Monday, 25th November 2024

ಶಂಕರನೆಂಬ ಹೆಸರು ಬಂದಿದ್ದು ಶ್ರೀಗಳಿಂದ

ಸತ್ಯ ಮೇವ ಜಯತೆ (ಭಾಗ – 2)

ನನ್ನ ತಾಯಿ 1954ರಲ್ಲಿ ಗರ್ಭವತಿಯಾದಾಗ ಆಸಂಗಿಯ ಶೀ ಯೋಗೇಶ್ವರ ಸ್ವಾಮೀಜಿಯವರ ದರ್ಶನಕ್ಕೆ ಹೋಗಿದ್ದ ರಂತೆ. ಆಗ ಸ್ವಾಮೀಜಿಯವರು, ‘ಗುರವ್ವಾ ನಿನಗೆ ಗಂಡು ಮಗ ಜನಿಸುತ್ತಾನೆ. ‘ಶಂಕರ’ ಎಂದು ಹೆಸರು ಇಡು. ಅವನು  ಕೀರ್ತಿವಂತ ನಾಗುತ್ತಾನೆ’ ಎಂದು ಹೇಳಿದ್ದರಂತೆ. ಅದರಂತೆ, ನಾನು 1954ರ ಆಗಸ್ಟ್ 27ರಂದು, ಸ್ವಾಮೀಜಿಯವರ ಸೂಚನೆಯಂತೆ ‘ಶಂಕರ’ ಎಂದು ನಾಮಕರಣ ಮಾಡಿದರು.

ನಾನು ಐ.ಪಿ.ಎಸ್. ಅಧಿಕಾರಿ ಆದ ಮೇಲೆ ಅನೇಕರು ‘ಈ ಬಿದರಿ ಎಲ್ಲಿಂದ ಬಂದವನು?’ ಎಂದು ತಲೆ ಕೆಡಿಸಿಕೊಂಡಿದ್ದುಂಟು. ಹೀಗಾಗಿ ನಮ್ಮ ಮನೆತನದ ಬಗ್ಗೆ ಹೇಳಲೇ ಬೇಕು. ‘ಬಿದರಿ’ ಎನ್ನುವುದು ಕೃಷ್ಣಾ ನದಿ ದಂಡೆಯ ಮೇಲಿರುವ ಜಮಖಂಡಿ ತಾಲೂಕಿನ ಒಂದು ಹಳ್ಳಿಯ ಹೆಸರು. ನಾವು ಬಿದರಿ ಎನ್ನುವ ಊರಿನಿಂದ ಬನಹಟ್ಟಿಗೆ ಬಂದು ನೆಲೆಸಿದವರು ನಮ್ಮ ಮುತ್ತಜ್ಜ ಅಂದರೆ ನಮ್ಮ ತಂದೆಯ ಅಜ್ಜ ಮಲ್ಲಪ್ಪ ಅವರ ಕಾಲದಲ್ಲಿ. ಹಾಗಾಗಿ ನಮ್ಮನ್ನು ‘ಬಿದರಿಯಿಂದ ಬಂದವರು’ ಎಂದು ಊರವರೆಲ್ಲಾ ಹೇಳುತ್ತಾ ಹೇಳುತ್ತಾ ನಮ್ಮ ಮನೆತನಕ್ಕೆ ‘ಬಿದರಿ’ ಎಂಬ ಹೆಸರೇ ಶಾಶ್ವತವಾಯಿತು.

ನಾವು ಬಿದರಿಯಿಂದ ಬನಹಟ್ಟಿಗೆ ಬಂದು 200 ವರ್ಷಗಳೇ ಕಳೆದಿವೆ ಎಂದು ನಮ್ಮಜ್ಜ ಹೇಳುತ್ತಿದ್ದರು. ನಮ್ಮ ತಂದೆಯ ಅಜ್ಜ ಮಲ್ಲಪ್ಪ ಬಿದರಿ. ಅವರಿಗೆ ಮೂರು ಜನ ಮಕ್ಕಳು. ಮೊದಲನೆಯವರು ಬಸಲಿಂಗಪ್ಪ, ಎರಡನೆಯವರು ಮಹಾಲಿಂಗಪ್ಪ, ಮೂರನೆ ಯವರು ಶಿವಲಿಂಗಪ್ಪ ಮತ್ತು ಒಬ್ಬ ಮಗಳು ಮಹಾಲಿಂಗವ್ವ. ಮೂರನೆಯವರಾದ ಶಿವಲಿಂಗಪ್ಪ ಅವರು ಬಾಲ್ಯ ದಲ್ಲಿಯೇ ತೀರಿಕೊಂಡರು.

ನಮ್ಮ ಅಜ್ಜಂದಿರ ತಂಗಿ ಮಹಾಲಿಂಗವ್ವ ಅವರನ್ನು ಮಹಾಲಿಂಗಪುರದ ಕುಳ್ಳೊಳ್ಳಿ ಮನೆತನಕ್ಕೆ ಕೊಟ್ಟು ಮದುವೆ ಮಾಡಿದ್ದರು. ಉಳಿದ ಇಬ್ಬರು ಅಜ್ಜಂದಿರಾದ ಬಸಲಿಂಗಪ್ಪ ಮತ್ತು ಮಹಾಲಿಂಗಪ್ಪ ಒಟ್ಟಾಗಿ ಅವಿಭಕ್ತ ಕುಟುಂಬದಲ್ಲಿ ನೆಲೆಸಿದ್ದರು. ಇಬ್ಬರೂ ವ್ಯಾಪಾರ ಮತ್ತು ಒಕ್ಕಲುತನ ಮಾಡುತ್ತಿದ್ದರು. ಬಸಲಿಂಗಪ್ಪ ಅವರು ವ್ಯಾಪಾರ ನೋಡಿಕೊಳ್ಳುತ್ತಿದ್ದರೆ, ಮಹಾಲಿಂಗಪ್ಪ ಒಕ್ಕಲು ತನದ ಜವಾಬ್ದಾರಿ ನಿರ್ವಹಿಸುತ್ತಿದ್ದರು, ಇಬ್ಬರು ತಮ್ಮ ತಮ್ಮ ವ್ಯವಹಾರಗಳನ್ನು ಚೆನ್ನಾಗಿ ಮಾಡಿ ಉತ್ತಮ ಆಸ್ತಿ ಗಳಿಸಿದ್ದರು.

ಸಮೀಪದ ಆಸಂಗಿ ಗ್ರಾಮದಲ್ಲಿ 3 ಕೂರಿಗೆ (12 ಎಕರೆ) ತೋಟ, ಯಲ್ಲಟ್ಟಿ ಗ್ರಾಮದಲ್ಲಿ 18 ಎಕರೆ ಹೊಲ, ಊರಲ್ಲಿ ಐದು ಅಂಕಣದ ಪಡಸಾಲೆ ಇದ್ದ ದೊಡ್ಡ ಮನೆ, ಸೋಮವಾರ ಪೇಟೆಯಲ್ಲಿ ಎರಡು ಅಂಗಡಿಗಳು ಮತ್ತು ನಮ್ಮ ಮುತ್ತಜ್ಜ ಮಲ್ಲಪ್ಪ ಅವರು ವಾಸವಿದ್ದ ಹಳೇ ಮನೆ ಇವೆಲ್ಲವೂ ಸ್ಥಿರಾಸ್ತಿಗಳಾಗಿದ್ದವು.

ಎರಡನೆಯ ಮಹಾಯುದ್ಧದ ಕಾಲದಲ್ಲಿ ವ್ಯಾಪಾರ ಚೆನ್ನಾಗಿ ನಡೆದು ಮತ್ತಷ್ಟು ಅಸ್ತಿ ಗಳಿಸಿದ್ದರು. ನಮ್ಮ ತೋಟದ ಆಸುಪಾಸಿ ನಲ್ಲಿ ನೀರಾವರಿ ಬಾವಿಗಳಿದ್ದ ಜಮೀನುಗಳು ಮೂರೇ ಮೂರು. ಒಂದು ನಮ್ಮದು, ಉಳಿದವು ಶೇಗುಣಿಸಿ ಗೌಡರದ್ದು ಹಾಗೂ
ಜಮಖಂಡಿ ಮಹಾರಾಜರಾಗಿದ್ದ ಅಪ್ಪಾಸಾಹೇಬ ಅವರದು. ತೊಟದಲ್ಲಿ ಕಬ್ಬು, ಹತ್ತಿ, ಗೋಧಿ, ಬಾಳೆ, ಕಾಯಿಪಲ್ಲೆಗಳು ಇತ್ಯಾದಿ ಬೆಳೆಯುತ್ತಿದ್ದರು 18 ಎಕರೆ ಒಣ ಜಮೀನನ್ನು ಯಲ್ಲಟ್ಟಿಯ ಓರ್ವ ಜಂಗಮ ಮನೆತನದವರಿಗೆ ಪಾಲಿನಲ್ಲಿ ಉಳುಮೆ ಮಾಡಲು ನೀಡಿದ್ದರು. ಅಲ್ಲಿ ಒಣ ಬೇಸಾಯದಿಂದ ಜೋಳ, ಕುಸುಬೆ, ಕಡಲೆ, ಅಗಸೆ ಬೆಳೆಯುತ್ತಿದ್ದರು.

ಹೆಚ್ಚೂ ಕಡಿಮೆ ಮನೆಗೆ ಬೇಕಾದ ಎಲ್ಲಾ ದವಸ ಧಾನ್ಯಗಳನ್ನು, ಎಣ್ಣೆಗಾಗಿ ಕುಸುಬೆಯನ್ನು ಮತ್ತು ಮನೆಯ ಹಸುಗಳಿಗೆ ಬೇಕಾದ ಮೇವು, ಗಜ್ಜರಿ ಬಳ್ಳಿ ಮತ್ತು ಅವರೆ ಬಳ್ಳಿಗಳನ್ನು ತೋಟದಲ್ಲಿಯೇ ಬೆಳೆಯುತ್ತಿದ್ದರು. ಸ್ವಲ್ಪ ಮಸಾಲೆ ಪದಾರ್ಥಗಳನ್ನು, ಚಹಾ ಪುಡಿ ಮಾತ್ರ ಖರೀದಿಸುತ್ತಿದ್ದರು ಚಹಾಕ್ಕೆ ಹೆಚ್ಚಾಗಿ ಬೆಲ್ಲವನ್ನೇ ಉಪಯೋಗಿಸುತ್ತಿದ್ದರು.

ನನ್ನ ಅಜ್ಜ ಮಹಾಲಿಂಗಪ್ಪ ಅವರ ಅಣ್ಣ, ನಮ್ಮ ಹಿರಿಯಜ್ಜ ಬಸಲಿಂಗಪ್ಪ ಅವರು 1950ರಲ್ಲಿ ಅಕಾಲಿಕವಾಗಿ ಮರಣ
ಹೊಂದಿದರು. ಅ ನಂತರ ಮನೆಯ ಯಜಮಾನಿಕೆಯನ್ನು ನಮ್ಮ ಅಜ್ಜ ಮಹಾಲಿಂಗಪ್ಪ ಅವರೇ ವಹಿಸಿಕೊಳ್ಳಬೇಕಾಯಿತು. ಅವರು ವ್ಯಾಪಾರದ ಜವಾಬ್ದಾರಿಯನ್ನು ಬಸಲಿಂಗಪ್ಪ ಅವರ ಎರಡನೆಯ ಮಗನಾದ ಪರಪ್ಪ ಅವರಿಗೆ ವಹಿಸಿಕೊಟ್ಟು ತಾವು ಒಕ್ಕಲುತನದ ಕೆಲಸವನ್ನು ಮುಂದುವರಿಸಿದ್ದರು. ಬಸವಲಿಂಗಪ್ಪ ಅವರ ಮರಣಾನಂತರ ಮನೆಯ ಆಸ್ತಿಯನ್ನು ಎರಡು ಭಾಗ ಮಾಡಲಾಯಿತು. ಸೋಮವಾರಪೇಟೆಯ ಅಂಗಡಿಗಳು, ಮನೆಯಲ್ಲಿ ಅರ್ಧ ಭಾಗ, ತೋಟದಲ್ಲಿ ಅರ್ಧ ಭಾಗ ಮತ್ತು ನಮ್ಮ ಮುತ್ತಜ್ಜ ಮಲ್ಲಪ್ಪನವರ ಮನೆಯ ಅರ್ಧ ಭಾಗವನ್ನು ಬಸವಲಿಂಗಪ್ಪನವರ ಮಕ್ಕಳಿಗೆ ಕೊಡಲಾಯಿತು.

ಬಸಲಿಂಗಪ್ಪನವರಿಗೆ ನಾಲ್ಕು ಜನ ಗಂಡು ಮಕ್ಕಳು. ಬಸಪ್ಪ, ಪರಪ್ಪ, ಮಲ್ಲಪ್ಪ ಮತ್ತು ಈಶ್ವರ, ಈ ಪೈಕಿ ಬಸಪ್ಪ ಚಿತ್ರಕಲೆಯಲ್ಲಿ ನಿಪುಣರಾಗಿದ್ದರು ಕೆಲವು ವರುಷ ನಾಸಿಕದ ನೋಟು ಮುದ್ರಣಾಲಯದಲ್ಲಿ ಕೆಲಸ ಮಾಡಿ, ನಂತರ ಜಮಖಂಡಿಗೆ ಬಂದು ವ್ಯಾಪಾರ ಪ್ರಾರಂಭಿಸಿದರು. ಪರಪ್ಪ ಬನಹಟ್ಟಿಯಲ್ಲಿ ವ್ಯಾಪಾರದ ಉಸ್ತುವಾರಿಯನ್ನು ವಹಿಸಿಕೊಂಡು ಬಹಳ ಯಶಸ್ವಿ ವ್ಯಾಪಾ ರಸ್ಥರಾದರು. ಅವರ ಕಿರಾಣಿ ವ್ಯಾಪಾರ ಬಹಳ ಚೆನ್ನಾಗಿ ನಡೆಯಿತು.

ಮಲ್ಲಪ್ಪ ಅವರ ವಿವಾಹ ಓರ್ವ ಶಾಲಾ ಶಿಕ್ಷಕಿಯೊಂದಿಗೆ ನಡೆದು, ಅವರು ಅಥಣಿ ತಾಲೂಕಿನ ಮದ ಭಾವಿಯಲ್ಲಿ, ಹೆಂಡತಿ ನೌಕರಿ ಮಾಡುತ್ತಿದ್ದ ಊರಿನಲ್ಲಿಯೇ ನೆಲೆಗೊಂಡರು. ಈಶ್ವರ ಅವರು ಚಲನಚಿತ್ರ ಛಾಯಾಗ್ರಹಣದಲ್ಲಿ ಡಿಪ್ಲೊಮಾ ಪಡೆದು, ಮುಂಬೈಗೆ ತೆರಳಿ, ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ವಿ. ಕೆ. ಮೂರ್ತಿಯವರಿಗೆ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಂಡರು.

ಗುರುದತ್ತ ಅವರ ಸಾಹೀಬ್, ಬೀಬಿ ಔರ್ ಗುಲಾಮ, ಕೋರಾ ಕಾಗಜ್, ಪ್ಯಾಸಾ, ಚೌದಂವಿ ಕಾ ಚಾಂದ್ ಚಲನಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿ, 1970ರ ದಶಕದಲ್ಲಿ ಚಲನಚಿತ್ರಗಳಿಗೆ ಛಾಯಾಗ್ರಹಣ ನಿರ್ದೇಶಕರಾಗಿ ಸ್ವತಂತ್ರವಾಗಿ
ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು, ಕೂಲಿ, ಬಾರ್ಡರ್ ಚಿತ್ರಗಳನ್ನು ಒಳಗೊಂಡು ನೂರಾರು ಚಲನಚಿತ್ರಗಳಿಗೆ ಛಾಯಾ ಗ್ರಹಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಬಸಲಿಂಗಪ್ಪನವರಿಗೆ ಮೂರು ಜನ ಹೆಣ್ಣು ಮಕ್ಕಳು. ಅವರಲ್ಲಿ ಕಮಲವ್ವ ಅವರನ್ನು ಗದ್ದನಕೇರಿಗೆ ಓರ್ವ ಶಾಲಾ ಶಿಕ್ಷಕರಿಗೆ,
ಭಾಗವ್ವ ಅವರನ್ನು ಜಮಖಂಡಿಯಲ್ಲಿ ಫೋಟೊ ಸ್ಟುಡಿಯೊ ನಡೆಸುತ್ತಿದ್ದ ಮುರಿಗೆಪ್ಪ ಹರಕಂಗಿ ಅವರಿಗೆ ಮತ್ತು ನಿಂಬೆವ್ವ
ಅವರನ್ನು ಅವರ ತಾಯಿ ಗಂಗವ್ವ ಅವರ ತೇದಾಳದ ಶೀಲವಂತ ಮನೆತನದಲ್ಲಿ ಕೊಟ್ಟು ಮದುವೆ ಮಾಡಿದ್ದರು. ನಮ್ಮ ಅಜ್ಜ
ಮಹಾಲಿಂಗಪ್ಪನವರಿಗೆ ಆರು ಜನ ಮಕ್ಕಳು.

ಮೂರು ಗಂಡು, ಮೂರು ಹೆಣ್ಣು. ಮೊದಲನೆಯವರು ಗುರುಪಾದಪ್ಪ. ಅವರು ಬಹಳ ದೊಡ್ಡದಾದ ಸೈಕಲ್ ಅಂಗಡಿ ನಡೆಸು ತ್ತಿದ್ದರು. ಸುಮಾರು 24 ಸೈಕಲ್‌ಗಳನ್ನು ಇಟ್ಟುಕೊಂಡು ಬಾಡಿಗೆಗೆ ಕೊಡುತ್ತಿದ್ದರು. ಎರಡನೆಯವರೇ ನನ್ನ ತಂದೆ ಮಹಾದೇವಪ್ಪ. ಅವರು ಏಳನೆಯ ತರಗತಿ ವರೆಗೆ ಅಭ್ಯಾಸ ಮಾಡಿ ಶ್ರೀ ಸೋಮನಾಥ ನೇಕಾರರ ಸಂಘದಲ್ಲಿ ಕಾರ್ಯದರ್ಶಿ ಯಾಗಿ ಕೆಲಸ ಮಾಡುತ್ತಿದ್ದರು.

ಮೂರನೆಯವರಾದ ಶಿವಲಿಂಗಪ್ಪ ಅವರ ಆರೋಗ್ಯ ಅಷ್ಟೊಂದು ಸದೃಢವಾಗಿರಲಿಲ್ಲ. ಅವರು ನೇಕಾರಿಕೆಗೆ ಸಂಬಂಧಪಟ್ಟ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಹೆಣ್ಣು ಮಕ್ಕಳಲ್ಲಿ ಮೊದಲನೆಯವರು ಬಸಲಿಂಗವ್ವ. ಅವರನ್ನು ರಬಕವಿಯ ತುಂಬಾ ಸ್ಥಿತಿವಂತರಾದ ಟೆಂಗಿನಕಾಯಿ ಮನೆತನದ ರಾಚಪ್ಪ ಅವರಿಗೆ ಕೊಟ್ಟು ಮದುವೆ ಮಾಡಿದ್ದರು.

ನಮ್ಮಜ್ಜನಿಗೆ ಸೈಕಲ್ ರೇಸ್ ಹುಚ್ಚು: ಎರಡನೆಯವರಾದ ಸುಮಿತ್ರಾ ಅವರನ್ನು ಮುಧೋಳ ತಾಲ್ಲೂಕಿನ ಚನ್ನಾಳ ಗ್ರಾಮದ
ಶ್ರೀ ಮಹಾಲಿಂಗಪ್ಪ ಗೋಡಿ ಅವರಿಗೆ, ಮೂರನೆಯವರಾದ ಭ್ರಮರಾಂಭ ಅವರನ್ನು ನಮ್ಮ ಊರಿನವರೇ ಆದ ಗುರುಬಸಪ್ಪ
ಸಗರಿ ಅವರಿಗೆ ಕೊಟ್ಟು ಮದುವೆ ಮಾಡಿದರು.ನಮ್ಮ ಅಜ್ಜ ಮಹಾಲಿಂಗಪ್ಪವರಿಗೆ ಸೈಕಲ್ ಸ್ಪರ್ಧೆಯ ಹುಚ್ಚು. ಅವರು ಒಬ್ಬ
ಅತ್ಯುತ್ತಮ ಸೈಕಲ್ ಸ್ಪರ್ಧಾಪಟು ಆಗಿದ್ದರು. ಅವರು ಹಲವಾರು ಸೈಕಲ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಬೆಳ್ಳಿಯ ಕಪ್‌ಗಳನ್ನು
ಗೆದ್ದಿದ್ದರು.

ಅವರು ಗೆದ್ದ ಕಪ್‌ಗಳು ನಮ್ಮ ಮನೆಯಲ್ಲಿ ರಾರಾಜಿಸುತ್ತಿದ್ದವು, ಅವುಗಳನ್ನು ನೋಡಿದಾಗ ನಮ್ಮಲ್ಲಿಯೂ ಸ್ಪರ್ಧಾತ್ಮಕ ಮನೋ ಭಾವ ಮೂಡುತ್ತಿತ್ತು, ಅವರಿಗೆ ‘ಅತ್ತರ’ ಸುಗಂಧವನ್ನು ಹಚ್ಚಿಕೊಳ್ಳುವ ಅಭ್ಯಾಸವಿತ್ತು. 1964ರಲ್ಲಿ ತೀರಿಕೊಂಡಾಗ, ಅವರ ಕಪಾಟಿನಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಅತ್ತರ್ ಬಾಟಲಿಗಳ ಸಂಗ್ರಹವೇ ದೊರೆಯಿತು. ನಮ್ಮ ಅಜ್ಜ ಮಹಾಲಿಂಗಪ್ಪ ವರಿಗೆ ಹೆಣ್ಣು ಮಕ್ಕಳ ಮೇಲೆ ವಿಶೇಷ ಅಕ್ಕರೆ.

ಅವರು ಜೀವಿತಾವಧಿಯುದ್ದಕ್ಕೂ ಪ್ರತಿ ಯುಗಾದಿ ಮತ್ತು ದೀಪಾವಳಿಗೆ ಅವರ ಹೆಣ್ಣು ಮಕ್ಕಳ ಮನೆಗೆ ಸೈಕಲ್ ಮೇಲೆ ಹೋಗಿ ಉಡುಗೊರೆ, ಹೊಸ ಬಟ್ಟೆ ಬರೆಗಳನ್ನು ನೀಡಿ ಬರುತ್ತಿದ್ದರು. ನಮ್ಮ ತಂದೆ ಮಹಾದೇವಪ್ಪ ಅವರ ವಿವಾಹವು 1952ರಲ್ಲಿ ಗಲಗಲಿ ಗ್ರಾಮದ ತಮ್ಮಣ್ಣಪ್ಪ ರಾಚಪ್ಪ ರಾಮಗೌಡರ ಅವರ ಮಗಳಾದ ಗುರುಬಾಯಿ ಯಾ ಗುರವ್ವ ಅವರೊಂದಿಗೆ ನಡೆಯಿತು. ನಮ್ಮ ತಾಯಿಯ ತಂದೆ ತಮ್ಮಣ್ಣಪ್ಪ ರಾಮಗೌಡರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬಹಳ ವರ್ಷ ಅವರು ಯಡಹಳ್ಳಿ ದೇಸಗತಿಯಲ್ಲಿ, ಶ್ರೀ ಆರ್.ಎಂ. ದೇಸಾಯಿ ಅವರ ತಂದೆಯವರ ಕಾಲದಲ್ಲಿ ಕಾರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಗಲಗಲಿಯಲ್ಲಿ ಅವರು ದೊಡ್ಡ ಮನೆ ಮತ್ತು ಮೂರು ಕೂರಿಗೆ ಹೊಲ ಹೊಂದಿದ್ದರು. ಹಲವಾರು ಅನಾಥರಿಗೆ ಆಶ್ರಯ ಕೊಟ್ಟು ಅವರನ್ನು ಬೆಳೆಸಿದ್ದರು. ಒಕ್ಕಲುತನ ಮನೆತನದಲ್ಲಿ ಬೆಳೆದು ಬಂದ ನಮ್ಮ ತಾಯಿ ಗುರವ್ವನವರು ಮದುವೆಯಾದ ನಂತರ ನಮ್ಮ ಅಜ್ಜ ಮಹಾಲಿಂಗಪ್ಪ ಅವರಿಗೆ ಸಹಾಯಕರಾಗಿ ಒಕ್ಕಲುತನದ ಮೇಲುಸ್ತುವಾರಿ ಯನ್ನು ನೋಡಿಕೊಳ್ಳಲು ಪ್ರಾರಂಭಿಸಿ ದರು. ೧೯೬೮ರಲ್ಲಿ ನಮ್ಮ ಅಜ್ಜ ತೀರಿಕೊಂಡ ಮೇಲೆ ತೋಟದ ಸಂಪೂರ್ಣ ಜವಾಬ್ದಾರಿಯನ್ನು ಅವರೇ ನಿರ್ವಹಿಸುತ್ತಿದ್ದರು.

ನಮ್ಮ ತಂದೆಗೆ ಒಟ್ಟು ಒಂಬತ್ತು ಮಕ್ಕಳು: ನಮ್ಮ ತಂದೆ ಮಹಾದೇವಪ್ಪ ಅವರಿಗೆ ನಾವು ಒಟ್ಟು ಒಂಬತ್ತು ಜನ ಮಕ್ಕಳು.
ಅವರಲ್ಲಿ ನಾನು ಮೊದಲನೆಯವನು. ನನ್ನ ನಂತರ ಈಶ್ವರ, ಮಹಾನಂದ, ರಾಜಶೇಖರ, ಕಾಡಪ್ಪ, ಚನ್ನಮ್ಮ, ಸಂಗಮೇಶ,
ಸುಭಾಶ ಮತ್ತು ಸಾವಿತ್ರಿ ಜನ್ಮ ತಾಳಿದರು. ಒಟ್ಟು ಆರು ಜನ ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳು. ನನ್ನ ತಾಯಿ
1954ರಲ್ಲಿ ಗರ್ಭವತಿಯಾದಾಗ ಆಸಂಗಿಯ ಶೀ ಯೋಗೇಶ್ವರ ಸ್ವಾಮೀಜಿಯವರ ದರ್ಶನಕ್ಕೆ ಹೋಗಿದ್ದರಂತೆ.

ನಮ್ಮ ತಾಯಿ ಅವರ ಅವರ ಆನನ್ಯ ಭಕ್ತೆ. ಆಗ ಸ್ವಾಮೀಜಿಯವರು, ‘ಗುರವ್ವಾ ನಿನಗೆ ಗಂಡು ಮಗ ಜನಿಸುತ್ತಾನೆ. ‘ಶಂಕರ’ ಎಂದು ಹೆಸರು ಇಡು. ಅವನು ಕೀರ್ತಿವಂತನಾಗುತ್ತಾನೆ’ ಎಂದು ಹೇಳಿದ್ದರಂತೆ. ಅದರಂತೆ, ನಾನು 1954ರ ಆಗಸ್ಟ್ 27ರಂದು, ನಮ್ಮ ತಾಯಿಯ ತವರು ಮನೆಯಾದ ಗಲಗಲಿಯಲ್ಲಿ ಹುಟ್ಟಿದೆ. ನನಗೆ ಸ್ವಾಮೀಜಿಯವರ ಸೂಚನೆಯಂತೆ ‘ಶಂಕರ’ ಎಂದು ನಾಮ ಕರಣ ಮಾಡಿದರು. ನಮ್ಮ ತಾಯಿ ತುಂಬಾ ದೈವಭಕ್ತೆ. ಸ್ವಾಮೀಜಿಗಳಲ್ಲಿ, ಸಾಧು ಸಂತರಲ್ಲಿ ಅಪಾರ ಭಕ್ತಿ ಮತ್ತು ಗೌರವ. ಮನೆಗೆ ಬರುವ ಸ್ವಾಮೀಜಿಗಳಿಗೆ ಉದಾರವಾಗಿ ಕಾಣಿಕೆ ನೀಡಿ ಸತ್ಕರಿಸಿ ಕಳುಹಿಸುತ್ತಿದ್ದರು.

ಶ್ರಾವಣ ಮಾಸದಲ್ಲಿ ಕೃಷ್ಣಾ ನದಿಯ ಸಣ್ಣ ಸಣ್ಣ ದ್ವೀಪಗಳಲ್ಲಿ ತಪಸ್ಸು, ಅನುಷ್ಠಾನ ಮಾಡುತ್ತಿದ್ದ ಸ್ವಾಮೀಜಿಗಳಿಗೆ ಹಾಲು, ಉತ್ತತ್ತಿ ಮತ್ತು ಮೆದು ಸಕ್ಕರೆ ಕಳುಹಿಸುತ್ತಿದ್ದರು. ತೀರ್ಥ ಕ್ಷೇತ್ರಗಳಿಗೆ ಮತ್ತು ಹಿಮಾಲಯಕ್ಕೆ ಹೋಗುವ ಸ್ವಾಮೀಜಿಗಳಿಗೆ ಉದಾರ ವಾಗಿ ಹಣ, ವಸ ಕೊಟ್ಟು ಕಳುಹಿಸುತ್ತಿದ್ದರು. ಶ್ರಾವಣ ಮಾಸದಲ್ಲಿ ನಮ್ಮ ಊರಿನ ಮಲ್ಲಪ್ಪನ ಗುಡಿಯ ಆವರಣದಲ್ಲಿ ನಡೆಯು ತ್ತಿದ್ದ ಪುರಾಣ ಪ್ರವಚನಗಳಿಗೆ ತಪ್ಪದೇ ಹಾಜರಾಗುತ್ತಿದ್ದರು.

ಅಮ್ಮ ಕೊಟ್ಟ ಸಾಲದ ಬಡ್ಡಿ ಸಂಗ್ರಹಿಸುತ್ತಿದೆ
ನಮ್ಮ ತಾಯಿ ತನ್ನ ಸೀಧನದಲ್ಲಿ ಕೃಷ್ಣಾ ನದಿಯ ದಡದಲ್ಲಿರುವ ಆಸಂಗಿ ಮತ್ತು ಅಸ್ಕಿ ಗ್ರಾಮದ ಮಹಿಳೆಯರಿಗೆ ಎಮ್ಮೆ ಖರೀದಿ ಸಲು 200 ರುಪಾಯಿವರೆಗೂ ಸಾಲ ನೀಡುತ್ತಿದ್ದರು. ಪ್ರತಿ ತಿಂಗಳು ಅವರು ಪ್ರತಿ ನೂರು ರುಪಾಯಿಗೆ ಒಂದೂವರೆ ಅಥವಾ ಎರಡು ರುಪಾಯಿಗಳ ಬಡ್ಡಿಯನ್ನು ವಿಧಿಸುತ್ತಿದ್ದರು.

ಆಗ ಎರಡು ನೂರು ರುಪಾಯಿಗಳಲ್ಲಿ ಒಂದು ಉತ್ತಮ ಎಮ್ಮೆ ಖರೀದಿಸಬಹುದಾಗಿತ್ತು. ಚಿಕ್ಕವನಾಗಿದ್ದಾಗ ನಾನು ಎಷ್ಟೋ ಸಲ
ಹೋಗಿ ಬಡ್ಡಿ ಹಣ ಸಂಗ್ರಹಿಸಿಕೊಂಡು ಬರುತ್ತಿದ್ದೆ. ಅಂತಹ ಸಂದರ್ಭಗಳಲ್ಲಿ ಒಂದು ಅಥವಾ ಎರಡು ಆಣೆ ಭಕ್ಷೀಸು ಸಹಿತ
ನಾನು ನನ್ನ ತಾಯಿಯಿಂದ ಪಡೆದುಕೊಂಡಿದ್ದೇನೆ. ಈ ರೀತಿ ಎಮ್ಮೆ ಖರೀದಿಸಲು ಸಾಲ ಪಡೆಯುವ ಹೆಣ್ಣು ಮಕ್ಕಳು ಹೆಚ್ಚಾಗಿ
ಮರಾಠಾ ಅಥವಾ ಜೈನ ಸಮಾಜಗಳಿಗೆ ಸೇರಿದವರಾಗಿರುತ್ತಿದ್ದರು, ನಮ್ಮ ತಂದೆಯವರು ಒಕ್ಕಲುತನದ ಗೊಡವೆಗೆ ಹೋಗು
ತ್ತಿರಲಿಲ್ಲ ಅವರು ತಾವಾಯಿತು, ತಮ್ಮ ನೇಕಾರರ ಸಹಕಾರ ಸಂಘದ ಕಾರ್ಯದರ್ಶಿ ಕೆಲಸವಾಯಿತು ಎಂದು ಇದ್ದುಬಿಡುತ್ತಿ
ದ್ದರು. ಪ್ರತಿ ಮಂಗಳವಾರ ಅವರಿಗೆ ೨೦ ರುಪಾಯಿ ಸಂಬಳ ದೊರೆಯುತ್ತಿತ್ತು. ಈ ಸಹಕಾರ ಸಂಘದ ಆಶ್ರಯದಲ್ಲಿ ಸುಮಾರು 24 ರಿಂದ 30 ಸ್ವಯಂಚಾಲಿತ ಮಗ್ಗಗಳಿದ್ದವು.