Monday, 25th November 2024

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು: ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ : ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ಕುಪ್ಪೂರು ಗ್ರಾ.ಪಂ ವ್ಯಾಪ್ತಿಯ ಗುಡ್ಡದಹಟ್ಟಿ ಗ್ರಾಮದಲ್ಲಿ ಸರ್ವ ಶಿಕ್ಷಣ ಯೋಜನೆಯಡಿ ೧೧ ಲಕ್ಷ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಬೆಳೆಯುತ್ತಿರುವ ಭಾರತದಲ್ಲಿ ವಿವಿಧ ರೀತಿಯ ಉದ್ಯೋಗಾವಕಾಶಗಳು ವಿಸ್ತಾರಗೊಳ್ಳುತ್ತಿದ್ದು, ಅದಕ್ಕೆ ಪೂರಕ ವಾಗಿ ಅಭಿವೃದ್ದಿಯ ಬೆಳವಣಿಗೆಗೆ ಶಿಕ್ಷಣ ಅಗತ್ಯ ವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಲು ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿದೆ. ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ನಿರಾಕರಿಸದಂತೆ ಬೆಳಸಬೇಕಾಗಿದ್ದು ಅವರು ಮರಣಿಸಿದ ನಂತರ ಉತ್ತಮವಾಗಿ ಬದುಕಲು ಶಿಕ್ಷಣದ ಅಗತ್ಯವಿದೆ. ಗ್ರಾಮೀಣ ಭಾಗದಿಂದ ಬರುವ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬುದು ನಮ್ಮ ಇಚ್ಚೆಯಾಗಿದ್ದು ಪಟ್ಟಣದ ಮಕ್ಕಳೊಂದಿಗೆ ಸ್ಪರ್ಧಿಸಲು ನಮ್ಮ ಮಕ್ಕಳಿಗೆ ಸ್ವಾಭಿಮಾನದ ಶಿಕ್ಷಣ ಅಗತ್ಯವಾಗಿದೆ. ಪಟ್ಟಣದವರು ಕೇವಲ ತಮ್ಮ ಬಗ್ಗೆ ಯೋಚಿಸಿದರೆ ಗ್ರಾಮೀಣ ಭಾಗದವರು ಇತರರ ಬಗ್ಗೆ ಚಿಂತಿಸುತ್ತಾರೆ. ಎಲ್ಲರೂ ಸಮಾಜದ ಬಗ್ಗೆ ಅರಿವು ಇಟ್ಟುಕೊಂಡಾಗ ಅಭಿವೃದ್ದಿ ಸಾಧ್ಯ ಎಂದರು.

ಹಿಂದುಳಿದ ಸಮುದಾಯದ ಮೇಲೆ ಜೆಸಿಎಂಗೆ ಅಪಾರ ಕಾಳಜಿ
ಸಚಿವರು ಅಸಹಜವಾಗಿ ವರ್ತಿಸುತ್ತಾರೆ ಎಂಬ ಭಾವನೆ ಜನ ಸಾಮಾನ್ಯರಲ್ಲಿ ಇದ್ದು ಅದೇ ಭಾವನೆಯನ್ನು ಹಿಂದೆ ಆಡಳಿತ ನಡೆಸಿದ ನಾಯಕರು ಬೆಳಸುತ್ತಾ ಬಂದಿದ್ದಾರೆ. ಪ್ರಜೆಗಳ ಅಭಿವೃದ್ದಿ ಬಗ್ಗೆ ಪ್ರಜೆಗಳ ಜವಾಬ್ದಾರಿ ತಿಳಿಸುವ ಬಗ್ಗೆ ನಮ್ಮ ನಾಯಕ ರಿಗೆ ಅರಿವಿದ್ದು ಹಿಂದುಳಿದ ಗೊಲ್ಲ ಸಮುದಾಯದ ಮೇಲೆ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ. ತಾಲ್ಲೂಕಿನ ಎಲ್ಲಾ ಗೊಲ್ಲರ ಹಟ್ಟಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ವಹಿಸಿದ್ದು ಮತದಾನದ ಸಂದರ್ಭದಲ್ಲಿ ಸಚಿವರಿಗೆ ಮತ ಹಾಕುವ ಮೂಲಕ ಅವರನ್ನು ಆಶೀರ್ವದಿಸಬೇಕೆಂದು ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಮನವಿ ಮಾಡಿದರು.

ಸಮಾರಂಭದಲ್ಲಿ ಗ್ರಾಮದ ಯುವಕ ಕುಮಾರಸ್ವಾಮಿ ತನ್ನ ಅನಿಸಿಕೆ ವ್ಯಕ್ತಪಡಿಸಿದರು. ಕುಪ್ಪೂರು ಗ್ರಾ.ಪಂ ಅಧ್ಯಕ್ಷ ದೇವರಾಜ ಅರಸ್, ತಾ.ಬಿಜೆಪಿ ಅಧ್ಯಕ್ಷ ಕೇಶವಮೂರ್ತಿ, ಯುವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮನಮೋಹನ್, ಲೋಕೊಪಯೋಗಿ ಎಇಇ ಚಂದ್ರಶೇಖರ್, ಹಾಗು ಇತರರಿದ್ದರು.