ಕುಂಚಿಟಿಗ ಸಮುದಾಯದ ಸುವರ್ಣ ಮಹೋತ್ಸವ
ತುಮಕೂರು: ಕೇಂದ್ರದ ಒಬಿಸಿ ಪಟ್ಟಿಗೆ ಕುಂಚಟಿಗ ಸಮುದಾಯವನ್ನು ಸೇರಿಸಬೇಕೆಂಬುದು ನಮ್ಮ ಬಹುದಿನಗಳ ಬೇಡಿಕೆ ಯಾಗಿದೆ. ಒಕ್ಕಲಿಗರಿಗೆ ಸಿಗುತ್ತಿರುವ ಈ ಸವಲತ್ತು ಕುಂಚಿಟಿಗರಿಗೆ ಮುಂದಿನ ದಿನಗಳಲ್ಲಿ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ನಗರದ ಗಾಜಿನಮನೆಯಲ್ಲಿ ತುಮಕೂರು ಜಿಲ್ಲಾ ಕುಂಚಟಿಗ ಒಕ್ಕಲಿಗ ವಿದ್ಯಾಭಿವೃದ್ದಿ ಸಂಘ ವತಿಯಿಂದ ಆಯೋಜಿಸಿದ್ದ ಸಂಘದ ಸುವರ್ಣ ಮಹೋತ್ಸವದ ಬೃಹೃತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮೊದಲು ಒಕ್ಕಲಿಗ ಎಂಬ ಪದವನ್ನು ತಮ್ಮ ಜಾತಿ ಪಟ್ಟಿಯಲ್ಲಿ ನಮೂದಿಸಬೇಕು. ಒಕ್ಕಲಿಗ ಎಂಬುದು ಒಂದು ಹಣ್ಣಾದರೆ, ಅದರ ಮೇಲ್ಪದರವೇ ಉಪಪಂಗಡಗಳು, ಹಾಗಾಗಿ ವಿಂಗಡಿಸುವ ಪ್ರಯತ್ನ ಸಲ್ಲದು ಎಂದರು.
ಒಕ್ಕಲಿಗ ಸಮುದಾಯ ಒಂದು ಸಾಮ್ರಾಜ್ಯ ಕಟ್ಟಿ ಆಡಳಿತ ನಡೆಸಿದ ಸಮುದಾಯ. ಆಡಳಿತ ಅವರಿಗೆ ಕರಗತ. ನಾವು ಸಮುದಾಯ ಗಳನ್ನು ಒಡೆಯುವ ಕೆಲಸ ಮಾಡುತ್ತಿಲ್ಲ. ಒಗ್ಗೂಡಿಸುವ ಕೆಲಸ ಮಾಡಲು ಬಂದವರು.ಒಬಿಸಿ ಪಟ್ಟಿಗೆ ಸೇರಬೇಕಾದರೆ ನಮ್ಮ ಶಕ್ತಿ ಪ್ರದರ್ಶನ ಅನಿವಾರ್ಯ.ಅದು ವಿಧಾನಸಭೆಯ ಒಳಗೆ ಮತ್ತು ಹೊರಗೆ ಆಗಬೇಕಿದೆ ಎಂದು ನುಡಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ದೇಶದ ಅಭಿವೃದ್ದಿಯಲ್ಲಿ ಒಕ್ಕಲಿಗ ಸಮುದಾಯದ ಪಾತ್ರ ಮಹತ್ವ ದ್ದಾಗಿದೆ. ಐದು ನೂರು ವರ್ಷಗಳ ಹಿಂದೆಯೇ ಸ್ಮಾರ್ಟ್ಸಿಟಿಯ ಪರಿಕಲ್ಪನೆ ಕೊಟ್ಟವರು ನಾಡುಪ್ರಭು ಕೆಂಪೇಗೌಡರು. ಹಾಗಾಗಿ ನಾವು ಒಕ್ಕಲಿಗರು ಎಂದು ಹೇಳಿಕೊಳ್ಳಲು ಹಿಂಜರಿಕೆ ಬೇಡ,ಎಲ್ಲರೂ ಒಗ್ಗೂಡಿ ನಮ್ಮ ಶಕ್ತಿ ಏನು ಎಂದು ದೇಶಕ್ಕೆ ಪರಿಚಯಿಸ ಬೇಕಿದೆ ಎಂದರು.
ಕುಂಚಶ್ರೀ ಪ್ಯಾಲೇಸ್ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕುಂಚಟಿಗ ಒಕ್ಕಲಿಗರನ್ನು ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದನ್ನು ಕೇಂದ್ರ ಒಪ್ಪಿಲ್ಲ.ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ, ರಾಜ್ಯ ಸರಕಾರಗಳಿಗೆ ಓಬಿಸಿ ಪಟ್ಟಿಗೆ ಸೇರಿಸುವ ಎಲ್ಲ ಅಧಿಕಾರ ಇದೆ.ಹಾಗಾಗಿ ರಾಜ್ಯದಲ್ಲಿಯೇ ಕುಂಚಟಿಗರನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿಸಲು ಎಲ್ಲಾ ರೀತಿಯ ಕ್ರಮ ವಹಿಸಬಹುದಾಗಿದೆ. ಮಳೆ ನೀರನ್ನು ನಂಬಿ ಬದುಕುತ್ತಿರುವ ರೈತರ ಬದುಕು ಕಂಡಿದ್ದೇನೆ, ಭದ್ರ ಮೇಲ್ದಂಡೆ ಯೋಜನೆ ನೆನೆಗುಂದಿಗೆ ಬಿದ್ದಿತ್ತು, ಅದಕ್ಕೆ ಮತ್ತೆ ನಾನು ಚಾಲನೆ ನೀಡಿದೆ, ಇದರಿಂದ ಚಿತ್ರದುರ್ಗ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗೆ ಅನುಕೂಲವಾಗಲಿದೆ ಎಂದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ,ಯಾವುದೇ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಶೈಕ್ಷಣಿಕ ಜಾಗೃತಿ ಅಗತ್ಯ.ಈ ನಿಟ್ಟಿನಲ್ಲಿ ಕಳೆದ ಐವತ್ತು ವರ್ಷಗಳ ಹಿಂದೆಯೇ ಬಿ.ರಂಗಣ್ಣನವರಂತಹ ಹಿರಿಯರ ದೂರದೃಷ್ಟಿಯಿಂದ ವಿದ್ಯಾರ್ಥಿ ನಿಲಯಗಳು ಪ್ರಾರಂಭಗೊ0ಡು, ಶೈಕ್ಷಣಿಕ ಪ್ರಗತಿಗೆ ಮುನ್ನುಡಿ ಬರೆದಿದೆ.ಇಡೀ ಪ್ರಪಂಚವೇ ಭಾರತವನ್ನು ವಿಶ್ವಗುರು ಎಂದು ಪರಿಗಣಿಸಿರುವ ಸಂದರ್ಭದಲ್ಲಿ ಯುವಜನತೆ ವಿದ್ಯಾವಂತರಾಗಿ ರಾಷ್ಟçದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕೆಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಕುಂಚಟಿಗ ಒಕ್ಕಲಿಗ ಸಮುದಾಯ ಕೇಂದ್ರ ಒಬಿಸಿ ಜಾತಿಪಟ್ಟಿಯಲ್ಲಿ ಇಲ್ಲದ ಕಾರಣ. ಇಂದು ನಮ್ಮ ಮಕ್ಕಳು ಕೇಂದ್ರ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಒಕ್ಕಲಿಗ ಸಮು ದಾಯದ ಆರು ಗುಂಪುಗಳಲ್ಲಿ ಐದು ಗುಂಪುಗಳು ಓಬಿಸಿ ಪಟ್ಟಿಯಲ್ಲಿದ್ದು, ಕುಂಚಟಿಗ ಗುಂಪನ್ನು ಹೊರಗಿಡಲಾಗಿದೆ. ಸಮಾಜದ ಸ್ವಾಮೀಜಿಗಳು, ರಾಜಕೀಯ ಮುಖಂಡರುಗಳು ಈಗಾಗಲೇ ಕೇಂದ್ರದಲ್ಲಿರುವ ರಾಜ್ಯದ ಶಿಫಾರಸ್ಸನ್ನು ಅಂಗೀಕರಿಸಲ ಒತ್ತಡ ಹಾಕಬೇಕೆಂದು ಮನವಿ ಮಾಡಿದರು.
ಕುಂಚಸಿರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, 75 ವರ್ಷಗಳ ಆಡಳಿತದಲ್ಲಿ ಮೀಸಲಾತಿ ಗೊಂದಲಗಳು ಇವೆ. ಆರ್ಥಿಕ,ಸಾಮಾಜಿಕ, ರಾಜಕೀಯ ಮೀಸಲಾತಿಯಿಂದ ಅನೇಕ ಸಮುದಾಯಗಳು ವಂಚಿತ ವಾಗಿವೆ. ಸ್ಪಷ್ಟ ಆದೇಶವನ್ನು ಹೊರಡಿಸಿಲ್ಲ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರಕಾರ ಇದ್ದರು, ಬದಲಾಗಲಿಲ್ಲ, ರಾಜ್ಯದಲ್ಲಿ ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಪಟ್ಟನಾಯಕನಹಳ್ಳಿ ಡಾ.ಶ್ರೀಶ್ರೀನಂಜಾವಧೂತ ಸ್ವಾಮೀಜಿ ಮಾತನಾಡಿ,ಕುಂಚಿಟಿಗ ಒಕ್ಕಲಿಗ ಸಮುದಾಯ ಕೇಂದ್ರ ಓಬಿಸಿ ಜಾತಿ ಪಟ್ಟಿಯಲ್ಲಿ ಇಲ್ಲದಿರುವುದು ನಮ್ಮ ಸ್ವಯಂ ಕೃತ ಅಪರಾಧ.ನಾವೆಲ್ಲರೂ ಹಿಂದು ಕುಂಚಟಿಗ ಎಂದು ನಮ್ಮ ಶಾಲಾ ದಾಖಲಾತಿಗಳಲ್ಲಿ ಬರೆಸದೆ ಒಕ್ಕಲಿಗ ಎಂದು ಬರೆಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದರು.
ಎಂ.ವಿ.ವೀರಭದ್ರಯ್ಯ,ಸಿ.ಎ.ರಾಜೇಶಗೌ ಡ,ಚಿದಾನಂದ ಗೌಡ ಅವರುಗಳು ಸಮುದಾಯದ ಬೆಳವಣಿಗೆ ಹಾಗೂ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಆಗಿರುವ ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ ಪ್ರಾಸ್ತಾಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಜಿ.ಪಂ ಬಳಿ ಇರುವ ಕುಂಚಟಿಗ ಭವನ, ಕುಂಚಶ್ರೀ ಪಾಲ್ಯೇಸ್‌ನ ಉದ್ಘಾಟನೆ ನಂತರ, ಸಂಘ ಸಂಸ್ಥಾಪ ಕರಾದ ಬಿ.ರಂಗಣ್ಣ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಟ್ಟು, ವಿವಿದ ಕಲಾ ತಂಡಗಳ ಪ್ರದರ್ಶನದೊಂದಿಗೆ ಗಾಜಿನಮನೆ ಯವರೆಗೆ ಮೆರವಣಿಗೆಯಲ್ಲಿ ತರಲಾಯಿತು.
ವೇದಿಕೆಯಲ್ಲಿ ಶಾಸಕರಾದ ಜಿ.ಬಿ.ಜೋತಿಗಣೇಶ್,ರೇಷ್ಮೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಸ್.ಆರ್.ಗೌಡ,ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್,ಮಾಜಿ ಸಚಿವ ಎಸ್.ಶಿವಣ್ಣ,ಸಿ.ಚಿಕ್ಕಣ್ಣ,ಪ್ರೊ.ಕೆ .ಸಿ.ವೀರಣ್ಣ,ಕೆ.ವಿ.ನಾಗಪ್ಪ,ಕುಂಚಟಿ ಗ ಒಕ್ಕಲಿಗರ ವಿದ್ಯಾಭಿ ವೃದ್ದಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು, ಉಪಾಧ್ಯಕ್ಷ ವೈ.ಆರ್.ವೇಣುಗೋಪಾಲ್,ಕಾರ್ಯದರ್ಶಿ ಎಂ.ರಾಜಕುಮಾರ್, ಮಾಜಿ ಅಧ್ಯಕ್ಷ ದೊಡ್ಡಲಿಂಗಪ್ಪ, ಮುರುಳೀಧರ ಹಾಲಪ್ಪ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಇದೇ ವೇಳೆ ಪ್ರಸಕ್ತ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಶಿರಾ ತಾಲೂಕಿನ ಕಲ್ಪಶ್ರೀ ಮತ್ತು ಅರುಣ ಅವರುಗಳನ್ನು ಅಭಿನಂದಿಸಲಾಯಿತು.