Friday, 20th September 2024

ಉಪಚುನಾವಣೆ ಮತ ಎಣಿಕೆ: ತ್ರಿಪುರಾ ಮುಖ್ಯಮಂತ್ರಿ ಭವಿಷ್ಯ ನಿರ್ಧಾರ ಇಂದು

ನವದೆಹಲಿ: ದೆಹಲಿ ಮತ್ತು ಐದು ರಾಜ್ಯಗಳಲ್ಲಿ ಜೂ.23 ರಂದು ಉಪಚುನಾವಣೆ ನಡೆದ ಮೂರು ಲೋಕಸಭೆ ಮತ್ತು ಏಳು ವಿಧಾನಸಭಾ ಸ್ಥಾನಗಳ ಮತಗಳನ್ನು ಎಣಿಕೆ ಭಾನುವಾರ ನಡೆಯುತ್ತಿದೆ. ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ವಿಧಾನಸಭಾ ಉಪಚುನಾವಣೆಯ ಪ್ರಮುಖ ಅಭ್ಯರ್ಥಿ.

ತ್ರಿಪುರಾ ರಾಜ್ಯದ ಅಗರ್ತಲಾ, ಜುಬರಾಜನಗರ, ಸುರ್ಮಾ ಮತ್ತು ಟೌನ್ ಬರ್ಡೋವಾಲಿ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆ ಯಿತು. ರಾಜ್ಯಸಭಾ ಸಂಸದ ಮಾಣಿಕಾ ಸಹಾ ಮುಖ್ಯಮಂತ್ರಿಯಾಗಿ ಮುಂದು ವರಿಯಲು ಈ ಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.

ದೆಹಲಿಯ ರಾಜಿಂದರ್ ನಗರ, ಜಾರ್ಖಂಡ್‌ನ ರಾಂಚಿ ಜಿಲ್ಲೆಯ ಮಂದರ್ ಮತ್ತು ಆಂಧ್ರಪ್ರದೇಶದ ಆತ್ಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿದೆ. ಉತ್ತರ ಪ್ರದೇಶದ ರಾಂಪುರ ಮತ್ತು ಅಜಂಗಢ್ ಮತ್ತು ಪಂಜಾಬ್‌ನ ಸಂಗ್ರೂರ್ ಲೋಕ ಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆದಿವೆ.

ರಾಂಪುರದಲ್ಲಿ ಬಿಜೆಪಿ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಘನಶ್ಯಾಮ್ ಸಿಂಗ್ ಲೋಧಿ ಅವರನ್ನು ಕಣಕ್ಕಿಳಿಸಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಅಸೀಂ ರಾಜಾ ಸ್ಪರ್ಧಿ ಸಿದ್ದು, ಮಾಯಾವತಿಯವರ ಬಹುಜನ ಸಮಾಜ ಪಕ್ಷವು ರಾಂಪುರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.

ಪಂಜಾಬ್‌ನ ಸಂಗ್ರೂರ್ ಲೋಕಸಭಾ ಕ್ಷೇತ್ರದಲ್ಲಿ, ಆಪ್ ಪಕ್ಷದ ಸಂಗ್ರೂರ್ ಜಿಲ್ಲಾ ಉಸ್ತುವಾರಿ ಗುರ್ಮೈಲ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ, ಕಾಂಗ್ರೆಸ್ ಧುರಿ ಶಾಸಕ ದಲ್ವಿರ್ ಸಿಂಗ್ ಗೋಲ್ಡಿ, 4 ತಿಂಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾದ ಬರ್ನಾಲಾ ಮಾಜಿ ಶಾಸಕ ಕೇವಲ್ ಧಿಲ್ಲೋನ್ ಸ್ಪರ್ಧೆ ಮಾಡಿದ್ದಾರೆ.

ಬಲ್ವಂತ್ ಸಿಂಗ್ ರಾಜೋನಾ ಅವರ ಸಹೋದರಿ ಕಮಲದೀಪ್ ಕೌರ್ ಅವರನ್ನು ಶಿರೋಮಣಿ ಅಕಾಲಿ ದಳದಿಂದ ಕಣಕ್ಕಿಳಿಸ ಲಾಗಿದೆ. ಅಕಾಲಿಯ ಅಮೃತಸರ ಮುಖ್ಯಸ್ಥ ಸಿಮ್ರಂಜಿತ್ ಸಿಂಗ್ ಮಾನ್ ಕೂಡ ಸ್ಪರ್ಧೆಯಲ್ಲಿದ್ದಾರೆ.

ಶಾಸಕ ಬಂಧು ಟಿರ್ಕಿ ಅವರನ್ನು ಅನರ್ಹಗೊಳಿಸಿದ ನಂತರ ಜಾರ್ಖಂಡ್‌ ಮಂದರ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಬೆಂಬಲಿತ ಸ್ವತಂತ್ರ ಅಭ್ಯರ್ಥಿ ದೇವ್ ಕುಮಾರ್ ಧನ್ ಕೂಡ ಜಾರ್ಖಂಡ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ದೆಹಲಿಯ ರಾಜಿಂದರ್ ನಗರದಲ್ಲಿ ಎಎಪಿಯ ದುರ್ಗೇಶ್ ಪಾಠಕ್, ಕೌನ್ಸಿಲರ್ ಆಗಿದ್ದ ಬಿಜೆಪಿಯ ರಾಜೇಶ್ ಭಾಟಿಯಾ ನಡುವೆ ಸಮಬಲ ಹೋರಾಟ ಏರ್ಪಡುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರೇಮ್ ಲತಾ ಕಣಕ್ಕಿಳಿದಿದ್ದಾರೆ.