Sunday, 24th November 2024

ರಾಜ್ಯದ 14 ಜಿಲ್ಲೆ ರೆಡ್ ಝೋನ್ ನತ್ತ?

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು:
ಲಾಕ್ ಡೌನ್ ಸಡಿಲಗೊಂಡ ಬಳಿಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏಕಾಏಕಿ ಗಣನೀಯವಾಗಿ ಏರಿಕೆಯಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದ್ದು, ಇದೀಗ ರಾಜ್ಯದ 14 ಜಿಲ್ಲೆಗಳನ್ನು ರೆಡ್ ಝೋನ್’ ಗೆ ಸೇರ್ಪಡೆಗೊಳ್ಳುವ ಸಾಧ್ಯತೆ‌ ಇದೆ.
ಲಾಕ್’ಡೌನ್ ಸಡಿಲಗೊಂಡ ಬಳಿಕ ಇದೀಗ ಆರೆಂಜ್ ಹಾಗೂ ಗ್ರೀನ್ ಝೋನ್ ನಲ್ಲಿಯೂ ಸೋಂಕಿತರು ಕಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 30 ಜಿಲ್ಲೆಗಳ ಪೈಕಿ 14 ಜಿಲ್ಲೆಗಳನ್ನು ರೆಡ್ ಝೋನ್ ಗೆ ಸೇರ್ಪಡೆಗೊಳಿಸುವಂತೆ ಈಗಾಗಲೇ ರಾಜ್ಯ ಸರಕಾರ, ಕೇಂದ್ರಕ್ಕೆ ಮನವಿ ಮಾಡಿಕೊಂಡಿದೆ.
5ಕ್ಕಿಂತೂ ಹೆಚ್ಚು ಸೋಂಕಿತ ಪ್ರಕರಣಗಳು ಕಂಡು ಬಂದ ಎಲ್ಲಾ ಜಿಲ್ಲೆಗಳನ್ನು ರೆಡ್ ಝೋನ್’ಗೆ ಸೇರ್ಪಡೆಗೊಳಿಸುವಂತೆ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆದರೆ, ನಮ್ಮ ಮನವಿಗೆ ಕೇಂದ್ರ ಒಪ್ಪಿಗೆ ನೀಡಿಲ್ಲ. ಇದೀಗ ನಾವು ಕೇಂದ್ರದ ಮಾರ್ಗಸೂಚಿಯಂತೆ ಜಿಲ್ಲೆಗಳನ್ನು ವಿಭಾಗಿಸುತ್ತಿದ್ದೇವೆ. ಆದರೂ, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಹೇಳಿದ್ದಾರೆ.
 ಜಿಲ್ಲಾ ಆಡಳಿತ ಮಂಡಳಿಗಳು ರೆಡ್ ಝೋನ್ ನಲ್ಲಿ ಕೈಗೊಂಡ ಕಠಿಣ ಕ್ರಮಗಳನ್ನು 5ಕ್ಕಿಂತಲೂ ಹೆಚ್ಚು ಸೋಂಕು ಕಂಡು ಬಂದ ಜಿಲ್ಲೆಗಳಲ್ಲಿ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಂಟೈನ್ಮೆಂಟ್ ಝೋನ್ ಪರಿಶೀಲಿಸುವ ಕಾರ್ಯಗಳು ಮುಂದುವರಿದಿವೆ. ಆರೆಂಜ್ ಜೋನ್ ನಲ್ಲಿಯೂ ನಾವು ಸೋಂಕಿತರೊಂದಿಗೆ ಪರೋಕ್ಷ ಸಂಪರ್ಕ ಹೊಂದಿರುವವರ ಗುರ್ತಿಸುವ ಕೆಲಸ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.
ರೆಡ್ ಝೋನ್ ನಲ್ಲಿ ಜನರ ಮನೆ ಬಾಗಿಲಿಗೆ ತೆರಳಿ ಸ್ಯಾಂಪಲ್ಸ್ ಸಂಗ್ರಹಿಸಿ ಪರೀಕ್ಷೆ ನಡೆಸಲು ಕೇಂದ್ರದಿಂದ ಅನುಮತಿ ಕೇಳಲಾಗಿದೆ. ಕೇಂದ್ರ ಸೂಚನೆಗೂ ಮುನ್ನವೇ ರಾಜ್ಯ ಸರಕಾರ 14 ಜಿಲ್ಲೆಗಳನ್ನು ರೆಡ್ ಝೌನ್, 4 ಜಿಲ್ಲೆಗಳನ್ನ ಆರೆಂಜ್ ಹಾಗೂ 12 ಜಿಲ್ಲೆಗಳನ್ನು ಗ್ರೀನ್ ಝೋನ್ ಎಂದು ಗುರ್ತಿಸಿದೆ. ಗ್ರೀನ್ ಝೋನ್ ಎಂದು ಗುರ್ತಿಸಿದ ಬಳಿಕ ಕಳೆದ 28 ದಿನಗಳಿಂದ ಈ ಪ್ರದೇಶಗಳಲ್ಲಿ ಒಂದೂ ಪ್ರಕರಣಗಳೂ ಬೆಳಗಿಕೆ ಬಂದಿಲ್ಲ ಎಂದಿದ್ದಾರೆ.
62 ಮಂದಿಯಿಂದ 426 ಮಂದಿಗೆ ಕರೋನಾ
ಕರ್ನಾಟಕದಲ್ಲಿ ಕೇವಲ 62 ಮಂದಿಯಿಂದ 426 ಮಂದಿಗೆ ಕೋವಿಡ್-19 ರೋಗ ಹರಡಿದೆ. ಅಂದರೆ ಒಬ್ಬ ಕೋವಿಡ್ ರೋಗಿಯಿಂದ 6.87 ಜನರಿಗೆ ರೋಗ ಹರಡಿದೆ. ಮಂಗಳವಾರ ರಾತ್ರಿ ರಾಜ್ಯ ಕೋವಿಡ್ ವಾರ್ ರೂಂನಿಂದ ಪ್ರಕಟಿಸಿದ ಮಾಹಿತಿ ಪ್ರಕಾರ, 62 ರೋಗಿಗಳ ಪೈಕಿ 29 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆ (SARI) ಅಥವಾ ಐಎಲ್‌ಐ (ಶೀತಜ್ವರ ಮಾದರಿಯ ಅನಾರೋಗ್ಯ) ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಕೋವಿಡ್ ರೋಗಿಗಳೆಂದು ಗುರುತಿಸಲಾಗಿತ್ತು. 18 ಮಂದಿ ದೇಶದ ವಿವಿದೆಡೆ ಪ್ರಯಾಣ ಮಾಡಿ ಬಂದವರಾಗಿದ್ದರು. ಹೆಚ್ಚಿನವರು ತಬ್ಲೀಗಿ ಜಮಾತ್ ಸಭೆಯಲ್ಲಿ ಭಾಗವಹಿಸಿದವರಾಗಿದ್ದರು. 18ರಲ್ಲಿ 15 ಮಂದಿ ದೆಹಲಿಗೆ ಹೋಗಿ ಬಂದವರಾಗಿದ್ದು ಇವರಿಂದ 100 ಮಂದಿಗೆ ಸೋಂಕು ಹರಡಿದೆ.ಇನ್ನುಳಿದ ಮೂವರು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಿ ಬಂದವರಾಗಿದ್ದು 11 ಮಂದಿಗೆ ಸೋಂಕು  ಹರಡಲು ಕಾರಣರಾಗಿದ್ದಾರೆ.
6 ದಿನದಲ್ಲಿ‌36 ತಬ್ಲೀಗ್ ತಂದ ತಲೆನೋವು
ಪ್ರಕರಣ ಸಂಖ್ಯೆ 128, 20ರ ಹರೆಯದ ರೋಗಿ ಬೆಳಗಾವಿ ಮೂಲದವರಾಗಿದ್ದು  ಮಾರ್ಚ್ 13ರಿಂದ 18ರವರೆಗೆ ನಡೆದ ತಬ್ಲೀಗಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವ್ಯಕ್ತಿಯಿಂದ 36 ಮಂದಿಗೆ ಸೋಂಕು ಹರಡಿದೆ. ಸೋಂಕು ತಗುಲಿದವರಲ್ಲಿ 15 ಮಂದಿ ಕರ್ನಾಟಕದವರಾಗಿದ್ದಾರೆ. ತಬ್ಲೀಗಿ ಜಮಾತ್ ಸಭೆಯಲ್ಲಿ ಭಾಗವಹಿಸಿದ ಕಿರಿಯ ವ್ಯಕ್ತಿಯಾಗಿರುವ ಈತನಿಂದ ಹಲವಾರು ಮಂದಿಗೆ ಸೋಂಕು ಹರಡಿದೆ.
ವಿದೇಶಿಯರಿಂದ ಹೆಚ್ಚಾಗಿ ಹರಡಿಲ್ಲ ಸೋಂಕು
ವಿದೇಶದಿಂದ ಬಂದ 15 ಮಂದಿಯಿಂದ 34 ಮಂದಿಗೆ  ಸೋಂಕು ಹರಡಿದೆ, ವರದಿಯ ಪ್ರಕಾರ ವಿದೇಶಿಯರಿಂದ ಹೆಚ್ಚಿನವರಿಗೆ ಸೋಂಕು ಹರಡಿಲ್ಲ ಮತ್ತು ಸೋಂಕು ಹರಡುವಿಕೆ ನಿಯಂತ್ರಣದಲ್ಲಿತ್ತು. ಆದರೆ ಅವರ ಕುಟುಂಬದವರಿಗೆ ಸೋಂಕು ಹರಡುವ ಸಾಧ್ಯತೆ ಜಾಸ್ತಿ ಇದೆ.
ಮಂಗಳವಾರದ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ 1,320 ಮಂದಿಗೆ ಸೋಂಕು ತಗುಲಿದ್ದು, ರೋಗಿಗಳ ಒಡನಾಡಿಗಳಿಗೆ ತಗುಲಿರುವ ಸೋಂಕು ಪ್ರಕರಣಗಳ ಸಂಖ್ಯೆ 4,778 ಆಗಿದೆ.