Saturday, 23rd November 2024

ದಾವಣಗೆರೆಯಲ್ಲಿ ಹೊಸದಾಗಿ 12 ಕೊರೊನಾ ಪ್ರಕರಣ-ಮಹಿಳೆ ಸಾವು

 

ದಾವಣಗೆರೆ:

ದಾವಣಗೆರೆಯಲ್ಲಿ ಇಂದು ಹೊಸದಾಗಿ 12 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಈ ಪೈಕಿ 50 ವರ್ಷದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಪತ್ತೆಯಾದ ಎಲ್ಲ 12 ಪ್ರಕರಣಗಳು ಬಾಷಾನಗರ ಮತ್ತು ಜಾಲಿನಗರಗಳ ರೋಗಿ ಸಂಖ್ಯೆ 533, 556 ಮತ್ತು 581 ಗಳಿಗೆ ಸಂಬಂಧಪಟ್ಟಿದ್ದವಾಗಿದ್ದು, ಹೊಸ ಸಂಪರ್ಕ ಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ರೋಗಿ ಸಂಖ್ಯೆ 556 ರ ದ್ವಿತೀಯ ಸಂಪರ್ಕ ಹೊಂದಿದ್ದ ರೋಗಿ ಸಂಖ್ಯೆ 662 50 ವರ್ಷದ ಮಹಿಳೆಯು ಮೇ 5 ರ ಮಧ್ಯಾಹ್ನ 12.45 ಕ್ಕೆ ಮೃತಪಟ್ಟಿದ್ದು, ಇವರಿಗೆ ಕೊರೊನಾ ಸೋಂಕು ಇರುವುದು ಇಂದು ವರದಿಯಾಗಿದೆ. ಇವರು ವೈರಲ್ ನ್ಯುಮೋನಿಯಾದಿಂದ ಬಳಲುತ್ತಿದ್ದು ರೋ ಸಂಖ್ಯೆ 556 ರ ಸಂಪರ್ಕದಿಂದ ಕೊರೊನಾ ತಗುಲಿರುತ್ತದೆ. ಹಾಗೂ ವೈದ್ಯರು ಇವರು ಹೃದಯಾಘಾತದಿಂದ ಮರಣ ಹೊಂದಿರುತ್ತಾರೆಂದು ವರದಿ ನೀಡಿದ್ದಾರೆಂದು ತಿಳಿಸಿದರು.

ಕಂಟೈನ್‍ಮೆಂಟ್ ಝೋನ್‍ಗಳಲ್ಲಿನ 95 ಜನರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲ ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಸಕ್ರಿಯವಾಗಿ ಸರ್ವೇಕ್ಷಣಾ ಕೆಲಸ ಜಾರಿಯಲ್ಲಿದೆ. ನಗರದಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಪೆಟ್ರೋಲ್ ಬಂಕ್ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಮಧ್ಯಾಹ್ನ 1 ಗಂಟೆಯೊಳಗೆ ಬಂದ್ ಮಾಡಲಾಗುತ್ತಿದೆ.

ಕಂಟೈನ್‍ಮೆಂಟ್ ಝೋನ್‍ನಲ್ಲಿ ಯಾರಿಗಾದರೂ ಕೆಮ್ಮು, ಶೀತ ಜ್ವರದಂತಹ ಲಕ್ಷಣ ಕಂಡುಬಂದರೆ ತಕ್ಷಣ ಜಿಲ್ಲಾಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ತಾವೇ ಮಾತ್ರೆ ತೆಗೆದುಕೊಂಡು ನಗರಕ್ಕೆ ಮಾರಕವಾಗದಿರಿ ಎಂದು ಎಚ್ಚರಿಸಿದರು.

ಕಂಟೈನ್‍ಮೆಂಟ್ ಝೋನ್‍ನಲ್ಲಿ ವ್ಯಾಪಕ ಆರೋಗ್ಯ ಸರ್ವೇ : ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಎಲ್ಲ ಮನೆಗಳಿಗೆ ತೆರಳಿ ವ್ಯಾಪಕ(exಣeಟಿsive) ಆರೋಗ್ಯ ಸರ್ವೇ ನಡೆಸಲಾಗುವುದು. ಕಂಟೈನ್‍ಮೆಂಟ್ ಝೋನ್‍ಗಳಿಗೆ ತೆರಳುವ ಇನ್ಸಿಡೆಂಟ್ ಕಮಾಂಡರ್ ಸೇರಿದಂತೆ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರಿಗೆ ಸಹ ರಕ್ಷಣಾ ದೃಷ್ಟಿಯಿಂದ ಪಿಪಿಇ ಕಿಟ್‍ಗಳನ್ನು ನಾಳೆಯಿಂದಲೇ ನೀಡಲಾಗುವುದು. ಈ ರಕ್ಷಣಾ ಸಾಮಗ್ರಿಗಳೊಂದಿಗೆ ಆರೋಗ್ಯ ಸಿಬ್ಬಂದಿಗಳು ಇಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕೆಟಿಜೆ ನಗರದಲ್ಲಿ ಹೊಸ ಕಂಟೈನ್‍ಮೆಂಟ್ ಝೋನ್ : ರೋಗಿ ಸಂಖ್ಯೆ 665 ಕೆಟಿಜೆ ನಗರದವರಾದ ಕಾರಣ ಈ ರೋಗಿ ಮನೆಯನ್ನು ಎಪಿಸೆಂಟರ್ ಎಂದು ಗುರುತಿಸಿ ಈ ಎಪಿಸೆಂಟರ್‍ನಿಂದ 100 ಮೀ ಪರಿಧಿ ವ್ಯಾಪ್ತಿಯನ್ನು ಕಂಟೈನ್‍ಮೆಂಟ್ ಝೋನ್ ಆಗಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.

ಮನೆಯಿಂದ ಹೊರ ಬಾರದಂತೆ ಸಾರ್ವಜನಿಕರಲ್ಲಿ ಮನವಿ : ಕಂಟೈನ್‍ಮೆಂಟ್ ಝೋನ್‍ನಲ್ಲಿ ಯಾರೂ ಕೂಡ ಮನೆಯಿಂದ ಹೊರಬರಬಾರದು. ಒಂದು ಪಕ್ಷ ಹೊರ ಬಂದರೂ ಹೊರಗಡೆ ಏನನ್ನೂ ಮುಟ್ಟಬಾರದು. ಈ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು. ಈ ಝೋನ್‍ಗಳಿಗೆ ಅಗತ್ಯ ಆಹಾರ, ತರಕಾರಿ ಇತ್ಯಾದಿಗಳನ್ನು ತಲುಪಿಸಲಾಗುವುದು. ನಗರದ ಜನತೆಯೂ ಸಹ ಅನಗತ್ಯವಾಗಿ ಹೊರಗೆ ಓಡಾಡದೇ ಮನೆಯಲ್ಲೇ ಇರಬೇಕೆಂದರು ಮನವಿ ಮಾಡಿದರು.

ಸೋಂಕು ಮೂಲ ಪತ್ತೆ ಕಾರ್ಯ : ಎಸ್‍ಪಿ ಹನುಮಂತರಾಯ ಮಾತನಾಡಿ, ಸೋಂಕಿನ ಮೂಲದ ಕುರಿತು ಇಲ್ಲಿಯವರೆಗೂ ನಾವೆಲ್ಲ ಗುಜರಾತ್‍ನತ್ತ ಮುಖ ಮಾಡಿದ್ದೆವು. ಆದರೆ ಗುಜರಾತ್‍ನಿಂದ ಬಂದವರಲ್ಲಿ ಯಾವುದೇ ಲಕ್ಷಣಗಳಿಲ್ಲ. ಬದಲಾಗಿ ಅವರ ವರದಿ ನೆಗೆಟಿವ್ ಬಂದಿದೆ. ಇನ್ನೊಂದು ಪಿ-533ಗೆ ಸಂಬಂಧಪಟ್ಟಂತೆ ಬಾಗಲಕೋಟೆಗೆ ಮದುವೆಗೆ ಹೋಗಿಬಂದವರ ವರದಿ ಕೂಡ ನೆಗೆಟಿವ್ ಬಂದಿzದೆ.ರೋಗಿ ಸಂಖ್ಯೆ 619 ಇವರು ಈರುಳ್ಳಿ ಲಾರಿಗಳಲ್ಲಿ ಹಾಸನದ ಜಾವಗಲ್‍ಗೆ ಹೋಗಿ ಬಂದಿರುವುದಿ ತಿಳಿದುಬಂದಿದೆ. ಹಾಗೂ ರೋಗಿ ಸಂಖ್ಯೆ 617 ಸಹ ಈರುಳ್ಳಿ ಗಾಡಿಗಳಲ್ಲಿ ಬಳ್ಳಾರಿ ಇತರೆಡೆ ಹೋಗಿ ಬಂದಿರುವುದು ತಿಳಿದುಬಂದಿದ್ದು ಸೋಂಕಿನ ಮೂಲ ಪತ್ತೆ ಕಾರ್ಯ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೇ ತಿಳಿಸಲಾಗುವುದು ಎಂದರು.
ಕಂಟೈನ್‍ಮೆಂಟ್ ಝೋನ್‍ನಲ್ಲಿ ಸಾಕಷ್ಟು ಕ್ರಮಗಳನ್ನು ಜರುಗಿಸಲಾಗಿದೆ. ಆಹಾರ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ತಲುಪಿಸಲಾಗುವುದು. ಈ ಝೋನ್‍ನಲ್ಲಿರುವವರು ಇನ್ನು ಎರಡು ವಾರ ಎಚ್ಚರಿಕೆಯಿಂದ ಇರಬೇಕು. ಶೀತ, ಜ್ವರ ಕೆಮ್ಮಿನ ಲಕ್ಷಣ ಇದ್ದರೆ ತಕ್ಷಣ ಜಿಲ್ಲಾಸ್ಪತ್ರೆಗೆ ಬಂದು ಪರೀಕ್ಷೆಗೆ ಒಳಗಾಗಬೇಕು. ಅನಾವಶ್ಯಕ ಓಡಾಟವನ್ನು ಬಂದ್ ಮಾಡಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೋಮ್ ಡೆಲೆವರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಲಾರಿ ಡ್ರೈವರ್‍ಗಳು ಅತ್ಯಂತ ಜಾಗೃತೆಯಿಂದ ಇರಬೇಕು. ತಮ್ಮಲ್ಲಿ ಏನಾದರೂ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂಪ್ರೇರಿತರಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಎಪಿಡಮಾಲಜಿಸ್ಟ್ ಡಾ.ಯತೀಶ್ ಇದ್ದರು.