Saturday, 23rd November 2024

ಅಗ್ನಿಪಥ್ ನೇಮಕಾತಿ: ಅರ್ಜಿ ವಿಚಾರಣೆಗೆ ಗ್ರೀನ್ ಸಿಗ್ನಲ್

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ್ ನೇಮಕಾತಿ ಯೋಜನೆ ಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಸೋಮವಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.

ದೇಶಾದ್ಯಂತ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಉಗ್ರ ಪ್ರತಿಭಟನೆಗಳು ನಡೆದಿವೆ.

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಘಟನೆಯೂ ನಡೆದಿದೆ. ಯಾವುದೇ ಕಾರಣಕ್ಕೆ ಯೋಜನೆಯನ್ನು ವಾಪಸ್ ಪಡೆದು ಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರ ಮತ್ತು ಸೇನಾ ಮುಖ್ಯಸ್ಥರು ಸ್ಪಷ್ಟವಾಗಿ ಹೇಳಿದ್ದಾರೆ.

ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಅಂಗಳಕ್ಕೆ ಹಲವರು ಮೊರೆ ಹೋಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೋರ್ಟ್ ಮುಂದಿನ ವಾರ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಹೇಳಿದೆ.

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ದೇಶದ ಮೂರು ಸೇನೆಗಳಿಗೆ ಯೋಧರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ. 17.5 ರಿಂದ 23 ವಯೋಮಾನ ಯುವಕರನ್ನು ಒಪ್ಪಂದದ ಮೇರೆಗೆ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ 6 ತಿಂಗಳು ತರಬೇತಿಯೂ ಸೇರಿರುತ್ತದೆ. ನಾಲ್ಕು ವರ್ಷದ ಸೇವಾವಧಿಯಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ವೇತನದ ಜೊತೆಗೆ ವೈದ್ಯಕೀಯ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾ ಗುತ್ತದೆ.