Monday, 25th November 2024

ರಾಜ್ಯದಲ್ಲಿ ಬಾಲ್ಯ ವಿವಾಹ ಪ್ರಕರಣ ಹೆಚ್ಚಳ

2 ವರ್ಷಗಳಲ್ಲಿ 437 ಪ್ರಕರಣ ಬೆಳಕಿಗೆ

ಹಾಸನದಲ್ಲಿ ಅತಿ ಹೆಚ್ಚು 56 ಪ್ರಕರಣ

ಹಾವೇರಿ, ಉಡುಪಿಯಲ್ಲಿ ಶೂನ್ಯ

ಬೆಂಗಳೂರು: ಅರಿವಿನ ಕೊರತೆ, ಅನಕ್ಷರತೆ, ಬಡತನ, ಮೂಢನಂಬಿಕೆ ಮತ್ತಿತರ ಕಾರಣಗಳಿಂದ ರಾಜ್ಯದಲ್ಲಿ ಬಾಲ್ಯ ವಿವಾಹ
ಪಿಡುಗು ಇಂದಿಗೂ ಜೀವಂತವಾಗಿದ್ದು, ಕರೋನಾ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ರಾಜ್ಯದಲ್ಲಿ ಕರೋನಾ ಸೋಂಕು ಆರಂಭವಾದ ಬಳಿಕ ಎರಡು ವರ್ಷಗಳಲ್ಲಿ ಒಟ್ಟು 437 ಬಾಲ್ಯ ವಿವಾಹ ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ. ಗಮನಕ್ಕೆ ಬಾರದೆ ಅದೆಷ್ಟು ಬಾಲ್ಯ ವಿವಾಹ ಜರುಗಿದೆಯೋ ಗೊತ್ತಿಲ್ಲ. ಬಾಲ್ಯ ವಿವಾಹ ನಿಷೇಧ ಕಾಯಿದೆ ಜಾರಿಯಲ್ಲಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ಪಿಡುಗು ಮುಂದುವರಿಯುತ್ತಿರುವುದು ಆತಂಕಕ್ಕೆ ಕಾರಣ ವಾಗಿದೆ.

ರಾಜ್ಯಾದ್ಯಂತ 2020-21ರಲ್ಲಿ 296, 2021-22 ಸೇರಿದಂತೆ ಜುಲೈ ಅಂತ್ಯಕ್ಕೆ 141 ಸೇರಿ ಒಟ್ಟು 437 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಕರೋನಾ ಲಾಕ್‌ಡೌನ್ ಸಂದರ್ಭ ದಲ್ಲಿ ಇಂತಹ ಪ್ರಕರಣಗಳಲ್ಲಿ ವ್ಯಾಪಕ ಏರಿಕೆಯಾಗಿರುವುದು ಕಂಡು ಬಂದಿದೆ. ಬಾಲ್ಯ ವಿವಾಹ ಪ್ರಕರಣಗಳಲ್ಲಿ ವಿಚ್ಛೇದನ ಸಮಸ್ಯೆ ಹೆಚ್ಚಿರುತ್ತದೆ. ಕೂಲಿ ಕೆಲಸದ ಅನಿವಾರ್ಯತೆ, ಅನಾರೋಗ್ಯ, ಭ್ರೂಣ ಹತ್ಯೆ, ಮರು ಮದುವೆ ಜತೆಗೆ ಆಕಸ್ಮಿಕ ಘಟನೆಯಿಂದ ವಿಧವೆ ಯಾದರೆ ಭವಿಷ್ಯದ ಬದುಕು ಅತಂತ್ರ ವಾಗಲಿದೆ.

ಹಾಗಾಗಿ ಹೆಣ್ಣು ಮಕ್ಕಳಿಗೆ 18 ವರ್ಷ ದಾಟಿದ ಬಳಿಕ ಮದುವೆ ಮಾಡಿದರೆ ಜವಾಬ್ದಾರಿಗಳ ಬಗ್ಗೆ ತಿಳಿವಳಿಕೆ ಜತೆಗೆ ಸಂಸಾರದ ನೊಗ ಹೊರಲು ಸಮರ್ಥರಾಗಿರುತ್ತಾಳೆ ಎಂಬ ಕಾರಣಕ್ಕೆ ಬಾಲ್ಯ ವಿವಾಹ ನಿಷೇಧ ಕಾಯಿದೆ ಜಾರಿಗೊಳಿಸಲಾಗಿದೆ. ಬಾಲ್ಯ ವಿವಾಹ ನಿಷೇದ ಕಾಯಿದೆಯನ್ನು ಬಲಗೊಳಿಸಲು ರಾಜ್ಯ ಸರಕಾರ, ಕೇಂದ್ರದ ಕಾನೂನಿಗೆ ಕೆಲ ತಿದ್ದುಪಡಿ ತಂದು ಬಾಲ್ಯ ವಿವಾಹ (ಕರ್ನಾಟಕ ತಿದ್ದುಪಡಿ) ಕಾಯಿದೆ-2016 ಜಾರಿಗೆ ತಂದಿದೆ. ಈ ಸಂಬಂಧ 2018ರ ಮಾ.3ರಂದು ಅಧಿಸೂಚನೆ ಹೊರಡಿಸಿದೆ.

ಆದರೂ, ಮದುವೆಯ ನಿರ್ದಿಷ್ಟ ವಯಸ್ಸಿಗೆ ಮುನ್ನವೇ ಹೆಣ್ಣು ಮಕ್ಕಳಿಗೆ ವಿವಾಹ ಮಾಡುತ್ತಿರುವ ಪ್ರಕರಣ ಗಳನ್ನು ಪರಿಣಾಮ ಕಾರಿಯಾಗಿ ತಡೆಯಲು ಈ ಕಾಯಿದೆ ವಿಫಲವಾಗಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಬಾಲ್ಯ ವಿವಾಹ ಪ್ರಕರಣ ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಬಹುದು.

ಆದರೆ, ಇದು ಬಳಕೆಯಾಗುತ್ತಿಲ್ಲ. ಪಾಲಕರಲ್ಲಿದೆ ತಪ್ಪು ಕಲ್ಪನೆ: ಚೆನ್ನಾಗಿ ಓದಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ
ಹಂಬಲ ಮಕ್ಕಳಿಗೆ ಸದಾ ಇರುತ್ತದೆ. 18 ವರ್ಷ ಆದ ಕೂಡಲೇ ಹುಡುಗಿಯೇ ಪತಿಯನ್ನು ಆಯ್ಕೆ ಮಾಡಿಕೊಳ್ಳಲು ಪ್ರೌಢಿಮೆ ಇರುವುದಿಲ್ಲ. ಹೆಣ್ಣು ಮಕ್ಕಳನ್ನು ಓದಿಸಿದರೆ ಒಳ್ಳೆಯ ಪತಿ ಸಿಗುವುದಿಲ್ಲ, ಬೇಗನೆ ಮದುವೆ ಮಾಡಿದರೆ ಅಡ್ಡದಾರಿ ಹಿಡಿಯುವು ದಿಲ್ಲ ಎಂಬ ತಪ್ಪು ಕಲ್ಪನೆಗಳಿಂದ ಸಾಕಷ್ಟು ವಿರೋಧಗಳ ನಡುವೆಯೂ ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೈ ತೊಳೆದುಕೊಳ್ಳುತ್ತಾರೆ ಎಂಬುದು ಸಮೀಕ್ಷೆಗಳಿಂದ ತಿಳಿದುಬಂದಿದೆ.

ಆದರೆ, ಈ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಸರಕಾರ ರೂಪಿಸಿದ್ದರೂ ಪರಿಣಾಮ ಬೀರಿಲ್ಲ. ಹೀಗಾಗಿ ಬಾಲ್ಯ ವಿವಾಹ ನಿಲ್ಲುತ್ತಿಲ್ಲ ಎಂದು ಈ ವ್ಯವಸ್ಥೆ ವಿರುದ್ಧ ಹೋರಾಡುವ ಸಂಘಟನೆಗಳು ತಿಳಿಸಿವೆ.

ಕಾಯಿದೆಯಲ್ಲಿ ಏನಿದೆ?
ಶಿಕ್ಷಣ, ಕಂದಾಯ, ಪಂಚಾಯತ್‌ರಾಜ್, ಆರೋಗ್ಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ವಯಂಸೇವಾ ಸಂಸ್ಥೆಗಳು, ಸ್ತ್ರೀಶಕ್ತಿ ಸಂಘದ ಸದಸ್ಯರನ್ನೊಳಗೊಂಡ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯನ್ನು ಸರಕಾರರಚಿಸಿದೆ. ಸಮಿತಿಯು ಬಾಲ್ಯ ವಿವಾಹ ತಡೆಯಲು ಬಾಲ್ಯ ವಿವಾಹಗಳನ್ನು ಗುರುತಿಸುವುದು, ಕಂಡುಬಂದರೆ ತಕ್ಷಣ ನಿಲ್ಲುಸುವುದು, ಮಕ್ಕಳ ರಕ್ಷಣೆ,
ತಪ್ಪಿತಸ್ಥರ ಮೇಲೆ ಕಾನೂನು ಕ್ರಮ, ಮಕ್ಕಳ ಪುನರ್ವಸತಿ ಹಾಗೂ ಅನುಸರಣಾ ಕ್ರಮಗಳನ್ನು ಕೈಗೊಳ್ಳಲು ಕ್ರಮಬದ್ಧ ಕಾರ್ಯ ವಿಧಾನ (ಎಸ್‌ಓಪಿ) ಜಾರಿಗೆ ತರಲಾಗಿದೆ. ಪ್ರತಿ ಬಾಲ್ಯ ವಿವಾಹವು ಅನುರ್ಜಿತವಾಗುತ್ತದೆ.

ಪ್ರತಿ ಪೊಲೀಸ್ ಅಧಿಕಾರಿ ತನ್ನ ವ್ಯಾಪಿಯಲ್ಲಿ ಬಾಲ್ಯ ವಿವಾಹ ಕಂಡುಬಂದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಲು ಅವಕಾಶ ಇದೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾದವರಿಗೆ 2 ವರ್ಷವರೆಗೆ ಜೈಲು ಶಿಕ್ಷೆ ಮತ್ತು ದಂಡ ಹಾಕಲಾಗುತ್ತದೆ. ಕಾಯಿದೆ ತಿದ್ದುಪಡಿ ಬಳಿಕ ಪುರುಷರ ಜತೆಗೆ ಮಹಿಳೆಯರಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ.

ಉತ್ತರ ಹಿಂದಿಕ್ಕಿದ ದಕ್ಷಿಣ
ಈ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಬಾಲ್ಯ ವಿವಾಹ ನಡೆಯುತ್ತಿತ್ತು ಎಂಬ ಆರೋಪವಿತ್ತು. ಆದರೆ, ಈಗ ದಕ್ಷಿಣ ಕರ್ನಾಟಕವೇ ಮುಂಚೂಣಿಯಲ್ಲಿದೆ. ಹಾಸನ, ಮಂಡ್ಯ, ಮೈಸೂರುಗಳಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹಗಳು ಜರುಗಿವೆ ಎಂಬು ದನ್ನು ಅಂಕಿ ಅಂಶಗಳೇ ಹೇಳುತ್ತವೆ.