ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
‘ಬರಗೆಟ್ಟ ದೇವರಿಗೆ ಪೊರ ಮಾಡಿದ್ರು’ ಅನ್ನೋ ಗಾದೆಯಂತಾಗಿದೆ ರಾಜ್ಯದಲ್ಲಿನ ಮದ್ಯ ಮಾರಾಟ. ಮದ್ಯ ಮಾರಾಟಕ್ಕೆ ಮರುಅವಕಾಶ ಸಿಕ್ಕ ಮೊದಲ ದಿನವೇ ಕುಡುಕರು ಲಾಕ್ಡೌನ್ನ ಲಾಸ್ ಅನ್ನು ಸರಿದೂಗಿಸುವ ಪ್ರಯತ್ನ ಮಾಡಿದ್ದಾರೆ.
ಕಳೆದ 35 ದಿನಗಳಿಂದ ಎಣ್ಣೆ ಕಾಣದ ನಾಲಗೆಗಳು ಮದ್ಯ ಸಿಗಲಿದೆ ಎಂಬ ಸುದ್ದಿ ಕೇಳುತ್ತಲೇ, ಮಧ್ಯರಾತ್ರಿಯಿಂದಲೇ ತಯಾರಿ ಮಾಡಿದ್ದವು. ರಾತ್ರಿಯೇ ಬಾರ್ಗಳ ಮುಂದೆ ದೇವಸ್ಥಾನದ ದರ್ಶನಕ್ಕೆೆಂಬಂತೆ ನಿರ್ಮಾಣವಾಗಿದ್ದ ಸಾಲಿನಲ್ಲಿ ನಿಂತ ಜನರು ಬೆಳಗ್ಗೆ ತಮ್ಮ ಕೈಗೆ ನೆಚ್ಚಿನ ಬಾಟಲಿ ಸಿಗುತ್ತಿದ್ದಂತೆ ಮಹಾಯುದ್ಧ ಗೆದ್ದ ಖುಷಿಯಲ್ಲಿ ಹೊರಬಂದರು. ಕೆಲವರು ಬೆಳಗ್ಗೆೆ ಬಾರ್ ತೆರೆಯುವ ವೇಳೆ ಊದುಗಡ್ಡಿ, ಕರ್ಪೂರ ಬೆಳಗಿ ಬಾರ್ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಸಿ ಮುಂದೆ ಮತ್ತೊಮ್ಮೆ ಯಾವುದೇ ವಿಘ್ನ ಬಾರದಿರಲೆಂದು ಪ್ರಾರ್ಥಿಸಿದರು.
ಎಣ್ಣೆ ಸಿಕ್ಕ ಖುಷಿಯಲ್ಲಿ ಕೆಲವರು ಕಂಠಪೂರ್ತಿ ಕುಡಿದು ರಸ್ತೆಗಳಲ್ಲಿ ಬಿದ್ದು ಚೆಲ್ಲಾಡಿದರು. 35 ದಿನಗಳ ಸೇಡು ತೀರಿಸಿಕೊಳ್ಳುವ ಪ್ರಯತ್ನ ನಡೆಸುವವರ ಸಂಖ್ಯೆೆಯೇ ಹೆಚ್ಚಾಗಿತ್ತು. ಸರಕಾರ ಸಂಕಷ್ಟದಲ್ಲಿರುವಾಗ ಕೈಹಿಡಿಯುವವರು ನಾವು ಮಾತ್ರವೇ ಎಂಬ ಹೆಮ್ಮೆ ಬಹುತೇಕ ಎಣ್ಣೆ ಕೊಳ್ಳುವವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ಕಾರಣಕ್ಕಾಗಿಯೇ ಅನೇಕರು ಎಣ್ಣೆ ಬಾಟಲಿ ಹಿಡಿದು ಗತ್ತಿನಿಂದಲೇ ಹೆಜ್ಜೆ ಹಾಕಿದರು.
ನಮ್ಮ ರಾಜ್ಯದ ಎಣ್ಣೆ ಅಂಗಡಿಗಳಲ್ಲಿ ನೀರಾ ಸಿಗದಿದ್ದರೂ, ನೀರೆಯರು ಕೂಡ ಆಗಮಿಸಿದ್ದು ವಿಶೇಷವಾಗಿತ್ತು. ಮಹಿಳಾ ಮಣಿಯರು ಕುಡಿಯುತ್ತಾರಾ ಎಂದು ಕೆಲವರು ಮೂಗಿನ ಮೇಲೆ ಬೆರಳಿಟ್ಟುಕೊಂಡರೆ, ಪಾಪ ಮನೆಯಲ್ಲಿರೋ ಯಜಮಾನನಿಗೋ ಅಥವಾ ಮತ್ಯಾರಿಗೋ ಇರಬಹುದೆಂದು ಅವರವರೇ ಸಮಾಧಾನ ಮಾಡಿಕೊಂಡರು. ಬಹಳ ದಿನಗಳಿಂದ ದೂರವಿರುವವರಿಗೆ ಗಿಫ್ಟ್ ಮಾಡಲು ಇರಬಹುದು ಎಂದು ಕೆಲವರಂದರೆ, ಹೆಣ್ಣು ಎಣ್ಣೆ ಕುಡಿಯಬಾರದು ಎಂಬ ಕಾನೂನು ದೇಶದಲ್ಲಿದೆಯೇ? ಹೆಣ್ಣು ಎಲ್ಲದರಲ್ಲೂ ಸಮಾನಳು ಎನ್ನುವ ನಾವು ಈ ವಿಷಯದಲ್ಲಿ ಮಾತ್ರ ಯಾಕೆ ಹಿಂದೆ ಬೀಳಬೇಕು ಎಂದು ವಾದಿಸಿದರು.
ಯಾಕೆ ಸಂಕಷ್ಟ ಎಂದುಕೊಂಡು ಮದ್ಯದಂಗಡಿ ಮಾಲೀಕರು ಮಹಿಳೆಯರ ಮೇಲೆ ಮತ್ಯಾರದೋ ಕೈ ಬೀಳುವುದು, ಇದು ಕುಡಿದ ಮತ್ತಿನಲ್ಲಾದ ಪ್ರಮಾದ ಎಂದು ಹೇಳುವುದು ಏಕೆ ಬೇಕೆಂದು ಮಾನಿನಿಯರಿಗೆ ಪ್ರತ್ಯೇಕ ಸಾಲು ಕಲ್ಪಿಸಿ ಸಮಾನತೆ ಸಾರಿದರು. ಅಲ್ಲಲ್ಲಿ ಎಣ್ಣೆ ಖಾಲಿಯಾಗುವಷ್ಟು ಖರೀದಿ ಪ್ರಕ್ರಿಯೆ ನಡೆಸಿದ ಮದ್ಯಪ್ರಿಯರ ಕೂಗು ಮತ್ತೆ ಲೋಡ್ ಬರಲಿ ಎಂಬಷ್ಟು ಜೋರಾಗಿತ್ತು.
ಗುಂಡುಪ್ರಿಯರ ಗಂಡಾಗುಂಡಿ ಕಂಡು ಪೊಲೀಸರು ಲಾಠಿ ಬೀಸಲು ಮನಸಾಗದೆ, ಸಂಕಷ್ಟದಲ್ಲಿ ಸದ್ದಿಲ್ಲದೆ ಸಂಬಳಕ್ಕೆ ದೇಣಿಗೆ ನೀಡುತ್ತಿರುವ ಈ ದಾನಿಯನ್ನು ಹೊಡೆಯುವುದಾದರೂ ಹೇಗೆ ಎಂದು ಆಲೋಚಿಸುತ್ತಲೇ, ಭಯಗೊಳ್ಳಲಿ ಎಂದಷ್ಟೇ ಬೆದರಿಸಿ ದೂರ ಕಳಿಸುತ್ತಿದ್ದ ದೃಶ್ಯಗಳು ಕಂಡುಬಂತು. ಒಟ್ಟಾರೆ ಕರೋನಾ ಮುಂದೆ ಸರಕಾರ ದಿವಾಳಿಯಾಗಿ ಮದ್ಯಪ್ರಿಯರ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಿದ್ದನ್ನು, ಸ್ವಾಗತಿಸಿದ ಕುಡುಕರು ಅದ್ದೂರಿಯಾಗಿ ಮೊದಲ ದಿನವನ್ನು ಆಚರಿಸಿದ್ದಾರೆ. ಅಲ್ಲಲ್ಲಿ ಸದ್ದು ಮಾಡಿದ್ದಾರೆ.