Monday, 25th November 2024

ಜೀವನ ಪಾಠ ಕಲಿಸಿದ ಬಾವಿಯೊಳಗಿನ ಆ ಕ್ಷಣ…

ಶಂಕರ್‌ ಬಿದರಿ – ಸತ್ಯಮೇವ ಜಯತೆ – ಭಾಗ ೫

ಬೇಸಿಗೆ ಸಮಯದಲ್ಲಿ ಅವ್ವನ ಊರಿಗೆ ಹೋದಾಗ ನದಿಯಲ್ಲಿ ಈಜು ಕಲಿತೆನು. ಆದರೆ ಸ್ನೇಹಿತರಾದ ಪ್ರಹ್ಲಾದ ಕೌತಾಳ, ನರೇಂದ್ರ ಇಟಗೌಡ ಈಜು ಬರುತ್ತಿರಲಿಲ್ಲ. ಒಂದು ದಿನ ಪ್ರಹ್ಲಾದನಿಗೆ ಈಜು ಕಲಿಸುತ್ತಿದ್ದಾಗ ಅವನು ಗಾಬರಿಯಾಗಿ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡನು. ಇಬ್ಬರೂ ಮುಳುಗುತ್ತೇವೆ ಎನ್ನುವಾಗ ಅವನು ನನ್ನ ಬೆನ್ನಿನ ಮೇಲೆ ಹತ್ತಿಬಿಟ್ಟ. ಅವನು ಭಾರ ಹೆಚ್ಚಾಗಿ ನಾನೇ ಮುಳುಗತೊಡಗಿದೆ! ನಮ್ಮಿಬ್ಬರ ಜೀವಗಳೂ ಅಪಾಯದಲ್ಲಿದ್ದವು.

ನಾನು 1966ರ ಜೂನ್ ತಿಂಗಳಲ್ಲಿ ಬನಹಟ್ಟಿಯ ಜನತಾ ಶಿಕ್ಷಣ ಸಂಸ್ಥೆಯ ಎಸ್.ಆರ್. ಎ. ಹೈಸ್ಕೂಲ್‌ಗೆ ಎಂಟನೇ ತರಗತಿಗೆ ಸೇರಿದೆ. ಪ್ರಾತಃಸ್ಮರಣೀಯರಾದ ಶ್ರೀ ಚಿಕ್ಕೋಡಿ ತಮ್ಮಣ್ಣ ನವರ ನೇತೃತ್ವದಲ್ಲಿ ೧೯೩೭ರಲ್ಲಿ ಈ ಹೈಸ್ಕೂಲನ್ನು ಪ್ರಾರಂಭಿಸ  ಲಾಗಿತ್ತು. ಅಲ್ಲಿ ಉತ್ತಮ ಶಿಕ್ಷಕ ವರ್ಗವಿತ್ತು. ಶ್ರೀ ಎಂ.ಎಸ್. ಮುನ್ನೊಳ್ಳಿ ಮುಖ್ಯೋಪಾಧ್ಯಾಯರಾಗಿದ್ದರು. ಎನ್.ಎಸ್. ಬಡ್ಡೂರ್ ಇಂಗ್ಲಿಷ್, ಎಂ.ಎಸ್. ಲಿಂಗದಳ್ಳಿ ಭೌತಶಾಸ್ತ್ರ, , ಬಿ.ಎನ್.ಕುಲಕರ್ಣಿ, ವಿಜ್ಞಾನ ಮತ್ತು ಕಾಡದೇವರು ಕನ್ನಡ, ಸಾವಡ್ಕರ್ ಸಮಾಜ ಶಾಸ್ತ್ರ, ದುಪ್ಪದಾಳ ಶಾರೀರಿಕ ಶಿಕ್ಷಣ, ರಾವಳ ಚಿತ್ರಕಲೆ ಹೇಳಿಕೊಡುತ್ತಿದ್ದರು.

ವಿದ್ಯಾರ್ಥಿ ಗಳಿಂದ ಹೆಚ್ಚಿನ ಶುಲ್ಕ ವಸೂಲು ಮಾಡುತ್ತಿರಲಿಲ್ಲ. ನಾವು ಆರು ತಿಂಗಳಿಗೆ ಮೂರು ರುಪಾಯಿ ಮಾತ್ರ ಶಾಲಾ ಶುಲ್ಕ ತುಂಬಬೇಕಾಗಿತ್ತು. ಹೈಸ್ಕೂಲ್‌ನಲ್ಲಿ ಸುಸಜ್ಜಿತ ಗ್ರಂಥಾಲಯ, ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನಕ್ಕೆ ಸಂಬಂಧಿಸಿದ ಸುಸಜ್ಜಿತ ಪ್ರಯೋಗಾಲ ಯಗಳಿದ್ದವು. ಕಾಲಕಾಲಕ್ಕೆ ಚರ್ಚಾಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಹೈಸ್ಕೂಲ್ ಪ್ರಾರಂಭ  ವಾಗುತ್ತಲೇ ಬಹಳಷ್ಟು ಜನ ನನ್ನ ಸಹಪಾಠಿಗಳು ಆತ್ಮೀಯ ಮಿತ್ರ ರಾದರು. ಇವರಲ್ಲಿ ಕನ್ನಡ ಶಾಲೆಯಲ್ಲಿಯೂ  ಸಹಪಾಠಿ ಯಾಗಿದ್ದ ಸಿದ್ದಪ್ಪ ದೊಡ್ಡಮನಿ, ಪ್ರಹ್ಲಾದ ಕೌತಾಳ, ನರೇಂದ್ರ ಇಟಗೌಡ, ವಿಜಯಕುಮಾರ ಆನಿಖಿಂಡಿ, ಪ್ರಕಾಶ್ ಕರಲಟ್ಟಿ ಇವರು ಮುಖ್ಯರು.

ಮೊದಲು ಗಜುಗ, ದಪ್ಪಾದುಪ್ಪಿ, ಚಿಣಿ-ಣಿ ಆಟಗಳನ್ನು ಆಡುತ್ತಿದ್ದ ನಾವು ಹೈಸ್ಕೂಲ್‌ಗೆ ಬಂದ ಮೇಲೆ, ಟೆನ್ನಿಕಾಯ್ಟ್, ಖೋಖೊ,
ವಾಲಿಬಾಲ್ ಮತ್ತು ಬೇಸ್‌ಬಾಲ್ ಆಡಲು ಪ್ರಾರಂಭಿಸಿದೆವು. ಅದರಂತೆಯೇ ಟೆನಿಸ್ ಬಾಲ್‌ನಿಂದ ಕ್ರಿಕೆಟ್ ಕೂಡಾ ಆಡುತ್ತಿದ್ದೆವು.
ಆಗ ಟಿ.ವಿ. ಇರಲಿಲ್ಲ. ರೇಡಿಯೊದಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳುವ ಖುಷಿಗೆ ಪಾರವೇ ಇರಲಿಲ್ಲ. ಕ್ರಿಕೆಟ್ ಕಲಿಗಳಾದ ಚಂದು
ಬೋರ್ಡೆ, ದಿಲೀಪ್ ಸರ್ದೇಸಾಯಿ, ಫಾರೂಕ್ ಎಂಜಿನಿಯರ್, ಬಿ.ಎಸ್.ಚಂದ್ರಶೇಖರ್, ಮನ್ಸೂರ್ ಅಲಿ ಖಾನ್ ಪಟೌಡಿ, ಅಜಿತ್ ವಾಡೇಕರ್ ನಮ್ಮ ಹೀರೊಗಳು.

ಪ್ರಹ್ಲಾದ ಕೌತಾಳ ಅವರ ತಂದೆ ಡಾ.ಗೋವಿಂದ ಕೌತಾಳ ಅವರು ನಮ್ಮ ಬನಹಟ್ಟಿಯ ಸರಕಾರ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಯಾಗಿದ್ದರು. ಅವರು ಎಲ್. ಸಿ.ಪಿ.ಎಸ್. ಪದವಿ ಹೊಂದಿದ್ದರು. ಎರಡನೇ ಮಹಾಯುದ್ಧದ ಕಾಲದಲ್ಲಿ ಆಗಿನ ಬ್ರಿಟಿಷ್ ಸರಕಾರದ ಸೈನ್ಯದಲ್ಲಿ ವೈದ್ಯಾಧಿಕಾರಿಯಾಗಿ ಈಜಿಪ್ಟ್ ಮತ್ತು ಲಿಬಿಯಾದಲ್ಲಿ ಸೇವೆ ಸಲ್ಲಿಸಿದ್ದರು. ಅವರು ತಮ್ಮ ಸೇವೆಯ ಅನುಭವಗಳನ್ನುನನ್ನ ಮತ್ತು ಅವರ ಮಗನೊಂದಿಗೆ ಆಗಾಗ ಹಂಚಿಕೊಳ್ಳುತ್ತಿದ್ದರು.

ಅವರು ರೀಡರ್ಸ್ ಡೈಜೆಸ್ಟ್ ಮಾಸಪತ್ರಿಕೆಯ ಚಂದಾದಾರಗಾಗಿದ್ದರು. ಅವರು ಓದಿದ ಮೇಲೆ ಅದನ್ನು ನನಗೆ ಓದಲು ಕೊಡು ತ್ತಿದ್ದರು. ಇದರಿಂದ ನನಗೆ ಸಾಕಷ್ಟು ಸಾಮಾನ್ಯ ಜ್ಞಾನ ಪಡೆಯಲು ಸಾಧ್ಯವಾಯಿತು. ನಾನು ನನ್ನ ಒಂದನೇ ತರಗತಿಯಿಂದ ಏಳನೇ ತರಗತಿಯಲ್ಲಿ ಇರುವವರೆಗೆ ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ನಮ್ಮವ್ವನ ಊರಾದ ಗಲಗಲಿಗೆ ರಜೆ ಕಳೆಯಲು ಹೋಗು ತ್ತಿದ್ದೆ. ಆಗ ನಾನು ಕೃಷ್ಣಾ ನದಿಯಲ್ಲಿ ಈಜು ಕಲಿತೆನು. ನನ್ನ ಸ್ನೇಹಿತರಾದ ಪ್ರಹ್ಲಾದ ಕೌತಾಳ, ನರೇಂದ್ರ ಇಟಗೌಡ ಅವರಿಗೆ ಈಜು ಬರುತ್ತಿರಲಿಲ್ಲ. ನಾನು ಹುಚ್ಚು ಧೈರ್ಯ ಮಾಡಿ ಅವರಿಗೆ ಈಜು ಕಲಿಸಲು ನಮ್ಮೂರಿನ ಸಮೀಪದ ಗುಂಡಿ ಎನ್ನುವ ರೈತರ ತೋಟದ ಬಾವಿಗೆ ಒಂದು ರವಿವಾರ ಕರೆದುಕೊಂಡು ಹೋದೆ.

ಅವರಿಗೆ ಈಜು ಕಲಿಸಲು ಅನುಕೂಲವಾಗುವಂತೆ ನಮ್ಮ ಕಡೆ ‘ಹಾರುವ ಕಟ್ಟಿಗೆ’ ಎಂಬ ಕಟ್ಟಿಗೆಯ ಬಂಡಲುಗಳನ್ನು ಮಾಡಿ ಅವರ ಬೆನ್ನಿಗೆ ಕಟ್ಟಿ ಈಜು ಕಲಿಸಲು ಆರಂಭಿಸಿದೆ. ಈ ಕಟ್ಟಿಗೆ ತುಂಬಾ ಹಗುರವಾಗಿದ್ದು ನೀರಿನಲ್ಲಿ ತೇಲುತ್ತದೆ. ಈ ಕಟ್ಟಿಗೆಯ
ಬಂಡಲನ್ನು ಬೆನ್ನಿಗೆ ಕಟ್ಟಿಕೊಂಡರೆ ಈಜು ಕಲಿಯುವ ವ್ಯಕ್ತಿ ನೀರಿನಲ್ಲಿ ಮುಳುಗುವುದಿಲ್ಲ. ಎರಡು ವಾರ ಈಜು ಕಲಿಸುವ
ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು. ಮೂರನೆಯ ವಾರ ಪ್ರಹ್ಲಾದನಿಗೆ ಈಜು ಕಲಿಸುತ್ತಿದ್ದಾಗ ಅವನು ಗಾಬರಿಯಾಗಿ
ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡನು.

ಇಬ್ಬರೂ ಮುಳುಗುತ್ತೇವೆ ಎನ್ನುವಾಗ ಅವನು ನನ್ನ ಬೆನ್ನಿನ ಮೇಲೆ ಹತ್ತಿಬಿಟ್ಟ. ಅವನು ಭಾರ ಹೆಚ್ಚಾಗಿ ನಾನೇ ಮುಳುಗ ತೊಡ ಗಿದೆ! ನಮ್ಮಿಬ್ಬರ ಜೀವಗಳೂ ಅಪಾಯದಲ್ಲಿದ್ದವು. ನಾನು ಅವನನ್ನೂ ರಕ್ಷಿಸಬೇಕಿತ್ತು, ನಾನೂ ಬದುಕಿ ಬರಬೇಕಿತ್ತು. ಕಟ್ಟಿಗೆ ಕಟ್ಟಿದ್ದರಿಂದ ಪ್ರಹ್ಲಾದ ಬಚಾವಾದ. ಅದೇ ಬಾವಿಯಲ್ಲಿ ಈಜುತ್ತಿದ್ದ ಊರಿನ ಹಿರಿಯರೊಬ್ಬರು ನನ್ನನ್ನು ಮೇಲಕ್ಕೆತ್ತಿ ಬದುಕಿಸಿ ದರು. ಜೀವದ ಬೆಲೆ ಏನು ಮತ್ತು ಎಷ್ಟು ಕ್ಷಣಿಕವೆಂದು ನನಗೆ ಅಂದು ಅರ್ಥವಾಯಿತು.

ಹೈಸ್ಕೂಲ್‌ನಲ್ಲಿ ಹಲವಾರು ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಇವುಗಳಲ್ಲಿ ನಾನು ಯಾವಾಗಲೂ ಮೊದಲನೇ
ಸ್ಥಾನವನ್ನು ಪಡೆಯುತ್ತಿದ್ದೆ. ನಾನು ಹೈಸ್ಕೂಲ್‌ನಲ್ಲಿದ್ದಾಗಲೇ ಹಿಂದಿ ಪ್ರಥಮ ಮತ್ತು ಚಿತ್ರಕಲಾ ಪ್ರಾಥಮಿಕ ಪರೀಕ್ಷೆಗಳಲ್ಲಿ ಪಾಸಾದೆ. ನಮ್ಮ ಇಂಗ್ಲಿಷ್ ಶಿಕ್ಷಕರಾದ ಶ್ರೀ ಬಡ್ಡೂರ್ ಅವರು ನನ್ನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಅವರು ಬಹಳ ಮನ ದಟ್ಟಾಗುವಂತೆ ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಪ್ರತಿಯೊಂದು ಪಾಠಕ್ಕೂ ಮುಂಚೆ ಪೂರ್ವ ತಯಾರಿ ಮಾಡಿಕೊಂಡು ಬರು ತ್ತಿದ್ದರು.

ಒಮ್ಮೆ, ಇಂಗ್ಲಿಷ್ ಕವಿತೆಯೊಂದರಲ್ಲಿ ‘ಡೆಫೋಡಿಲ್ಸ್’ ಎಂಬ ಅಲಂಕಾರಿಕ ಪುಷ್ಪದ ಬಗ್ಗೆ ನಮೂದನೆ ಇತ್ತು. ಆ ಹೂವು ಹೇಗಿರು ತ್ತದೆ, ಎಲ್ಲಿ ಬೆಳೆಯುತ್ತದೆ ಎಂಬ ಎಲ್ಲಾ ಮಾಹಿತಿಗಳನ್ನು ಒದಗಿಸಲು ಅವರು ಎನ್ಸೈಕ್ಲೊಪಿಡಿಯಾ ಬ್ರಿಟಾನಿಕಾ ಪುಸ್ತಕವನ್ನು ತಂದು ಅದರಲ್ಲಿ ಆ ಹೂವಿನ ಚಿತ್ರವನ್ನು ಎಲ್ಲರಿಗೂ ತೋರಿಸಿದರು. ಮತ್ತು ಅದರ ಎಲ್ಲಾ ವಿವರಗಳನ್ನು ಹೇಳಿದರು. ಹೈಸ್ಕೂಲ್‌ನಲ್ಲಿ ಪ್ರತಿ ಡಿಸೆಂಬರ್ ೬ನೇ ತಾರೀಕಿಗೆ ಪೂಜ್ಯ ತಮ್ಮಣ್ಣಪ್ಪ ಚಿಕ್ಕೋಡಿ ಅವರ ಪುಣ್ಯ ತಿಥಿಯನ್ನು ಆಚರಿಸಲಾಗುತ್ತಿತ್ತು. ಆ ದಿನ ಮುಂಜಾನೆ ಹೈಸ್ಕೂಲ್ ನಿಂದ ಎಲ್ಲಾ ವಿದ್ಯಾರ್ಥಿಗಳು ಪ್ರಭಾತ-ರಿಯಲ್ಲಿ ಹಿರೇಮಠದ ಆವರಣದಲ್ಲಿದ್ದ ಅವರ ಸಮಾಧಿಗೆ ನಮನ ಸಲ್ಲಿಸಿ ಬರುತ್ತಿದ್ದೆವು.

ಅದೇ ದಿನ ಸಾಯಂಕಾಲ ನಮ್ಮ ಹೈಸ್ಕೂಲ್‌ನ ವಾರ್ಷಿಕ ಸಮಾರಂಭ ನಡೆಯುತ್ತಿತ್ತು. ಈ ಸಮಾರಂಭದ ಅಂಗವಾಗಿ ಸಾಂಸ್ಕೃ ತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಆಟ ಪಾಠಗಳಲ್ಲಿ ಉತ್ತಮ ಸಾಧನೆ ಮಾಡಿ  ದವರಿಗೆ ಬಹುಮಾನಗಳನ್ನು ನೀಡಲಾಗುತ್ತಿತ್ತು. ರಾತ್ರಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ಶಿಕ್ಷಣ ತಜ್ಞರು ಹಾಗೂ ಸಾಹಿತಿಗಳು ಆಗಮಿಸುತ್ತಿದ್ದರು. ಹಾಗಾಗಿ ಪ್ರತಿ ಡಿಸೆಂಬರ್ ೬ ಎಂದರೆ ನಮಗೆ ಹಬ್ಬವಾಗಿತ್ತು. ಇದೇ ಅವಧಿಯಲ್ಲಿ ನಾನು ಹೈಸ್ಕೂಲ್ ವಿದ್ಯಾರ್ಥಿಗಳೊಳಗಾಗಿ ಏರ್ಪಡಿಸಿದ್ದ ಬಾದಾಮಿ,
ಗದಗ, ಹಂಪಿಯ ಐತಿಹಾಸಿಕ ಶೈಕ್ಷಣಿಕ ಪ್ರವಾಸದಲ್ಲಿ ಪಾಲ್ಗೊಂಡೆ. ಮೊದಲನೇ ಬಾರಿಗೆ ಚಾಲುಕ್ಯರ ರಾಜಧಾನಿ ಬಾದಾಮಿ ಮತ್ತುವಿಜಯನಗರ ಹಂಪಿಯನ್ನು ನೋಡುವ ಅವಕಾಶ ಸಿಕ್ಕಿತು.

ಗಡಿ ಜಿಲ್ಲೆಯಾದ ಬೆಳಗಾವಿಯ ನಿಪ್ಪಾಣಿಯಲ್ಲಿ ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಉದ್ದೇಶದಿಂದ ಕೆ.ಎಲ್.ಇ. ಸೊಸೈಟಿಯವರು ನಿಪ್ಪಾಣಿಯಲ್ಲಿ ಜಿ.ಐ. ಬಾಗೇವಾಡಿ ಕಲೆ ಮತ್ತು ವಿಜ್ಞಾನ ಕಾಲೇಜು ಸ್ಥಾಪಿಸಿದ್ದರು. ಈ ಕಾಲೇಜಿನ ಪ್ರಾಂಶು ಪಾಲರಾಗಿದ್ದ ಎಸ್.ಜಿ. ಕರಭಂಟನಾಳ ಅವರು ನಮ್ಮ ಹೈಸೂಲ್ ಜತೆ ವಿಶೇಷ ನಂಟು ಹೊಂದಿದ್ದರು. ಸಮೀಪದ ೧೮ ಕಿ.ಮೀ. ದೂರದ ಜಮಖಂಡಿಯಲ್ಲಿ ಕಾಲೇಜು ಶಿಕ್ಷಣಕ್ಕೆ ಅವಕಾಶವಿದ್ದರೂ ನಮ್ಮ ಬಹುತೇಕ ವಿದ್ಯಾರ್ಥಿಗಳು ಹೆಚ್ಚಾಗಿ ನಿಪ್ಪಾಣಿ ಕಾಲೇಜಿಗೆ ಸೇರಿಕೊಳ್ಳುತ್ತಿದ್ದರು. ಅದರಂತೆಯೇ ನಮ್ಮ ಮುಖ್ಯ ಶಿಕ್ಷಕರಾಗಿದ್ದ ಮುನ್ನೋಳಿ ಮತ್ತು ಬಡ್ಡೂರ್ ಅವರ ಸಲಹೆ ಯಂತೆ ನಾನು ಪಿಯುಸಿಯಲ್ಲಿ ಸೈನ್ಸ್ ಓದಲು ನಿಪ್ಪಾಣಿಯ ಜಿ. ಐ. ಬಾಗೇವಾಡಿ ಕಾಲೇಜಿಗೆ ಸೇರಿಕೊಳ್ಳಬೇಕು ಎಂದು ನಿರ್ಧರಿಸಿದೆ.

ಮುಂದುವರಿಯುವುದು….

ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೮೭ರಷ್ಟು ಅಂಕ
೧೯೬೯ರ ಮಾರ್ಚ್‌ನಲ್ಲಿ ನಾನು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದೆನು. ಪರೀಕ್ಷಾ ಫಲಿತಾಂಶ ಮೇ ತಿಂಗಳ ಕೊನೆಯಲ್ಲಿ ಬಂತು. ನನಗೆ ಶೇಕಡಾ ೮೭.೧೨ ಅಂಕಗಳು ಲಭಿಸಿದ್ದವು. ಬನಹಟ್ಟಿ ತಾಲೂಕಿಗೆ ನಾನು ಮೊದಲ ಸ್ಥಾನ ಪಡೆದೆ. ಕನ್ನಡ ಮತ್ತು ಸಮಾಜ ಶಾಸ್ತ್ರ ಈ ಎರಡು ವಿಷಯಗಳಲ್ಲಿ ರಾಜ್ಯದಲ್ಲೇ ಅತ್ಯಧಿಕ ಅಂಕ ಗಳಿಸಿದ್ದೆ. ಈ ನನ್ನ ಸಾಧನೆಯಿಂದ ನಮ್ಮ ತಾಯಿ ತಂದೆ ಮತ್ತು ಶಿಕ್ಷಕರಿಗೆ ಅತೀವ ಸಂತೋಷವಾಯಿತು. ಅದರಲ್ಲಿಯೂ, ನನ್ನ ಪ್ರೀತಿಪಾತ್ರ ಗುರುಗಳಾದ ಶ್ರೀ ಬಡ್ಡೂರ್ ಅವರಿಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ.