ಕೃಷ್ಣ ಮಂದಿರ ನವೀಕೃತ
ಶ್ರೀ ವಿಶ್ವತೀರ್ಥ ಸ್ವಾಮೀಜಿ ಹರ್ಷ
ತುಮಕೂರು: ಕರ್ನಾಟಕದಿಂದ ಹೋಗಿರುವ ಶಿಲೆಯಿಂದ ರಾಮಮಂದಿರದ ಪೀಠದ ಕಾಮಗಾರಿ ಆರಂಭಗೊಂಡಿದೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವತೀರ್ಥ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.
ನಗರದ ಕೆ.ಆರ್.ಬಡಾವಣೆಯಲ್ಲಿರುವ ಶ್ರೀಕೃಷ್ಣಮಂದಿರದ ನವೀಕೃತ ಕಟ್ಟಡ ಹಾಗೂ ಲಿಫ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ರಾಮಮಂದಿರದ ನರ‍್ಮಾಣ ಕಾರ‍್ಯ ಭರದಿಂದ ಸಾಗಿದೆ. ಮುಂದಿನ ಉತ್ತರಾಯಣ ಪುಣ್ಯಕಾಲದ ವೇಳೆ ಗರ್ಭಗುಡಿಯ ಕೆಲಸ ಆರಂಭಗೊಳ್ಳಲಿದ್ದು, ಶೀಘ್ರವಾಗಿ ರಾಮಮಂದಿರ ಕಾರ‍್ಯ ಪೂರ್ಣಗೊಳಿಸಲು ಮುಂದಾ ಗಿದ್ದು, ಇದುವರೆಗೂ ಭೂಮಿ ಗುರುತಿಸುವುದೇ ದೊಡ್ಡ ಜವಾಬ್ದಾರಿಯಾಗಿತ್ತು. ಆ ಕಾರ‍್ಯ ಪೂರ್ಣಗೊಂಡಿದೆ ಎಂದರು.
ಉಡುಪಿ ಶ್ರೀಕೃಷ್ಣಮಠದ ಶ್ರೀಪೇಜಾವರ ಶ್ರೀಗಳು ತಮ್ಮ ಜೀವಿತ ಅವಧಿಯಲ್ಲಿ ಶೈಕ್ಷಣಿಕ ವಾಗಿ, ಧಾರ್ಮಿಕವಾಗಿ, ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಅವರ ಕನಸನ್ನು ನನಸು ಮಾಡುವ ದೃಷ್ಟಿಯಿಂದ ಒಂದನೇ ತರಗತಿಯಿಂದ ಪದವಿವರೆಗಿನ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಇದರ ಜೊತೆಗೆ ೧೦೦ ಬೆಡ್ಗಳ ಉಚಿತ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಭಕ್ತರ ಸಹಕಾರದಿಂದ ಆ ಎಲ್ಲಾ ಕಾಮಗಾರಿಗಳು ನಡೆಯಲಿವೆ ಎಂಬ ಭರವಸೆ ನೀಡಿದರು.
ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಮಾತನಾಡಿ, ಕಳೆದ ೧೨ ವರ್ಷಗಳ ಹಿಂದೆ ಹಿರಿಯ ಶ್ರೀಗಳಾದ ಶ್ರೀವಿಶ್ವೇಶ್ವರ ತೀರ್ಥ ಪಾದಂಗಳವರ ಮಾರ್ಗದರ್ಶನದಂತೆ ಶ್ರೀಕೃಷ್ಣನ ಪ್ರತಿಷ್ಠಾಪನೆಯಾಗಿದ್ದು, ಇದು ನಮ್ಮಗಳ ಸುದೈವವಾಗಿದೆ. ಅಂದಿನಿಂದ ಈ ಕ್ಷೇತ್ರದಲ್ಲಿ ಹಲವಾರು ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ‍್ಯಕ್ರಮಗಳು ಜರುತ್ತಾ ಬಂದಿವೆ.
ಹೊಸದಾಗಿ ಶ್ರೀಕೃಷ್ಣಮಂದಿರದ ಮೇಲ್ಭಾಗದಲ್ಲಿ ನೂತನ ಮಂದಿರ ನಿರ್ಮಾಣ ಮಾಡಿ, ಲಿಪ್ಟ್ ವ್ಯವಸ್ಥೆ ಮಾಡಲಾಗಿದೆ. ಇದನ್ನು ಇಂದು ಶ್ರೀಶ್ರೀಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಉದ್ಘಾಟಿಸಿ, ಮತ್ತಷ್ಟು ಮೆರುಗು ನೀಡಿದ್ದಾರೆ. ಇದನ್ನು ಮತ್ತಷ್ಟು ಉನ್ನತಿಗೆ ತೆಗೆದುಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕಾರ‍್ಯಕ್ರಮದಲ್ಲಿ ಗೌರವ ಸಲಹೆಗಾರ ಗೋಪಾಲರಾವ್, ಅಧ್ಯಕ್ಷರಾದ ಶ್ರೀನಿವಾಸ್ ಹತ್ವಾರ್, ಜಿ.ಕೆ.ಶ್ರೀನಿವಾಸ್, ಕರ‍್ಯರ‍್ಶಿ ಸೂರ‍್ಯ ನಾರಾಯಣ ರಾವ್, ನಾಗರಾಜ ಧನ್ಯ, ವ್ಯವಸ್ಥಾಪಕ ಜನಾರ್ಧನ ಭಟ್ ಮತ್ತಿತರರು ಉಪಸ್ಥಿತರಿದ್ದರು. ಕಾರ‍್ಯಕ್ರಮಕ್ಕೂ ಮುನ್ನ ಶ್ರೀಕೃಷ್ಣ ಮರ‍್ತಿಗೆ ತೀರ್ಥಹಳ್ಳಿಯ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರಿಂದ ತಪ್ತ ಮುದ್ರಾಧಾರಣ ಕಾರ‍್ಯಕ್ರಮ ಜರುಗಿತು.
****
ಪ್ರಧಾನಿ ಮೋದಿ ಅವರು ಶ್ರೀಕ್ಷೇತ್ರ ರ‍್ಮಸ್ಥಳದ ಶ್ರೀವೀರೇಂದ್ರ ಶ್ರೀಗಳ ಧಾರ‍್ಮಿಕ, ಶೈಕ್ಷಣಿಕ, ಆಧ್ಯಾತ್ಮಿಕ ಹಾಗೂ ಆರ್ಥಿಕ ಸೇವೆಯನ್ನು ಪರಿಗಣಿಸಿ, ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡುವ ಮೂಲಕ ಅವರ ಸೇವೆ ರಾಷ್ಟ್ರಕ್ಕೆ ಸಲ್ಲಿಕೆಯಾಗುವಂತೆ ಮಾಡಿದ್ದಾರೆ.
ಶ್ರೀ ವಿಶ್ವತೀರ್ಥ ಸ್ವಾಮೀಜಿ.