ಅಭಿವ್ಯಕ್ತಿ
ಶ್ರೀವತ್ಸ ಬಲ್ಲಾಳ
ಮುಂದುವರಿದ ದೇಶದ ಹಿಂಸೆ, ಹತ್ಯಾಕಾಂಡ ನಮ್ಮ ದೇಶದ ಕೆಲವು ಪ್ರಜೆಗಳಿಗೆ ಆತಂಕಕಾರೀ ವಿಷಯವಾಗದೇ, ಒಂದು ಅಸಂಭವನೀಯ ಸನ್ನಿವೇಶವನ್ನು ಸುಳ್ಳು ಸುದ್ದಿಯ ಮೂಲಕ ಸೃಷ್ಟಿಸುವ ಪ್ರಯತ್ನ ನಡೆದಿದೆಯಲ್ಲದೇ ಇದನ್ನೇ ವಾದವಾಗಿಸಿ ಕೊಂಡು ಜಾಗತಿಕ ನಾಯಕರೊಬ್ಬರು ಸರಕಾರವನ್ನು ಪ್ರಶ್ನಿಸುವ ತನ್ಮೂಲಕ ಅದನ್ನು ಅಭದ್ರ ಗೊಳಿಸುವ ಪ್ರಯತ್ನ ಕಳವಳಕಾರಿ.
ಲಂಡನ್ ನಗರದ ಪ್ರಮುಖ ಸ್ಥಳವೊಂದರ ಜನನಿಭಿಡ ರಸ್ತೆಯ ಎದುರು ಇತ್ತೀಚೆಗೆ ಭಾರತದ ಬಗ್ಗೆ ಅಪಪ್ರಚಾರ ಡಿಜಿಟಲ್ ಭಿತ್ತಿಫಲಕದ ಮುಖಾಂತರ ನಡೆಯುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಇದು ಹರಿದು ಬಂದಾಗ ಅನೇಕರಿಗೆ ಅದೇನೂ ವಿಶೇಷ ಅಲ್ಲ ಎಂದೆನಿಸಿರಬಹುದು.
ಅಂದಿನ ಅಪಪ್ರಚಾರದ ಸಂದೇಶವೇನಿತ್ತೆಂದರೆ-ಭಾರತದಲ್ಲಿ ಮುಸ್ಲಿಮರ ನರಮೇಧಕ್ಕೆ ಉಗ್ರ ಹಿಂದೂವಾದಿಗಳು ತೀವ್ರವಾದ ಕರೆ ಕೊಟ್ಟಿದ್ದು, ಸನ್ನಿಹಿತವಾಗಿರುವ ನರಮೇಧದ ವಿರುದ್ಧ ನಿಮ್ಮ ಧ್ವನಿಯನ್ನು ಮೊಳಗಿಸಿ ಎಂಬುದಾಗಿತ್ತು. ಪರಿಣಿತರ ಪ್ರಕಾರ ಭಾರತದಲ್ಲಿ ಹಿಂದೂ ಉಗ್ರವಾದಿಗಳಿಂದ ಸದ್ಯೋಭವಿಷ್ಯದಲ್ಲಿ ಮುಸ್ಲಿಮರ ನರಮೇಧ ನಡೆದೇ ನಡೆಯ ಲಿದೆ. ಭಾರತದಲ್ಲಿ ಕುಸಿಯುತ್ತಿರುವ ಮಾನವ ಹಕ್ಕುಗಳ ಸೂಚ್ಯಂಕ – ಅಮೆರಿಕೆಯ ಮಾನವ ಹಕ್ಕುಗಳ ಸಂಸ್ಥೆಯ ವರದಿಯನ್ನೂ ಈ ಅಪಪ್ರಚಾರ ಒಳಗೊಂಡಿತ್ತು.
ಇದೂ ಸೇರಿದಂತೆ ತೀರಾ ಕಾಲ್ಪನಿಕವಾದ ಮತ್ತು ಭಾರತದ ವಿರುದ್ಧದ ದನಿಯನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟೂ ಜೋರಾಗಿ ಸುವ ಈ ಪ್ರಯತ್ನ ಲಂಡನ್ ನಗರದ ಅನೇಕ ನಿವಾಸಿಗಳ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರ ಗಮನ ಸೆಳೆಯದೇ ಇದ್ದಿರ ಲಿಕ್ಕಿಲ್ಲ. ಒಂದು ವಾಹನದ ಮೇಲಿರಿಸಲಾಗಿದ್ದ ಕೇವಲ ಡಿಜಿಟಲ್ ಭಿತ್ತಿಫಲಕವನ್ನಷ್ಟೇ ನೋಡಿ ಅದರಲ್ಲಿನ ಸಂದೇಶದ ಪೂರ್ವಾ ಪರ ಸಮೀಕ್ಷೆಯನ್ನೂ ನಡೆಸದೆ ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳ ಅಪಪ್ರಚಾರವನ್ನಷ್ಟೇ ನಂಬುತ್ತಾ ಮತ್ತು ಆತಂಕ ವ್ಯಕ್ತಪಡಿಸುತ್ತ ಇನ್ನೇನು ನರಮೇಧ ನಡೆದೇ ಬಿಡುತ್ತದೆ, ಲಂಡನ್ನಿನಲ್ಲಿ ಪ್ರದರ್ಶಿಸಿದ ಭವಿಷ್ಯವಾಣಿ ಸತ್ಯ ಆಗಿಯೇ ಬಿಡುತ್ತದೆ ಎಂಬಂತೆ ಚರ್ಚೆ ಶುರುವಾಗಿತ್ತು.
ಆಗ ಅನ್ನಿಸಿದ್ದು ನಮ್ಮ ದೇಶದ ಬಗ್ಗೆ ಹರಡಿಸುತ್ತಿರುವ ಸುಳ್ಳು ಸುದ್ದಿ, ಕಪೋಲಕಲ್ಪಿತ ವಿಚಾರಗಳನ್ನು ಖಂಡಿಸುವ ಮನಃ ಸ್ಥಿತಿಯೂ ಇಲ್ಲದಿರುವುದು ಮಾತ್ರವಲ್ಲ, ಬದಲಾಗಿ ಆ ಭವಿಷ್ಯವಾಣಿ ನಿಶ್ಚಿತವಾಗಿಯೂ ಸರಿ ಎನ್ನುವ ವಾದ ಮಾಡುವ ಮನಃ ಸ್ಥಿತಿ ಇಂದಿನ ಪೀಳಿಗೆಯ ಹಲವರಿಗೆ ಬಂದಿದೆಯಲ್ಲ ಎಂಬ ವ್ಯಥೆ ಕಾಡಿದ್ದು ಸುಳ್ಳಲ್ಲ. ಶತಶತಮಾನಗಳಿಂದಲೂ ಭಾರತದ
ಬಗ್ಗೆ ಒಂದು ವಿಶಿಷ್ಟ ತಾರತಮ್ಯದ ವರ್ತನೆಯನ್ನು ಜಗತ್ತಿನ ಅನೇಕ ರಾಷ್ಟ್ರಗಳು ತೋರುತ್ತ ಬಂದಿದ್ದರೂ ಭಾರತವನ್ನೆಂದೂ ಹೋಳುಹೋಳಾಗಿಸಲು ಸಾಧ್ಯವೇ ಆಗಲಿಲ್ಲ (ನಲವತ್ತೇಳರ ವಿಭಜನೆಯನ್ನೊಂದು ಬಿಟ್ಟು).
ಹಾಗಾಗಿ ಈಗ ಅಡ್ಡ ದಾರಿ ಹಿಡಿದಾದರೂ ಜಗತ್ತಿನಲ್ಲಿ ಆತಂಕ ಸೃಷ್ಟಿಸುವ ಕೃತಕ ಪ್ರಯತ್ನ ಮತ್ತು ಹೇಗಾದರೂ ಮಾಡಿ ಭಾರತ ವನ್ನು ವಿಭಜಿಸುವ ಹುನ್ನಾರ ಅಷ್ಟೇ ಎಂದು. ಕೇವಲ ಮೂರು-ನಾಲ್ಕು ದಶಕಗಳ ಹಿಂದಷ್ಟೇ ಝೆಕ್ ಗಣರಾಜ್ಯ, ಯೋಗೋ ಸ್ಲೋವಿಯಾ, ಯುಎಸ್‌ಎಸ್ ಆರ್ ಮತ್ತಿನ್ನಿತರ ಯೂರೋಪಿನ ದೇಶಗಳು ಇವರದೇ ಬಿಕ್ಕಟ್ಟಿನ ಮನೋ ಭಾವನೆಯಿಂದ, ಸರ್ವಾಧಿಕಾರೀ ಆಡಳಿತದಿಂದ ಹೋಳುಹೋಳಾದಂತೆ, ಈ ದುಃಶಕ್ತಿಗಳಿಗೆ ಭಾರತವನ್ನೆಂದೂ ಆ ರೀತಿ ವಿಭಜಿಸಲಾಗಲೇ ಇಲ್ಲ.
ಈ ಎಲ್ಲ ಹಿನ್ನೆಲೆಯಲ್ಲಿ ಯುರೋಪ್ ಮತ್ತು ಯೂರೋಪಿನಲ್ಲಿರುವ ಕೆಲವು ಭಾರತೀಯರೂ ಸೇರಿದಂತೆ ಹಲವರು ಈ ರೀತಿಯ ಗಾಳಿಸುದ್ದಿಯಂಥ ಸಂದೇಶಗಳನ್ನು ಹರಡುತ್ತ ಮತ್ತು ಆ ಸಂದೇಶಗಳನ್ನೇ ಬೆಂಬಲಿಸುವುದನ್ನು ನೋಡುವಾಗ ಇವರೆಲ್ಲರೂ ತಮ್ಮದೇ ಹಿತ್ತಲಿನಲ್ಲಿ ನಡೆದ ಇತ್ತೀಚಿನ ಇತಿಹಾಸವನ್ನು ಮರೆತೇ ಬಿಟ್ಟಿದ್ದಾರೇನೋ ಅನ್ನಿಸುತ್ತದೆ. ಕೆಲವು ದಿನಗಳ ಹಿಂದೆ ವಿದೇಶಾಂಗ ಸಚಿವ ಜೈಶಂಕರ್ ಅವರು ಸರಿಯಾಗಿಯೇ ಚಾಟಿಯೇಟು ಕೊಟ್ಟು ಹೇಳಿದ್ದು ನೆನಪಾಗುತ್ತದೆ.
Europe thinks that Europe’s problem is world’s problem, but the world’s problem is not Europe’s ಎಂದು. ಬೂಟಾ ಟಿಕೆಯ (hypocrisy) ಜನಕರೇ ಇವರು. ಭಾರತವೊಂದು ನಿಜವಾದ ಅರ್ಥದಲ್ಲಿ melting pot ಇದ್ದಂತೆ. ಯಾರೆಷ್ಟೇ ಸುಳ್ಳು ಸುದ್ದಿ ಹರಡಿಸಲಿ, ಭಾರತದ ಬಗ್ಗೆ ಕೀಳಾಗಿ ಮಾತಾಡಲಿ, ಅನ್ಯ ರಾಷ್ಟ್ರ ಗಳಲ್ಲಿ ನಡೆದಂತೆ ಭಾರತದಲ್ಲಿ ಹಿಂದೂ ಪ್ರೇರಿತ ನರಮೇಧದ ಸಂಭವನೀಯತೆ ಇಲ್ಲವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಬ. ಯಾಕೆಂದರೆ ಎಷ್ಟೇ ಜಾತಿ, ಉಪಜಾತಿ, ಪಂಗಡ, ಭಾಷೆ ಇತ್ಯಾದಿಗಳಿರಲಿ ನಮ್ಮಲ್ಲಿ ನರಮೇಧಕ್ಕೆ ಹಿಂದೆಂದೂ ಯಾರ ಬೆಂಬಲವೂ ಇರಲಿಲ್ಲ, ಮುಂದೆಂದು ಇರುವುದೂ ಇಲ್ಲ. ಆದರೆ ಇಂಥಾ ಒಂದು ಮೂಲ ಭೂತವಾದ ವಿಚಾರ ನಮ್ಮದೇ ಒಂದು ವರ್ಗಕ್ಕೆ ಅರಿವಾಗದಿರುವುದು ಇನ್ನಷ್ಟೂ ಆಶ್ಚರ್ಯಕರವಾದ ವಿಷಯ.
ನಮ್ಮಲ್ಲಿರುವ ನೂರಾಮೂವತ್ತು ಕೋಟಿ ಜನಸಂಖ್ಯೆಯ ಬಹುತೇಕ ಮಂದಿ ವೇದ, ಶಾಸ್ತ್ರ, ಪುರಾಣಗಳನ್ನು ಓದದೇ ಇದ್ದರೂ, ನರಮೇಧವನ್ನು ನಡೆಸದೇ ಮಾನವರಾಗಿ ಬದುಕಲು ಬೇಕಾಗಿರುವ ಜೀವನಮೌಲ್ಯಗಳನ್ನು ಖಂಡಿತವಾಗಿಯೂ ಹೊಂದಿದ್ದಾರೆ. ಅದಕ್ಕೆ ಮುಖ್ಯ ಕಾರಣ ನಮ್ಮಲ್ಲಿರುವ ಒಂದು ವಿವರಿಸಲಾಗದ, ಧರ್ಮದ ಪರವಾಗಿರುವ ಸಂವೇಧನಾಶೀಲತೆ ಅಥವಾ ಸಹಿಷ್ಣುತೆ (tolerance) ಎಂದೇ ಹೇಳಬೇಕಾಗುತ್ತದೆ.
ಇಲ್ಲಿ ನಾನು ಮಾತಾಡುತ್ತಿರುವ ಧರ್ಮ ಯಾವುದೇ ಒಂದು ಗ್ರಂಥದಲ್ಲಿಯೋ ಅಥವಾ ಬರಹದಲ್ಲಿಯೋ ಬರೆದಿಟ್ಟಂಥ ರೀತಿ ರಿವಾಜುಗಳಲ್ಲ, ಕಟ್ಟುಕಟ್ಟಳೆಗಳಲ್ಲ. ಅಂಥ ಮೌಲ್ಯಗಳನ್ನು ನಿಜಕ್ಕೂ ಕಾಣಲು ಭಾರತದ ಮೂಲೆಮೂಲೆಗಳಲ್ಲಿರುವ ಹಳ್ಳಿಗಳಿಗೆ ಹೋಗಿ ನೋಡಬೇಕು ಅಷ್ಟೇ. ನಾವೇನು ಇಂದು ಈ ಮಾಧ್ಯಮಗಳಲ್ಲಿ ನೋಡುತ್ತೇವೋ, ಕೇಳುತ್ತೇವೋ ಅದು ನೂರಕ್ಕೆ ತೊಂಬ ತ್ತೊಂಬತ್ತರಷ್ಟು ಭಾರತದ ಬಗ್ಗೆ ಇರುವ ಪೂರ್ವಗ್ರಹ ಪೀಡಿತ ಸುದ್ದಿಯೇ ಹೊರತು ಯಾವ ಸತ್ಯವೂ ಅಲ್ಲ.
ಬ್ರಿಟಿಷರು ಭಾರತ ಬಿಟ್ಟು ಎಪ್ಪತೈದು ವರ್ಷಗಳೇ ಆಗಿರಬಹುದು, ಆದರೆ ಅದೇ ಸಮಯದಲ್ಲಿ ಭಾರತದ ಪ್ರಜಾಪ್ರಭುತ್ವ ಬೇರೆಲ್ಲ ದೇಶಗಳಿಗಿಂತಲೂ ಅತ್ಯಂತ ಸುರಕ್ಷಿತವಾಗಿ ಮತ್ತು ಅಷ್ಟೇ ಪ್ರಬುದ್ಧತೆಯನ್ನು ಗಳಿಸಿಕೊಳ್ಳುವತ್ತ ನಾಗಾಲೋಟದಿಂದ ಮುನ್ನಡೆ ದಿದೆ ಎಂದರೆ ಅದು ಉತ್ಪ್ರೇಕ್ಷೆ ಮಾತ್ರ ಖಂಡಿತಾ ಆಗಲಾರದು. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲವೂ ಸೇರಿದಂತೆ ಭಾರತದ ಪ್ರಜೆಗಳು ಅನುಭವಿಸುವ ಸ್ವಾತಂತ್ರ್ಯದ ಸುಖಕ್ಕೆ ಬೆಲೆಯನ್ನೂ ಕಟ್ಟಲು ಸಾಧ್ಯವಿಲ್ಲ.
ಅಮೆರಿಕದಂಥ ಜಗತ್ತಿನ ಅತ್ಯಂತ ಮುಂದುವರಿದ (?) ರಾಷ್ಟ್ರದಲ್ಲಿಯೂ ಪ್ರಜೆಗಳು ಅನುಭವಿಸುವ ಸ್ವಾತಂತ್ರ್ಯಕ್ಕೆ ಕಟ್ಟುತ್ತಿರುವ ಬೆಲೆ ಊಹಿಸಲೂ ಅಸಾಧ್ಯ. ನಿಜಕ್ಕೂ ಹೇಳಬೇಕೆಂದರೆ ನರಮೇಧವಾಗುತ್ತಿರುವುದು ಅಮೆರಿಕದಂಥ ಮುಂದುವರಿದ ದೇಶಗಳಲ್ಲಿ. ವರ್ಷದ ಅರ್ಧದಷ್ಟೂ ತಿಂಗಳುಗಳು ಕಳೆಯುವ ಮೊದಲೇ ಸುಮಾರು ಇನ್ನೂರೈವತ್ತಕ್ಕೂ ಮಿಕ್ಕಿ ಸಾಮೂಹಿಕ ಗುಂಡು ದಾಳಿ ಗಳಲ್ಲಿ ಅದರಲ್ಲೂ ಶಾಲೆಗಳಲ್ಲಿ, ಸೂಪರ್ ಮಾರ್ಕೆಟು, ಆಸ್ಪತ್ರೆ, ಉಪಹಾರಗೃಹ, ಸಿನೆಮಾ ಥಿಯೇಟರ್‌ಗಳಲ್ಲಿ, ರಸ್ತೆ ಬದಿಗಳಲ್ಲಿ, ಜನರು ದಿನನಿತ್ಯ ಓಡಾಡುವ ಹಾದಿ-ಬೀದಿಗಳಲ್ಲಿ ಮಕ್ಕಳನ್ನು, ಅನ್ಯ ವರ್ಣೀಯರನ್ನು ನಿರ್ದಾಕ್ಷಿಣ್ಯವಾಗಿ ಸಾಮೂಹಿಕವಾಗಿ ಕೊಂದು ಬಿಸಾಡುತ್ತಿರುವುದು ನರಮೇಧವಲ್ಲದೇ ಇನ್ನೇನು? ಜಗಜ್ಜನಿತವಾಗಿರುವ ಅಮೆರಿಕದ ಸಂವಿಧಾನದ ಎರಡನೇ ಪರಿಚ್ಛೇದದ (second amendment) ಹಿಂದೆ ಅವಿತುಕೊಂಡು ದಿನ ನಿತ್ಯವೂ ನರಮೇಧ ನಡೆಸುವ ಇಲ್ಲಿನ ರಕ್ತಪಿಪಾಸು ಕೊಲೆ ಗಡುಕ ಮನೋವೃತ್ತಿಯ ವರ್ಗವೊಂದಾದಾರೆ ಅದಕ್ಕೆ ಇನ್ನಿಲ್ಲದ ಒಕ್ಕೊರಲ ಬೆಂಬಲ ಸೂಚಿಸುವ ಅಷ್ಟೇ ಕೀಳುಮಟ್ಟದ ರಾಜಕಾರಣಿಗಳು ಇಡೀ ವಿಶ್ವದ ನರಮೇಧದ ಮುಂಚೂಣಿಯಲ್ಲಿರುವ ಆಧುನಿಕ ರಾಕ್ಷಸರು ಎಂದೇ ಕರೆಯಿಸಿಕೊಳ್ಳಲು ಅರ್ಹರು.
ಇವರು ಕೇವಲ ದೈಹಿಕವಾಗಿ ನರಮೇಧ ನಡೆಸುವುದು ಮಾತ್ರವಲ್ಲ, ಮಾನಸಿಕವಾಗಿಯೂ ನಿರಂತರವಾಗಿ ನಡೆಸುತ್ತಿರುವ ನರಮೇಧ ಎಂಥದ್ದು ಎಂದು ತಿಳಿಯಬೇಕಾದರೆ ಇಲ್ಲಿನ ಸಮಾಜದ ಅವಿಭಾಜ್ಯ ಅಂಗವಾಗಿ ನಿರಂತರವಾಗಿ ಇಲ್ಲಿಯೇ ಜೀವನ
ನಡೆಸಿದಾಗ ಮಾತ್ರ ಸಾಧ್ಯ. ಬಹುಶಃ ಲಂಡನ್ನಿನಲ್ಲಿ ಕಂಡು ಬಂದ ಭಿತ್ತಿಫಲಕದ ಬಹುತೇಕ ಉದ್ದೇಶ ಪಾಶ್ಚಾತ್ಯ ದೇಶಗಳಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆ ಇನ್ನುಳಿದ ದೇಶಗಳು ಗಮನ ಹರಿಸದಂತಿರಲಿ ಎಂದೇ ಇರಬೇಕು.
ಕಳೆದ ಇಪ್ಪತ್ತೆರಡು ವರ್ಷಗಳಿಂದ ನಾನು ಇಲ್ಲಿ ಕಂಡು, ಕೇಳಿದಷ್ಟು ಸಾಮೂಹಿಕ ಹತ್ಯಾಕಾಂಡದ ಸುದ್ದಿ ಬೇರೆಲ್ಲೂ ಕೇಳಿಲ್ಲ, ಕಂಡಿಲ್ಲ. ಆದರೂ ಮುಂದುವರಿದ ದೇಶದ ಹಿಂಸೆ, ಹತ್ಯಾಕಾಂಡ ನಮ್ಮ ದೇಶದ ಕೆಲವು ಪ್ರಜೆಗಳಿಗೆ ಆತಂಕಕಾರೀ ವಿಷಯ ವಾಗದೇ, ಒಂದು ಅಸಂಭವನೀಯ ಸನ್ನಿವೇಶವನ್ನು ಸುಳ್ಳು ಸುದ್ದಿಯ ಮೂಲಕ ಸೃಷ್ಟಿಸುವ ಪ್ರಯತ್ನ ಆತಂಕ ತರಿಸದೇ, ಬದಲಾಗಿ ಈ ಸುಳ್ಳು ಸುದ್ದಿಯನ್ನೇ ಒಂದು ವಾದವಾಗಿಸಿಕೊಂಡು ಜಾಗತಿಕ ನಾಯಕರೊಬ್ಬರ ಸರಕಾರವನ್ನು ಪ್ರಶ್ನಿಸುವ ತನ್ಮೂಲಕ ಅದನ್ನು ಅಭದ್ರಗೊಳಿಸುವ ಪ್ರಯತ್ನವೇ ಕಳವಳದ ವಿಚಾರ.
ಕೊನೆಯದಾಗಿ, ಜಗತ್ತು ಇಂದು ತೀರಾ ನಿಕಟವಾದ ಮತ್ತು ತಂತ್ರeನದ ಪ್ರಗತಿಯಿಂದ ಉತ್ತೇಜಿತವಾದ, ಒಗ್ಗೂಡಿದ ವಿಶ್ವ ಗ್ರಾಮ
ದಂತೆಯೇ ಮೈದಳೆದಿದೆ. ಶತಶತಮಾನಗಳಿಂದ ನಡೆದುಕೊಂಡು ಬರುತ್ತಿದ್ದ ದಬ್ಬಾಳಿಕೆ, ಕ್ರೌರ್ಯ, ದ್ವೇಷ, ಅಸೂಯೆ ಇವೆಲ್ಲವೂ ಕ್ಷಣಮಾತ್ರದಲ್ಲಿಯೇ ಜಗತ್ತಿನ್ನೆಡೆ ಬಟಾಬಯಲಾಗುವುದು ದಿನ ನಿತ್ಯದ ಸಂಗತಿ. ಎಷ್ಟೇ ಮುಂದುವರಿದ ದೇಶವೇ ಆಗಲಿ,
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ವರ್ತಿಸುತ್ತ ಪರನಿಂದೆಯನ್ನೇ ಪ್ರಮುಖ ಅಸವಾಗಿ ಬಳಸಿಕೊಂಡು ಮುಂದೆಂದಿಗೂ ಜಗತ್ತಿನ ಅಗ್ರಗಣ್ಯ ದೇಶವಾಗಿ ಮುಂದುವರಿಯಲಸಾಧ್ಯ.
ಸಕಲ ಜೀವರಾಶಿಗಳಲ್ಲಿ ಅತ್ಯಂತ ವಿಕಸನಗೊಂಡ ಮನುಷ್ಯ ಸಂಕುಲ ಇಂದು ಶಾಂತಿಯುತವಾಗಿ ಬಾಳುತ್ತ ಪ್ರಗತಿಪರ ವಿಶ್ವದೆಡೆ ಮುನ್ನುಗ್ಗಬೇಕಾದರೆ ಇರುವುದೊಂದೇ ಮಾರ್ಗ. ಅದೇನೆಂದರೆ ಗೋಮುಖವ್ಯಾಘ್ರನ ಮುಖವಾಡ ಕಳಚಿಟ್ಟು, ದ್ವೇಷ, ಅಸೂಯೆ, ಹಿಂಸೆಯನ್ನು ತೊಡೆದುಹಾಕಿ ವಿಶ್ವಮಾನವನಾಗಿ ಬದುಕುವ ಪ್ರಾಮಾಣಿಕ ಪ್ರಯತ್ನ ಮತ್ತು ಮಾರ್ಗ. ಇಲ್ಲದಿದ್ದರೆ ಮನುಷ್ಯನ
ಬಾಳು ನಿಂತಲ್ಲಿಯೇ ನರಕವಾಗುವುದಂತೂ ನಿಸ್ಸಂಶಯ.
(ಮೂಲತಃ ಉಡುಪಿಯವರಾದ ಲೇಖಕರು ಸದ್ಯ ಅಮೆರಿಕೆಯ ಫಿಲಡೆಲಿಯಾದ ನಿವಾಸಿ)