Thursday, 12th December 2024

ಒಂದು ಬೆರಳು ತೋರಿಸುವಾಗ ನಾಲ್ಕು ಬೆರಳು…

ವರ್ತಮಾನ

maapala@gmail.com

ಇತ್ತೀಚೆಗೆ ರಾಜ್ಯಸಭೆಗೆ ನಡೆದ ಚುನಾವಣೆಯನ್ನೇ ತೆಗೆದುಕೊಳ್ಳೋಣ. ಗೆಲ್ಲುವ ಸಾಮರ್ಥ್ಯ ಇಲ್ಲದೇ ಇದ್ದರೂ ಅಲ್ಪಸಂಖ್ಯಾತ ಮುಸ್ಲಿಂ
ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಜಾತ್ಯತೀತ ಶಕ್ತಿಗಳು ಒಂದಾಗಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಜೆಡಿಎಸ್‌ಗೆ ಕರೆ ನೀಡಿತ್ತು.

ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದಾಗ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ .ಡಿ.ದೇವೇಗೌಡರು ಪ್ರತಿಕ್ರಿಯಿಸಿ, ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ತನ್ನ ಅಭ್ಯರ್ಥಿ ಘೋಷಣೆ ಮಾಡಿದೆ. ದ್ರೌಪದಿ ಮುರ್ಮು ಉತ್ತಮ ಅಭ್ಯರ್ಥಿ. ಯಾವ ಕಾರಣದಿಂದ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬುದರ ಬಗ್ಗೆ ನಾನು ವಿವರ
ಕೊಡುವುದಿಲ್ಲ. ಅನೇಕ ಹೆಸರುಗಳು ಚರ್ಚೆ ಆಗಿ ಕೊನೆಗೆ ಉತ್ತಮ ಅಭ್ಯರ್ಥಿ ಯನ್ನು ಆಯ್ಕೆ ಮಾಡಿದ್ದಾರೆ.

ದ್ರೌಪತಿ ಮುರ್ಮು ಯಾವುದೇ ವಿವಾದ ಇಲ್ಲದ ವ್ಯಕ್ತಿ. ಶಾಸಕರಾಗಿ, ಸಚಿವರಾಗಿ, ರಾಜ್ಯಪಾಲರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದ್ದರು. ಯಾವುದೇ ಒಂದು ಹುದ್ದೆಗೆ ಅಭ್ಯರ್ಥಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಇದಕ್ಕಿಂತ ಸೂಕ್ಷ್ಮವಾಗಿ, ಪ್ರಾಮಾ ಣಿಕವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಇದಕ್ಕಿಂತ ಉತ್ತಮ ಪ್ರತಿಕ್ರಿಯೆ ನೀಡಲು ಸಾಧ್ಯವೇ ಇಲ್ಲ. ಯಾವ ಕಾರಣಕ್ಕಾಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದ್ದಾರೆ ಎಂಬದರ ಬಗ್ಗೆ ನಾನು ವಿವರಣೆ ಕೊಡುವುದಿಲ್ಲ ಎಂಬ ಅವರ ಮಾತಿನಲ್ಲೇ ಎನ್‌ಡಿಎ ಅಭ್ಯರ್ಥಿ ಆಯ್ಕೆ ಹಿಂದಿನ ಉದ್ದೇಶ ಅರ್ಥವಾಗುತ್ತದೆ.

ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಎಷ್ಟೇ ಉತ್ತಮ ಅಭ್ಯರ್ಥಿ ಆಗಿದ್ದರೂ, ಅವರಿಗೆ ಎಲ್ಲಾ ಅರ್ಹತೆ ಇದ್ದರೂ ಅವರ ಆಯ್ಕೆ ಹಿಂದೆ ಇದ್ದ ಪ್ರಮುಖ ಅರ್ಹತೆ ಬುಡಕಟ್ಟು ಸಮುದಾಯದ ಮಹಿಳೆ ಎಂಬುದು. ಉಳಿದೆಲ್ಲವೂ ನಂತರದ್ದು. ಏಕೆಂದರೆ, ಎಲ್ಲಾ ಪಕ್ಷಗಳಂತೆ ಬಿಜೆಪಿ ಕೂಡ ರಾಜಕಾರಣವನ್ನೇ ಮಾಡುತ್ತಿದೆ ಮತ್ತು ಮಾಡಲೇ ಬೇಕಾಗಿದೆ. ಬಿಜೆಪಿ ವಿರುದ್ಧ ಇರುವ ಪ್ರಮುಖ ಆರೋಪ ಎಂದರೆ ಮುಸ್ಲಿಂ ವಿರೋಧಿ, ದಲಿತ ವಿರೋಧಿ, ಮೇಲ್ವರ್ಗದವರ ಪರ ಎಂಬುದು. ಆದರೆ, 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರದಲ್ಲಿದ್ದಾಗ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು ಎ.ಪಿ.ಜೆ.ಅಬ್ದುಲ್ ಕಲಾಂ ಎಂಬ ವಿಜ್ಞಾನಿ. ಇನ್ನು 2017ರಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಾಮನಾಥ್ ಕೋವಿಂದ್ ಎಂಬುವರನ್ನು ಆಯ್ಕೆ ಮಾಡಿತ್ತು. ಇದೀಗ ಪರಿಶಿಷ್ಟ ಪಂಗಡಕ್ಕೆ ಸೇರಿದ ಬುಡಕಟ್ಟು ಸಮುದಾಯದವರನ್ನು ಆಯ್ಕೆ ಮಾಡಲಾಗಿದೆ.

ಇವರೆಲ್ಲರಿಗೂ ರಾಷ್ಟ್ರಪತಿ ಆಗುವ ಅರ್ಹತೆ ಇದೆಯಾದರೂ ಅವರ ಆಯ್ಕೆಯ ಹಿಂದಿನ ಉದ್ದೇಶ ಖಂಡಿತವಾಗಿಯೂ ತನ್ನನ್ನು ಮುಸ್ಲಿಂ, ದಲಿತ ವಿರೋಧಿ ಮತ್ತು ಮೇಲ್ವರ್ಗದವರ ಪರ ಎಂಬ ಹೆಣೆಪಟ್ಟಿಯಿಂದ ಹೊರಬರುವುದು. ಆದರೆ, ಈ ಆಯ್ಕೆ ಕುರಿತು ವಾಚಾಮಗೋ ಚರವಾಗಿ ಟೀಕೆ ಮಾಡುತ್ತಿರುವ ಕಾಂಗ್ರೆಸ್ ಆದರೂ ಮಾಡುತ್ತಿರುವುದೇನು ಮತ್ತು ಹಿಂದೆ ಮಾಡಿದ್ದೇನು? ಈ ಕುರಿತು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯನ್ನೇ ತೆಗೆದುಕೊಳ್ಳೋಣ.

ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಬುಡಕಟ್ಟು ಮಹಿಳೆಯನ್ನು ಆಯ್ಕೆ ಮಾಡಿರುವುದು ಸಾಮಾಜಿಕ ನ್ಯಾಯವೂ ಅಲ್ಲ, ವಿಶೇಷವೂ ಅಲ್ಲ. ಹಾಗೆ ಸಾಮಾಜಿಕ ನ್ಯಾಯ ನೀಡಬೇಕು ಎಂಬುದಿದ್ದರೆ ಆರ್‌ಎಸ್‌ಎಸ್ ಮುಖ್ಯ ಸರಸಂಘಚಾಲಕರಾಗಿ ಮೋಹನ್ ಭಾಗವತ್ ಸ್ಥಾನಕ್ಕೆ ಇಂತಹ ಮಹಿಳೆಯನ್ನು ನೇಮಿಸಲಿ. ದ್ರೌಪದಿ ಮುರ್ಮು ಅವರು ಬಿಜೆಪಿಯವರೇ ಆಗಿದ್ದಾರೆ. ರಾಜ್ಯಪಾಲ ಸೇರಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ರಾಷ್ಟ್ರಪತಿಯಾಗಿ ಸ್ವತಂತ್ರವಾಗಿ ಕೆಲಸ ಮಾಡಲು ಇವರು ಬಿಡುವುದಿಲ್ಲ.

ರಾಮನಾಥ್ ಕೋವಿಂದ್ ಕೂಡ ರಾಷ್ಟ್ರಪತಿಯಾಗಿ ಏನು ಮಾಡಿದ್ದರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದು ಕೇವಲ ಸಿದ್ದರಾ ಮಯ್ಯ ಅವರ ಮಾತಲ್ಲ, ಕಾಂಗ್ರೆಸ್ಸಿಗರ ಮನಸ್ಥಿತಿಯೂ ಹೌದು. ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಪರಿಗಣಿಸಿದ ಎನ್‌ಡಿಎ ಕುರಿತಾಗಿ ಕಾಂಗ್ರೆಸ್ಸಿನ ಅನೇಕ ರಾಷ್ಟ್ರೀಯ ನಾಯಕರು ಇದೇ ಮಾತನ್ನು ಹೇಳಿದ್ದಾರೆ.

ಅವರ ಈ ಆಕ್ಷೇಪದಲ್ಲಿ ಸತ್ಯವಿದೆ ಎನಿಸಬಹುದು. ಅದು ಯಾವಾಗ ಎಂದರೆ ರಾಜಕೀಯದಲ್ಲಿ ನೈತಿಕತೆ, ಸಾಮಾಜಿಕ ನ್ಯಾಯ ಪರಿಪಾಲನೆಯಾಗುತ್ತಿದ್ದರೆ ಮಾತ್ರ. ಆದರೆ, ಪ್ರಸ್ತುತ ರಾಜಕಾರಣದಲ್ಲಿ ಹುಡುಕಿದರೂ ಈ ಎರಡೂ ಅಂಶಗಳು ಸಿಗುವುದು ಕಷ್ಟ ಎನ್ನುವಂತಿದೆ. ಹೋಗಲಿ ಹೇಳುವವರಾದರೂ ಅವೆರಡನ್ನೂ ಪಾಲಿಸಿದ್ದಾರೆಯೇ ಅಥವಾ ಪಾಲಿಸುತ್ತಿದ್ದಾರೆಯೇ ಎಂದರೆ ಅದನ್ನು ಸಿಗುವ ಉತ್ತರ ಇಲ್ಲ ಎಂಬುದು. ಇನ್ನು ಅವರು ಇರುವ ಪಕ್ಷವೂ ಈ ಎರಡೂ ಅಂಶಗಳನ್ನು ಪಾಲಿಸಿದ ಉದಾಹರಣೆಗಳೇ ಇಲ್ಲ. ರಾಷ್ಟ್ರಪತಿ
ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಕಾಂಗ್ರೆಸ್ ಯಾವತ್ತೂ ಸಾಮಾಜಿಕ ನ್ಯಾಯ ಪಾಲಿಸಿಲ್ಲ.

ದ್ರೌಪದಿ ಮುರ್ಮು ಅವರು ಬಿಜೆಪಿಯವರಾಗಿದ್ದಾರೆ. ರಾಜ್ಯಪಾಲ ಸೇರಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ರಾಷ್ಟ್ರಪತಿಯಾಗಿ ಸ್ವತಂತ್ರವಾಗಿ ಕೆಲಸ ಮಾಡಲು ಅವರನ್ನು ಬಿಡುವುದಿಲ್ಲ ಎಂಬುದು ಸಿದ್ದರಾಮಯ್ಯ ಅವರ ಮತ್ತೊಂದು ಆರೋಪ. ಹೌದು, ರಾಷ್ಟ್ರಪತಿ ಯವರು ಸ್ವತಂತ್ರವಾಗಿ ಕೆಲಸ ಮಾಡಿದ ಉದಾಹರಣೆಗಳು ಸ್ವಾತಂತ್ರ್ಯಾ ನಂತರದಲ್ಲಿ ಸಿಗಲು ಸಾಧ್ಯವೇ ಇಲ್ಲ. ದೇಶದ ಪ್ರಥಮ ರಾಷ್ಟ್ರಪತಿಗಳ ವಿಚಾರವನ್ನೇ ತೆಗೆದುಕೊಳ್ಳೋಣ.

12 ವರ್ಷಗಳ ಕಾಲ ರಾಷ್ಟ್ರಪತಿಯಾಗಿದ್ದು, ಈ ಹುದ್ದೆಗೆ ಘನತೆ, ಗೌರವ ತಂದುಕೊಟ್ಟ, ಅತ್ಯಂತ ಸರಳತೆಯ ವ್ಯಕ್ತಿಯಾಗಿದ್ದ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರು ತಮ್ಮ ಮಾತು ಮೀರಿ ಸೋಮನಾಥ ಮಂದಿರದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಂಡರು ಎಂಬ ಕಾರಣಕ್ಕೆ ಅವರ ವಿರುದ್ಧ ಪ್ರಧಾನಿಯಾಗಿದ್ದ ಜವಹರಲಾಲ ನೆಹರೂ ಜೀವನ ಪೂರ್ತಿ ದ್ವೇಷ ಸಾಧಿಸಿದರು. ರಾಷ್ಟ್ರಪತಿ ಮೂರೂ ಸೇನೆಗಳ ಮಹಾದಂಡನಾಯಕರಾಗಿದ್ದರೂ ಅವರಲ್ಲಿ ಒಂದು ಮಾತನ್ನೂ ಕೇಳದೆ ಚೀನಾ ವಿರುದ್ಧ ಯುದ್ಧ ಘೋಷಿಸಿದರು.

ತುರ್ತು ಪರಿಸ್ಥಿತಿ ಘೋಷಿಸುವಾಗ, ಅದೆಷ್ಟೋ ಕಾಂಗ್ರೆಸ್ಸೇತರ ರಾಜ್ಯ ಸರಕಾರಗಳನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ರಾಷ್ಟ್ರಪತಿ ಸ್ಥಾನವನ್ನು ತನ್ನ ಮೂಗಿನ ನೇರಕ್ಕೆ ದುರುಪಯೋಗ ಪಡಿಸಿಕೊಂಡಿತ್ತು. ಆಗ ಇದ್ದವರು ಕಾಂಗ್ರೆಸ್ ಸರಕಾರ ಆಯ್ಕೆ ಮಾಡಿದ್ದ ರಾಷ್ಟ್ರಪತಿಗಳೇ. 1989ರಲ್ಲಿ ಎಸ್.ಆರ್.ಬೊಮ್ಮಾಯಿ ಸರಕಾರವನ್ನು ಆಗಿನ ಕೇಂದ್ರ ಸರಕಾರ ವಜಾಗೊಳಿಸಿದ್ದೂ ಇದೇ ರೀತಿ. ಕಾಂಗ್ರೆಸ್ ರಾಷ್ಟ್ರಪತಿ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡು ರಾಜ್ಯ ಸರಕಾರಗಳನ್ನು ವಜಾಗೊಳಿಸುವುದಕ್ಕೆ ತೆರೆ ಬಿದ್ದಿದ್ದು, ಎಸ್.ಆರ್‌ಬೊಮ್ಮಾಯಿ ಸರಕಾರವನ್ನು ವಜಾಗೊಳಿಸಿದ್ದ ಆದೇಶವನ್ನು 1994ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿದ ಮೇಲೆ.

ಇನ್ನು ದ್ರೌಪದಿ ಮುರ್ಮು ಬಿಜೆಪಿಯವರು, ರಾಜ್ಯಪಾಲರಾಗಿದ್ದರು ಎಂಬುದು ಸಿದ್ದರಾಮಯ್ಯ ಅವರ ಆರೋಪ. ಹಾಗಿದ್ದರೆ ಕಾಂಗ್ರೆಸ್
ಮತ್ತು ಯುಪಿಎ ಸರಕಾರದ ಅವಽಯಲ್ಲಿ ರಾಷ್ಟ್ರಪತಿಗಳಾಗಿದ್ದವರು ಯಾರು? ಒಂದಿಬ್ಬರನ್ನು ಹೊರತುಪಡಿಸಿ ಉಳಿದೆಲ್ಲರೂ ಕಾಂಗ್ರೆಸ್‌ ನಲ್ಲಿ ಸಕ್ರಿಯವಾಗಿದ್ದವರೇ ಆಗಿದ್ದಾರೆ. ಬಿಜೆಪಿ ಕೂಡ ಈ ರಾಜಕೀಯ ವಾತಾವರಣದಲ್ಲೇ ಬೆಳೆದು ಬಂದ ಪಕ್ಷ. ಹೀಗಾಗಿ ಅದು ಕೂಡ ತಮ್ಮ ಪಕ್ಷದವರನ್ನೇ ರಾಷ್ಟ್ರ ಪತಿ ಹುದ್ದೆಗೆ ಆಯ್ಕೆ ಮಾಡಿರುವುದರಲ್ಲಿ ಯಾವುದೇ ಅಚ್ಚರಿ ಇಲ್ಲ.

ಅಷ್ಟಕ್ಕೂ ಕಾಂಗ್ರೆಸ್‌ಗೆ ಹೋಲಿಸಿದರೆ ರಾಷ್ಟ್ರಪತಿ ಆಯ್ಕೆ ವಿಚಾರದಲ್ಲಿ ಸಾಮಾಜಿಕ ನ್ಯಾಯ ಪಾಲಿಸಿಕೊಂಡು ಬಂದಿದೆ ಎಂದು ಹೇಳಬಹುದು. ಏಕೆಂದರೆ, ಮೊದಲ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ, ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದ್ದು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ ಯನ್ನು. ನಂತರ ಪರಿಶಿಷ್ಟ ಜಾತಿಯವರನ್ನು ಮಾಡಿದರೆ, ಇದೀಗ ಪರಿಶಿಷ್ಟ ಪಂಗಡದ ಮಹಿಳೆಯನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದೆ. ಅದರ ಹಿಂದಿನ ಕಾರಣ ಏನೇ ಇರಬಹುದು ಆದರೆ, ಆಯ್ಕೆ ಮಾಡಿದ್ದಂತೂ ಸ್ಪಷ್ಟ.

ಏಕೆಂದರೆ, ಈಗಿನ ರಾಜಕಾರಣವೇ ಹಾಗಿದೆ. ಹೆಸರಿಗೆ ಮಾತ್ರ ಜಾತ್ಯತೀತ. ಆದರೆ, ಎಲ್ಲವೂ ಜಾತಿ ಮತ್ತು ಧರ್ಮದ ಆಧಾರದ ಮೇಲೆಯೇ ನಡೆಯುತ್ತದೆ. ಇತ್ತೀಚೆಗೆ ರಾಜ್ಯಸಭೆಗೆ ನಡೆದ ಚುನಾವಣೆಯನ್ನೇ ತೆಗೆದುಕೊಳ್ಳೋಣ. ಗೆಲ್ಲುವ ಸಾಮರ್ಥ್ಯ ಇಲ್ಲದೇ ಇದ್ದರೂ ಅಲ್ಪಸಂಖ್ಯಾತ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಜಾತ್ಯತೀತ ಶಕ್ತಿಗಳು ಒಂದಾಗಿ ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಜೆಡಿಎಸ್‌ಗೆ ಕರೆ ನೀಡಿತ್ತು. ಅದರೆ, ಇಲ್ಲಿ ಜಾತ್ಯತೀತ ಎಂದರೆ ಮುಸ್ಲಿಂ ಎಂಬ ಅರ್ಥವೇ ಎಂದು ಪ್ರಶ್ನಿಸಬಹುದು.

ಯಾವುದೇ ಆಯ್ಕೆ ಇರಲಿ, ಅಲ್ಲಿ ಅಧಿಕಾರದ ರಾಜಕಾರಣ, ಗೆಲ್ಲುವ ರಾಜಕಾರಣವೇ ಮುಖ್ಯವಾಗಿರುತ್ತದೆ. ಪರಿಶಿಷ್ಟ ಜಾತಿ, ಪಂಗಡ, ಮುಸ್ಲಿಂ, ಹಿಂದುಳಿದವರು ಎಂಬುದು ಕೇವಲ ನೆಪಕ್ಕೆ ಮಾತ್ರವೇ ಇರುತ್ತದೆ. ಇದಕ್ಕೆ ಯಾವ ರಾಜಕೀಯ ಪಕ್ಷವೂ ಹೊರತಲ್ಲ. ಜಾತಿ ಗಳನ್ನೇ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತ ಜಾತ್ಯತೀತರು ಎಂದು ಹೇಳಿಕೊಳ್ಳುತ್ತಾರೆ. ರಾಜಕೀಯ ನಾಯಕರ ಈ ಅಧಿಕಾರ ರಾಜಕಾರಣದಲ್ಲಿ ಬಡಿದಾಡಿಕೊಳ್ಳುತ್ತಿರುವುದು ಮಾತ್ರ ಕೆಳಹಂತದ ಕಾರ್ಯಕರ್ತರು. ಯಾರೇ ಬಂದರೂ ಈ ರಾಜಕೀಯ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿಲ್ಲ. ಒಂದೊಮ್ಮೆ ಪ್ರಯತ್ನಿಸಿದರೆ ಅವರಿಗೆ ರಾಜಕಾರಣದಲ್ಲಿ ಅವಕಾಶ ಸಿಗುವುದಿಲ್ಲ.

ಲಾಸ್ಟ್ ಸಿಪ್: ಬೇರೆಯವರ ತಟ್ಟೆಯಲ್ಲಿ ನೊಣ ಸತ್ತುಬಿದ್ದಿರುವುದನ್ನು ತೋರಿಸುವ ಮುನ್ನ ತಮ್ಮ ತಟ್ಟೆಯಲ್ಲಿ ಹಲ್ಲಿ ಸತ್ತು ಬಿದ್ದಿರುವುದನ್ನು ಗಮನಿಸಿರಬೇಕು.