Saturday, 23rd November 2024

ಎನ್’ಡಿಎ ಅಭ್ಯರ್ಥಿ ಅಮರೀಂದರ್ ಸಿಂಗ್ ಉಪರಾಷ್ಟ್ರಪತಿ ಅಭ್ಯರ್ಥಿ ?

ನವದೆಹಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಜುಲೈ ತಿಂಗಳಲ್ಲಿ ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದ್ದಿರುವುದಾಗಿ ಊಹಾಪೋಹ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ಕ್ಯಾ.ಅಮರೀಂದರ್ ಸಿಂಗ್ ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿವೆ.

ಅಮರೀಂದರ್ ಸಿಂಗ್ ಅವರು ಲಂಡನ್ ನಲ್ಲಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕೆಲವು ವಾರಗಳ ನಂತರ ಕ್ಯಾಪ್ಟನ್ ಸಿಂಗ್ ಲಂಡನ್ ನಿಂದ ವಾಪಸ್ ಆದ ನಂತರ ಅವರ ಪಂಜಾಬ್ ಲೋಕ್ ಕಾಂಗ್ರೆಸ್ ಪಕ್ಷ ಬಿಜೆಪಿ ಜತೆ ವಿಲೀನಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ.

ಒಂದು ವೇಳೆ ಅಮರೀಂದರ್ ಸಿಂಗ್ ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಎಂದು ಘೋಷಿಸಿದಲ್ಲಿ, ಸಿಂಗ್ ಪತ್ನಿ ಪ್ರಣೀತ್ ಕೌರ್ ನೇತೃತ್ವದಲ್ಲಿ ಪಕ್ಷದ ವಿಲೀನ ಪ್ರಕ್ರಿಯೆ ನಡೆಯಲಿದೆ. ಪಟಿಯಾಲಾ ಸಂಸದ ರಾಗಿರುವ ಕೌರ್ ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.

ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಉಪರಾಷ್ಟ್ರಪತಿ ಚುನಾವಣೆ ಕುರಿತು ಜು.5ರಂದು ಅಧಿಕೃತವಾಗಿ ಪ್ರಕಟಣೆ ಹೊರಡಿಸಲಿದೆ. ಜು.19ರಂದು ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜು.20ರಂದು ನಾಮಪತ್ರ ಪರಿಶೀಲನೆ, ಜು.22 ನಾಮಪತ್ರ ಹಿಂಪಡೆಯಲು ಕೊನೆಯ ದಿನ.

ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ಕ್ಕೆ ಮುಕ್ತಾಯಗೊಳ್ಳಲಿದೆ.