Thursday, 12th December 2024

ಲಾಕ್ ಡೌನ್ ಸಮಯದಲ್ಲಿ ಲವ್ಲಿಯಾಗಿರುವುದು ಹೇಗೆ?

ಬೆಂಕಿ ಬಸಣ್ಣ ನ್ಯೂ ಯಾರ್ಕ್

ಆಗುವುದೆಲ್ಲವೂ ಒಳ್ಳೆಯದಕ್ಕೆ ಆಗುತ್ತದೆ ಎಂಬ ಫಿಲಾಸಪಿಯೊಂದಿಗೆ. ಈ ಲಾಕ್ ಡೌನ್ ಸಮಯದಲ್ಲಿ ನಾವು ಲವ್ಲಿಯಾಗಿ ಇರಲು ಪ್ರಯತ್ನಿಸೋಣ. ಆದಷ್ಟು ಬೇಗನೆ ಈ ಕರೋನಾ ವೈರಸ್ ಹೆಮ್ಮಾರಿ ಜಗತ್ತಿನಿಂದ ತೊಲಗಿ ಶಾಂತಿ, ನೆಮ್ಮದಿ ಮತ್ತೆ ಮರಳಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
—————–

ಲಾಕ್ ಡೌನ್ ಅಂದರೆ ಸದಾ ಕಾಲವು ಮನೆಯಲ್ಲಿಯೇ ಇರಬೇಕು. ಮೊದಲೆರಡು ದಿನಗಳು ಸ್ವೀಟ್ ಹೋಂ ಅನ್ನಿಸಿದ್ದು ಮೂರನೇ ದಿನಕ್ಕೆ ಸೆರೆಮನೆ ತರಹ ಅನ್ನಿಸಲು ಶುರುವಾಗುತ್ತೆ. ಅಮೆರಿಕದ ನನ್ನ ಹಳೆಯ ಸಹೋದ್ಯೋಗಿ ಮತ್ತು ಗೆಳೆಯನಾದ ಒರಿಸ್ಸಾ ಮೂಲದ ಪ್ರದೀಪ್ ಸೇನಾಪತಿ ಎನ್ನುವ ಸಾಫ್ಟವೇರ್ ಎಂಜಿನಿಯರ್ ಕಳೆದ ವಾರ ಈ ಲಾಕ್ ಡೌನ್ ಸಮಯದಲ್ಲಿ ಬೆಂಗಳೂರಿನ ತನ್ನ 2 ಬೆಡ್ ರೂಂ ಅಪಾರ್ಟ್ಮೆೆಂಟ್ ಒಳಗಡೆಯೇ 17ಗಂಟೆ ಸತತ 110 ಕಿಲೋ ಮೀಟರ್ ಓಡಿ ವಿಶ್ವದಾಖಲೆ ಮಾಡಿದ್ದಾನೆ.
ಸೆರೆಮನೆಯಲ್ಲಿ ಡಿಪ್ರೆಷನ್‌ಗೆ ಹೋಗುವುದು ಬಲು ಸುಲಭ. ಹಾಗಿದ್ದೂ ಕೆಲವರು ಜೈಲಿನಲ್ಲಿದ್ದರೂ ಮಹಾನ್ ಸಾಧನೆಗಳನ್ನು ಮಾಡಿದ್ದಾರೆ. ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ದಕ್ಷಿಣ ಆಫ್ರಿಕಾದ ಕಾರ್ಯಕರ್ತ ನೆಲ್ಸನ್ ಮಂಡೇಲಾರನ್ನು 27 ವರ್ಷಗಳ ಕಾಲ ಜೈಲಿನಲ್ಲಿರಿಸಲಾಯಿತು. ಸೆರೆಮನೆ ವಾಸದ ಸಮಯದಲ್ಲಿ ಅವರು ಬರೆದ ಆತ್ಮಚರಿತ್ರೆ ನನ್ನೊಳಗಿನ ಸಂಭಾಷಣೆ  ಸಾಹಿತ್ಯ ಲೋಕದ ಒಂದು ಮಹಾನ್ ಕೃತಿಯಾಗಿದೆ. ಜೈಲಿನಿಂದ ಬಿಡುಗಡೆಯಾದ ನಂತರ, ಅವರು ದಕ್ಷಿಣ ಆಫ್ರಿಕಾದ ಮೊಟ್ಟಮೊದಲ ಕಪ್ಪುವರ್ಣದ ಅಧ್ಯಕ್ಷರಾಗಿ ಆಯ್ಕೆಯಾದರು.

ಗೀತಾ ರಹಸ್ಯ:

ಭಾರತೀಯ ಸಾಮಾಜಿಕ ಸುಧಾರಕ ಮತ್ತು ಸ್ವಾಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ತಿಲಕರನ್ನು 1908 ರಿಂದ 1914ರವರೆಗೆ ಬರ್ಮಾದ ಮಾಂಡಲೆಯ ಜೈಲಿನಲ್ಲಿರಿಸಿದ್ದರು. ಜೈಲಿನಲ್ಲಿದ್ದಾಗ ತನ್ನ ಕೈಬರಹದಿಂದ ಪೆನ್ಸಿಲ್‌ನಲ್ಲಿ 400ಕ್ಕೂ ಹೆಚ್ಚು ಪುಟಗಳ ಮರಾಠಿ ಕೃತಿ ಗೀತಾ ರಹಸ್ಯ ಅಥವಾ ಕರ್ಮಯೋಗ ಶಾಸ್ತ್ರ ಎಂದೂ ಕರೆಯಲ್ಪಡುವ ಶ್ರೀಮದ್ ಭಗವದ್ಗೀತೆ ರಹಸ್ಯವನ್ನು ರಚಿಸಿದರು.

*ದಿ ಡಿಸ್ಕವರಿ ಆಫ್ ಇಂಡಿಯಾ:

ಬ್ರಿಟಿಷರು ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರನ್ನು 1942-1946ರವರೆಗೆ ಮಹಾರಾಷ್ಟ್ರದ ಅಹ್ಮದ್‌ನಗರ ಕೋಟೆಯ ಜೈಲಿನಲ್ಲಿರಿಸಿದ್ದರು. ಈ ಸಂದರ್ಭದಲ್ಲಿ ಅವರು ಡಿಸ್ಕವರಿ ಆಫ್ ಇಂಡಿಯಾವನ್ನು ಬರೆದಿದ್ದಾರೆ. ಇದು ತನ್ನ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ದೇಶಭಕ್ತನ ಕಣ್ಣುಗಳ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಅದರ ಇತಿಹಾಸ ಮತ್ತು ಅದರ ತತ್ತ್ವಶಾಸ್ತ್ರಗಳನ್ನು ನೋಡಿದ ಪರಿಯಿದೆ. ಇದನ್ನು ಭಾರತೀಯ ಸಾಹಿತ್ಯದಲ್ಲಿ ಒಂದು ಶ್ರೇಷ್ಠ ಕೃತಿಯೆಂದು ಪರಿಗಣಿಸಲಾಗಿದೆ. ಈ ಪುಸ್ತಕವನ್ನು ಬರೆಯಲು ಸಹ ಖೈದಿಗಳಾಗಿದ್ದ ನಾಲ್ಕು ಜನಗಳಾದ ಮೌಲಾನಾ ಅಬ್ದುಲ್ ಕಲಾಂ ಆಜಾದ್, ಗೋವಿಂದ್ ಬಲ್ಲಭ್ ಪಂತ್, ನರೇಂದ್ರ ದೇವ ಮತ್ತು ಅಸಫ್ ಅಲಿ, ತಮ್ಮ ಸೃಜನಶೀಲ ಸಲಹೆಗಳನ್ನು ನೀಡುವುದರ ಜತೆಗೆ ಸಹಾಯ ಮಾಡಿದರು. ಈ ಕರೋನಾ ಲಾಕ್ ಡೌನ್ ಸಮಯದಲ್ಲಿ ನಮ್ಮ ಮನೆಯ ಸದಸ್ಯರಿಗೆ ಏನಾದರೂ ಮಹಾನ್ ಸಾಧನೆ ಮಾಡಲು ನಾವು ಸಹಾಯ ಮಾಡಬಹುದಲ್ಲವೇ?

ಮೈನ್ – ಕಂಪ್ :

ಬಹಳಷ್ಟು ಜನರು ಇದನ್ನು ಓದಿಲ್ಲವಾದರೂ, ಈ ಪುಸ್ತಕದ ಹೆಸರನ್ನು ಪ್ರತಿಯೊಬ್ಬರೂ ಬಹುಶಃ ಕೇಳಿರುತ್ತಾರೆ. “Mein – Kampf ’ ಅಂದರೆ ಜರ್ಮನಿಯಲ್ಲಿ ನನ್ನ-ಹೋರಾಟ ಎಂದು ಅರ್ಥ. ಸರಕಾರವನ್ನು ಉರುಳಿಸಲು ಪ್ರಯತ್ನಿಸಿದ್ದಕ್ಕಾಗಿ 1924ರಲ್ಲಿ ಅಡಾಲ್ಫ್ ಹಿಟ್ಲರ್‌ನನ್ನು ಸೆರೆಮನೆಯಲ್ಲಿ ಹಾಕಿದಾಗ ತನ್ನ ಆತ್ಮಚರಿತ್ರೆಯನ್ನು ಜೈಲಿನ ಕಂಬಿಗಳ ಹಿಂದೆ ಕುಳಿತು ಬರೆದನು. ಈ ಪುಸ್ತಕವು ಹಿಟ್ಲರನು ಯಹೂದಿ ದ್ವೇಷಿಯಾಗಿ ಆಗಿ ಮಾರ್ಪಟ್ಟ ಪ್ರಕ್ರಿಯೆಯನ್ನು, ಅವನ ರಾಜಕೀಯ ಮತಾಂಧ ಸಿದ್ಧಾಾಂತದ ಹುಟ್ಟು ಮತ್ತು ಜರ್ಮನಿಯ ಭವಿಷ್ಯದ ಯೋಜನೆಗಳನ್ನು ವಿವರಿಸುತ್ತದೆ. ಈ ಲಾಕ್ ಡೌನ್ ಸಮಯದಲ್ಲಿ ನಮ್ಮ ಯೋಚನಾ ಲಹರಿಯ ಮೇಲೆ ನಿಗಾವಿಡುವುದು ಒಳ್ಳೆಯದು. ಇಲ್ಲವಾದರೆ, ಹಿಟ್ಲರ್ ತರಹ ಕ್ರೂರಿಯಾಗಿ, ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮನೆಯಲ್ಲಿರುವ ಅಸಹಾಯಕರಿಗೆ, ದುರ್ಬಲರಿಗೆ (ಮಕ್ಕಳಿಗೆ , ಹೆಂಗಸರಿಗೆ) ಶೋಷಣೆ ಮಾಡುವುದು, ಚಿತ್ರಹಿಂಸೆ, ಕಿರುಕುಳ ಕೊಡವುದನ್ನು ಮಾಡಬಹುದು. ಹೀಗಾದರೆ ತಕ್ಷಣ ಪೊಲೀಸರಿಗೆ ಪೋನ್ ಮಾಡಿ ಸಹಾಯ ಪಡೆದುಕೊಳ್ಳಿ. ಕೌಟುಂಬಿಕ ಹಿಂಸೆ ಅಪರಾಧವೆಂದು ನಿಮಗೆ ಗೊತ್ತಿರಲಿ.

ಅಮೆರಿಕದಲ್ಲಿ ಲಾಕ್‌ಡೌನ್ ಸಮಯ ಹೇಗೆ ಕಳೆಯುತ್ತಿದ್ದೇವೆ?:

ಅಮೆರಿಕದಲ್ಲಿ ಮನೆಯಿಂದ ಹೊರಗಡೆ ಬಂದರೆ ಪೊಲೀಸರು ಹೊಡೆಯುವುದಿಲ್ಲ. ಹೀಗಾಗಿ ಸಾಯಂಕಾಲ ಜನರು ಹೊರಗಡೆ ಅಂತರ ಕಾಯ್ದುಕೊಂಡು ವಾಕಿಂಗ್ ಮಾಡುತ್ತಾರೆ. ಮಕ್ಕಳು ಹೊರಗಡೆ ಬೈಸಿಕಲ್ ಹೊಡೆಯುತ್ತಾರೆ. ಕೆಲವೇ ಕೆಲವು ನಗರಗಳಲ್ಲಿ ಮಾತ್ರ ಮಾಸ್ಕನ್ನು ಕಡ್ಡಾಯ ಮಾಡಿದ್ದಾರೆ. ಹೀಗಾಗಿ ಬಹಳಷ್ಟು ಜನರು ಮಾಸ್‌ಕ್‌ ಇಲ್ಲದೆ ಓಡಾಡುತ್ತಿದ್ದಾರೆ. ಕೆಲವು ಶಾಪಿಂಗ್ ಮಾಲ್‌ಗಳಲ್ಲಿ ಒಳಬರುವ ಗ್ರಾಹಕರಿಗೆ ಹ್ಯಾಾಂಡ್ ಸ್ಯಾನಿಟೈಜರ್ ಮತ್ತು ಮಾಸ್ಕನ್ನು ಉಚಿತವಾಗಿ ಕೊಡುತ್ತಿದ್ದಾರೆ.
ಅಮೆರಿಕದಲ್ಲಿ ಮನೆಕೆಲಸದವರು ಸಿಗದ ಕಾರಣ ನಮ್ಮ ಎಲ್ಲಾ ಕೆಲಸವನ್ನು (ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಕಸ ಗೂಡಿಸುವುದು) ನಾವೇ ಮಾಡಿಕೊಳ್ಳುವುದು ಅಭ್ಯಾಸವಾಗಿ ಹೋಗಿದೆ. ಹೀಗಾಗಿ ಅಮೆರಿಕದಲ್ಲಿ ಲಾಕ್ ಡೌನ್  ಭಾರತದಷ್ಟು ಪರಿಣಾಮಕಾರಿಯಾಗಿಲ್ಲ. ವರ್ಕ್ ಫ್ರಂ ಹೋಮ್ ಮಾಡುವುದರಿಂದ ಆಫೀಸಿಗೆ ಡ್ರೈವ್ ಮಾಡುವ ಸಮಯ ಉಳಿತಾಯವಾಗಿದೆ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವ ಅವಕಾಶ ಒದಗಿಬಂದಿದೆ. ನಾವು ವಿಶ್ವ ಕನ್ನಡಿಗರು ನಾವಿಕ ಸಂಸ್ಥೆಯು ಪ್ರತಿ ಶನಿವಾರ ತುಂಬಾ ಉಪಯುಕ್ತಕರವಾದ ಸೆಮಿನಾರುಗಳನ್ನು ಆಯೋಜಿಸುತ್ತಿದೆ. ಇದರಲ್ಲಿ ಪ್ರಸಿದ್ಧ ವೈದ್ಯರು, ಆರ್ಥಿಕ ತಜ್ಞರು, ಪತ್ರಿಕೋದ್ಯಮಿಗಳು, ಗಾಯಕರು, ಹಾಸ್ಯ ಕಲಾವಿದರನ್ನು ಆಹ್ವಾನಿಸಿ ಅವರಿಂದ ವಿಡಿಯೋ ಕಾನ್ಫರೆನ್‌ಸ್‌ ಮೂಲಕ ಕಾರ್ಯಕ್ರಮಗಳನ್ನು ಕೊಡಿಸುತ್ತಿದ್ದಾರೆ. ಇದರಲ್ಲಿ ಖ್ಯಾತ ಪತ್ರಕರ್ತರಾದ ಶ್ರೀವಿಶ್ವೇಶ್ವರ ಭಟ್ಟರನ್ನು ಪತ್ರಿಕೋದ್ಯಮದ ಮೇಲೆ ಕರೋನಾ ಪರಿಣಾಮಗಳು ಎಂಬ ವಿಷಯದ ಮೇಲೆ ಮಾತನಾಡಲು ಆಹ್ವಾನಿಸಲಾಗಿತ್ತು.

ನಮ್ಮ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಏಪ್ರಿಲ್ 12ರಂದು ಅಕ್ಕ ಸಂಘಟನೆ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್‌ಸ್‌‌ನಲ್ಲಿ ಮಾತನಾಡಿ ಅಮೆರಿಕದಲ್ಲಿರುವ ಕನ್ನಡಿಗರಿಗೆ ಧೈರ್ಯ, ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಗೃಹಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಿತವಚನ ನೀಡಿದರು. ಹಿಂದೂ ದೇವಾಲಯಗಳು ಮಾಡುವ ಪೂಜೆಗಳನ್ನು ಫೇಸ್ಬುಕ್ ಲೈವ್ ಮೂಲಕ ಮನೆಯಿಂದಲೇ ನೋಡಿ ನಮಸ್ಕಾರ ಮಾಡುತ್ತಿದ್ದಾರೆ. ಪ್ರತಿದಿನ ಸಾಯಂಕಾಲ ಯೂಟ್ಯೂಬ್ ನೋಡಿಕೊಂಡು ವ್ಯಾಯಾಮ, ಯೋಗ ಮುಂತಾದವುಗಳನ್ನು ಮನೆಮಂದಿಯೆಲ್ಲಾ ಸೇರಿ ಗಂಡ, ಹೆಂಡತಿ ಮತ್ತು ಮಕ್ಕಳು ಒಟ್ಟಿಗೆ ಮಾಡುತ್ತಾರೆ. ಸ್ಕೂಲ್‌ಗಳು ಕ್ಲೋಸ್ ಆಗಿರುವುದರಿಂದ ಶಿಕ್ಷಕರು ಆನ್‌ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಆಗುವುದೆಲ್ಲವೂ ಒಳ್ಳೆಯದಕ್ಕೆ ಆಗುತ್ತದೆ ಎಂಬ ಫಿಲಾಸಪಿಯೊಂದಿಗೆ. ಈ ಲಾಕ್ ಡೌನ್ ಸಮಯದಲ್ಲಿ ನಾವು ಲವ್ಲಿಯಾಗಿ ಇರಲು ಪ್ರಯತ್ನಿಸೋಣ. ಆದಷ್ಟು ಬೇಗನೆ ಈ ಕರೋನಾ ವೈರಸ್ ಹೆಮ್ಮಾರಿ ಜಗತ್ತಿನಿಂದ ತೊಲಗಿ ಶಾಂತಿ, ನೆಮ್ಮದಿ ಮತ್ತೆ ಮರಳಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.