Thursday, 12th December 2024

ಕೇಂದ್ರ ಗುಪ್ತಚರ ಸಂಸ್ಥೆಯ ಹೊಸ ಮುಖ್ಯಸ್ಥ ತಪನ್ ದೇಕಾ

ನವದೆಹಲಿ: ಇಂಟೆಲಿಜೆನ್ಸ್ ಬ್ಯೂರೋ ವಿಶೇಷ ನಿರ್ದೇಶಕ ತಪನ್ ದೇಕಾ ಅವರನ್ನು ಕೇಂದ್ರ ಗುಪ್ತಚರ ಸಂಸ್ಥೆಯ ಹೊಸ ಮುಖ್ಯಸ್ಥ ರನ್ನಾಗಿ ನೇಮಿಸಲಾಗಿದೆ. ಅರವಿಂದ್ ಕುಮಾರ್ ಅವರ ಅಧಿಕಾರಾವಧಿ ಜೂ.30ರಂದು ಕೊನೆಗೊಳ್ಳಲಿದ್ದು, ಬಳಿಕ ತಪನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ಆರ್&ಎಡಬ್ಲ್ಯು) ಪ್ರಸ್ತುತ ಮುಖ್ಯಸ್ಥ ಸಮಂತ್ ಗೋಯೆಲ್ ಅವರ ಅಧಿಕಾರಾವಧಿಯಲ್ಲಿ ಮತ್ತೊಂದು ವರ್ಷದ ವಿಸ್ತರಣೆ ಯನ್ನು ನೀಡಲಾಗಿದೆ. ಅವರ ಅಧಿಕಾರಾವಧಿಯು ಜೂ.30 ಕ್ಕೆ ಕೊನೆಗೊಳ್ಳ ಬೇಕಾಗಿತ್ತು.

ಪಂಜಾಬ್‌ನ ಮಾಜಿ ಡಿಜಿಪಿ ದಿನಕರ್ ಗುಪ್ತಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಹೊಸ ಮುಖ್ಯಸ್ಥರನ್ನಾಗಿ ಮತ್ತು ಐಬಿ ವಿಶೇಷ ನಿರ್ದೇಶಕ ಸ್ವಾಗತ್ ದಾಸ್ ಅವರನ್ನು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿಯಾಗಿ ಕೇಂದ್ರವು ಗುರುವಾರ ನೇಮಿಸಿದೆ.

1988ರ ಬ್ಯಾಚ್‌ನ ಹಿಮಾಚಲ ಪ್ರದೇಶ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ದೇಕಾ ಅವರು ಎರಡು ವರ್ಷಗಳ ಅವಧಿಗೆ ಕೇಂದ್ರ ಗುಪ್ತಚರ ಸಂಸ್ಥೆಯ ಮುಖ್ಯಸ್ಥರಾಗಿರಲಿದ್ದಾರೆ.2015-16ರ ಪಠಾಣ್‌ಕೋಟ್ ವಾಯುನೆಲೆ ದಾಳಿ ಮತ್ತು 2019ರ ಪುಲ್ವಾಮಾ ದಾಳಿಯ ಸಂದರ್ಭದಲ್ಲಿಯೂ ದೇಕಾ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದರು.