ಬರಾಕ್ ಕಣಿವೆಯ ರಹದಾರಿ ಎಂದೇ ಕರೆಯಲ್ಪಡುವ ಸಿಲ್ಚಾರ್ ಪ್ರಾಂತ್ಯ ಐದನೇ ದಿನವೂ ಮುಳುಗಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾರ್ಪೆಟಾ, ಧುಬ್ರಿ, ಕರೀಂಗಂಜ್ ಮತ್ತು ಉದಾಲ್ ಗುರಿ ಜಿಲ್ಲೆಯಲ್ಲಿ ಒಟ್ಟು ಆರು ಮಂದಿ, ಕ್ಯಾಚಾರ್ ಮತ್ತು ಮೋರಿಗಾಂವ್ ನಲ್ಲಿ ತಲಾ ಒಬ್ಬರು ಮೃತ ಪಟ್ಟಿದ್ದಾರೆ.
ಅಸ್ಸಾಂನ 30 ಜಿಲ್ಲೆಗಳಲ್ಲಿ 45.34 ಲಕ್ಷ ಜನಸಂಖ್ಯೆ ಹೊಂದಿದ್ದು, ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತ ವಾಗಿರುವುದಾಗಿ ಅಸ್ಸಾಂ ರಾಜ್ಯದ ವಿಪತ್ತು ನಿರ್ವಹಣಾ ಪಡೆ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 207 ಸಿಬ್ಬಂದಿಯನ್ನು ಇಟಾನಗರ ಮತ್ತು ಭುವನೇಶ್ವರದಿಂದ ಕರೆಯಿಸಿಕೊಳ್ಳಲಾಗಿದೆ. ಜೊತೆಗೆ ದಿಂಪುರದಿಂದ ಸೇನೆಯ 120 ಯೋಧರ ತಂಡವನ್ನು ರಕ್ಷಣಾ ಕಾರ್ಯಗಳಿಗಾಗಿ ನಿಯೋಜಿಸಲಾಗಿದೆ.