, 27th October 2024

ಅಸಲಿ ಕಂಪನಿಗಳ ಚಿಹ್ನೆ ಬಳಸಿ 16 ಲಕ್ಷ ರೂ. ಮೌಲ್ಯದ ವಸ್ತುಗಳ ವಶ

ರಾಯಚೂರು /ಸಿರವಾರ : ದಿನ ಬಳಕೆ ಸಾಮಗ್ರಿಗಳ ಅಸಲಿ ಕಂಪನಿಗಳ ಚಿಹ್ನೆಗಳನ್ನು ಬಳಸಿಕೊಂಡು ನಕಲಿ ವಸ್ತುಗಳನ್ನಾಗಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 16 ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ನಕಲಿ ಜಾಲದ ಕುರಿತು ಲಭ್ಯವಾದ ಮಾಹಿತಿಯನ್ನಾಧರಿಸಿ ನಡೆಸುವುದಕ್ಕಾಗಿ ಸಿಂಧ ನೂರು ಡಿವೈಎಸ್ಪಿ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಖಚಿತ ಮಾಹಿತಿ ಪಡೆದ ಈ ತಂಡವು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿರವಾರ ಪಿಎಸ್ಐ ಗೀತಾಂಜಲಿ ಶೀಂಧೆ ಅವರು ಮಾಹಿತಿ ನೀಡಿದರು.

ತಾಲೂಕಿನ ಬಾಲಾಜಿ ಕ್ಯಾಂಪಿನ ವಸತಿ ಶಾಲೆಯ ಕೊಠಡಿಗಳಲ್ಲಿ ದಿನಬಳಕೆ ಪದಾರ್ಥ ಗಳ ಅಸಲಿ ಕಂಪನಿಗಳನ್ನು ನಕಲಿಗೊಳಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ, 16 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಯಂತ್ರೋಪಕರಣಗಳನ್ನು ಬಳಸಿ ಅಡುಗೆಗೆ ಸಂಬಂಧಿಸಿದ ವಿವಿಧ ಪದಾರ್ಥಗಳ ಅಸಲಿ ಕಂಪನಿಗಳ ಚಿಹ್ನೆಗಳನ್ನು ಬಳಸಿ ಕೊಂಡು ವಸ್ತುಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಶೋಧಿಸಿ ರತನ್ ಸಿಂಗ್ ಸೇರಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಅದರ ಜೊತೆಗೆ ನಕಲು ಮಾಡುವುದಕ್ಕಾಗಿ ಬಳಸುತ್ತಿದ್ದ ಯಂತ್ರೋಪಕರಣಗಳು, ಕಚ್ಚಾ ಸಾಮಗ್ರಿಗಳು, ವಾಹನ ಸೇರಿದಂತೆ 16 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ಜಪ್ತಿಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಜಾಲವು ಪ್ರಮುಖವಾಗಿ ಕೊಬ್ಬರಿ ಎಣ್ಣೆ ಚಹಾ ಪುಡಿ, ಸಾಬೂನು ಪೌಡರ್, ತಿಂಡಿಯ ಮೂಲ ಅಸಲಿ ಕಂಪನಿಗಳ ಚಿಹ್ನೆ, ಪ್ಯಾಕೇಟ್, ಡಬ್ಬುಗಳನ್ನು ನಕಲಿಗೊಳಿಸಿ ಮಾರಾಟ ಮಾಡುತ್ತಿದ್ದರು. ಆರೋಪಿತರ ಗುಂಪು ಕಳೆದ ನಾಲ್ಕು ತಿಂಗಳಿನಿಂದ ಈ ಕೃತ್ಯದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಇಬ್ಬರ ಜೊತೆಗೆ ಇನ್ನು ಹಲವಾರು ಜನರು ನಕಲಿ ಜಾಲದಲ್ಲಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ. ಸಾರ್ವಜನಿಕರು ಮಾರು ಕಟ್ಟೆಯಲ್ಲಿ ಅಗತ್ಯ ದಿನಸಿ ವಸ್ತು ಗಳನ್ನು ಖರೀದಿಸುವಸಮಯದಲ್ಲಿ ಕುಲಂಕುಷವಾಗಿ ಪರಿಶೀಲಿಸಬೇಕು. ನಕಲಿ ಪದಾರ್ಥಗಳ ಖರೀದಿ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಪಿಎಸ್ಐ ಮನವಿ ಮಾಡಿದರು .