Wednesday, 11th December 2024

ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜು, ಇಎಸ್ಐ ಆಸ್ಪತ್ರೆಗಳಲ್ಲಿ ಕರೋನಾ ಲ್ಯಾಬ್: ಸುರೇಶ್ ಕುಮಾರ್

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಮುಂದಿನ 30 ದಿನದೊಳಗೆ ರಾಜ್ಯದ ಎಲ್ಲ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಎರಡು ಇಎಸ್ಐ ಆಸ್ಪತ್ರೆಗಳಲ್ಲಿ ಕರೋನಾ ಲ್ಯಾಬ್ ತೆರೆಯಲು ಸರಕಾರ ಆದೇಶ ನೀಡಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಕೊವಿಡ್-19 ಕುರಿತ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಅವರು, ಮೆಡಿಕಲ್ ಕಾಲೇಜುಗಳು ಹಾಗೂ ಇ‌ಎಸ್ಐಸಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಕರೋನಾ ಪರೀಕ್ಷಾರ್ಥವಾದ ಆರ್ ಟಿಪಿಸಿಆರ್ ಲ್ಯಾಬ್ ಗಳನ್ನು ಪ್ರಾರಂಭಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು 651 ಕೊವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ 27 ಜನ ಸಾವನ್ನಪ್ಪಿದ್ದಾರೆ. 321 ಜನ ಗುಣಮುಖರಾಗಿ ಹಿಂತಿರುಗಿದ್ದಾರೆ. 300 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆ. 3 ಜನರನ್ನು ತೀವ್ರ ನಿಗಾ ಘಟಕಗಳಲ್ಲಿರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
 ರಾಜ್ಯಾದ್ಯಂತ ಒಟ್ಟು 25,684 ವ್ಯಕ್ತಿಗಳನ್ನು ನಿಗಾವಣೆಯಲ್ಲಿ ಇಡಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಪರೀಕ್ಷಿಸಲಾಗಿರುವ 79,193 ಮಾದರಿಗಳ ಪೈಕಿ 651 ಮಾದರಿಗಳು ಖಚಿತಗೊಂಡಿವೆ. ಸೋಮವಾರ 4,295 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದರು.
ಕರೋನಾ ಪರಿಹಾರ‌ ಕಾರ್ಯದಲ್ಲಿ ತೊಡಗಿಕೊಂಡಿರುವ ಆಶಾ ಕಾರ್ಯಕರ್ತೆಯರು, ಪೊಲೀಸ್, ಪೌರಕಾರ್ಮಿಕರು ಸೇರಿದಂತೆ ಹಲವು ನೌಕರರು ಮೃತಪಟ್ಟಲ್ಲಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮಾರ್ಗಸೂಚಿಗಳಂತೆ ಅವರ ಕುಟುಂಬಕ್ಕೆ 30 ಲಕ್ಷ ರು. ಪರಿಹಾರ ನೀಡಲು ಸರಕಾರ ಅಧಿಸೂಚನೆ ಹೊರಡಿಸಿದೆ ಎಂದು ಹೇಳಿದರು.
ವಲಸೆ ಕಾರ್ಮಿಕರಿಗೆ ಉಚಿತ ಬಸ್ ಪ್ರಯಾಣ ಸೌಕರ್ಯವನ್ನು ಮುಂದಿನ ಎರಡು ದಿನಗಳ ಅವಧಿಗೆ ಸರ್ಕಾರವು ವಿಸ್ತರಿಸಿದೆ. ಈಗಾಗಲೇ 951 ಬಸ್ ಗಳಲ್ಲಿ 30 ಸಾವಿರ ಜನರು ತಮ್ಮ‌ಊರುಗಳಿಗೆ ಪ್ರಯಾಣಿಸಿದ್ದಾರೆ. ಇದಕ್ಕಾಗಿ ಬೆಂಗಳೂರಿನ 550 ಬಸ್ ಗಳು ಹಾಗೂ ಇತರೆ ನಗರಗಳಲ್ಲಿ 400 ಬಸ್ ಗಳನ್ನು ಕಾಯ್ದಿರಿಸಿದೆ ಎಂದು ಸಚಿವ‌ರು ತಿಳಿಸಿದರು.