Sunday, 27th October 2024

ವಿಶೇಷಚೇತನರು ಉದ್ಯಮಿಗಳಾಗಿ ಬೆಳೆದು ನಿಲ್ಲಲಿ: ಪ್ರಭಾರ ಕುಲಪತಿ ಕೇಶವ

ತುಮಕೂರು: ವಿಶೇಷಚೇತನರು ಸಾಮಾನ್ಯ ನಾಗರಿಕರಿಗಿಂತಲೂ ಹೆಚ್ಚು ಕೆಲಸವನ್ನು ಕೆಲವು ಕ್ಷೇತ್ರಗಳಲ್ಲಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಯಾವುದೇ ಆತಂಕವಿಲ್ಲದೆ ಉತ್ಪಾದನಾ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ವಿಕಲಚೇತನರು ಉದ್ಯಮಿ ಗಳಾಗಿ ಇತರರಿಗೆ ಉದ್ಯೋಗ ನೀಡುವಂತಾಗಲಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ.ಕೇಶವ ಆಶಯ ವ್ಯಕ್ತಪಡಿಸಿದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯು ಬಾಕ್ಲೇನ್ ಸಹಕಾರದೊಂದಿಗೆ ಯುವ ವಿಕಲ ಚೇತನರಿಗಾಗಿ ತುಮಕೂರು ವಿಭಾಗ ಮಟ್ಟದ ಉದ್ಯೋಗ ಮೇಳವನ್ನು ತುಮಕೂರು ವಿವಿಯ ಶಿವಕುಮಾರ ಮಹಾಸ್ವಾಮಿ ಸಭಾಂಗಣದ ಆವರಣದಲ್ಲಿ ಏರ್ಪಡಿಸ ಲಾಗಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಸಮರ್ಥನಂ ಸಂಸ್ಥೆಯು ಯುವ ವಿಶೇಷಚೇತನರ ಸಬಲೀಕರಣ ಮಾಡುವ ಉದ್ದೇಶದಿಂದ ಬಾಕ್ಲೇನ್ ಸಹಕಾರದೊಂದಿಗೆ ದೇಶಾದ್ಯಂತ ಸರಣಿ ಉದ್ಯೋಗ ಮೇಳ ವನ್ನು ಆಯೋಜನೆ ಮಾಡುತ್ತಿದ್ದೆ. ಸಮರ್ಥನಂ ಅಂಗವಿಕಲ ಸಂಸ್ಥೆಯು 1997 ರಿಂದ ಭಾರತದಲ್ಲಿನ ದೃಷ್ಟಿ ಹೀನರ, ಅಂಗ ವಿಕಲರ ಮತ್ತು ಅವಕಾಶ ವಂಚಿತರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ, ಪೌಷ್ಠಿಕ ಆಹಾರ, ವೃತ್ತಿಪರ ತರಬೇತಿ ಮತ್ತು ಪುನರ್ವಸತೀಕರಣದ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿಶೇಷ ಚೇತನರ ವೈಯಕ್ತಿಕ ಸ್ವಾವಲಂಬನೆಯನ್ನು ಸಾಧಿಸಿ. ದೊಡ್ಡ ದೊಡ್ಡ ಉದ್ಯಮಿಗಳಾಗಬೇಕು ಎಂಬ ಉದ್ದೇಶ ಹೊಂದಿದೆ ಎಂದು ಹೇಳಿದರು. ಈ ಉದ್ಯೋಗ ಮೇಳದಲ್ಲಿ ಖಾಸಗಿ ವಲಯದ ಹಲವಾರು ಸಂಸ್ಥೆಗಳು ಭಾಗ ವಹಿಸಿದ್ದವು. ಈ ಮೇಳದಲ್ಲಿ 200ಕ್ಕೂ ಅಧಿಕ ವಿಕಲಚೇತರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಪರಶುರಾಮ್ ಕೆ.ಜಿ, ಹಣಕಾಸು ಅಧಿಕಾರಿ ಪರಮ ಶಿವಯ್ಯ, ಸಮರ್ಥನಂ ಸಂಸ್ಥೆಯ ಕೆ.ಸತೀಶ್, ಮಲ್ಲಿಕಾರ್ಜುನ ಗೌಡ, ಸುಭಾಶ್ ಚಂದ್ರ, ಶಿವರಾಜು, ವೀರಭದ್ರಪಾಟೇಲ್, ಸತೀಶ್ ನಾಯರ್, ಜೆಸ್ಟೀನ್, ಜವರೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.