Thursday, 12th December 2024

ಇನ್ನೂ ಒಂದು ತಿಂಗಳು ಕಾದರೆ ಯಾರೂ ಸಾಯೊಲ್ಲ!

ಕಳೆದ ಹದಿನೈದು ದಿನಗಳಿಂದ ರಾಜ್ಯ ಸರಕಾರದ ತಲೆ ತಿನ್ನುತ್ತಿರುವ ಬಹಳ ಮುಖ್ಯವಾದ ಪ್ರಶ್ನೆಯೆಂದರೆ ಲಾಕ್ ಡೌನ್‌ನನ್ನು ಬಿಗಿಗೊಳಿಸಬೇಕಾ ಅಥವಾ ಸಡಿಲಗೊಳಿಸಬೇಕಾ? ಸರಕಾರಕ್ಕೆ ಯಾರು ಸಲಹೆ ಕೊಡುತ್ತಿದ್ದಾರೋ ಗೊತ್ತಿಲ್ಲ. ಅಷ್ಟಕ್ಕೂ ಇಂಥ ವಿಷಯಗಳಲ್ಲಿ ಮುಖ್ಯಮಂತ್ರಿಯಾದವರಿಗೆ ಯಾರ ಸಲಹೆಯೂ ಬೇಕಾಗಿಲ್ಲ. ಕಾರಣ ಇದು ಶುದ್ಧ ಕಾಮನ್ ಸೆನ್‌ಸ್‌ ವಿಚಾರ. ಕಣ್ಣಿಗೆ ಕಾಣದ ಕರೋನಾ ವೈರಸ್ ಸೋಂಕು ಇತರರಿಗೆ ಹರಡದಂತೆ ನಿಯಂತ್ರಿಸಬೇಕೆಂದರೆ, ಅದಕ್ಕೆ ಲಾಕ್ ಡೌನ್ ಮಾತ್ರ ಪರಿಹಾರ. ಇದಕ್ಕೆ ಔಷಧ ಅಥವಾ ಟ್ರಿಟ್‌ಮೆಂಟ್ ಕಂಡುಹಿಡಿಯುವ ತನಕ, ಇದರ ಹೊರತಾಗಿ ಬೇರೆ ದಾರಿಯೇ ಇಲ್ಲ. ಈ ಕಾರಣದಿಂದ ಜಗತ್ತಿನಾದ್ಯಂತ ಲಾಕ್ ಡೌನ್ ಜಾರಿ ಮಾಡಿರುವುದು. ಲಾಕ್ ಡೌನ್‌ನಲ್ಲಿ ಒಂದೇ ವಿಧ. ಅದೇನೆಂದರೆ ಹಂಡ್ರೆಡ್ ಪರ್ಸೆಂಟ್ ಲಾಕ್ ಡೌನ್. ಒಂದೇ ಒಂದು ಪ್ರಕರಣ ದಾಖಲಾಗದೆ ಹಸುರು ವಲಯ ಎಂದು ಘೋಷಿಸಿದ ಮರುದಿನವೇ, ಹತ್ತಾರು ಮಂದಿಗೆ ಸೋಂಕು ತಗುಲಬಹುದು. ಹೀಗಾಗಿ ಈ ವಿಷಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಹೀಗಿರುವಾಗ ಮೀನಾ-ಮೇಷ ಎಣಿಸುವುದೇಕೆ? ಅಥವಾ ಈ ವಿಷಯದಲ್ಲಿ ಗೊಂದಲವಾದರೂ ಏಕೆ?

ಇದು ಎಂಥವರಿಗಾದರೂ ಸರಳವಾಗಿ ಅರ್ಥವಾಗುವ ಸಂಗತಿ. ಆದರೆ ಲಾಕ್ ಡೌನ್ ಮುಂದುವರಿಸಬೇಕಾ ಅಥವಾ ಬೇಡವಾ ಅಥವಾ ಸಡಿಲಿಸಬೇಕಾ ಅಥವಾ ಸಡಿಲಿಸಿದರೆ ಎಷ್ಟು ಸಡಿಲಿಸಬೇಕು ಮತ್ತು ಎಲ್ಲೆಲ್ಲಿ ಎಂಬ ಬಗ್ಗೆ ರಾಜ್ಯ ಸರಕಾರ ಅದೆಷ್ಟು ತಲೆ ಕೆಡಿಸಿಕೊಂಡಿತೆಂದರೆ, ದಿನಕ್ಕೊೊಂದು ಹೇಳಿಕೆ ಅಥವಾ ನಿಲುವನ್ನು ತಳೆಯಲಾರಂಭಿಸಿತು. ಲಾಕ್ ಡೌನ್ ಮಾಡಿದರೆ, ಅದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಅದರಿಂದ ಆರ್ಥಿಕತೆ ಸಂಪೂರ್ಣ ನೆಲಕಚ್ಚುತ್ತದೆ. ಇದರಿಂದ ಅಸಂಘಟಿತ ಕಾರ್ಮಿಕರಿಗೆ ವಿಪರೀತ ತೊಂದರೆಯಾಗುತ್ತದೆ. ಸಾಮಾನ್ಯ ಜನಜೀವನ ಸ್ಥಗಿತವಾಗುತ್ತದೆ. ಅನುಮಾನವೇ ಇಲ್ಲ. ಇದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಆದರೆ ಎಲ್ಲರ ಜೀವ ಮಾತ್ರ ಉಳಿಯುತ್ತದೆ. ಲಾಕ್ ಡೌನ್ ಉದ್ದೇಶವೇ ಅದು. ಮೊದಲು ನಮ್ಮ ಜೀವವನ್ನು ಉಳಿಸಿಕೊಂಡು ಬಚಾವ್ ಆಗುವುದು. ನಮ್ಮ ಜೀವವನ್ನು ಉಳಿಸಿಕೊಂಡರೆ, ಮುಂದೆ ಏನು ಬೇಕಾದರೂ ಮಾಡಬಹುದು. ನಾವೇ ಇಲ್ಲದಿದ್ದರೆ ಆರ್ಥಿಕತೆಯನ್ನು ಉದ್ಧಾರ ಮಾಡುವುದಾದರೂ ಹೇಗೆ?

ಸಿಂಗಾಪುರ ಪ್ರಧಾನ ಮಂತ್ರಿ ಇದನ್ನೇ ಹೇಳಿದ್ದು – ‘ನನಗೆ ಗೊತ್ತಿದೆ. ನಿಮ್ಮೆಲ್ಲರಿಗೂ ಲಾಕ್ ಡೌನ್‌ನಿಂದ ಅತೀವ ತೊಂದರೆಯಾಗುತ್ತದೆ. ಅದು ನಿಮ್ಮ ಗಳಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ಲಾಕ್ ಡೌನ್ ಮಾಡಿ ನೀವೆಲ್ಲ ಮನೆಯಲ್ಲಿಯೇ ಉಳಿಯುವುದರಿಂದ, ಯಾವ ಕಾರಣಕ್ಕೂ ನಿಮಗೆ ಕರೋನಾ ವೈರಸ್ ಸೋಂಕುವುದಿಲ್ಲ. ನೀವು ಬಚಾವ್ ಆದರೆ, ಮುಂದೆ ಏನು ಬೇಕಾದರೂ ಮಾಡಬಹುದು. ಜೀವ ಬಚಾವ್ ಮಾಡಿಕೊಳ್ಳುವ ಸಂದರ್ಭದಲ್ಲಿ ಆರ್ಥಿಕತೆ ಬಗ್ಗೆ ಯೋಚಿಸಬಾರದು. ಅದೇ ಬೇರೆ ವಿಷಯ. ಲಾಕ್ ಡೌನ್ ಕಾಲದಲ್ಲಿ ಆದ ನಷ್ಟವನ್ನು ಹೆಚ್ಚಿನ ದುಡಿಮೆಯಿಂದ ಮೇಕಪ್ ಮಾಡಿಕೊಳ್ಳಬಹುದು. ನಮಗೆ ಹೊಸ ಹೊಸ ವಿಧಾನಗಳು ಗೊತ್ತಾಗಬಹುದು. ಕರೋನಾ ವೈರಸ್ ಅನ್ನು ಹೇಗೆ ಹೊಸ ಸದವಕಾಶವನ್ನಾಗಿ ಹೇಗೆ ಪರಿವರ್ತಿಸಿಕೊಳ್ಳುವುದು ಎಂಬುದನ್ನು ಯೋಚಿಸೋಣ. ಆದ್ದರಿಂದ ಯಾರೂ ಗಲಿಬಿಲಿಯಾಗಬೇಕಾದ ಅಗತ್ಯವಿಲ್ಲ. ನೀವೆಲ್ಲ ಮನೆಯಲ್ಲಿಯೇ ಉಳಿಯುವ ಮೂಲಕ ಈ ಸಮರವನ್ನು ಜಯಿಸಬೇಕಿದೆ. ಇದೊಂದೇ ನಮ್ಮ ಮುಂದಿರುವ ಮಾರ್ಗ.’

ಇಲ್ಲಿ ಪ್ರಧಾನಿ ಲೀ ಎಚ್.ಲೂನ್‌ಗ್‌ ಅವರ ಸ್ಪಷ್ಟತೆಯನ್ನು ಗಮನಿಸಬೇಕು. ಲಾಕ್ ಡೌನ್ ವಿಷಯದಲ್ಲಿ ಅವರಿಗೆ ಯಾವುದೇ ಗೊಂದಲ ಇಲ್ಲ. ಕರೋನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಪರಿಹಾರ ಎಂದಾದರೆ, ಅದನ್ನೇ ಪರಿಣಾಮಕಾರಿಯಾಗಿ ಜಾರಿಗೆ ತರುವುದೊಂದೇ ದಾರಿ. ಹೀಗಿರುವಾಗ, ಅದರಲ್ಲಿ ಚೌಕಾಶಿ ಮಾಡುವುದೆಂತು? ಮಾಡಬೇಕು ಅಂದರೆ ಕಟ್ಟುನಿಟ್ಟಾಗಿ ಮಾಡಬೇಕು. ಅಷ್ಟೇ. ಈ ವಿಷಯದಲ್ಲಿ ದಿನಾದಿನ ಅಧಿಕಾರಿಗಳನ್ನು ಕೇಳುವುದು, ಯಾರೋ ಹೇಳಿದರೆಂದು ನಮ್ಮ ಅಭಿಪ್ರಾಯವನ್ನು ಬದಲಿಸುವುದು ಸರ್ವತಾ ಬುದ್ಧಿವಂತಿಕೆಯ ಲಕ್ಷಣವಲ್ಲ. ಮೊದಲು ನಮಗೆ ಸ್ಪಷ್ಟತೆ ಇರಬೇಕು. ಬದ್ಧತೆ ಇರಬೇಕು. ನಮಗೆ ಜನರ ಜೀವ ಉಳಿಸುವುದು ಮುಖ್ಯವೋ, ಆರ್ಥಿಕತೆ ಮುಖ್ಯವೋ ಎಂಬುದರ ಬಗ್ಗೆ ಖಚಿತ ನಿಲುವು ಇರಬೇಕು.

ಲಾಕ್ ಡೌನ್ ಬಗ್ಗೆ ಖಚಿತ ನಿಲುವು ತಳೆಯದ ಇಟಲಿ, ಅಮೆರಿಕ ಎಂಥ ಬೆಲೆ ತೆತ್ತಿತು ಎಂಬುದು ನಮ್ಮ ಕಣ್ಣೆೆದುರಿದೆ. ಅಮೆರಿಕ ಅಧ್ಯಕ್ಷರಂತೂ ಯಾವ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದರು. ಇಟಲಿಯ ಅಧ್ಯಕ್ಷರಿಗೆ ಈ ವಿಷಯದಲ್ಲಿ ಸ್ಪಷ್ಟತೆ ಇರಲಿಲ್ಲ. ಹೀಗಾಗಿ ಈ ಎರಡೂ ದೇಶಗಳು ಅಪಾರ ಸಾವು-ನೋವು ಅನುಭವಿಸಿದವು. ಈ ವಿಷಯದಲ್ಲಿ ಭಾರತ ಮಾಡಿದ ಒಳ್ಳೆಯ ಕೆಲಸವೆಂದರೆ, ಯಾವುದೇ ಸಿದ್ಧತೆಯಿಲ್ಲದಿದ್ದರೂ ಹಠಾತ್ ಲಾಕ್ ಡೌನ್ ಘೋಷಿಸಿದ್ದು. ಇದರಿಂದ ಕೆಲವು ಅವಿವೇಕಿಗಳು ಮೋದಿಯವರನ್ನು ಟೀಕಿಸಿದರು. ಏನೂ ಪೂರ್ವ ಸಿದ್ಧತೆ ಮಾಡಿಕೊಳ್ಳದೇ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ ಎಂದು ಜರೆದರು. ಸಾಮಾಜಿಕ ಜಾಲತಾಣಗಳಲ್ಲಿ ಎರಡು ದಿನ ಅಭಿಯಾನ ಮಾಡಿದರು. ಇದರಿಂದ ಕೋಟ್ಯಂತರ ಜನರಿಗೆ ತೊಂದರೆ ಆಯಿತು, ಅನಗತ್ಯ ಬವಣೆ ಅನುಭವಿಸಬೇಕಾಯಿತು, ಕಾಲಾವಕಾಶ ಕೊಟ್ಟು ಲಾಕ್ ಡೌನ್ ಮಾಡಿದ್ದರೆ, ಜನರಿಗೆ ಇಷ್ಟೆೆಲ್ಲಾ ಸಮಸ್ಯೆೆ ಆಗುತ್ತಿರಲಿಲ್ಲ ಎಂಬುದು ಅವರ ವಾದವಾಗಿತ್ತು.

ಈ ವಿಷಯದಲ್ಲಿ ಮೋದಿ ಅವರೇನಾದರೂ ಒಂದು ದಿನ ತಡ ಮಾಡಿದ್ದರೂ ಅದರ ಪರಿಣಾಮ ಭಯಂಕರವಾಗಿರುತ್ತಿತ್ತು. ಭಾರತ ಭಾರೀ ಬೆಲೆ ತೆರಬೇಕಾಗುತ್ತಿತ್ತು. ಜನರಿಗೆ ತೊಂದರೆಯಾಗುವುದು ಸಹಜ. extraordinary situation ನಲ್ಲಿ extraordinary ತೊಂದರೆಗಳೇ ಆಗುತ್ತವೆ. ಜನಕ್ಕೆ ಊಟಕ್ಕೆ ಗತಿ ಇರುವುದಿಲ್ಲ. ನೂರಾರು ಕಿಮಿ ನಡೆಯಬೇಕಾಗುತ್ತದೆ. ಬೇರೆ ಊರಿಗೆ ಹೋದವರು ಅಲ್ಲಿಯೇ ಇರಬೇಕಾಗುತ್ತದೆ. ತಿಂಗಳುಗಟ್ಟಲೆ ಮನೆ-ಮಂದಿಯಿಂದ ದೂರ ಇರಬೇಕಾಗುತ್ತದೆ. ತಂದೆ-ತಾಯಿ ತೀರಿ ಹೋದರೂ ಅವರ ಅಂತ್ಯಸಂಸ್ಕಾರಗಳಿಗೂ ಹೋಗಲು ಆಗುವುದಿಲ್ಲ. ಇವೆಲ್ಲ ಸಹಜ. ಆದರೆ ಇದರಿಂದ ಸಾವಿರಾರು ಜನರ ಪ್ರಾಣಕ್ಕೆೆ ಸಂಚಕಾರ ಬಂದರೆ? ಅದರಲ್ಲೂ ಕರೋನಾವೈರಸ್ಸಿಗೆ ಮದ್ದಿಲ್ಲ. ಅಲ್ಲದೇ ಇದು  ಸುಮಾರು ಎರಡು ತಿಂಗಳ ಅವಧಿಯಲ್ಲಿ ಇಡೀ ವಿಶ್ವವನ್ನೇ ಆವರಿಸಿಬಿಟ್ಟಿತು. ಕಾಳ್ಗಿಚ್ಚಿಗಿಂತ ವೇಗವಾಗಿ ಹರಡುವ ಈ ವೈರಸ್ಸನ್ನು ನಿಯಂತ್ರಿಸಲು ಜನರನ್ನು ದೂರ ದೂರ ಇಡುವುದೊಂದೇ ಮಾರ್ಗ. ಹೀಗಾಗಿ ಈ ವಿಷಯದಲ್ಲಿ ಪ್ರಧಾನಿಯವರು ಸ್ವಲ್ಪವೂ ತಡ ಮಾಡುವ ಪ್ರಶ್ನೆಯೇ ಇರಲಿಲ್ಲ. ಇದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡ ನಂತರ ಕ್ರಮಕೈಗೊಳ್ಳುವ ವಿಷಯವಲ್ಲ. ಮನೆಯೆಡೆಗೆ ನುಗ್ಗಲು ಧಾವಿಸಿ ಬರುವ ಹೆಮ್ಮಾರಿಯನ್ನು ತಡೆಯಲು ತಕ್ಷಣ ತೆಗೆದುಕೊಳ್ಳುವ ನಿರ್ಧಾರವೆಂದರೆ, ಮನೆ ಬಾಗಿಲನ್ನು ಹಾಕಿಕೊಳ್ಳುವುದು. ಮನೆ ಮಂದಿಗೆಲ್ಲ ತಿಳಿಸಿ ಈ ಕ್ರಮ ಕೈಗೊಳ್ಳುವ ಹೊತ್ತಿಗೆ ಆ ಮಾರಿ ಮನೆಯೊಳಗೇ ಬಂದು ಆಸೀನವಾಗಿರುತ್ತದೆ.

ಬಾಗಿಲು ಹಾಕಿಕೊಂಡ ನಂತರ ಪುನಃ ಬಾಗಿಲು ತೆರೆಯದಿರುವುದು ಜಾಣತನ. ಪದೇ ಪದೆ ಬಾಗಿಲು ತೆರೆದು ನೋಡುತ್ತಿದ್ದರೆ, ಆ ಮಾರಿ ಊರಿನಾಚೆ ಹೋಗಿದೆಯಾ ಎಂದು ಪರೀಕ್ಷಿಸುತ್ತಿದ್ದರೆ, ಅದು ಪುನಃ ಮನೆಯೊಳಗೇ ಬರದೇ ಇರುತ್ತದಾ? ಇದು ಎಂಥವರಿಗಾದರೂ ಅರ್ಥವಾಗುವ ಸಂಗತಿ. ಇಂಥ ಸಂದರ್ಭದಲ್ಲಿ ಯಾರಿಗೂ ತೊಂದರೆಯಾಗಬಾರದು ಎಂದು ನಿರೀಕ್ಷಿಸುವುದೇ ತಪ್ಪು. ತೊಂದರೆ ಆಗಿಯೇ ಆಗುತ್ತದೆ. ಕರಣ ನಾವು ಸೆಣಸುತ್ತಿರುವುದು ಸಮರ. ಯುದ್ಧಕಾಲದಲ್ಲಿ ಏರುಪೇರು ಸಹಜ. ಇಂಥ ಸನ್ನಿವೇಶದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವಾಗ ಅನೇಕರಿಗೆ ಕಿರಿಕಿರಿ, ತಾಪತ್ರಯಗಳಾಗುತ್ತವೆ. ಅದನ್ನು ಸಹಿಸಿಕೊಳ್ಳದೇ ವಿಧಿಯಿಲ್ಲ. ಒಂದು ರಾಜ್ಯ, ದೇಶವನ್ನು ಮುನ್ನಡೆಸುವವರಿಗೆ ಈ ವಿವೇಚನೆ ಬೇಕಾಗುತ್ತದೆ. ದಿಲ್ಲಿಯಲಿರುವ ಅಸಂಘಟಿತ ಕಾರ್ಮಿಕರ ಬವಣೆ ಪರಿಗಣಿಸಿ, ಲಾಕ್ ಡೌನ್ ಕ್ರಮ ಕೈಗೊಳ್ಳದೇ ಇದ್ದಿದ್ದರೆ, ಅದೆಂಥ ದೊಡ ಅನಾಹುತ ಆಗುತ್ತಿತ್ತು ಎಂಬುದನ್ನು ಊಹಿಸುವುದು ಕಷ್ಟ. ನೂರಾರು ಜನ ಸಾವಿರಾರು ಕಿಮಿ ನಡೆದು ಊರು ಸೇರಿದರು, ಅವರ ಪಾದದ ಚರ್ಮ ಕಿತ್ತು ಬಂತು ಎಂಬ ವರದಿಗಳನ್ನು ನೋಡಿ ಪ್ರಧಾನಿಯನ್ನು, ಮುಖ್ಯಮಂತ್ರಿಗಳನ್ನು ಟೀಕಿಸುವವರು ಅವಿವೇಕಿಗಳು. ಅವರ ಬಗ್ಗೆ ಬಹಳ ತಲೆಕೆಡಿಸಿಕೊಳ್ಳಬೇಕಿಲ್ಲ.

ನಾನು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಉಗಾಂಡ ಅಧ್ಯಕ್ಷ ಯೊವೇರಿ ಕಗುತಾ ಮೂಸೆವೆನಿ ಅವರ ಭಾಷಣದ ಮುಖ್ಯಅಂಶಗಳನ್ನು ಕೇಳುತ್ತಿದ್ದೆ. ಅವರ ಭಾಷಣವನ್ನು ಭಾರತೀಯರು ಕೇಳಿಸಿಕೊಳ್ಳಬೇಕಿತ್ತು ಎಂದು ಅನಿಸಿತು. ಮೋದಿಯವರು ಈ ಧಾಟಿಯಲ್ಲಿ ಮಾತಾಡಿದರೆ ನಮ್ಮ ಜನ ಏನೆಂದುಕೊಳ್ಳುತ್ತಿದ್ದರೋ ಏನೋ? ನಮ್ಮ ಜನರಿಗೂ ಅರ್ಥ ಆಗೋದು ಆ ಭಾಷೆಯೇ. ‘ದೇವರಿಗೆ ಬಹಳ ಕೆಲಸಗಳಿವೆ. ಅವನಿಗೆ ಇಡೀ ಜಗತ್ತಿನ ಜನರ ಕಷ್ಟ-ಕಾರ್ಪಣ್ಯಗಳನ್ನು ಬಗೆಹರಿಸಬೇಕು. ಉಗಾಂಡದಲ್ಲಿರುವ ಮೂರ್ಖರು, ಅವಿವೇಕಿಗಳನ್ನಷ್ಟೇ ನಿಭಾಯಿಸುವುದು ಅವನ ಕೆಲಸ ಅಲ್ಲ’ ಎಂದುಬಿಟ್ಟರು. ಅಲ್ಲಿನ ಜನರಿಗೆ ಅಧ್ಯಕ್ಷನ ಈ ಭಾಷೆ ನೋಡಿ ಸಮಸ್ಯೆೆಯ ತೀವ್ರತೆ ಅರಿವಾಗಿರಬೇಕು. ಲಾಕ್ ಡೌನ್ ಆರಂಭದ ದಿನಗಳಲ್ಲಿ ಎಷ್ಟು ಹೇಳಿದರೂ ಜನ ಬೀದಿಗಿಳಿದಾಗ, ಪೊಲೀಸರು ಮುಖ,ಮೂತಿ ನೋಡದೇ ಬಾರಿಸಿದರಲ್ಲ, ಆಗ ಅವರ ಕೈಕಟ್ಟಿ ಹಾಕಬಾರದಿತ್ತು. ಸರಕಾರ ಕಠಿಣ ನಿರ್ಧಾರ ತೆಗೆದುಕೊಳ್ಳುವಲ್ಲಿ ಸೋಲುವುದೇ ಆಗ. ಪೊಲೀಸರಿಗೆ ಲಾಠಿ ಎತ್ತಬೇಡಿ ಎಂದರೆ ಅವರು ಇಲಿ ಹೋದರೂ, ಸುಮ್ಮನಿದ್ದು ಬಿಡುತ್ತಾರೆ. ಹಾಳಾಗಿ ಹೋಗಲಿ ನಮಗೇಕೆ ಉಸಾಬರಿ ಎಂದು ಸುಮ್ಮನಾಗುತ್ತಾರೆ. ನಮ್ಮ ರಾಜ್ಯದಲ್ಲಿ ಆಗಿದ್ದೂ ಅದೇ.

ಉಗಾಂಡ ಅಧ್ಯಕ್ಷ ಮೂಸೆವೆನಿ ಹೇಳಿದರು – ‘ಯುದ್ಧ ಕಾಲದಲ್ಲಿ ಎಲ್ಲರೂ ಮನೆಯೊಳಗೇ ಇರಬೇಕು ಎಂದು ಹೇಳುವುದಿಲ್ಲ. ಆದರೂ ಎಲ್ಲರೂ ತಮ್ಮಷ್ಟಕ್ಕೆ ಮನೆ ಸೇರಿಕೊಂಡು ಬಿಡುತ್ತಾರೆ. ವೈರಿಗಳು ಹೊರಗಿದ್ದಾರೆನ್ನುವುದು ಗೊತ್ತಾದರೆ ನೀವು ಹೊರಗೆ ಬರದೇ ನೆಲಮಾಳಿಗೆ ಸೇರಿಕೊಂಡು ಬಿಡುತ್ತೀರಿ. ಕಾರಣ ನಿಮಗೆ ಬೇರೆ ಆಯ್ಕೆಗಳಿರುವುದಿಲ್ಲ. ಯುದ್ಧಕಾಲದಲ್ಲಿ ನನ್ನ ಸ್ವಾತಂತ್ರ್ಯ ಹರಣವಾಯಿತು, ಧಕ್ಕೆಯಾಯಿತು ಎಂದು ಅರಚುವುದಿಲ್ಲ. ಜೀವ ಬಚಾವ್ ಮಾಡಿಕೊಳ್ಳಲು ಅದೆಲ್ಲವನ್ನೂ ಮರೆಯುತ್ತೀರಿ. ಯುದ್ಧ ಕಾಲದಲ್ಲಿ ಹಸಿವು, ಬಡತನ ಎಂದು ಬೊಬ್ಬೆ ಹಾಕುವುದಿಲ್ಲ. ಹಸಿವನ್ನು ತಡೆದುಕೊಳ್ಳುತ್ತೀರಿ. ಜೀವ ಉಳಿದರೆ ಸಾಕಪ್ಪಾ, ಬೇಕಾಗಿದ್ದನ್ನು ತಿನ್ನಬಹುದು ಎಂದು ಯೋಚಿಸುತ್ತೀರಿ. ಯುದ್ಧ ಕಾಲದಲ್ಲಿ ನಮ್ಮ ಬಿಜಿನೆಸ್ ಆರಂಭಿಸಬೇಕು, ಫ್ಯಾಕ್ಟರಿ ಓಪನ್ ಮಾಡಬೇಕು, ಅಂಗಡಿ ತೆರೆಯಬೇಕು ಎಂದು ಯೋಚಿಸುವುದಿಲ್ಲ. ಮೊದಲು ಅಂಗಡಿ ಶಟರ್ ಎಳೆದು ಜೀವ ಉಳಿಸಿಕೊಳ್ಳಲು ಓಡುತ್ತೀರಿ. ಬದುಕುಳಿದರೆ ಅಂಗಡಿ ಬಾಗಿಲು ತೆರೆಯಬಹುದು ಎಂದು ಯೋಚಿಸುತ್ತೀರಿ.’
‘ಯುದ್ಧ ಕಾಲದಲ್ಲಿ ಒಂದು ದಿನ ಕಳೆದರೆ ಸಾಕು, ದೇವರಿಗೆ ನಮಸ್ಕಾರ ಹಾಕುತ್ತೀರಿ. ಒಂದೊಂದು ದಿನ ಕಳೆದಾಗಲೂ ದೇವರನ್ನು ನೆನೆಯುತ್ತೀರಿ. ಯುದ್ಧಕಾಲದಲ್ಲಿ ನಿಮ್ಮ ಮಕ್ಕಳು ಶಾಲೆ, ಕಾಲೇಜಿಗೆ ಹೋಗುವುದನ್ನು ನೀವು ಇಷ್ಟಪಡುವುದಿಲ್ಲ. ಮನೆಯಿಂದ ಹೊರಹೋಗಬೇಡಿ ಎಂದು ಗದರುತ್ತೀರಿ. ಗಂಡನನ್ನು ಆಫೀಸಿಗೆ ಕಳುಹಿಸಲು ಹೆಂಡತಿ ಒಪ್ಪುವುದಿಲ್ಲ. ಸಂಬಳ ಇಲ್ಲದಿದ್ದರೂ ಉಪವಾಸ ಇರೋಣ ಆದರೆ ಆಫೀಸಿಗೆ ಹೋಗಬೇಡಿ ಅಂತಾಳೆ. ಯುದ್ಧ ಕಾಲದಲ್ಲಿ ತನ್ನ ಮಗನನ್ನು ಸೇನೆಗೆ ಬಾ ಎಂದು ಕರೆಯದಿರಲಿ ಎಂದು ತಂದೆ-ತಾಯಿ ಪ್ರಾರ್ಥಿಸುತ್ತಾರೆ. ಮನೆಯ ಹೊರಗೆ ಹೋದರೆ ಗುಂಡು ತಗುಲೀತು, ಬಾಂಬು ಬಿದ್ದೀತು ಎಂದು ಮನೆಯೊಳಗೇ ಅವಿತುಕೊಳ್ಳುತ್ತಾರೆ. ಇದು ನಿಮಗೆ ಗೊತ್ತಿರುವ ಸಂಗತಿಯೇ. ಆದರೆ ನಾನು ನಿಮಗೆ ನೆನಪು ಮಾಡಿಕೊಡುತ್ತಿದ್ದೇನೆ.’

‘ಗೊತ್ತಿರಲಿ, ಇದೂ ಒಂದು ರೀತಿಯ ಯುದ್ಧ ಕಾಲ. ಇದು ಗನ್ನು, ಬಾಂಬು, ಕ್ಷಿಪಣಿ, ಟ್ಯಾಾಂಕರ್ ಗಳಿಲ್ಲದ ಯುದ್ಧ. ಅಷ್ಟಕ್ಕೂ ಸೈನಿಕರೇ ಇಲ್ಲದ ಯುದ್ಧ. ಗಡಿಯೇ ಇಲ್ಲದ ಯುದ್ಧ. ಕದನ ವಿರಾಮ ಒಪ್ಪಂದಗಳಿಲ್ಲದ ಯುದ್ಧ. ವಾರ್ ರೂಮ್ ಇಲ್ಲದ ವಾರ್. ಅಷ್ಟಕ್ಕೂ ನಮ್ಮ ಮೇಲೆ ಯುದ್ಧ ಮಾಡುವವ ಯಾರೆಂಬುದು ಗೊತ್ತು. ಆದರೆ ಆತನನ್ನು ನೋಡಿದವರಿಲ್ಲ. ಆತ ಕಣ್ಣಿಗೆ ಕಾಣದ, ಆದರೆ ನಮ್ಮೊಳಗೇ ಅವಿತುಕೊಂಡಿರುವ ವೈರಿ. ಆತ ನಮ್ಮೊಳಗೇ ಒಂದು ವಾರ ಇದ್ದರೂ ನಮಗೆ ಗೊತ್ತಾಗುವುದಿಲ್ಲ. ಆತ ಅದೆಂಥ ಭಯಂಕರ ವೈರಿ ಎಂದು ಒಂದು ನಿಮಿಷ ಯೋಚಿಸಿ. ಈ ವೈರಿಗೆ ಹಸುಳೆಗಳು, ಮಕ್ಕಳು, ಹೆಂಗಸರು, ಹಿರಿಯರು ಎಂಬ ಕರುಣೆಯಿಲ್ಲ. ಯಾರನ್ನು ಬೇಕಾದರೂ ಬಲಿ ತೆಗೆದುಕೊಳ್ಳುತ್ತಾನೆ. ಅಂಥ ನಿರ್ದಯಿ, ನಿರ್ಭಾವುಕ.’
‘ಈ ಯುದ್ಧದಲ್ಲಿ ಗೆದ್ದು ವರಿಗೆ ಸಂಪತ್ತು ದೋಚುವ ಇರಾದೆಯಿಲ್ಲ, ರಾಜ್ಯ, ದೇಶವನ್ನು ಆಕ್ರಮಿಸಿಕೊಂಡು ಅಧಿಕಾರ ನಡೆಸುವ ಹಂಬಲವಿಲ್ಲ. ನಮ್ಮ ದೇಶದೊಳಗಿರುವ ಬೆಲೆಬಾಳುವ ಖನಿಜ, ಬಂಗಾರ, ಆಸ್ತಿ-ಪಾಸ್ತಿ ದೋಚುವ ಹುನ್ನಾರವಿಲ್ಲ. ಈ ವೈರಿಗೆ ಧಾರ್ಮಿಕ ಅಜೇಂಡಾಗಲೂ ಇಲ್ಲ. ಜನಾಂಗೀಯ ಪಾರಮ್ಯ ಮೆರೆಯುವ ಉದ್ದೇಶವೂ ಈ ವೈರಿಗಿಲ್ಲ. ಈ ವೈರಿಗೆ ನಿಮ್ಮ ಪ್ರಾಣವೊಂದೇ ಬೇಕು. ನಿಮ್ಮನ್ನು ಸಾಯಿಸಿ ಆತ ಸಾಧಿಸುವಂಥದ್ದೇನೂ ಇಲ್ಲ. ಆದರೂ ನಿಮ್ಮನ್ನು ಸಾಯಿಸುವುದು ಮಾತ್ರ ಅವನ ಏಕಮಾತ್ರ ಉದ್ದೇಶ ಎಂಬುದು ಗೊತ್ತಿರಲಿ.’

‘ಸಂದರ್ಭದ ತೀವ್ರತೆ ಹೀಗಿರುವಾಗ, ನನಗೆ ಚಿಕನ್ ಬೇಕು, ಮಟನ್ ಸಿಗುತ್ತಿಲ್ಲ, ಲಿಕ್ಕರ್ ಅಂಗಡಿ ಬಾಗಿಲು ತೆರೆಯಲು ಅನುಮತಿ ಕೊಡಿ ಎಂದು ಅಂಗಲಾಚುತ್ತೀರಲ್ಲ, ನಿಮಗೆ ಮಾನ – ಮರ್ಯಾದೆ ಇದೆಯಾ? ನಿಮಗೆ ಬುದ್ಧಿ, ವಿವೇಕವಿದೆಯಾ? ನಮ್ಮ ಪವಿತ್ರ ಗ್ರಂಥಗಳು ಹೇಳುವುದೇನು, ಮನುಷ್ಯ ಹುಟ್ಟಿದ್ದು ತಿನ್ನುವುದಕ್ಕಲ್ಲ ಎಂದು. ಹೀಗಿರುವಾಗ ನೀವು ಬ್ರೆಡ್, ಬಟರ್, ಕೇಕ್ ಎಂದು ಹಪಹಪಿಸುತ್ತಿದ್ದೀರಲ್ಲ, ನಿಮಗೆ ನಾಚಿಕೆಯಾಗಬೇಕು. ಪೊಲೀಸರು ಹೇಳುವುದನ್ನು ಕೇಳಬೇಕು. ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮನೆಯಿಂದ ಹೊರಬಂದರೆ ಯಾರನ್ನೂ ಬಿಡುವುದಿಲ್ಲ. ವ್ಯವಸ್ಥೆಯೊಂದಿಗೆ ಸಹಕರಿಸಿ. ನಾವೆಲ್ಲಾ ಸೇರಿ ಕೋವಿಡ್ ಕರ್ವ್ ನ್ನು ಸಮತಟ್ಟು ಮಾಡೋಣ. ಈ ಕಾಲದಲ್ಲಿ ಶಾಂತವಾಗಿರಿ. ನಿಮ ಬಯಕೆಗಳನ್ನು ಅದುಮಿಡಿ. ಇಲ್ಲದಿದ್ದರೆ ನಾನು ಅದುಮಿಡುತ್ತೇನೆ. ನನಗೆ ಗೊತ್ತು ಯಾವ ರೀತಿ ನಿಮಗೆ ಬುದ್ಧಿ ಕಲಿಸಬೇಕೆಂದು. ಎಲ್ಲರೂ ಮತ್ತೊಬ್ಬರ ಸೈನಿಕರಾಗಿ, ಸಂಬಂಧಿಕರಾಗಿ. ಈ ಸಮರದಲ್ಲಿ ಗೆದ್ದರೆ ನಾವು ನಮ್ಮ ನಮ್ಮ ಸ್ವಾತಂತ್ರ್ಯ ಮರಳಿ ಪಡೆಯೋಣ. ನಮ್ಮ ಚಟ, ಆಸೆ, ಬಯಕೆಗಳನ್ನು ತೀರಿಸಿಕೊಳ್ಳೋಣ.’ ಇದು ಉಗಾಂಡ ಅಧ್ಯಕ್ಷನ ಮಾತುಗಳು.

ಇಂಥ ದಿಟ್ಟತನ, ಧಾಷ್ಟ್ಯ ಬೇಕು. ನಾಳೆಯೇ ಅಂಗಡಿ, ಫ್ಯಾಕ್ಟರಿ ಬಾಗಿಲು ತೆರೆದು ಮಾಡೋದೇನಿದೆ? ಮೊದಲು ವೈರಿಯಿಂದ ಸಂಪೂರ್ಣ ಬಚಾವ್ ಆಗಬೇಕು. ನಾನು ಬದುಕಿದರೆ ಏನು ಬೇಕಾದರೂ ಮಾಡಬಹುದು. ಎಲ್ಲರೂ ಸತ್ತರೆ ಚಟ್ಟ ಕಟ್ಟಲೂ ಯಾರೂ ಇರುವುದಿಲ್ಲ. ಸಾಯಲು ಸಿದ್ಧರಿರಬೇಕು, ಇಲ್ಲವೇ ತೆಪ್ಪಗೆ ಇರುವುದನ್ನು ಕಲಿತುಕೊಳ್ಳಬೇಕು. ಯಾವುದಾದರೂ ಒಂದನ್ನು ಮಾಡಿ,