Monday, 28th October 2024

ಕಾರ್ಮಿಕರು ತಮ್ಮ ಸ್ಥಳಗಳಿಗೆ ತೆರಳು ಸಾರಿಗೆ ವ್ಯವಸ್ಥೆ ಕಲ್ಪಿಸಿ: ಕೃಷ್ಣಭೈರೇಗೌಡ

ಬ್ಯಾಟರಾಯನಪುರ :
ಕೆಲಸದ ನಿಮಿತ್ತ ರಾಜ್ಯದ ವಿವಿಧ ನಗರಗಳಲ್ಲಿ ನೆಲೆಸಿದ್ದ ಹೊರರಾಜ್ಯ ಮತ್ತು ಹೊರ ಜಿಲ್ಲೆಗಳ ಕಾರ್ಮಿಕರು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಕೆಲಸ ವಿಲ್ಲದೆ ಜೀವನ ನಿರ್ವಹಣೆಯ ಸವಾಲನ್ನು ಎದುರಿಸುತ್ತಿದ್ದಾರೆ. ಲಾಕ್ ಡೌನ್ ಕೊಂಚ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಈ ಕಾರ್ಮಿಕರು ತಮ್ಮ ತವರು ರಾಜ್ಯ, ಜಿಲ್ಲೆಗಳಿಗೆ ಮತ್ತು ಸ್ವ ಗ್ರಾಮಗಳಿಗೆ ತರೆಳಲು ಬಯಸುತ್ತಿದ್ದು, ಇವರಿಗೆ ತಮ್ಮ ಸ್ವ ಸ್ಥಳಗಳಿಗೆ ತೆರಳಲು ಸರ್ಕಾರ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಸಹಕರಿಸಬೇಕು ಎಂದು ಮಾಜಿ ಸಚಿವ, ಬ್ಯಾಟರಾಯನಪುರ ಶಾಸಕ ಕೃಷ್ಣಬೈರೇಗೌಡ ಸರ್ಕಾರಕ್ಕೆ ಆಗ್ರಹಿದರು.
ಬ್ಯಾಟರಾಯನಪುರ ಕ್ಷೇತ್ರದ ಚಿಕ್ಕಜಾಲ, ವಿದ್ಯಾನಗರ ಕ್ರಾಸ್ ಮತ್ತು ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜ್ ಸುತ್ತಮುತ್ತ ನೆಲೆಸಿರುವ ಲಾಕ್ ಡೌನ್ ಸಂತ್ರಸ್ತ 1800 ಅಸಂಘಟಿತ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.
ಸರ್ಕಾರ ಇದೀಗ ಹೊರರಾಜ್ಯ ಮತ್ತು ಹೊರ ಜಿಲ್ಲೆಗಳ ಕಾರ್ಮಿಕರು ತಮ್ಮ ಸ್ವ ಸ್ಥಳ ಗಳಿಗೆ ತಲುಪಲು ರೈಲ್ವೆ ಮತ್ತು ರಸ್ತೆ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ ಯಾದರೂ, ತೆರಳಲು ಸಿದ್ಧರಾಗಿರುವ ಕಾರ್ಮಿಕರ ಸಂಖ್ಯೆಗೆ ಅನುಗುಣವಾಗುವಷ್ಟು ಬಸ್ ಮತ್ತು ರೈಲುಗಳ ವ್ಯವಸ್ಥೆ ಕಲ್ಪಿಸಿಲ್ಲ, ಹೊರಟಿರುವ ಕಾರ್ಮಿಕರ ಸಂಖ್ಯೆ ಹತ್ತಾರು ಸಾವಿರದಷ್ಟಿದೆ ಆದರೆ ಸರ್ಕಾರ ಕಲ್ಪಿಸಿರುವ ಸಾರಿಗೆ ಬಸ್ ಅಥವಾ ರೈಲುಗಳ ಸಂಖ್ಯೆ ಕಾರ್ಮಿಕರ ಸಂಖ್ಯೆಗೆ ಸರಿದೂಗುವಷ್ಟು ಇಲ್ಲದ ಕಾರಣ ಕಾರ್ಮಿಕರು ನಗರದ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಅನಗತ್ಯವಾಗಿ ಗುಂಪುಗುಂಪಾಗಿ ಬೀಡು ಬಿಟ್ಟಿದ್ದಾರೆ.
ಇವರನ್ನು ಚದುರಿಸಲು ಪೊಲೀಸರು ಲಾಟಿ ಚಾರ್ಜ್ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಂತಹ ಪ್ರಮಾದಕ್ಕೆ ಸರ್ಕಾರವೇ ಹೊಣೆ ಹೊರಬೇಕು. ಕಾರ್ಮಿಕರ ಸಂಖ್ಯೆಯ ಅನುಪಾತಕ್ಕೆ ತಕ್ಕ ಹಾಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದರೆ ಪರಿಸ್ಥಿತಿ ಈ ರೀತಿ ಬಿಗಡಾಯಿಸುತ್ತಿರಲಿಲ್ಲ. ಕಾರ್ಮಿಕರಿಗೆ ಕೆಲಸ ಒದಗಿಸಲು ಸಾದ್ಯವಾಗದ ಇಂತಹ ವಿಷಮ ಪರಿಸ್ಥಿತಿಯಲ್ಲಿ ಅವರನ್ನು ತಮ್ಮ ಊರುಗಳಿಗೆ ತಲುಪಲು ಅಗತ್ಯ ವ್ಯವಸ್ಥೆ ಕಲ್ಪಿಸಿದರೆ, ಅವರು ತಮ್ಮ ಜೀವನೋಪಾಯ ನೋಡಿಕೊಳ್ಳುತ್ತಾರೆ, ಸರ್ಕಾರ ಕನಿಷ್ಟ ಈ ಪ್ರಯತ್ನವನ್ನಾದರೂ ಪ್ರಮಾಣಿಕವಾಗಿ ಮಾಡಲಿ ಎಂದರು.
ಇಂದು ಚಿಕ್ಕಜಾಲ, ವಿದ್ಯಾನಗರ ಕ್ರಾಸ್ ಮತ್ತು ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಸುಮಾರು 1800 ಅಸಂಘಟಿತ ಕೂಲಿ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗುತ್ತಿದ್ದು, ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯಲ್ಲಿ ನೆಲೆಸಿರುವ ಬಡ ಕೂಲಿ ಕಾರ್ಮಿಕರ ಹಸಿವು ನೀಗಿಸಲು ಸರ್ಕಾರದ ಹೊರತಾಗಿ ಸಹಕಾರ ನೀಡಿರುವ ನಮ್ಮ ಮುಖಂಡರು, ದಾನಿಗಳು, ಕೆಲ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ನಿಜಕ್ಕೂ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಯಲಹಂಕ ತಹಶೀಲ್ದಾರ್ ಎನ್ ರಘುಮೂರ್ತಿ ಮಾತನಾಡಿ ‘ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಬಡವರು ಮತ್ತು ಕಾರ್ಮಿಕರಿಗೆ ಇದುವರೆಗೂ  ಆಹಾರದ ಕೊರತೆ ಎದುರಾಗದಂತೆ ನೋಡಿಕೊಂಡಿದ್ದೇವೆ. ಯಲಹಂಕ ತಾಲ್ಲೂಕು ವ್ಯಾಪ್ತಿಗೆ ಬರುವ ಯಲಹಂಕ ಮತ್ತು ಬ್ಯಾಟರಾಯನಪುರ ಎರಡೂ ಕ್ಷೇತ್ರಗಳ ಶಾಸಕರು ಅತ್ಯಂತ ಕಾಳಜಿ ಮತ್ತು ಪ್ರಾಮಾಣಿಕವಾಗಿ ಕಾರ್ಮಿಕರ ಹಸಿವು ನೀಗಿಸುವ ಕಾರ್ಯವನ್ನು ಮಾಡಿದ್ದಾರೆ. ಈ ವ್ಯಾಪ್ತಿಯಲ್ಲಿ ನೆಲೆಸಿರುವ ಕಾರ್ಮಿಕರು ನಮಗರಿವಿಲ್ಲದೆ ಯಾರಾದರೂ ಹಸಿವಿನಿಂದ ಬಳಲುತ್ತಿದ್ದರೆ ನಮ್ಮ ಗಮನಕ್ಕೆ ತನ್ನಿ ಅವರ ಹಸಿವು ಸಂತೈಸಲು ನಾವು ಸದಾ ಸಿದ್ಧರಿದ್ದೇವೆ. ಅಂತೆಯೇ ತಮ್ಮ ಸ್ವ ಗ್ರಾಮಗಳಿಗೆ ತೆರಳುವ ಇಂಗಿತ ಉಳ್ಳವರಿಗೂ ಸಹ ತೆರಳಲು ವ್ಯವಸ್ಥೆ ಕಲ್ಪಿಸಲು ಸಹಕರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಯಲಹಂಕ ತಹಶಿಲ್ದಾರ್ ಎನ್ ರಘುಮೂರ್ತಿ, ಚಿಕ್ಕಜಾಲ ತಾ.ಪಂ.ಸದಸ್ಯ ಎಸ್ ಉದಯಶಂಕರ್, ಚಿಕ್ಕಜಾಲ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀಪತಿ, ಪಿಡಿಒ ಉಮಾದೇವಿ, ಮುಖಂಡರಾದ ಎಸ್ ಕೆ ಆಂಜಿನಿಪ್ಪ, ಅಂಚೆ ಶಿವಕುಮಾರ್, ಸುಬ್ರಮಣಿ, ಗೋವಿಂದರಾಜು ಸೇರಿದಂತೆ ಇನ್ನಿತರರಿದ್ದರು