Monday, 25th November 2024

ಉದ್ಯಮಿಯಾಗು, ಉದ್ಯೋಗ ನೀಡು ಕಾರ್ಯಾಗಾರ ಇಂದು

ಕೈಗಾರಿಕಾ ಅದಾಲತ್
100ಕ್ಕೂ ಹೆಚ್ಚು ಅರ್ಜಿ
ಹೆಚ್ಚುವರಿ ತರಬೇತಿ
ತುಮಕೂರು: ನಮ್ಮ ಯುವಜನರು ಶಿಕ್ಷಣ ಪೂರೈಸಿದ ನಂತರ ಕೆಲಸ ಹುಡುಕುವ ಬದಲು ಅವರೇ ಉದ್ಯಮ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಮಾಹಿತಿ ಒದಗಿಸಲು ಕೈಗಾರಿಕಾ  ಇಲಾಖೆಯು ತುಮಕೂರಿನಲ್ಲಿ  ಜೂ.23ರಂದು ಒಂದು ದಿನದ ಕಾರ್ಯಾಗಾರ ಆಯೋಜಿಸಲಿದೆ.
 ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಹಾಗೂ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದರು.
ತುಮಕೂರಿನ ಗಂಗಾಧರಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ  ‘ಉದ್ಯಮಿಯಾಗು  ಉದ್ಯೋಗ ನೀಡು’ ಹಾಗೂ ‘ಕೈಗಾರಿಕಾ ಅದಾಲತ್‌’  ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಮುರುಗೇಶ ಆರ್‌ ನಿರಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕಾರ್ಯಾಗಾರದಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದಲ್ಲಿ ಉದ್ಯಮಿಗಳಾಗು ವುದು ಹೇಗೆ? ಎಲ್ಲಿ ಮತ್ತು ಹೇಗೆ ಸಾಲಸೌಲಭ್ಯ ದೊರೆಯುತ್ತದೆ? ಯಾವ ಯಾವ ಕ್ಷೇತ್ರಗಳಲ್ಲಿ ಹೂಡಿಕೆಗೆ ಅವಕಾಶ ಇದೆ ಎಂಬುದನ್ನು ತಜ್ಞರು ವಿವರಿಸಲಿದ್ದಾರೆ ಎಂದು ದೊಡ್ಡಬಸವರಾಜು  ತಿಳಿಸಿದರು.
 “ತುಮಕೂರಿನ ವಿದ್ಯಾರ್ಥಿಗಳು ನೇರವಾಗಿ ಕಾರ್ಯಕ್ರಮದಲ್ಲಿ ಭಾಗಿಯಾದರೆ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗದ ವಿದ್ಯಾರ್ಥಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಅದಕ್ಕೆ ಪೂರಕ ವ್ಯವಸ್ಥೆ ಕಲ್ಪಿಸ ಲಾಗಿದೆ. ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಹೊಸ ಉದ್ಯಮ ಆರಂಭಿಸುವವರು ಇದರ ಸದುಪಯೋಗಪಡಿಸಿಕೊಳ್ಳಬೇಕು,” ಎಂದು ಅವರು ಮನವಿ ಮಾಡಿದರು.
ಹೆಚ್ಚುವರಿ ತರಬೇತಿ: “ಈ ಕಾರ್ಯಗಾರ ಒಂದು ದಿನಕ್ಕೆ ಸೀಮಿತವಾಗಿಲ್ಲ. ಮುಂದಿನ ದಿನಗಳಲ್ಲಿ  ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ. ಅದಕ್ಕಾಗಿ ಪ್ರತಿ ಜಿಲ್ಲೆಯ 3-4 ಕೇಂದ್ರಗಳಲ್ಲಿ ಒಂದು ದಿನದ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇದರಲ್ಲಿ 50,000 ಮಂದಿ ಭಾಗಿಯಾಗುವ ನಿರೀಕ್ಷೆ ಇದೆ.  ನಂತರ 40-50 ತಾಸಿನ ಆನ್‌ಲೈನ್‌ ಕಾರ್ಯ ಕ್ರಮಕ್ಕೆ ನೋಂದಣಿ ಮಾಡಿಸಲಾಗುತ್ತದೆ. ಆಯ್ದ10,000 ಆಸಕ್ತರಿಗೆ ಅವರ ಆಸಕ್ತಿಯ  ಕ್ಷೇತ್ರಗಳಲ್ಲಿ ಅಥವಾ  ಐಬಿಎಂ, ವಿಪ್ರೋ, ಇನ್ಫೋಸಿಸ್‌,ಕಂಪನಿಗಳಲ್ಲಿ 3 ದಿನಗಳ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅಂತಿಮ ಹಂತದವರೆಗೆ ಆಸಕ್ತಿ ಕಾಯ್ದುಕೊಳ್ಳುವ 2,000 ಮಂದಿಗೆ ಮಾರ್ಗದರ್ಶಕರ ಜತೆ ನೇರ ಸಂಪರ್ಕ ಕಲ್ಪಿಸಲಾಗುತ್ತದೆ.   ಈ ಪೈಕಿ ಕನಿಷ್ಠ 1,000 ಜನರಾದರೂ ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮುವ ನಿರೀಕ್ಷೆ ಇದೆ,” ಎಂದು ಮುಂದಿನ ಕಾರ್ಯಕ್ರಮದ ರೂಪುರೇಷೆ ಯನ್ನು ವಿವರಿಸಿದರು.
ಕೈಗಾರಿಕಾ ಅದಾಲತ್‌: ಉದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯು ತುಮಕೂರು ವಿಭಾಗದಲ್ಲಿ  2022ರ ಜೂನ್‌ 23 ರಂದು ಮಧ್ಯಾಹ್ನ 3.30ಕ್ಕೆ ಗಂಗಾಧರಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ‘ಕೈಗಾರಿಕಾ ಅದಾಲತ್‌’ ಕಾರ್ಯಕ್ರಮ ಹಮ್ಮಿಕೊಂಡಿದೆ.
ಜಿಲ್ಲೆಯಿಂದ ಹಲವು ಇಲಾಖೆಗಳಿಗೆ ಸಂಬಂಧಿಸಿದ 100  ಅರ್ಜಿಗಳು ಬಂದಿವೆ. ಈಗಾಗಲೇ ಕೆಲವರ ಸಮಸ್ಯೆಗೆ ಪರಿಹಾರ ಸೂಚಿಸ ಲಾಗಿದೆ.  ಇನ್ನು ಕೆಲವು ಅರ್ಜಿಗಳ ಕುರಿತು ಸಚಿವರು ನಾಳೆ ನೇರವಾಗಿ ಉದ್ಯಮಿಗಳ ಜತೆ ಚರ್ಚಿಸಿ, ಪರಿಹಾರ ಸೂಚಿಸಲಿದ್ದಾರೆ,” ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಎಂಎಸ್‌ಎಂಇ ಮತ್ತು ಪಿಪಿ) ಅಪರ ನಿರ್ದೇಶಕ ಹೆಚ್‌. ಎಂ. ಶ್ರೀನಿವಾಸ್‌ ಹೇಳಿದರು.
“ಕೈಗಾರಿಕೋದ್ಯಮಿಗಳು, ವಿವಿಧ ಕೈಗಾರಿಕೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಈ ‘ಕೈಗಾರಿಕಾ ಅದಾಲತ್‌’ನಲ್ಲಿ ಭಾಗವಹಿಸಿ, ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು,” ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ನಾಗೇಶ್‌ ಪಿ  ಉಪಸ್ಥಿತರಿದ್ದರು.