Sunday, 27th October 2024

ಜೂ.25: ಕುಂಚಿಟಿಗ ಸಂಘದ ಸುವರ್ಣ ಮಹೋತ್ಸವ

ತುಮಕೂರು: ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಜೂ.25ರಂದು ನಡೆಯುವ ಬೃಹತ್ ಸಮಾವೇಶ, ಕುಂಚಿಟಿಗ ಸಮುದಾಯಭವನ,ಕುಂಚಶ್ರೀ ಪ್ಯಾಲೇಸ್ ಹಾಗೂ ಬಿ.ರಂಗಣ್ಣ ಸ್ಮಾರಕ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡದ ಉದ್ಘಾಟನೆ ಮತ್ತು ಹಾಸ್ಟಲ್‌ಗಳ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮತ್ತಿತರರ ಕಾರ್ಯ ಕ್ರಮಗಳನ್ನು ಜೂ.25 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕುಂಚಟಿಗ ಒಕ್ಕಲಿಗ ವಿದ್ಯಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ತುಮಕೂರು ಅಮಾನಿಕೆರೆಯ ಗಾಜಿನಮನೆ ಯಲ್ಲಿ ನಡೆಯುವ ಬೃಹತ್ ಸಮಾವೇಶ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿಯ ಡಾ.ಶ್ರೀನಿರ್ಮಲಾನಂದನಾಥ ಮಹಾಸ್ವಾಮೀಜಿ, ಪಟ್ಟನಾಯಕನ ಹಳ್ಳಿಯ ಡಾ.ಶ್ರೀನಂಜಾವಧೂತ ಮಹಾಸ್ವಾಮೀಜಿ,ಎಲೆರಾಂಪುರದ ಡಾ.ಶ್ರೀಹನುಮಂತ ನಾಥ ಮಹಾ ಸ್ವಾಮೀಜಿಗಳು ವಹಿಸು ವರು.
6.50 ಕೋಟಿ ರು.ಗಳಲ್ಲಿ ನಿರ್ಮಿಸಿರುವ ಕುಂಚಟಿಗ ಸಮುದಾಯ ಭವನದ ಉದ್ಘಾಟನೆ ಯನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ನೆರವೇರಿಸುವರು.
1.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕುಂಚಶ್ರೀ ಪ್ಯಾಲೇಸ್‌ನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸು ವರು. ಕುಂಚಟಿಗ ಭವನದ ಮುಂಭಾಗದಲ್ಲಿ ಸ್ಥಾಪಿಸಿರುವ ಸಮುದಾಯದ ಹಿರಿಯ ಮುಖಂಡರು ಹಾಗೂ ಸಂಘ ಸಂಸ್ಥಾಪಕ ರಾದ ಬಿ.ರಂಗಣ್ಣ ಅವರ ಪುತ್ಥಳಿಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಆನಾವರಣಗೊಳಿಸುವರು.ಕುಂಚಸಿರಿ ಸ್ಮರಣ ಸಂಚಿಕೆಯನ್ನು ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಬಿಡುಗಡೆ ಮಾಡುವರು ಎಂದು ವಿವರ ನೀಡಿದರು.
ಕರ್ನಾಟಕ ಸರಕಾರದ ಕಾನೂನು ಮತ್ತು ಸಂಸದೀಯ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಬಿ.ರಂಗಣ್ಣ ಸ್ಮಾರಕ ವಿದ್ಯಾರ್ಥಿ ನಿಲಯದ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದು,ಅಂದಾಜು ತಲಾ 2.30 ಕೋಟಿ ರು.ಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳ ಹೆಚ್ಚುವರಿ ಕಟ್ಟಡಗಳ ಶಂಕು ಸ್ಥಾಪನೆಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ, ಮತ್ತು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರುಗಳು ನೆರವೇರಿಸುವರು.ಸಂಘದ ಸದಸ್ಯರಿಗೆ ಸ್ಮಾರ್ಟ್ ಗುರುತಿನ ಕಾರ್ಡನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ವಿತರಿಸುವರು.
ಜಾಗೃತಿ ಸಮಾವೇಶವನ್ನು ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕುಂಚಟಿಗ ಒಕ್ಕಲಿಗ ವಿದ್ಯಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು ವಹಿಸ ಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು,ಸಂಸದರು, ಮಾಜಿ ಶಾಸಕರು, ಮಾಜಿ ಸಂಸದರು ನಿಗಮ, ಮಂಡಳಿಗಳ ಅಧ್ಯಕ್ಷರು,ಸದಸ್ಯರುಗಳು,ಸಮುದಾಯದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಆರ್.ಕಾಮರಾಜು ವಿವರಣೆ ನೀಡಿದರು.
ಜನಜಾಗೃತಿ ಸಮಾವೇಶದಲ್ಲಿ ಪ್ರಮುಖವಾಗಿ ಕುಂಚಟಿಗ ಸಮುದಾಯವನ್ನು ಕೇಂದ್ರ ಸರಕಾರದ ಒಬಿಸಿ ಜಾತಿ ಪಟ್ಟಿಯಲ್ಲಿ ಸೇರಿಸಬೇಕೆಂಬ ಮಹತ್ವದ ಬೇಡಿಕೆಯೊಂದಿಗೆ ಕೈಗೊಳ್ಳಲಾಗಿದೆ. ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನ ನಡೆದು, ವರದಿ ಸಹ ಸರಕಾರದ ಬಳಿ ಇದೆ. ಇದನ್ನು ಯಥಾವತ್ತಾಗಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂಬುದು ಸಮ್ಮೇಳನದ ಪ್ರಮುಖ ಅಜೆಂಡಾವಾಗಿದೆ ಎಂದು ಆರ್.ಕಾಮರಾಜು ನುಡಿದರು.
ಸುದ್ದಿಗೋಷ್ಠಿಯಲ್ಲಿ ಕುಂಚಟಿಗ ಒಕ್ಕಲಿಗ ವಿದ್ಯಾಭಿವೃದ್ದಿ ಸಂಘದ ಉಪಾಧ್ಯಕ್ಷ ವೈ.ಆರ್.ವೇಣುಗೋಪಾಲ್, ಕಾರ್ಯದರ್ಶಿ ಎಂ.ರಾಜಕುಮಾರ,ಜಂಟಿ ಕಾರ್ಯದರ್ಶಿ ಕೆ.ಮಂಜುನಾಥ್,ಖಜಾಂಚಿ ಎಸ್.ಉದಯಕುಮಾರ್ ನಿದೇಶಕರುಗಳು ಉಪಸ್ಥಿತ ರಿದ್ದರು.