Monday, 25th November 2024

ತಂದೆಯ ಅನಾರೋಗ್ಯ, ಶಿಕ್ಷಣಕ್ಕೆ ಹೇಳಿದ ಗುಡ್‌ ಬೈ

ಶಂಕರ್‌ ಬಿದರಿ- ಸತ್ಯಮೇವ ಜಯತೆ- (ಭಾಗ ೭)

ತಂದೆ ಅನಾರೋಗ್ಯದಲ್ಲಿರುವಾಗಲೇ ನಮ್ಮ ಮುತ್ಯಾ ಮಹಾಲಿಂಗಪ್ಪ ಅವರು ತೀರಿಕೊಂಡರು. ಆಸ್ತಿಗಳು ಮೂರು ಪಾಲಾ ಯಿತು. ತಂದೆಯವರ ಚಿಕಿತ್ಸೆಗೆ ಬಹಳಷ್ಟು ಹಣ ಖರ್ಚಾಗಿತ್ತು. ಮನೆಯಲ್ಲಿದ್ದ ಬಹುಪಾಲು ಬಂಗಾರ ಸಹಿತ ಮಾರಾಟವಾಗಿತ್ತು. ತೋಟದಿಂದ ಹೆಚ್ಚಿನ ಉತ್ಪನ್ನ ಬರುತ್ತಿರಲಿಲ್ಲ. ಮನೆ ನಡೆಸಲು ದುಡಿಯುವ ಅನಿವಾರ್ಯತೆ ಇತ್ತು. ಹೀಗಾಗಿ ನಾನು ಬಿ.ಎ. ಪದವಿ ಓದುವ ಆಲೋಚನೆ ಕೈಬಿಟ್ಟು ಕೆಲಸಕ್ಕೆ ಸೇರಲು ನಿರ್ಧರಿಸಿದೆನು.

ಪಿಯುಸಿ ಪರೀಕ್ಷೆ ಫಲಿತಾಂಶ ಬಂದ ಮೇಲೆ ನನಗೆ ಬೀಜಗಣಿತ ಮತ್ತು ಜ್ಯಾಮಿಟ್ರಿ ಸರಿಯಾಗಿ ಅರ್ಥವಾಗುತ್ತಿಲ್ಲ ಆದ್ದರಿಂದ ನಾನು ಬಿ.ಎಸ್ಸಿ ಬದಲಾಗಿ ಬಿ.ಎ. ಪದವಿ ಅಭ್ಯಾಸ ಮಾಡುತ್ತೇನೆ ಎಂದು ನನ್ನ ತಂದೆಯವರಿಗೆ ತಿಳಿಸಿದೆ. ಅವರೂ ಒಪ್ಪಿಕೊಂಡು ನನ್ನನ್ನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಧಾರವಾಡಕ್ಕೆ ಕಳುಹಿಸಿಕೊಟ್ಟರು.

ಕರ್ನಾಟಕದ ಪ್ರತಿಷ್ಠಿತ ಕಾಲೇಜಾಗಿದ್ದ ಕರ್ನಾಟಕ ಕಾಲೇಜಿನಲ್ಲಿ ನಾನು ಅಭ್ಯಾಸ ಮಾಡಬೇಕು ಎಂದು ಅವರು ಬಯಸಿದರು. ಆದರೆ ನಾನು ಧಾರವಾಡಕ್ಕೆ ಹೋಗಿ ಪ್ರವೇಶಕ್ಕಾಗಿ ಕರ್ನಾಟಕ ಕಾಲೇಜಿನಲ್ಲಿ ಅರ್ಜಿ ಸಲ್ಲಿಸುವಷ್ಟರಲ್ಲಿ ಪ್ರವೇಶಾವಕಾಶಕ್ಕೆ ನಿಗದಿಪಡಿಸಿದ್ದ ಕೊನೆಯ ದಿನ ಮುಗಿದುಹೋಗಿತ್ತು. ಆದ್ದರಿಂದ ನನಗೆ ಆ ಕಾಲೇಜಿನಲ್ಲಿ ನನಗೆ ಪ್ರವೇಶ ಸಿಗಲಿಲ್ಲ. ಹಾಗಾಗಿ ನಾನು ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಬಿ.ಎ ಪದವಿಗೆ ಪ್ರವೇಶ ಪಡೆದೆ.

ನಮ್ಮ ಗುರುಗಳಾದ ಆಸಂಗಿಯ ಶ್ರೀ ಯೋಗೀಶ್ವರ ಸ್ವಾಮೀಜಿಯವರು ಆಗ ಧಾರವಾಡದ ವಿಶ್ವವಿದ್ಯಾಲಯದ ಬಳಿ ಓಂ ಆಶ್ರಮ ಸ್ಥಾಪಿಸಿದ್ದರು. ಅವರು ನನ್ನ ಮೇಲೆ ವಿಶೇಷ ಪ್ರೀತಿ ಹೊಂದಿದ್ದರಿಂದ ನಾನು ಅವರನ್ನು ದೊಡ್ಡಪ್ಪ ಎಂದು ಕರೆಯುತ್ತಿದ್ದೆ. ನಮ್ಮ ತಂದೆಯವರ ಸೂಚನೆಯಂತೆ ನಾನು ನೇರವಾಗಿ ಓಂ ಆಶ್ರಮಕ್ಕೆ ಹೋಗಿ ಅಲ್ಲಿಯೇ ನೆಲೆಸಿದೆನು. ಆಶ್ರಮದ ಹೊರಭಾಗದಲ್ಲಿದ್ದ ಒಂದು ಪ್ರತ್ಯೇಕ ಕೋಣೆಯನ್ನು ನನ್ನ ವಾಸಕ್ಕಾಗಿ ಯೋಗೀಶ್ವರ ಸ್ವಾಮೀಜಿಯವರು ನೀಡಿದರು. ಅದೇ ರೀತಿ ಅಡುಗೆಗೆ ದಿನಸಿ ಮತ್ತು ಇತರ ಸಾಮಾನು ಹಾಗೂ ಪಾತ್ರೆಗಳನ್ನೂ ಅವರೇ ಕೊಡಿಸಿದರು. ದಿನಾಲೂ ನಾನು ಓಂ ಆಶ್ರಮದಿಂದ ಟೈವಾಕ್ ವಾಚ್ ಫ್ಯಾಕ್ಟರಿಯವರೆಗೆ ನಡೆದುಕೊಂಡು ಬಂದು ಅಲ್ಲಿಂದ ಸಿಟಿ ಬಸ್ ಹತ್ತಿ ಕಿಟೆಲ್ ಕಾಲೇಜಿಗೆ ಬರುತ್ತಿದ್ದೆ.

ಮಧ್ಯಾಹ್ನದ ಊಟವನ್ನು ಸಮೀಪದ ಬಸಪ್ಪನ ಖಾನಾವಳಿಯಲ್ಲಿ ಮಾಡುತ್ತಿದ್ದೆ. ಸಾಯಂಕಾಲ ಮತ್ತೆ ಸಿಟಿ ಬಸ್‌ನಲ್ಲಿ ಯುನಿ ವರ್ಸಿಟಿವರೆಗೆ ಬಂದು ಆರೇಳು ಗಂಟೆ ಹೊತ್ತಿಗೆ ಆಶ್ರಮ ತಲುಪುತ್ತಿದ್ದೆ. ಸಾಯಂಕಾಲ ಅನ್ನ ಸಾರು ಮಾಡಿಕೊಂಡು ಊಟ
ಮಾಡುತ್ತಿದ್ದೆನು. ನಾನು ಕಿಟೆಲ್ ಕಾಲೇಜು ಸೇರಿ ಸುಮಾರು ಒಂದು ತಿಂಗಳು ಹತ್ತು ದಿನ ಕಳೆದಿದ್ದೆವು. ಆವತ್ತು ಕಾಲೇಜು ಮುಗಿಸಿ ಕೊಂಡು ಆಶ್ರಮಕ್ಕೆ ಬಂದ ಕೂಡಲೇ, ಸ್ವಾಮೀಜಿಯವರು ‘ಊರಿಂದ ಟೆಲಿಗ್ರಾಂ ಬಂದಿದೆ, ನಿಮ್ಮ ತಂದೆಗೆ ಹುಷಾರಿಲ್ಲ ಗಂಭೀರ ಸ್ಥಿತಿಯಲ್ಲಿದ್ದಾರೆ’ ಎಂದು ತಿಳಿಸಿದರು.

ಅಲ್ಲದೆ ಕೂಡಲೇ ಬನಹಟ್ಟಿಗೆ ಹೋಗಲು ಸೂಚಿಸಿದರು. ಇದು ನಡೆದಿದ್ದು ೧೯೭೦ರ ಆಗಸ್ಟ್ ಎರಡನೇ ವಾರದಲ್ಲಿ. ನಾನು ಕೂಡಲೇ ನನ್ನ ಸಾಮಾನುಗಳನ್ನು ತೆಗೆದುಕೊಂಡು ಧಾರವಾಡ ಬಸ್ ಸ್ಟ್ಯಾಂಡ್‌ನಿಂದ ಬಸ್‌ನಲ್ಲಿ ಹೊರಟು ರಾತ್ರಿ ಸುಮಾರು ೧೨ ಗಂಟೆಗೆ ಬನಹಟ್ಟಿ ತಲುಪಿದೆ. ಮನೆಯಲ್ಲಿ ತಂದೆ ಕಾಣಲಿಲ್ಲ. ನಾನು ಗಾಬರಿಯಾದೆ. ವಿಚಾರಿಸಿದಾಗ, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂತು. ಆ ಒಂದು ರಾತ್ರಿಯನ್ನು ಹೇಗೋ ಕಳೆದು ಮಾರನೆ ದಿನ ಮೊದಲನೇ ಬಸ್‌ಗೆ ಬೆಳಗಾವಿಗೆ ಹೋದೆ. ಅಲ್ಲಿ ಡಾ. ಮೆಟ್‌ಗುಡ್ ಅವರ ಖಾಸಗಿ ಆಸ್ಪತ್ರೆಯಲ್ಲಿ ನಮ್ಮ ತಂದೆಯನ್ನು ಚಿಕಿತ್ಸೆಗಾಗಿ ಸೇರಿಸಲಾಗಿತ್ತು.

ಅವರನ್ನು ನೋಡಿಕೊಳ್ಳಲು ನಮ್ಮ ಅತ್ತೆ ಸುಮಿತ್ರಾ ಗೋಡಿ ಅವರು ಇದ್ದರು. ನಮ್ಮ ತಂದೆಯವರಿಗೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ನಾನೂ ನಮ್ಮ ಅತ್ತೆಯೊಂದಿಗೆ ಬೆಳಗಾವಿಯಲ್ಲೇ ಉಳಿದುಕೊಂಡೆನು.

ತಂದೆಯ ಚಿಕಿತ್ಸೆಗೆ ಹೋರಾಟ
ಸುಮಾರು ಒಂದು ತಿಂಗಳು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ, ಅತ್ತೆಯ ಕೈಯಲ್ಲಿದ್ದ ಹಣ ಆಸ್ಪತ್ರೆ ಬಿಲ್ ಪಾವತಿ ಸಲು ಖಾಲಿಯಾಯಿತು. ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ದಿನಗಳ ಕಾಲ ಚಿಕಿತ್ಸೆ ನೀಡಬೇಕಾದರೆ ಬಹಳ ಹಣದ ಅವಶ್ಯಕತೆ ಇತ್ತು. ಆದ್ದರಿಂದ ವೈದ್ಯರ ಸಲಹೆಯ ಮೇರೆಗೆ ನಮ್ಮ ತಂದೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರಕಾರದ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಿ ದೆವು. ನಾನು ನಮ್ಮತ್ತೆ, ಆಸ್ಪತ್ರೆಯ ಭಾಗವಾಗಿದ್ದ ಒಂದು ಧರ್ಮ ಛತ್ರದಲ್ಲಿ ಒಂದು ಕೋಣೆ ಬಾಡಿಗೆ ಪಡೆದು ಉಳಿದುಕೊಂಡೆವು.

ಸುಮಾರು ಎರಡು ತಿಂಗಳ ನಂತರ ಸಿವಿಲ್ ಆಸ್ಪತ್ರೆಯ ವೈದ್ಯರು ‘ನೀವು ನಿಮ್ಮ ತಂದೆಯನ್ನು ನಿಮ್ಮೂರಿಗೆ ಕರೆದುಕೊಂಡು ಹೋಗಬಹುದು, ಇಂಜೆಕ್ಷನ್ ಮತ್ತು ಗುಳಿಗೆ ಬರೆದುಕೊಡುತ್ತೇವೆ. ಊರಲ್ಲಿಯೇ ಇಂಜೆಕ್ಷನ್ ಕೊಡಿಸಿ, ಗುಳಿಗೆಗಳನ್ನು ನೀಡುತ್ತಿದ್ದರೆ ಸಾಕು’ ಎಂದು ತಿಳಿಸಿದರು. ಅದರಂತೆಯೇ ಒಂದು ಬಾಡಿಗೆ ಕಾರ್‌ನಲ್ಲಿ ಅವರನ್ನು ಊರಿಗೆ ಕರೆದುಕೊಂಡು ಹೋದೆವು. ವೈದ್ಯರು ಸೂಚಿಸಿದ ಗುಳಿಗೆ ನೀಡಿ ಅವರನ್ನು ನೋಡಿಕೊಳ್ಳುತ್ತಿದ್ದೆವು.

ವಾರಕ್ಕೆರಡು ಬಾರಿ ಸೈಕಲ್ ಮೇಲೆ ಕೂಡಿಸಿಕೊಂಡು ನಮ್ಮೂರಿ ನಲ್ಲಿಯೇ ಉತ್ತಮ ವೈದ್ಯರಾಗಿದ್ದ ಡಾ. ಬಣಕಾರ್ ಅವರಿಂದ ಇಂಜೆಕ್ಷನ್ ಕೊಡಿಸಿ ಮನೆಗೆ ಕರೆತರುತ್ತಿದ್ದೆನು. ತಂದೆಯವರು ಸ್ವಲ್ಪಮಟ್ಟಿಗೆ ಗುಣಮುಖರಾದರೂ ಒಂದು ವರ್ಷ ಅಥವಾ ಆರು ತಿಂಗಳ ಕಾಲ ತಮ್ಮ ಸಹಕಾರ ಸಂಘ ಕಾರ್ಯದರ್ಶಿ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ನನಗೆ ಮನವರಿಕೆಯಾಯಿತು.

ಈ ಮಧ್ಯೆ, ೧೯೬೮ರಲ್ಲಿ ನಮ್ಮ ಮುತ್ಯಾ ಮಹಾಲಿಂಗಪ್ಪ ಅವರು ತೀರಿಕೊಂಡ ಮೇಲೆ ತೋಟ, ಮನೆ ಮತ್ತು ಇತರ ಆಸ್ತಿಗಳು
ಮೂರು ಪಾಲುಗಳಾಗಿ, ನಮ್ಮ ತಂದೆಯವರಿಗೆ ಒಂದು ಪಾಲು, ದೊಡ್ಡಪ್ಪ ಗುರುಪಾದಪ್ಪ ಅವರಿಗೆ ಒಂದು ಪಾಲು ಮತ್ತು ಚಿಕ್ಕಪ್ಪ ಶಿವಲಿಂಗಪ್ಪ ಅವರಿಗೆ ಒಂದು ಪಾಲು ಬಂದಿದ್ದವು. ನಮ್ಮ ತಂದೆಯ ಪಾಲಿಗೆ ಮುತ್ತಜ್ಜ ಅವರ ಹಳೆಯ ಮನೆ, ತೋಟ ದಲ್ಲಿ ಮೂರನೇ ಒಂದು ಭಾಗ ಮತ್ತು ವಿದ್ಯುತ್ ಚಾಲಿತ ಮಗ್ಗಗಳನ್ನು ಹಾಕಲು ಮಂಗಳವಾರಪೇಟೆಯಲ್ಲಿ ಶ್ರೀ ಅಂಬಲಿ ಯವರಿಗೆ ಬಾಡಿಗೆ ನೀಡಿದ್ದ ಕಟ್ಟಡ ಬಂದವು. ತಂದೆಯವರ ಚಿಕಿತ್ಸೆಗಾಗಿ ಬಹಳಷ್ಟು ಹಣ ಖರ್ಚಾಗಿತ್ತು.

ಮನೆಯಲ್ಲಿದ್ದ ಬಹುಪಾಲು ಬಂಗಾರ ಸಹಿತ ಮಾರಾಟವಾಗಿತ್ತು. ತೋಟದಿಂದ ಹೆಚ್ಚಿನ ಉತ್ಪನ್ನ ಬರುತ್ತಿರಲಿಲ್ಲ. ಆಗ ನನಗೆ ನಾಲ್ಕು ಜನ ತಮ್ಮಂದಿರು ಹಾಗೂ ಇಬ್ಬರು ತಂಗಿಯಂದಿರು ಇದ್ದರು. ಮನೆ ನಡೆಸಲು ನಾನು ದುಡಿಮೆ ಪ್ರಾರಂಭಿಸಲೇಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ನಾನು ಬಿ.ಎ. ಪದವಿ ಓದುವ ಆಲೋಚನೆ ಕೈಬಿಟ್ಟು ಕೆಲಸಕ್ಕೆ ಸೇರಲು ನಿರ್ಧರಿಸಿದೆನು.

ಕೆಲಸಕ್ಕೆ ಮುಂಬೈನತ್ತ ಪ್ರಯಾಣ ಯಾವ ಕೆಲಸಕ್ಕೆ ಸೇರಬೇಕು ಎಂಬ ಚಿಂತೆ ಕಾಡತೊಡಗಿತು. ಕೃಷಿಯಲ್ಲಿ ಹೆಚ್ಚಿನ ಉತ್ಪನ್ನದ ನಿರೀಕ್ಷೆ ಇರಲಿಲ್ಲ. ಬೇರೇನಾದರೂ ಕೆಲಸ ಮಾಡಿ ಸಂಪಾದನೆ ಮಾಡುವ ಅನಿವಾರ್ಯತೆ ಇತ್ತು. ಆದರೆ ಏನು ಮಾಡುವುದು ಎಂಬ ಚಿಂತೆಯಲ್ಲಿ ತೊಡಗಿದೆ. ನನ್ನ ದೊಡ್ಡ ತಾತನ ಮಗ ಈಶ್ವರ ಬಿದರಿ ಅವರು ಮುಂಬೈಯಲ್ಲಿ ಇರುವುದು ಗೊತ್ತಿತ್ತು. ಹಾಗಾಗಿ ನನಗೂ ಒಳ್ಳೆಯ ನೌಕರಿ ಸಿಗಬಹುದು ಎಂಬ ಆಸೆಯಿಂದ ಮುಂಬೈಗೆ ತೆರಳುವ ನಿರ್ಧಾರ ಮಾಡಿದೆ.

ಡಿಸೆಂಬರ್ ೧೯೭೦ರಲ್ಲಿ ನಮ್ಮವ್ವನಿಂದ ಖರ್ಚಿಗೆ ೫೦ ರುಪಾಯಿ ಹಣ ಪಡೆದು ಕುಡಚಿ ರೈಲ್ವೆಸ್ಟೇಷನ್‌ವರೆಗೆ ಬಸ್‌ನಲ್ಲಿ ಹೋದೆ. ಅಲ್ಲಿ ೨೨ ರುಪಾಯಿ ಟಿಕೆಟ್ ಪಡೆದು ಮುಂಬೈಗೆ ರೈಲು ಹತ್ತಿದೆ. ಆಗ ಕುಡಚಿಯಿಂದ ಪೂನಾವರೆಗೆ ಮೀಟರ್‌ಗೇಜ್, ಪೂನಾದಿಂದ
ಮುಂಬೈಗೆ ಬ್ರಾಡ್‌ಗೇಜ್ ಇತ್ತು. ಪೂನಾದಲ್ಲಿ ಮುಂಬೈಗೆ ರೈಲು ಬದಲಿಸಬೇಕಿತ್ತು. ನಾನು ಮುಂಬೈಗೆ ಹೋದಮೇಲೆ ಕೆಲಸ ಹುಡುಕಿಕೊಂಡು ದಕ್ಷಿಣ ಮುಂಬೈಯಲ್ಲಿ ಅಲೆದಾಡುತ್ತಿದ್ದೆ. ಆಗ ‘ಬ್ಲಿಟ್ಜ್’ ವಾರಪತ್ರಿಕೆಯ ಕಚೇರಿಯ ಮುಂದೆ ‘ವಾಂಟೆಡ್
ಡಿಸ್ಪ್ಯಾಚ್ ಅಸಿಸ್ಟೆಂಟ್’ ಎಂದು ಬರೆದು ಚೀಟಿ ಅಂಟಿಸಿದ್ದರು.

ನಾನು ಕಚೇರಿಯ ಒಳಗಡೆ ಹೋಗಿ ವಿಚಾರಿಸಿದೆನು. ನಂತರ ನನ್ನನ್ನು ಕಚೇರಿಯ ಹಿರಿಯರಿಗೆ ಪರಿಚಯಿಸಿದರು. ಅವರು ನನ್ನ ಬಗ್ಗೆ ಮಾಹಿತಿ ಪಡೆದು, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಅಂಕಪಟ್ಟಿಗಳನ್ನು ನೋಡಿ, ಕೆಲಸಕ್ಕೆ ಸೇರಬಹುದು ಎಂದು ಹೇಳಿದರು. ವಾರಕ್ಕೆ ೨೦ ರು. ಸಂಬಳ ಎಂದೂ ತಿಳಿಸಿದರು. ಪ್ರತಿ ಮಂಗಳವಾರ ಸಂಬಳ ನೀಡುತ್ತಿದ್ದರು. ತಿಂಗಳಲ್ಲಿ ನಾಲ್ಕು ಮಂಗಳವಾರ ಬಂದರೆ ೮೦ ರು., ಐದು ಮಂಗಳವಾರ ಬಂದರೆ ೧೦೦ ರು. ಸಿಗುತ್ತಿತ್ತು.

ಮುಂಬೈಯಲ್ಲಿ ನನಗೆ ಯಾವುದೇ ಅನುಕೂಲತೆ ಇರಲಿಲ್ಲ. ನನ್ನ ಅದೃಷ್ಟಕ್ಕೆ ಬಂದ ದಿನವೇ ಕೆಲಸ ಸಿಕ್ಕಿತ್ತು. ಅದರಿಂದ ಬಹಳ ಸಂತೋಷವಾಯಿತು. ಈ ವಿಷಯವನ್ನು ಕಚೇರಿಯವರಿಗೆ ತಿಳಿಸಿದಾಗ ಕಚೇರಿಯಲ್ಲಿಯೇ ತಂಗಲು ಅನುಮತಿ ನೀಡಿದರು. ಅಲ್ಲಿ ರಾತ್ರಿ ವಾಚ್‌ಮನ್ ಒಬ್ಬರು ತಂಗುತ್ತಿದ್ದರು. ಅವರೊಂದಿಗೆ ನನಗೂ ಇರಲು ಅವಕಾಶ ಕಲ್ಪಿಸಿಕೊಟ್ಟರು. ಆಗ ‘ಬ್ಲಿಟ್ಜ್’ ಒಂದು
ವಾರಪತ್ರಿಕೆಯಾಗಿತ್ತು. ಪತ್ರಿಕೆ ಮುದ್ರಣಗೊಂಡು ಬಂದ ನಂತರ ವಿವಿಧ ನಗರ ಮತ್ತು ಪಟ್ಟಣಗಳಿಗೆ ಕಳುಹಿಸಬೇಕಾದ ಸಂಖ್ಯೆಗಳಲ್ಲಿ ಬಂಡಲುಗಳನ್ನು ಕಟ್ಟಿ ಆಯಾ ನಗರ ಅಥವಾ ಪಟ್ಟಣಗಳ ಏಜೆಂಟರ ವಿಳಾಸ ಚೀಟಿಯನ್ನು ಅಂಟಿಸಿ ಅವು ಗಳನ್ನು ರವಾನಿಸುವುದು ನನ್ನ ಕೆಲಸವಾಗಿತ್ತು.

ಬಂಡಲು ಕಟ್ಟಲು ಸಹಾಯಕರಿದ್ದರು. ಮುಂದೆ, ಈ ಬಂಡಲುಗಳನ್ನು ಟಾಂಗಾವೊಂದರಲ್ಲಿ ವಿಕ್ಟೋರಿಯಾ ಟರ್ಮಿನಸ್ ಸ್ಟೇಷನ್‌ಗೆ ತೆಗೆದುಕೊಂಡು ಹೋಗಿ ಪಾರ್ಸೆಲ್ ಆಫೀಸ್‌ನಲ್ಲಿ ನೀಡಿ ಸ್ವೀಕೃತಿ ಪತ್ರ ಪಡೆಯಬೇಕಾಗಿತ್ತು. ಅಲ್ಲದೆ, ಅವುಗಳನ್ನು ಕಚೇರಿಯ ದಾಖಲೆ ಪುಸ್ತಕದಲ್ಲಿ ನಮೂದಿಸಬೇಕಾಗಿತ್ತು. ಅತಿ ಹೆಚ್ಚು ಅಂದರೆ ವಾರದಲ್ಲಿ ಮೂರು ದಿನ ಕೆಲಸ. ಉಳಿದ ದಿನ ಗಳಲ್ಲಿ ಸಾಕಷ್ಟು ಬಿಡುವಾಗಿರುತ್ತಿದ್ದೆ. ಪತ್ರಿಕಾ ಕಚೇರಿಯಲ್ಲಿ ಒಂದು ಗ್ರಂಥಾಲಯವಿತ್ತು.

ಅಲ್ಲಿ ಕಮ್ಯೂನಿಸ್ಟ್ ಸಿದ್ಧಾಂತಗಳು, ಕಾರ್ಮಿಕ ಕಾನೂನಿನ ಬಗ್ಗೆ ಮತ್ತು ಇರಾನ್ ದೇಶದ ಬಗ್ಗೆ ಹಲವಾರು ಪುಸ್ತಕಗಳಿದ್ದವು. ನಾನು ಬಿಡುವಿನ ವೇಳೆ ಅಲ್ಲಿದ್ದ ಪುಸ್ತಕಗಳನ್ನು ಓದುತ್ತಿದ್ದೆ. ಸೊಲ್ಲಾಪುರದ ಗಾಡಗೆ ಎಂಬುವವರು ಅಲ್ಲಿ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಓದಲು ಬರುತ್ತಿರಲಿಲ್ಲ. ನಾನು ಓದುವುದನ್ನು ಆಸಕ್ತಿಯಿಂದ ನೋಡುತ್ತಿದ್ದರು. ಒಂದು ರಾತ್ರಿ ಅವರು ನನಗೆ ಪೇಡೆ ತಂದುಕೊಟ್ಟರು. ಯಾಕೆ ಅಂತ ಕೇಳಿದಾಗ ಅವರು ತಮ್ಮನಿಗೆ ಒಳ್ಳೆಯ ಸರಕಾರಿ ನೌಕರಿ ಸಿಕ್ಕಿದೆ ಎಂದು ಮತ್ತು ೨೦೦ಕ್ಕೂ ಹೆಚ್ಚು ಸಂಬಳ ಇದೆ ಎಂದು ತಿಳಿಸಿದರು.

ಯಾವ ರೀತಿ ಕೆಲಸ ಸಿಕ್ಕಿತು ಎಂದು ವಿಚಾರಿಸಿದಾಗ ಅವರ ತಮ್ಮನಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ೬೦ ಶೇಕಡಾ ಅಂಕ ಬಂದಿದ್ದು, ಆ ಆಧಾರದಲ್ಲಿ ಕೆಲಸ ಸಿಕ್ಕಿದೆ ಎಂದು ಹೇಳಿದರು. ಗಾಡಗೆ ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರು. ನಾನು ನನಗೆ ಎಸ್.ಎಸ್.ಎಲ್.ಸಿಯಲ್ಲಿ ಶೇ.೮೭ ಅಂಕ ಬಂದಿದ್ದು, ಮತ್ತೆ ಆ ಕೆಲಸಕ್ಕೆ ಕರೆ ಬಂದರೆ ತಿಳಿಸಬೇಕು ಎಂದು ಕೇಳಿಕೊಂಡೆನು. ಒಂದು ತಿಂಗಳ ನಂತರ ಗಾಡಗೆ, ಕರ್ನಾಟಕದ ಗುಲ್ಬರ್ಗಾ ವಿಭಾಗದಲ್ಲಿ ಟೆಲಿಪೋನ್ ಆಪರೇಟರ್ ಕೆಲಸಕ್ಕೆ ಅರ್ಜಿ ಕರೆದಿರುವು ದಾಗಿ ತಿಳಿಸಿದರು.

ಅವರ ತಮ್ಮನಿಂದ ವಿವರಗಳನ್ನು ಪಡೆದು ಅರ್ಜಿ ಹಾಕಲು ತಯಾರಿ ಮಾಡಿಕೊಂಡೆ. ನನ್ನ ಪ್ರಮಾಣಪತ್ರಗಳ ಮೂಲ ಪ್ರತಿ ಗಳನ್ನು ಟೈಪ್ ಮಾಡಿಸಿ ಅವುಗಳ ಮೇಲೆ ಗೆಜೆಟೆಡ್ ಅಧಿಕಾರಿಗಳ ಪ್ರಮಾಣೀಕರಿಸಬೇಕಿತ್ತು. ನಾನು ನನ್ನ ಎಸ್.ಎಸ್.ಎಲ್.ಸಿ.
ಪ್ರಮಾಣಪತ್ರ ಮತ್ತು ಅಂಕಪಟ್ಟಿಯನ್ನು ಟೈಪ್ ಮಾಡಿಸಿ ಮುಂಬೈನ ಪೋರ್ಟ್ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯರಿಂದ ಪ್ರಮಾಣೀಕರಿಸಿ ಅರ್ಜಿ ಸಲ್ಲಿಸಿದೆ.

ಸುಮಾರು ೪೦ ದಿನಗಳ ನಂತರ ಸಂದರ್ಶನಕ್ಕೆ ಕರೆ ಬಂತು. ನಾನು ಮುಂಬೈ- ಮದ್ರಾಸ್ ರೈಲಿನಲ್ಲಿ ಬಂದು ಗುಲ್ಬರ್ಗಾಕ್ಕೆ ಬಂದು ಸಂದರ್ಶನಕ್ಕೆ ಹಾಜರಾದೆ. ಎಂ.ಜಿ.ಕೆ. ಮೆನನ್ ಎಂಬ ಡಿವಿಷನಲ್ ಎಂಜಿನಿಯರ್, ಟೆಲಿಗ್ರಾಫ್, ಇವರು (ಡಿ.ಇ.ಟಿ) ಎಂಬುವವರು ಸಂದರ್ಶನ ಮಾಡಿದರು. ಸಂದರ್ಶನ ಮುಗಿಸಿ ನಾನು ಮತ್ತೆ ಮುಂಬೈಗೆ ತೆರಳಿದೆ. ೧೫ ದಿನಗಳ ನಂತರ ಆಯ್ಕೆಯಾದ ಬಗ್ಗೆ ಪತ್ರ ಬಂತು. ಆಗ ನಾನು ಪತ್ರಿಕಾ ಕಚೇರಿಯ ಕೆಲಸಕ್ಕೆ ರಾಜೀನಾಮೆ ನೀಡಿ ನಮ್ಮ ಊರಿಗೆ ಬಂದೆ.

ಮುಂದೆ, ಮೇ ೧೯೭೧ರಲ್ಲಿ ಡಿವಿಷನಲ್ ಎಂಜಿನಿಯರ್ ಟೆಲಿಗ್ರಾಫ್, ಗುಲ್ಬರ್ಗಾ ಅವರಿಂದ ಬಂದ ಸೂಚನೆಯ ಪ್ರಕಾರ ಬಿಜಾ ಪುರದ ಸಿವಿಲ್ ಆಸ್ಪತ್ರೆಗೆ ಹೋಗಿ ವೈದ್ಯಕೀಯ ಪರೀಕ್ಷೆಗೆ ಹಾಜರಾದೆನು. ಇದಾದ ಮೇಲೆ ಜುಲೈ ಮೊದಲ ವಾರದಲ್ಲಿ ನನಗ ಟೆಲಿಫೋನ್ ಆಪರೇಟರ್ ಎಂದು ಗುಲ್ಬರ್ಗಾ ಟೆಲಿಗ್ರಾಫ್ ಎಂಜಿನಿಯರಿಂಗ್ ವಿಭಾಗದಲ್ಲಿ ನನಗೆ ನೇಮಕಾತಿ ಆದೇಶ ಬಂತು. ಅದರ ಪ್ರಕಾರ ನಾನು ಜುಲೈ ೨೬, ೧೯೭೧ರಿಂದ ಬೆಂಗಳೂರು ನಗರದ ಹಲಸೂರುನಲ್ಲಿದ್ದ ಸರ್ಕಲ್ ಟೆಲಿಕಾಂ ಟ್ರೈನಿಂಗ್
ಸೆಂಟರ್‌ನಲ್ಲಿ ಮೂರು ತಿಂಗಳ ಟೆಲಿಫೋನ್ ಆಪರೇಟರ್ ತರಬೇತಿ ಪಡೆಯಬೇಕಿತ್ತು. ಈ ಮೂರು ತಿಂಗಳ ತರಬೇತಿ ಅವಧಿಯಲ್ಲಿ ತಿಂಗಳಿಗೆ ೮೦ ರು. ಸ್ಟೈಪಂಡ್ ದೊರೆಯುವುದು ಮತ್ತು ತರಬೇತಿ ಮುಗಿದ ಮೇಲೆ ನೇಮಕಾತಿ ಹೊಂದಿ ಪ್ರತಿ ತಿಂಗಳು ೨೩೩ ರುಪಾಯಿ (ಮೂಲ ವೇತನ ೧೧೦ ರುಪಾಯಿ, ತುಟ್ಟಿಭತ್ಯೆ ೯೮ ರುಪಾಯಿ, ಮಧ್ಯಂತರ ಪರಿಹಾರ ೨೫ ರುಪಾಯಿ) ಸಂಬಳ ದೊರೆಯುವುದು ಎಂದು ತಿಳಿಸಿದರು.

ನೇಮಕಾತಿ ಆದೇಶ ಬಂದ ನಂತರ ಟೆಲಿಫೋನ್ ಆಪರೇಟರ್ ಆಗಿ ಕೇಂದ್ರ ಸರಕಾರದ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಕೆಲಸಕ್ಕೆ ಸೇರಲು ಸಿದ್ಧತೆ ನಡೆಸಿದೆನು.