Friday, 22nd November 2024

ಜೈವಿಕಾಸ್ತ್ರಗಳ ಭೀಕರ ಲೋಕ

ಹಿಂದಿರುಗಿ ನೋಡಿದಾಗ

ನಮಗೆ ಆಗ್ನೇಯಾಸ್ತ್ರ, ವರುಣಾಸ್ತ್ರ, ವಾಯುವ್ಯಾಸ್ತ್ರ, ಬ್ರಹ್ಮಾಸ್ತ್ರಗಳು ಗೊತ್ತು. ಇದು ಯಾವುದು ಜೈವಿಕಾಸ್ತ್ರ? ನಮ್ಮ ಶತ್ರುಗಳನ್ನು ಕೊಲ್ಲಲು ಜೀವಿಗಳನ್ನು ಇಲ್ಲವೇ ಜೀವಿಗಳ ವಿಷವನ್ನು ಒಂದು ಅಸ್ತ್ರವನ್ನಾಗಿ ಪ್ರಯೋಗಿಸುವುದೇ ಜೈವಿಕಾಸ.

ಚೀನೀಯರು ತಮ್ಮ ಪ್ರಯೋಗಾಲಯದಲ್ಲಿ ಕೊರೋನಾ ವೈರಸ್ಸನ್ನು ಒಂದು ಜೈವಿಕಾಸ ರೂಪದಲ್ಲಿ ಸಿದ್ಧಪಡಿಸುತ್ತಿದ್ದರಂತೆ. ಅಕಸ್ಮಾತ್ತಾಗಿ ಅದು ಪ್ರಯೋಗಾಲಯದಿಂದ ಸಾರ್ವಜನಿಕ ವಲಯದೊಳಗೆ ಸೋರಿ, ಇವತ್ತು ಒಂದು ಜಾಗತಿಕ ಪಿಡುಗಾಗಿದೆ ಯಂತೆ ಎಂಬ ಮಾತನ್ನು ಅಂತಾರಾಷ್ಟ್ರೀಯ ವಲಯದಲ್ಲಿ ನಾವು ಕೇಳಿದ್ದೇವೆ. ಕೊರೋನ ವೈರಸ್ ನಿಜವಾಗಿಯೂ ಒಂದು ಜೈವಿಕಾಸವಾಗಿ ಆರಂಭವಾಯಿತೇ ಎನ್ನುವ ಪ್ರಶ್ನೆಗೆ ಇದಮಿತ್ಥಂ ಎಂದು ಉತ್ತರ ಕೊಡುವವರಿಲ್ಲ. ಆದರೆ ಜಗತ್ತಿನ ಹಲವು ದೇಶಗಳ ಪ್ರಯೋ ಗಾಲಯದಲ್ಲಿ ಜೈವಿಕಾಸಗಳು ಸದ್ದಿಲ್ಲದೇ ತಯಾರಾಗುತ್ತಿವೆ ಹಾಗೂ ಕೆಲವು ದೇಶಗಳ ಬಳಿ ಅವುಗಳ ದಾಸ್ತಾನಿದೆ ಎಂಬ ಮಾತನ್ನು ಪೂರ್ಣ ಗಾಳಿ ಮಾತು ಎಂದು ಸಾರಾ ಸಗಟಾಗಿ ತಿರಸ್ಕರಿಸುವ ಹಾಗಿಲ್ಲ.

ಬ್ಯಾಕ್ಟೀರಿಯ, ವೈರಸ್, ಶಿಲೀಂಧ್ರಗಳು, ಕೆಲವು ಕೀಟಗಳು, ಕೆಲವು ಜೈವಿಕ ವಿಷಗಳನ್ನು ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿ, ಅವನ್ನು ಶತ್ರುರಾಷ್ಟ್ರಗಳ ಮೇಲೆ ಪ್ರಯೋಗಿಸಿ, ಅಲ್ಲಿರುವ ಜನರನ್ನು, ಪ್ರಾಣಿಪಶು ಪಕ್ಷಿಗಳನ್ನು ಹಾಗೂ ಸಸ್ಯಸಂಪತ್ತನ್ನು ನಾಶ ಪಡಿಸುವುದೇ ಜೈವಿಕಾಸಗಳ ಹಾಗೂ ಜೈವಿಕ ಯುದ್ಧಗಳ ಸಾರಾಂಶ. ಇಡೀ ಜಗತ್ತು ಕೇವಲ ಮೂರು ಬೆಳೆಗಳನ್ನು ನಂಬಿ ಇಂದು ಬದುಕಿದೆ. ಭತ್ತ, ಗೋಧಿ ಮತ್ತು ಮುಸುಕಿನ ಜೋಳ. ಒಂದು ವೇಳೆ ಜಾಗತಿಕ ಯುದ್ಧವೇನಾದರೂ ನಡೆದು, ಅದರಲ್ಲಿ ಜೈವಿಕಾ ಸ್ತ್ರವು ಪ್ರಯೋಗವಾಗಿ ಈ ಮೂರೂ ಸಸ್ಯಗಳು ನಾಶವಾದರೆ, ಇಡೀ ಜಗತ್ತಿನ ಲ್ಲಿರುವ ಮನುಷ್ಯರು ಉಪವಾಸದಿಂದ ಸಾಯಬೇಕಾಗುತ್ತದೆ ಎನ್ನುವ ವಿಚಾರವನ್ನು ನೆನೆಸಿಕೊಂಡರೆ ಸಾಕು, ಎದೆ ನಡುಗುತ್ತದೆ.

ಜೈವಿಕ ಯುದ್ಧವು ಹೊಸ ಯುದ್ಧ ತಂತ್ರವೇನಲ್ಲ. ಇದು ಪ್ರಾಚೀನವಾದದ್ದೇ. ಜೈವಿಕ ಯುದ್ಧ ನಡೆದ ಬಗ್ಗೆ ಮೊದಲ ದಾಖಲೆ ಗಳು, ಕ್ರಿ.ಪೂ.೧೫೦೦-ಕ್ರಿ.ಪೂ.೧೨೦೦ ನಡುವೆಯ ಕಾಲದ ಮೆಸಪೊಟೋಮಿಯದ ಹಿಟ್ಟೈಟ್ ಭಾಷೆಯ ಬರಗಳಲ್ಲಿದೆ. ಇಂದಿನ ತುರ್ಕಿಯಿಂದ ಸಿರಿಯದವರೆಗಿನ ಪ್ರದೇಶದಲ್ಲಿದ್ದ ಹಿಟ್ಟೈಟರು ಟುಲರೀಮಿಯ (ಫ್ರಾನ್ಸಿಸೆಲ್ಲ ಟುಲರೆನ್ಸಿಸ್ ಎಂಬ ಬ್ಯಾಕ್ಟೀರಿಯ ದಿಂದ ಬರುವ ಸೋಂಕು ರೋಗ) ಪೀಡಿತ ರೋಗಿಗಳನ್ನು ಶತ್ರುರಾಜ್ಯದೊಳಗೆ ಅಟ್ಟಿದರಂತೆ.

ಆಗ ಈ ಟುಲರೀಮಿಯವು ಶತ್ರುರಾಜ್ಯಗಳಲ್ಲಿ ಹರಡಿ ದೊಡ್ಡ ಪಿಡುಗನ್ನು ಉಂಟುಮಾಡಿತಂತೆ. ಅಸ್ಸೀರಿಯನ್ನರು ಎರ್ಗಾಟ್ ಎಂಬ ಧಾನ್ಯಗಳನ್ನು ನಾಶಮಾಡುವ ಹಾಗೂ ಮನುಷ್ಯರಲ್ಲಿ ರೋಗಗಳನ್ನು ಉಂಟುಮಾಡುವ ಶಿಲೀಂಧ್ರವನ್ನು ಶತ್ರುಗಳ ಕುಡಿಯುವ ಜಲತಾಣಗಳಲ್ಲಿ ಬೆರಸಿದರಂತೆ. ಗ್ರೀಕರು ತಮ್ಮ ಬಾಣಗಳಿಗೆ ಹಾಗೂ ಖಡ್ಗಗಳಿಗೆ ಮೃತರ ಶರೀರದ ರಸವನ್ನು ಇಲ್ಲವೇ ಮಲವನ್ನು ಲೇಪಿಸಿ ಅದನ್ನು ಶತ್ರುಗಳ ಮೇಲೆ ಪ್ರಯೋಗಿಸುತ್ತಿದ್ದರಂತೆ. ಬಹುಶಃ ಇವುಗಳಲ್ಲಿ ಧನುರ್ವಾಯುವನ್ನು ಉಂಟು ಮಾಡುವ ಬೀಜಕಗಳು (ಸ್ಪೋರ್ಸ್) ಇದ್ದವು ಎನ್ನಲಾಗಿದೆ. ಇಂದಿಗೂ ಧನುರ್ವಾಯುವಿಗೆ ಚಿಕಿತ್ಸೆಯಿಲ್ಲ. 1346ರಲ್ಲಿ ಮಂಗೋ ಲರು ಕರ್ಫ್ಯೂ ಪ್ರದೇಶದ ಮೇಲೆ ಯುದ್ಧ ರಿದ್ದರು. ಅಲ್ಲಿ ಕ್ರಿಮಿಯ ಎಂಬ ಕೋಟೆಯಿಂದ ಸುತ್ತುವರಿದ ಸುಭದ್ರ ನಗರವಿತ್ತು. ಮಂಗೋಲರು ಪ್ಲೇಗ್ ಬಂದು ಸತ್ತವರ ಶವಗಳನ್ನು ಸಂಗ್ರಹಿಸಿದರು.

ಅವನ್ನು ಬೃಹತ್ ಕವಣೆಯಂತ್ರಗಳಲ್ಲಿ ಇಟ್ಟರು. ಕ್ರಿಮಿಯ ಕೋಟೆಯ ಗೋಡೆಗಳನ್ನು ಕ್ರಮಿಸಿ, ನಗರದ ಒಳಗೆ ಬೀಳುವಂತೆ ಆ ಶವಗಳನ್ನು ಚಿಮ್ಮಿದರು. ಹೀಗೆ ಪಶ್ಚಿಮ ದೇಶಗಳ ಒಳಗೆ ಕಾಲಿಟ್ಟ ಪ್ಲೇಗ್ ಪಿಡುಗು ಕಾಲಿಟ್ಟಿತು ಎನ್ನಲಾಗಿದೆ. ಇದು ಸುಮಾರು ೨೫ ದಶಲಕ್ಷ ಯೋರೋಪಿಯನ್ನರ ಸಾವಿಗೆ ಕಾರಣವಾಗಿ, ಬ್ಲಾಕ್ ಡೆತ್ ಎಂದು ಕುಖ್ಯಾತವಾಯಿತು ಎನ್ನುವ ವಿವರಣೆಯು ದೊರೆ ಯುತ್ತದೆ. 1763. ಫ್ರಾನ್ಸ್ ಮತ್ತು ಅಮೆರಿಕದ ಇಂಡಿಯನ್ನರ ಯುದ್ಧವು ನಡೆಯಿತು.

ಇಂಡಿಯನ್ನರು -ರ್ಟ್ ಪಿಟ್ ಎನ್ನುವ ಕೋಟೆಯನ್ನು ಸುತ್ತುವರಿದರು. ಈ ಕೋಟೆಯ ಕಮಾಂಡರ್, ಹೆನ್ರಿ ಬೋಕೆ ಸಿಡುಬುಗ್ರಸ್ತ ಕಂಬಳಿಗಳನ್ನು ಮಧ್ಯವರ್ತಿಗಳ ಮೂಲಕ ಇಂಡಿಯನ್ನರನ್ನು ತಲುಪುವಂತೆ ನೋಡಿಕೊಂಡನಂತೆ. ಇವನ್ನು ಬಳಸಿದ ಅಮೆರಿಕ ಇಂಡಿಯನ್ನರಲ್ಲಿ ಸಿಡುಬು ಸೋಂಕು ಹರಡಿತು. ಇಂತಹ ಹಲವು ಜೈವಿಕ ತಂತ್ರಗಳ ಮೂಲಕ ರೋಗಗಳನ್ನು ಹರಡಿದ ಹಲವು ಉದಾಹರಣೆಗಳು ದೊರೆಯುತ್ತವೆ.

ಆಂಟನ್‌ವಾನ್ ಲ್ಯೂವೆನ್ ಹಾಕ್ (1632-1723) ಸೂಕ್ಷ್ಮದರ್ಶಕವನ್ನು ಕಂಡುಹಿಡಿದ. ಇದರೊಂದಿಗೆ ಅದೃಶ್ಯಲೋಕದ ಅಗೋಚರ ಜೀವಿಗಳ ಅನಾವರಣವಾಯಿತು. ರಾಬರ್ಟ್ ಕಾಚ್ (1843-1910) ಮತ್ತು ಲೂಯಿ ಪ್ಯಾಶ್ಚರ್ (1822-1895) ಅವರ ಸಂಶೋಧನೆಗಳ ಮೂಲಕ, ನಮ್ಮ ಬರಿಗಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು ಸಸ್ಯಗಳು, ಪ್ರಾಣಿಗಳು ಹಾಗೂ ಮನುಷ್ಯ ರಲ್ಲಿಯೂ ನಾನಾ ಕಾಯಿಲೆಗಳನ್ನು ಉಂಟು ಮಾಡುತ್ತವೆ ಎನ್ನುವ ಆಧುನಿಕ ರೋಗಜನಕ ಸಿದ್ಧಾಂತವನ್ನು (ಮಾಡರ್ನ್ ಜರ್ಮ್ ಥಿಯರಿ) ಮಂಡಿಸಿದರು. ಹಾಗಾಗಿ ರೋಗಜನಕಗಳನ್ನು ಗುರುತಿಸುವ, ಅವನ್ನು ಕ್ರಮಬದ್ಧವಾಗಿ ಬೆಳೆಸುವ ಹಾಗೂ ಶತ್ರುಗಳ ಮೇಲೆ ಪ್ರಯೋಗಿಸುವ ತಂತ್ರಜ್ಞಾನವು ಕ್ರಮಬದ್ಧವಾಗಿ ಅಭಿವೃದ್ಧಿಯಾಯಿತು.

ಆಧುನಿಕ ಜೈವಿಕಾಸಗಳ ನಿರ್ಮಾಣ ಹಾಗೂ ಜೈವಿಕಾಸಗಳ ಪ್ರಯೋಗವು ಮೊದಲ ಬಾರಿಗೆ ವಿಶ್ವದ ಮೊದಲ ಮಹಾಯುದ್ಧದ ಅವಧಿಯಲ್ಲಿ (1914-1918) ನಡೆಯಿತು. ಜರ್ಮನ್ನರು ಆಂಥ್ರಾಕ್ಸ್ ಮತ್ತು ಗ್ಲಾಂಡರ್ಸ್ ಎಂಬ ರೋಗಜನಕಗಳ  ಜೈವಿಕಾಸ ಗಳನ್ನು ನಿರ್ಮಿಸಿದರು. ಆಂಥ್ರಾಕ್ಸ್ ಹಸು, ಮೇಕೆ, ಕುರಿ ಮುಂತಾದ ಗೊರಸು ಪ್ರಾಣಿಗಳಲ್ಲಿ ಮರಣಾಂತಕ ಕಾಯಿಲೆಯನ್ನು ಉಂಟು ಮಾಡಿದರೆ, ಗ್ಲಾಂಡರ್ಸ್ ಕುದುರೆಗಳಲ್ಲಿ ಸೋಂಕನ್ನು ಉಂಟುಮಾಡಿ, ಅವನ್ನು ಕೊಲ್ಲುತ್ತಿದ್ದವು.

ಕೊನೆಗೆ ೧೯೨೫ರಲ್ಲಿ ಜೆನೇವ ಪ್ರೋಟೋಕಾಲ್‌ನ ಅನ್ವಯ, ಯಾವ ದೇಶಗಳೂ ಜೈವಿಕಾಸಗಳನ್ನು ಉತ್ಪಾದಿಸಬಾರದು ಎನ್ನುವ ಒಪ್ಪಂದವು ಅಸ್ತಿತ್ವಕ್ಕೆ ಬಂದಿತು. ವಿಶ್ವದ ಎರಡನೆಯ ಮಹಾಯುದ್ಧದಲ್ಲಿ ವಿನ್‌ಸ್ಟನ್ ಚರ್ಚಿಲ್ ಜೈವಿಕಾಸಗಳ ನಿರ್ಮಾಣಕ್ಕೆ ಆಣತಿಯನ್ನಿತ್ತ. ಸೂಕ್ಷ್ಮಜೀವಿ ವಿಜ್ಞಾನಿ ಪಾಲ್ ಫಿಲ್ಡೆಸ್ ನೇತೃತ್ವದಲ್ಲಿ ಪೋರ್ಟನ್ ಡೌನ್ ಎಂಬ ಸ್ಥಳದಲ್ಲಿ ಟುಲರೀಮಿಯ, ಆಂಥ್ರಾಕ್ಸ್ ಮತ್ತು ಬ್ರುಸೆಲ್ಲೋಸಿಸ್ ಜೈವಿಕಾಸಗಳು ನಿರ್ಮಾಣವಾದವು. ಬ್ರಿಟನ್ನಿನ ನಂತರ ಫ್ರಾನ್ಸ್ ಮತ್ತು ಜಪಾನ್ ದೇಶಗಳು ತಮ್ಮದೇ ಆದ ಜೈವಿಕಾಸಗಳ ನಿರ್ಮಾಣದ ಯೋಜನೆಗಳನ್ನು ಆರಂಭಿಸಿದವು.

ಕೊನೆಗೆ ಅಮೆರಿಕ ಯುದ್ಧದಲ್ಲಿ ಭಾಗಿಯಾಗಬೇಕಾಗಿ ಬಂದಾಗ, ಅದು ಮೇರಿಲ್ಯಾಂಡ್ ಪ್ರಾಂತದ -ರ್ಟ್ ಡೆಟ್ರಿಕ್ ಎಂಬಲ್ಲಿ, ಜಾರ್ಜ್ ಡಬ್ಲ್ಯು ಮೆರ್ಕ್ ನೇತೃತ್ವದಲ್ಲಿ ಜೈವಿಕಾಸಗಳನ್ನು ನಿರ್ಮಿಸುವ ಯೋಜನೆಯನ್ನು ಆರಂಭಿಸಿತು. ಜಪಾನೀಯರ ಬಳಿ
ಅಮೆರಿಕ ಅಥವ ಬ್ರಿಟನ್ ಬಳಿ ಇದ್ದಂಥ ಸೂಕ್ಷ್ಮ ತಂತ್ರಜ್ಞಾನವಿರದಿದ್ದರೂ, ಜೈವಿಕಾಸಗಳ ನಿರ್ಮಾಣಕ್ಕೆ ಮುಂದಾಯಿತು. 1940ರಲ್ಲಿ ಜಪಾನ್ ದೇಶವು ವಿಮಾನಗಳ ಮೂಲಕ, ಬ್ಯುಬೋನಿಕ್ ಪ್ಲೇಗ್ ಪೀಡಿತ ಚಿಗಟಗಳನ್ನು, ಸೆರಾಮಿಕ್ ಬಾಂಬುಗಳಲ್ಲಿ ತುಂಬಿ, ಚೀನಾ ದೇಶದ ನಿಂಗ್ಬೋ ಪ್ರದೇಶದ ಮೇಲೆ ಹಾಕಿತು. ಇದರಿಂದ ಸುಮಾರು 400000 ಚೀನೀಯರು ಸತ್ತರು.

ಜಪಾನ್ ದೇಶವು ಅಮೆರಿಕದ ಮೇಲೆ ಸೆಪ್ಟೆಂಬರ್ 1945ರಲ್ಲಿ ಪ್ಲೇಗ್ ಜೈವಿಕಾಸವನ್ನು ಪ್ರಯೋಗಿಸಲು ಸಿದ್ಧತೆಗಳನ್ನು ನಡೆಸಿತ್ತು. ಆದರೆ ಜಪಾನ್ ದೇಶವು 15 ಆಗಸ್ಟ್, 1945ರಲ್ಲಿ ಮಿತ್ರದೇಶಗಳಿಗೆ ಶರಣಾದ ಕಾರಣ, ಈ ಪ್ರಯೋಗವು ಕಾರ್ಯ ರೂಪಕ್ಕೆ ಬರಲಿಲ್ಲ. ಇಂದು ನಾನಾ ರೀತಿಯ ಯುದ್ಧಗಳು ಅಸ್ತಿತ್ವದಲ್ಲಿವೆ. ಆ ಎಲ್ಲ ಯುದ್ಧಗಳಿಗಿಂತ ಅತ್ಯಂತ ಅಗ್ಗ ವೆಚ್ಚದ್ದು ಹಾಗೂ ಅತ್ಯಂತ ಪರಿಣಾಮಕಾರಿಯಾದ ಯುದ್ಧವೆಂದರೆ ಜೈವಿಕಾಸಗಳ ಯುದ್ಧ. ಒಂದು ಉದಾಹರಣೆಯನ್ನು  ಪರಿಗಣಿಸಬಹುದು.

ಕ್ಲಾಸ್ಟ್ರೀಡಿಯಂ ಬಾಟ್ಯುಲಿನಮ್ ಎಂಬ ಬ್ಯಾಕ್ಟೀರಿಯವಿದೆ. ಇದು ಉತ್ಪಾದಿಸುವ ವಿಷದ ಹೆಸರು ಬಾಟ್ಯುಲಿನಮ್. ಒಂದು ಸ್ಕಡ್ ಕ್ಷಿಪಣಿಯಲ್ಲಿ, ಒಂದು ಗ್ರಾಂ ಬಾಟ್ಯುಲಿನಮ್ ವಿಷವನ್ನು ತುಂಬಿ ಪ್ರಯೋಗಿಸಿದರೆ, ಅದು 3700 ಚ.ಕಿ.ಮೀ. ಪ್ರದೇಶದಲ್ಲಿರುವ 10 ದಶಲಕ್ಷ ಜನರನ್ನು ಕೊಲ್ಲಬಲ್ಲುದು. ಇಂತಹ ಪ್ರಬಲ ಅಸವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದು ಎನ್ನುವುದನ್ನು ಮನದಟ್ಟಲು ಮಾಡಲು ಕೆಲವು ಅಂಕಿಸಂಖ್ಯೆಗಳನ್ನು ಗಮನಿಸುವುದು ಒಳಿತು. ಒಂದು ಚಕಿಮೀ ಪ್ರದೇಶ ದಲ್ಲಿರುವ ನಾಗರಿಕ ರನ್ನು, ಸಾಂಪ್ರದಾಯಿಕ ಮದ್ದುಗುಂಡುಗಳನ್ನು ಬಳಸಿ ಕೊಲ್ಲಬೇಕಾದರೆ, ಅದಕ್ಕೆ 2000 ಖರ್ಚಾಗುತ್ತದೆ.

ಪರಮಾಣು ಅಸ್ತ್ರವನ್ನು ಬಳಸಿದರೆ ಅದಕ್ಕೆ 800 ಬೇಕಾಗುತ್ತದೆ. ಮನುಷ್ಯನ ನರಮಂಡಲವನ್ನು ನಿಶ್ಚೇತಗೊಳಿಸುವ ನರ ರಾಸಾಯನಿಕಾಸಗಳನ್ನು ಬಳಸಿದರೆ ಅದಕ್ಕೆ 600 ವೆಚ್ಚವಾಗುತ್ತದೆ. ಇವುಗಳ ಬದಲು ಜೈವಿಕಾಸವನ್ನು ಪ್ರಯೋಗಿಸಿದರೆ, ಅದಕ್ಕೆ ಕೇವಲ 1 ಮಾತ್ರ ಖರ್ಚಾಗುತ್ತದೆ. ಅಂದರೆ ಜೈವಿಕ ಯುದ್ಧಗಳು ಎಷ್ಟು ಅಗ್ಗವಾದವು ಹಾಗೂ ಎಷ್ಟು ಭೀಕರವಾದವು ಎನ್ನುವ ವಿಚಾರವು ವೇದ್ಯವಾಗುತ್ತದೆ.

ಜೈವಿಕಾಸಗಳ ನಿರ್ಮಾಣವು ಅಗ್ಗವಾದರೂ, ಅವುಗಳಿಗೆ ಸಂಬಂಧಿಸಿದ ತಾಂತ್ರಿಕ ನಿರ್ಮಾಣ ಅಷ್ಟು ಸುಲುಭವಲ್ಲ. ಹಾಗಾಗಿ ಎಲ್ಲರೂ ಜೈವಿಕಾಸಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಮುಖ್ಯವಾಗಿ ಎರಡು ಸಮಸ್ಯೆಗಳಿವೆ. ಮೊದಲನೆಯದು ರೋಗ ಜನಕ ಗಳಿಗೆ ಸಂಬಂಧಿಸಿದ್ದು. ರೋಗಜನಕಗಳೂ ಜೀವಿಗಳಾಗಿರುವ ಕಾರಣ, ಅವುಗಳಿಗೆ ನಿಗದಿತ ಆಯುಸ್ಸು ಇರುತ್ತದೆ. ಹಾಗಾಗಿ ಇವನ್ನು ಸುದೀರ್ಘಕಾಲ ಸಂರಕ್ಷಿಸಲು ಸಾಧ್ಯವಿಲ್ಲ. ಎರಡನೆಯದು ಈ ರೋಗಜನಕಗಳನ್ನು ಸೂಕ್ತ ಬಾಂಬಿನ ಮೂಲಕ ಪ್ರಯೋಗಿಸುವ ಸಮಸ್ಯೆ. ಈ ಜೀವಿಗಳು ಉಷ್ಣ, ಶೀತ, ಒತ್ತಡ ಮುಂತಾದ ಭೌತಿಕ ಲಕ್ಷಣಗಳಿಗೆ ಸುಲಭವಾಗಿ ತುತ್ತಾಗಬಲ್ಲವು. ಇವು ಬಾಂಬುಗಳು ಉತ್ಪಾದಿಸುವ ಅತಿ ಉಷ್ಣವನ್ನು ತಡೆದುಕೊಳ್ಳಲಾರವು. ಹಾಗಾಗಿ ಬಾಂಬಿನ ಉಷ್ಣತೆಯು ತೊಂದರೆಯನ್ನು ಕೊಡದ ಹಾಗೆ, ತಂಪಿನ ಪರಿಸರದಲ್ಲಿ ಇವನ್ನಿಟ್ಟು ಪ್ರಯೋಗಿಸಬೇಕಾಗುತ್ತದೆ.

ಹಾಗಾಗಿ ಜೈವಿಕಾಸಗಳ ನಿರ್ಮಾಣ ಮತ್ತು ಪ್ರಯೋಗವು ಬಾಯಿಯಲ್ಲಿ ಹೇಳಿದಷ್ಟು ಸುಲುಭವಾದುದಲ್ಲ. ಶೀತಲ ಯುದ್ಧಾ ವಧಿಯಲ್ಲಿ ನಾನಾ ಜೈವಿಕಾಸಗಳು ನಿರ್ಮಾಣವಾದವು. ಆದರೆ 1969-1972ರ ನಡುವೆ ವಿಶ್ವಸಂಸ್ಥೆಯು ಜೆನೀವದಲ್ಲಿ ನಡೆಸಿದ ಸಮಾವೇಶದ ಫಲವಾಗಿ, ಜಗತ್ತಿನ ಎಲ್ಲ ದೇಶಗಳು ಜೈವಿಕಾಸಗಳನ್ನು ನಿಷೇಧಿಸುವ ನಿರ್ಣಯವನ್ನು ತೆಗೆದುಕೊಂಡವು. ಅದರ ಫಲವಾಗಿ 26 ಮಾರ್ಚ್, 1975ರಂದು ಜಗತ್ತಿನ 22 ದೇಶಗಳು ಜೈವಿಕಾಸಗಳ ನಿರ್ಬಂಧಕ್ಕೆ ಸಹಿಯನ್ನು ಹಾಕಿದವು. ಆಗ ಅಮೆರಿಕ ಮತ್ತು ಬ್ರಿಟನ್ ತಮ್ಮಲ್ಲಿದ್ದ ಎಲ್ಲ ಜೈವಿಕಾಸ ನಿರ್ಮಾಣ ಕೇಂದ್ರಗಳನ್ನು ಮುಚ್ಚಿದವು.

ಆದರೆ ರಷ್ಯಾ ಮಾತ್ರ ಜೈವಿಕಾಸಗಳ ನಿರ್ಮಾಣವನ್ನು ಮುಂದುವರೆಸುತ್ತಿದೆ ಎಂಬ ಅಂತಾರಾಷ್ಟ್ರೀಯ ಗುಮಾನಿಯು ಇಂದಿಗೂ ಉಳಿದಿದೆ. 2021ರ ವೇಳೆಗೆ ಜಗತ್ತಿನ 183 ದೇಶಗಳು ಜೈವಿಕಾಸಗಳನ್ನು ನಿಷೇಧಿಸುವ ನಿರ್ಣಯಕ್ಕೆ ಸಹಿಯನ್ನು ಹಾಕಿವೆ. ನಮ್ಮ ಭಾರತದಲ್ಲಿ ಜೈವಿಕಯುದ್ಧದ ಬಗ್ಗೆ ಯಾವುದೇ ನೇರ ದಾಖಲೆಗಳು ಸಿಗದಿದ್ದರೂ, ಬಾಣಗಳ ತುದಿಗೆ ವಿಷವನ್ನು ಲೇಪಿಸಿ, ಪ್ರಯೋಗಿಸುತ್ತಿದ್ದ ಬಗ್ಗೆ ಮಾಹಿತಿ ದೊರೆಯುತ್ತದೆ. ಆದರೆ ನಮ್ಮ ದೇಶದಲ್ಲಿ ದೊರೆಯುವ ಅತ್ಯಂತ ಕುತೂಹಲಕರ ಮಾಹಿತಿ ಎಂದರೆ ವಿಷಕನ್ಯೆಯರನ್ನು ಬಳಸಿ ಶತ್ರುಗಳನ್ನು ಕೊಲ್ಲುವ ತಂತ್ರ. ಅಮಾತ್ಯ ರಾಕ್ಷಸನು ಚಂದ್ರಗುಪ್ತನನ್ನು ಕೊಲ್ಲಲು ವಿಷಕನ್ಯೆ ಯನ್ನು ಕಳುಹಿಸಿದಾಗ, ಚಾಣಕ್ಯನು ತನ್ನ ಬುದ್ಧಿವಂತಿಕೆಯಿಂದ ಆಕೆ ಪರ್ವತಕನ ಬಳಿ ಹೋಗುವಂತೆ ಮಾಡಿ ಚಂದ್ರಗುಪ್ತನನ್ನು ರಕ್ಷಿಸುವ ಮಾಹಿತಿಯಿದೆ.

ಒಬ್ಬ ಕನ್ಯೆಗೆ ಬಾಲ್ಯದಿಂದಲೂ ನಿಗದಿತ ವಿಷವನ್ನು ಅತ್ಯಲ್ಪ ಪ್ರಮಾಣದಲ್ಲಿ ನೀಡುತ್ತ ಬಂದರೆ, ಆಕೆಯು ವಿಷಕನ್ಯೆಯಾಗುತ್ತಾಳೆ. ಈಕೆಯ ಸಂಪರ್ಕಕ್ಕೆ ಬರುವವರು ಮರಣಿಸುತ್ತಾರೆ ಎನ್ನುವುದು ವಿಷಕನ್ಯೆಯ ಬಗೆಗಿನ ನಂಬಿಕೆ. ಇಂತಹ ಹಲವು ಕಥನಗಳು ನಮ್ಮಲ್ಲಿ ದೊರೆಯುತ್ತವೆಯಾದರೂ, ಇಂತಹ ಕನ್ಯೆಯ ಅಸ್ತಿತ್ವದ ಬಗ್ಗೆ ಅನೇಕರು ಗುಮಾನಿಯನ್ನು ವ್ಯಕ್ತಪಡಿಸುವುದುಂಟು.
ಜಪಾನೀಯರು ಪ್ರಯೋಗಿಸಿದ ಕೀಟ ಜೈವಿಕಾಸ – ಪ್ಲೇಗ್ ಪೀಡಿತ ಚಿಗಟಗಳು.