Sunday, 24th November 2024

ವಿಮಾನ ಯಾನ ಎಷ್ಟೇ ಸುರಕ್ಷಿತವಾಗಿದ್ದರೂ ಭಯ ಬಿಡದು !

ನೂರೆಂಟು ವಿಶ್ವ

vbhat@me.com

ಅಣು ಬಾಂಬ್ ಬಿದ್ದರೆ ಅದು ಎಲ್ಲಿ ಬಿದ್ದಿದೆಯೋ, ಅದರ ತೀವ್ರತೆ ಎಲ್ಲಿ ತನಕ ವ್ಯಾಪಿಸುವುದೋ, ಅಲ್ಲೆಲ್ಲ ನೆಲೆಸಿರುವ ಜನ ಭೀತಿಗೊಳಗಾಗುತ್ತಾರೆ. ಅಣು ಬಾಂಬ್‌ ಸ್ಪೋಕ್ಕಿಂತ ಭೀಕರವಾದುದು ಇನ್ನೊಂದಿಲ್ಲ.

ಆದರೂ ಜಗತ್ತಿನಲ್ಲಿರುವ ಜನರಿಗೆ ಅದರ ಭೀತಿ ತಟ್ಟುವುದಿಲ್ಲ. ಇರಾನಿನ, ಉತ್ತರಕೊರಿಯಾದ ಅಣು ಬಾಂಬ್ ಸ್ಪೋವಾದರೆ ಆ ದೇಶ ಮತ್ತು ಅದರ ಸುತ್ತಮುತ್ತಲ ದೇಶ ಆತಂಕಕ್ಕೊಳಗಾಗಬಹುದು. ಅಲ್ಲಿ ಅಣುಬಾಂಬ್ ಬಿದ್ದರೆ, ಹೊನ್ನಾವರದ ಹೆಬ್ಬಾರನಕೆರೆಯ, ಹುಬ್ಬಳ್ಳಿ ಸಮೀಪದ ಬುಡರಶಿಂಗಿ ಗ್ರಾಮದ ಇರುವ ಜನರು ತಲ್ಲಣಗೊಳ್ಳುವುದಿಲ್ಲ. ಕಾರಣ ಬಹುಪಾಲು ಜನ ಅಣು ಬಾಂಬನ್ನು ನೋಡಿಲ್ಲ. ಅದರ ಸ್ಪೋಟದ ತೀವ್ರತೆ ಗೊತ್ತಿಲ್ಲ. ಎರಡನೆಯ ಮಹಾ ಯುದ್ಧದ ಕಾಲದಲ್ಲಿ ಜಪಾನಿನ ಹಿರೋಷಿಮಾ ಮತ್ತು ನಾಗಾಸಕಿ ನಗರ ನಿರ್ನಾಮವಾದ ಘಟನೆ ಗೊತ್ತಿದ್ದರೂ ಅದೊಂದು ಹಳೆಯ ಇತಿಹಾಸದ ಘಟನೆ ಅಷ್ಟೇ. ಈಗಿನ ಕಾಲದವರಿಗಂತೂ ಅದರ ತೀವ್ರತೆ ಗೊತ್ತಿರಲು ಸಾಧ್ಯವಿಲ್ಲ.

ಅದೇ ಜಗತ್ತಿನ ಯಾವುದೇ ಊರಿನಲ್ಲಿ ವಿಮಾನ ಬಿದ್ದರೆ, ಜನ ಸಣ್ಣಗೆ ಕಂಪಿಸುತ್ತಾರೆ. ವಿಮಾನ ಬಿದ್ದ ಸುದ್ದಿ ಪತ್ರಿಕೆಯಲ್ಲಿ
ಯಾವುದಾದರೂ ಪುಟದಲ್ಲಿ ಪ್ರಕಟವಾಗುತ್ತದೆ. ನನಗೆ ಅನೇಕ ಓದುಗರು ಕೇಳಿದ್ದುಂಟು. ಪ್ರಪಂಚದ ಯಾವುದೋ ಊರಿನಲ್ಲಿ ವಿಮಾನ ಬಿದ್ದರೆ ಮುಖಪುಟದಲ್ಲಿ ಪ್ರಕಟಿಸುತ್ತೀರಿ, ಅದೇ ನಮ್ಮ ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ನಾಲ್ಕು ಮಂದಿ ಸತ್ತರೆ, ಒಳಪುಟಗಳಲ್ಲಿ ಪ್ರಕಟಿಸುತ್ತೀರಲ್ಲ, ಮನುಷ್ಯರು ವಾಹನದಲ್ಲಿ ಪ್ರಯಾಣಿಸಲಿ, ಹಡಗಿನಲ್ಲಿ ಹೋಗಲಿ ಅಥವಾ ವಿಮಾನದಲ್ಲಿ ಹಾರಾಡಲಿ, ಇಂಥ ಸಂದರ್ಭದಲ್ಲಿ ದುರಂತ ಸಂಭವಿಸಿದಾಗ, ಯಾರೇ ಸತ್ತರೂ ಅವರು ಮನುಷ್ಯರೇ ಅಲ್ಲವೇ? ವಿಮಾನದಲ್ಲಿ ಪ್ರಯಾಣಿಸುವವರು ಸತ್ತರೆಮಾತ್ರ ಯಾಕೆ ಮಹತ್ವ ಕೊಡುತ್ತೀರಿ, ಅವರ ಜೀವಕ್ಕೆ ಮಾತ್ರ ಹೆಚ್ಚು ಬೆಲೆಯಾ ಎಂದು ಕೇಳಿದ್ದುಂಟು.

ಎಲ್ಲರ ಜೀವಕ್ಕೂ ಒಂದೇ ಬೆಲೆ, ಆದರೆ ವಿಮಾನದಲ್ಲಿ ಪ್ರಯಾಣಿಸುವವರ ಜೀವಕ್ಕೆ ಹೆಚ್ಚು ಬೆಲೆ. ಕಾರಣ ಜಗತ್ತಿನ ಯಾವುದೇ ಕಡೆ ವಿಮಾನ ಬಿದ್ದರೂ ಅದು ಸುದ್ದಿ. ಪ್ರಯಾಣಿಕರು ಸತ್ತರೆ ಇನ್ನೂ ದೊಡ್ಡ ಸುದ್ದಿ. ಕೂದಲೆಳೆ ಅಂತರದಲ್ಲಿ ದುರಂತ ತಪ್ಪಿತೆನ್ನಿ, ಅದೂ ಸುದ್ದಿಯೇ. ವಿಮಾನ ಬಿದ್ದರೂ ಎಲ್ಲರೂ ಆಶ್ಚರ್ಯಕರ ರೀತಿಯಲ್ಲಿ ಪಾರಾದರೆ, ಅದು ಮತ್ತೂ ದೊಡ್ಡ ಸುದ್ದಿಯೇ. ಹಾರುವ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದು ಅದು ತುರ್ತು ಭೂಸ್ಪರ್ಶ ಮಾಡಿದರೂ ಸುದ್ದಿಯೇ. ಹವಾಮಾನ ವೈಪರೀತ್ಯದಿಂದ ವಿಮಾನ ಇಳಿಯಲಾಗದಿದ್ದರೆ, ಇಲ್ಲಿ ಇಳಿಯಬೇಕಾದ ವಿಮಾನ ಮತ್ತೆ ಇಳಿದರೂ ಸುದ್ದಿಯೇ.

ವಿಮಾನಕ್ಕೆ ಸಂಬಂಧಿಸಿದ ಇಂಥ ಯಾವುದೇ ಘಟನೆಗಳಿರಲಿ ಅವು ಸುದ್ದಿಯಾಗದೇ ಹೋಗುವುದಿಲ್ಲ. ಇದು ಸುದ್ದಿಮನೆಯಲ್ಲಿ
ಯಾರೋ ಮಾಡಿಟ್ಟ ನಿಯಮವಲ್ಲ. ವಿಮಾನ ತಯಾರಿಕಾ ಕಂಪನಿಗಳ ಮಸಲತ್ತೂ ಇದಲ್ಲ. ಆದರೆ ಮಾನವ ಭಾವಕೋಶ
ವಿಮಾನಕ್ಕೆ ಸಂಬಂಧಿಸಿದ ಘಟನಾವಳಿಗಳ ಸುತ್ತ ಅಂತಃಕರಣದಿಂದ ಮಿಡಿಯುವುದಂತೂ ನಿಜ. ಈ ವಿಷಯದಲ್ಲಿ ಮನುಷ್ಯನ ಭಾವಕೋಶಗಳು ವಿಮಾನ-ಪರ ಅಥವಾ ಪಕ್ಷಪಾತಿ ಎಂದು ಹೇಳಬಹುದು.

ಕಛ್‌ನ , ಭುಜ್ ನ, ಪೂಂಚ್ ನ ಮಿಗ್ ವಿಮಾನ ಪತನವಾದರೂ ಸಾಕು, ಪೈಲಟ್ ಪ್ರಾಣಹಾನಿ ಆಗಬೇಕೆಂದಿಲ್ಲ, ಅದು ಮುಖ
ಪುಟ ಸುದ್ದಿಯೇ. ಸಂಪಾದಕ ಹೇಳಬೇಕಾಗಿಲ್ಲ, ಉಪ ಸಂಪಾದಕರೇ ನಿರ್ಧರಿಸಿಬಿಡುತ್ತಾರೆ. ಇನ್ನು ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದರೆ ಅದೂ ಕೂಡ ಸುದ್ದಿಯೇ. ರನ್ ವೇಗೆ ತೆವಳಿಕೊಂಡು ಹೋಗುತ್ತಿದ್ದ ವಿಮಾನ ಮತ್ತೊಂದು ವಿಮಾನಕ್ಕೆ ಮುಖಾಮುಖಿಯಾದರೆ, ‘ತಪ್ಪಿದ ವಿಮಾನ ದುರಂತ’ ಎಂದು ಜೋರಾಗಿ ಮುಖಪುಟದಲ್ಲಿ ಬರೆಯುತ್ತವೆ.

ಇನ್ನು ಪೈಲಟ್ ಎಣ್ಣೆ ಹೊಡೆದರೆ, ಕಾಕ್‌ಪಿಟ್‌ನಲ್ಲಿ ನಿದ್ದೆ ಮಾಡಿದರೆ ಆತ ಸಸ್ಪೆನ್ಡ್ ಆಗುವ ತನಕ ಬಿಡೊಲ್ಲ. ಅದೇ ದೊಡ್ಡ ಸುದ್ದಿ.
ಇನ್ನು ವಿಮಾನ ಹೈಜಾಕ್ ಆಗಿಬಿಟ್ಟರೆ, ಜಗತ್ತಿನಾದ್ಯಂತ ಅಲ್ಲೋಲ ಕಲ್ಲೋಲ. ಹೌದು ನಮ್ಮ ಭಾವಕೋಶ ವಿಮಾನಕ್ಕೆ ಹೆಚ್ಚು ಮಿಡಿಯುತ್ತದೆ. ರಸ್ತೆ ಅಥವಾ ರೈಲ್ವೆ ದುರಂತ ಸಂಭವಿಸಿದರೆ, ಬದುಕಿ ಉಳಿಯುವ ಸಾಧ್ಯತೆ ಇರುತ್ತದೆ. ಆದರೆ ವಿಮಾನ ಅಪಘಾತದಲ್ಲಿ ಈ ಸಾಧ್ಯತೆಯೇ ಇರುವುದಿಲ್ಲ. ಭಾವಕೋಶ ವಿಮಾನದ ಪಕ್ಷಪಾತಿಯಾಗಲು ಇದೂ ಕಾರಣವಿರಬಹುದು.

ವಿಮಾನದಲ್ಲಿ ಪ್ರಯಾಣಿಸುವವರು ಹೆಚ್ಚಾಗಿ ಉಳ್ಳವರು, ಗಣ್ಯರು ಆಗಿರುವುದರಿಂದ, ಸಹಜವಾಗಿಯೇ ಅವರ ಸಾವು ಗಮನ ಸೆಳೆಯುತ್ತದೆ. ಎಲ್ಲಾ ಪ್ರಯಾಣಗಳಲ್ಲಿ ವಿಮಾನ ಪ್ರಯಾಣವೇ ಅತ್ಯಂತ ಸುರಕ್ಷಿತ. ಎರಡೋ- ಮೂರೋ ಲಕ್ಷ ಹಾರಾಟಗಳ ಪೈಕಿ, ಒಂದು ವಿಮಾನ ಅಪಘಾತಕ್ಕೊಳಗಾಗಬಹುದು. ಒಮ್ಮೆ ರನ್ ವೇ ಬಿಟ್ಟು ಆಗಸಕ್ಕೆ ನೆಗೆಯುವಾಗ ಮತ್ತು ಲ್ಯಾಂಡ್ ಆಗುವಾಗ ಏನಾದರೂ ಅಪಘಾತವಾಗಬೇಕು. ಒಮ್ಮೆ ನೆಗೆದ ನಂತರ ಸುರಕ್ಷಿತ.

ವಿಮಾನಕ್ಕೆ ಯಾವುದೇ ಅಡೆತಡೆಗಳಿರುವುದಿಲ್ಲ. ಈಗಿನ ತಂತ್ರeನ ನಿಯಂತ್ರಿತ ವ್ಯವಸ್ಥೆಯಲ್ಲಿ, ಆಕಾಶದಲ್ಲಿ ಮುಖಾಮುಖಿ ಡಿಕ್ಕಿಯಾಗುವ ಸಾಧ್ಯತೆಯೇ ಇಲ್ಲ. ತಾಂತ್ರಿಕ ದೋಷವೇನಾದರೂ ಕಂಡು ಬಂದರೆ, ಬದಲಿ ವ್ಯವಸ್ಥೆ ಇರುತ್ತದೆ. ಅಷ್ಟರಮಟ್ಟಿಗೆ ವಿಮಾನ ಸುರಕ್ಷಿತ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ಆದರೆ ಬಹುತೇಕ ಎಲ್ಲರೂ ವಿಮಾನ ಪ್ರಯಾಣ ವೆಂದರೆ ಭಯ ಪಡುತ್ತಾರೆ. ಅಷ್ಟಕ್ಕೂ ವಿಮಾನ ಪ್ರಯಾಣ, ಪ್ರಯಾಣ ಅಲ್ಲವೇ ಅಲ್ಲ.

ಅದೊಂದು ಸಾಹಸವೇ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ, ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಹಾರಿ ಹೋಗುವ ಪರಿಯೇ ಅದ್ಭುತ. ಒಮ್ಮೆ ಆಕಾಶಕ್ಕೆ ನೆಗೆದ ನಂತರ, ಏನೇನೂ ಆಗುವುದಿಲ್ಲ ಅಂತ ಅಂದುಕೊಂಡರೂ, ಅತ್ಯಂತ ಸುರಕ್ಷಿತ ಎಂದು ಭಾವಿಸಿದರೂ, ಪೈಲಟ್ ಸೇರಿದಂತೆ ಪ್ರಯಾಣಿಕರಿಗೆ, ಏನಾದರೂ ಆದರೆ ಏನು ಮಾಡುವುದು (ಏನೂ ಮಾಡಲಾಗುವುದಿಲ್ಲ ಎಂಬುದು ಬೇರೆ ಮಾತು) ಎಂಬ ಡುಕುಡುಕಿ ಇದ್ದೇ ಇರುತ್ತದೆ. ವಿಮಾನದಲ್ಲಿ ಎಷ್ಟೇ ಪ್ರಯಾಣ ಮಾಡಿರಲಿ, ಆದರೆ ಈ ಭಯ ಮಾತ್ರ ಲ್ಯಾಂಡ್ ಆಗುವವರೆಗೂ ಇದ್ದೇ ಇರುತ್ತದೆ.

ಎಂಥ ಪರಮ ನಾಸ್ತಿಕನೇ ಆಗಿರಲಿ, ವಿಮಾನದಲ್ಲಿ ಕುಳಿತಿರುವಷ್ಟು ಹೊತ್ತು ಪರಮೋಚ್ಚ ದೈವಭಕ್ತನೇ ಆಗಿರುತ್ತಾನೆ. ಆಗಸದಲ್ಲಿ ಹಾರುತ್ತಿರುವಾಗ, ಸಣ್ಣ ಜಂಪ್ ಆದರೂ ಸಾಕು ಹೊಟ್ಟೆ ತಣ್ಣಗಾಗುತ್ತದೆ. ಏನೂ ಆಗಿಲ್ಲಎಂಬಂತೆ, ಇವೆಲ್ಲ ಕಾಮನ್ ಎಂಬಂತೆ ಕೆಲವರು ಪೋಸು ಕೊಡುತ್ತಾರೆ, ಆದರೂ ಅವರ ಅಂತರಾತ್ಮ ಒಳಗೊಳಗೇ ಭಜನೆ ಮಾಡಲಾರಂಭಿಸಿರುತ್ತದೆ. ವಿಮಾನ ಆಗಸದಲ್ಲಿರುವಾಗ ಏಕಾಏಕಿ ಪೈಲಟ್ ಧ್ವನಿವರ್ಧಕದ ಮೂಲಕ ಎಲ್ಲ ಪ್ರಯಾಣಿಕರೂ ಬೆಲ್ಟ್ ಕಟ್ಟಿಕೊಳ್ಳಿ, ‘ಪ್ರತಿಕೂಲ ಹವಾಮಾನವಿದೆ’ ಎಂದು ಅನೌನ್ಸ್ ಮಾಡಿದರೆ ಸಾಕು, ಎಲ್ಲರೂ ಧಡಕ್ಕನೆ ಎದ್ದು ಕುಳಿತು ಕೊಳ್ಳುತ್ತಾರೆ.

ಮತ್ತೆ ಕಣ್ಣೊಳಗೆ ನಿದ್ದೆ ಸುಳಿಯಲು ಅರ್ಧ ಗಂಟೆಯಾದರೂ ಬೇಕು! ಯಾಕೆಂದರೆ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಮೂವತ್ತೆಂಟೋ, ನಲವತ್ತೆರಡೋ ಸಾವಿರ ಅಡಿ ಎತ್ತರದಲ್ಲಿ ಹಾರುವ ವಿಮಾನ ದಲ್ಲಿ ತಾಂತ್ರಿಕ ದೋಷ ಕಂಡು ಬಂದರೆ, ಎಂಜಿನ್ ವೈಫಲ್ಯವಾದರೆ, ಹೊಗೆ! ಒಮ್ಮೆ ನಾನು ಸಿಂಗಾಪುರದಿಂದ ಮಧ್ಯರಾತ್ರಿ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದೆ.

ವಿಮಾನ ಟೇಕಾಫ್ ಆಗಿ ಎರಡು ಗಂಟೆ ಆಗಿತ್ತು. ಅಂದರೆ ವಿಮಾನ ಅರ್ಧ ಹಾದಿ ಕ್ರಮಿಸಿತ್ತು. ಎಲ್ಲರಿಗೂ ಗಾಢ ನಿದ್ದೆ. ನನ್ನ ಮುಂದಿನ ಸ್ಕ್ರೀನ್‌ನಲ್ಲಿ ವಿಮಾನ ಅಲ್ಲಿ ಗಿರಕಿ ಹೊಡೆಯುತ್ತಿರುವುದು ವಿಮಾನ ಪಥದಿಂದ ಗೊತ್ತಾಯಿತು. ನನಗೆ ಸಣ್ಣ ದಿಗಿಲು. ಅರ್ಧ ದಾರಿ ಕ್ರಮಿಸಿದ ಬಳಿಕ ಹೀಗೇಕೆ ಗಿರಾಕಿ ಹೊಡೆಯುತ್ತಿzನೆ ಎಂಬ ಕೌತುಕ. ಅದಾದ ಕೆಲವೇ ಕ್ಷಣಗಳಲ್ಲಿ, ಪೈಲಟ್ ತುರ್ತುಸ್ಥಿತಿ ಘೋಷಿಸಿದ. ವಿಮಾನದೊಳಗಿನ ಎಮರ್ಜೆನ್ಸಿ ಲೈಟ್ಸ್ ಬಿಟ್ಟರೆ ಉಳಿದ ಲೈಟ್‌ಗಳು ಆನ್ ಆಗುತ್ತಿರಲಿಲ್ಲ. ಒಂಥರಾ ಕತ್ತಲು ಆವರಿಸಿತ್ತು. ಏರ್ ಕಂಡೀಶನ್ ಕೆಟ್ಟು ಹೋಗಿತ್ತು.

ಏಕಾಏಕಿ ಎಲ್ಲರೂ ಬೆವರಲಾರಂಭಿಸಿದರು. ಪ್ರಯಾಣ ಬೆಂಗಳೂರಿಗೆ ಮುಂದುವರಿಸಬೇಕಾ, ವಾಪಸ್ ಸಿಂಗಾಪುರ್‌ಗೆ ಹೋಗಬೇಕಾ ಎಂಬ ದ್ವಂದ್ವ ಪೈಲಟ್‌ನನ್ನು ಕಾಡಿರಬೇಕು. ವಿಮಾನದೊಳಗೆ ಹಠಾತ್ತನೆ ಕೋಲಾಹಲ. ಎಲ್ಲರೂ ತಮ್ಮ ಇಷ್ಟದ ದೇವರನ್ನು ಸ್ಮರಿಸಲಾರಂಭಿಸಿದರು. ನನ್ನ ಪಕ್ಕದಲ್ಲಿದ್ದ ಹೆಂಗಸು ಹೆದರಿಕೆಯಿಂದ ನನ್ನ ಕೈಯನ್ನು ಚರ್ಚರಿಯಾಗಿ ಹಿಡಿದ ಹೊಡೆತಕ್ಕೆ ಕನ್ನೆತ್ತರುಗಟ್ಟಿತ್ತು. ತಾನು ಜೀವ ಸಹಿತ ಮರಳಲಾರೆವು ಎಂದು ಬಹುತೇಕರಿಗೆ ಖಾತ್ರಿಯಾಗಿತ್ತು.

ಪೈಲಟ್ ಕೂಡ ಸುಮ್ಮನಾಗಿದ್ದ. ಆತ ಮಾತಾಡಿದರೂ ಭಯ, ಮಾತಾಡದೆ ಸುಮ್ಮನಿದ್ದರೆ ಇನ್ನೂ ಭಯ. ಗಗನಸಖಿಯರೂ ಸೀಟ್ ಬೆಲ್ಟ ಕಟ್ಟಿಕೊಂಡು ಸುಮ್ಮನಿದ್ದುಬಿಟ್ಟಿದ್ದರು. ಆ ಎರಡು ತಾಸು ಸಾವಿನ ಮನೆಯ ಕದ ತಟ್ಟಿ ಬಂದ ಅನುಭವ! ಕೊನೆಗೆ ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ಇಳಿದಾಗ ಎಲ್ಲಾ ಪ್ರಯಾಣಿಕರಿಂದ ದೀರ್ಘ ಕರತಾಡನ, ಪರಸ್ಪರ ಅಪ್ಪುಗೆ. ಕೆಲವರಂತೂ ನೆಲವನ್ನು ಚುಂಬಿಸಿದರು. ಪೈಲಟ್ ನನ್ನು ಅಭಿನಂದಿಸಿದರು. ಮರು ಜನ್ಮ ಪಡೆದ ಹಿತಾನುಭವ.

ನನ್ನ ಸ್ನೇಹಿತರೊಬ್ಬರು ಮೊದಲ ಬಾರಿಗೆ ವಿಮಾನದಲ್ಲಿ ಹೋಗುವಾಗ, ಟೇಕಾಫ್ ಆಗುವ ಮುನ್ನ ಗಗನಸಖಿಯ ‘ಸುರಕ್ಷತೆ ಸೂಚನಾ ಪ್ರದರ್ಶನ’ ಕಂಡು, ದಿಗಿಲುಗೊಂಡು ವಿಮಾನದಲ್ಲಿ ಪ್ರಯಾಣಿಸುವುದಿಲ್ಲ, ತನ್ನನ್ನು ಇಲ್ಲೇ ಇಳಿಸಿ ಬಿಡಿ ಎಂದು ಹಠ ಹಿಡಿದಿದ್ದರು. ಕಾರಣ, ಗಗನಸಖಿ ಆರಂಭದಲ್ಲಿ ಸುರಕ್ಷತೆಯ ಬಗ್ಗೆ ಹೇಳುವಾಗ, ‘ಒಂದು ವೇಳೆ ವಿಮಾನ ದಲ್ಲಿ ಆಮ್ಲಜನಕ ಕಡಿಮೆಯಾಗಿ ಉಸಿರಾಟಕ್ಕೆ ತೊಂದರೆ ಯಾದರೆ ಈ ಮಾಸ್ಕ್ ಹಾಕಿಕೊಳ್ಳಿ, ವಿಮಾನವೇನಾದರೂ ನೀರಿನಲ್ಲಿ ಇಳಿಯುವ ಪ್ರಸಂಗ ಬಂದರೆ ಜೀವರಕ್ಷಕ ಜಾಕೆಟ್ ಧರಿಸಿ’ ಎಂದು ಹೇಳಿದ್ದನ್ನು ಕೇಳಿ ಆತ ಬೆಚ್ಚಿ ಬಿದ್ದು, ವಿಮಾನ ಹಾರಾಟವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದ.

ಅವನಿಗೆ ಸಮಾಧಾನ ಮಾಡುವ ಹೊತ್ತಿಗೆ ಏಳೋ ಹನ್ನೊಂದೋ ಆಗಿತ್ತು. ಸಿನಿಮಾ ನಟ ಡಾ.ವಿಷ್ಣುವರ್ಧನ್ ‘ಸಾಹಸಸಿಂಹ’ ಎಂದೇ ಜನಪ್ರಿಯ. ಆದರೆ ವಿಮಾನ ಪ್ರಯಾಣವೆಂದರೆ, ಅವರು ಪುಕ್ಕಲು ನರಿ! ಭಯ ಅಂದ್ರೆ ಭಯ. ಒಮ್ಮೆ ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ಹೋಗಲು ವಿಮಾನ ವೇರಿದರಂತೆ. ಒಳಗೆ ಪುಕಪುಕಿ. ವಿಮಾನ ಟೇಕಾಫ್ ಆಗಿದ್ದೇ ತಡ ಜೋರಾಗಿ ಕಿರುಚಲಾರಂಭಿಸಿದರಂತೆ. ಎಷ್ಟೇ ಸಮಾಧಾನಪಡಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಪೈಲಟ್ ವಾಪಸ್ ಬೆಂಗಳೂರಿಗೆ ತಿರುಗಿಸಿ ವಿಷ್ಣು ಅವರನ್ನು ಇಳಿಸಿ ಹೋದರಂತೆ!

ಆಗಲೇ ಸಾಹಸಸಿಂಹ ಘರ್ಜಿಸುವುದನ್ನು ನಿಲ್ಲಿಸಿದ್ದು!! ಕೆಲವರು ಈ ಕಾರಣಕ್ಕೆ ವಿದೇಶಗಳಿಗೆ ಹೋಗುವುದಿಲ್ಲ. ಜೀವನದಲ್ಲಿ ಸಿಕ್ಕಾಪಟ್ಟೆ ಗಳಿಸಿರುತ್ತಾರೆ. ಆದರೆ ಒಂದೇ ಒಂದು ದೇಶವನ್ನು ನೋಡಿರುವುದಿಲ್ಲ. ಕೇಳಿದರೆ, ನನಗೆ ವಿದೇಶ ಅಂದ್ರೆ ವಾಕರಿಕೆ, ಆಗಿಬರೊಲ್ಲ ಎಂದೆ ರೀಲು ಸುತ್ತುತ್ತಾರೆ. ಆದರೆ ಅಸಲಿಗೆ ಅವರಿಗೆ ವಿಮಾನ ಪ್ರಯಾಣ ಅಂದ್ರೆ ವಿಪರೀತ ಭಯವಿರುತ್ತದೆ. ಆದರೆ ಅದನ್ನು ಹೇಳುವುದಿಲ್ಲ ಅಷ್ಟೇ ಯಶವಂತ ಸರದೇಶಪಾಂಡೆ ಅವರ ‘ರಾಶಿ ಚಕ್ರ’ ನಾಟಕದಲ್ಲಿ ಒಂದು ಪ್ರಸಂಗ ಬರುತ್ತದೆ. ವಿಮಾನದಲ್ಲಿ ಕುಳಿತ ಒಬ್ಬ, ತನ್ನ ಪಕ್ಕ ಕುಳಿತ ಮತ್ತೊಬ್ಬನಿಗೆ ಕೇಳುತ್ತಾನೆ – ‘ದೋಸ್ತ, ನಮ್ಮ ವಿಮಾನ ಹಾರಿಸು ತ್ತಿರವ ಪೈಲಟ್ ಇದ್ದಾನಲ್ಲ, ಅವನಿಗೆ ಹಾರ್ಟ್ ಫೇಲ್ ಆದರೆ ಏನು ಗತಿ?’ ಅದಕ್ಕೆ ಮತ್ತೊಬ್ಬ ಹೇಳುತ್ತಾನೆ – ಒಬ್ಬನಿಗೆ ಹಾರ್ಟ್ ಫೇಲ್ ಆದರೆ, ಮತ್ತೊಬ್ಬ ಇರ್ತಾನಲ್ಲ’ ಅದಕ್ಕೆ ಮೊದಲನೆಯವ ಕೇಳಿದನಂತೆ – ‘ಅದ್ಸರಿ, ಅವನಿಗೂ ಹಾರ್ಟ್ ಫೇಲ್ ಆದರೆ?’ ಇಷ್ಟು ಹೇಳಿ ಆತ ಮಲಗಿಬಿಟ್ಟನಂತೆ.

ಆದರೆ ಅದನ್ನು ಕೇಳಿಸಿಕೊಂಡ ಮತ್ತೊಬ್ಬ, ಹೌದಲ್ಲ, ಎರಡನೇಯವನಿಗೂ ಹಾರ್ಟ್ ಫೇಲ್ ಆದರೆ, ಗತಿಯೇನು ಎಂದು ಯೋಚಿಸಲಾರಂಭಿಸಿದಂತೆ. ಅವನಿಗೆ ನಿದ್ದೆಯೇ ಬರಲಿಲ್ಲವಂತೆ. ಆದರೆ ಪಕ್ಕದಲ್ಲಿದ್ದವ ಗೊರಕೆ ಹೊಡೆಯುತ್ತಿದ್ದನಂತೆ. ವಿಮಾನದಲ್ಲಿ ಒಂದು ಅಘೋಷಿತ ನಿಯಮವಿದೆ, ಅದೇನೆಂದರೆ ಯಾರೂ ವಿಮಾನ ಅಪಘಾತದ ಬಗ್ಗೆ ಮಾತಾಡಬಾರದು. ಸಾಮಾನ್ಯವಾಗಿ ಯಾರೂ ಮಾತಾಡುವುದಿಲ್ಲ ಸಹ. ಹೀಗಾಗಿ ಅಂತಾ ರಾಷ್ಟ್ರೀಯ ವಿಮಾನದಲ್ಲಿ ನೂರಾರು ಸಿನಿಮಾಗಳನ್ನು ವೀಕ್ಷಿಸುವ ಅವಕಾಶವಿರುತ್ತದೆ, ಆದರೆ ವಿಮಾನ ದುರಂತದ ದೃಶ್ಯ ಗಳಿರುವ ಸಿನಿಮಾಗಳಿರುವುದಿಲ್ಲ.

ಅಂಥ ದೃಶ್ಯಗಳಿದ್ದರೆ ಸಹಜವಾಗಿ ಪ್ರಯಾಣಿಕರು ಗಲಿಬಿಲಿಗೊಳ್ಳಬಹುದು ಎಂಬ ಕಾರಣದಿಂದ ಈ ಎಚ್ಚರ ವಹಿಸಲಾಗುತ್ತದೆ.
ಕೆಲ ವರ್ಷದ ಹಿಂದೆ ಇಥಿಯೋಪಿಯಾದ ಅಡಿಸ್ ಅಬಾಬದಿಂದ ಕೀನ್ಯಾದ ನೈರೋಬಿಗೆ ಹೋಗುತ್ತಿದ್ದ ಇಥಿಯೋಪಿಯನ್ ಏರ್‌ಲೈನ್ಸ್‌ಗೆ ಸೇರಿದ (ಬೋಯಿಂಗ್ 737 ಮ್ಯಾಕ್ಸ್ ೮8) ವಿಮಾನ ಟೇಕಾಫ್ ಆದ ಆರು ನಿಮಿಷ ಗಳಲ್ಲಿ ಧರೆಗೆ ಬಿದ್ದು 157 ಮಂದಿ ಮೃತ ಪಟ್ಟರು. ಆರು ತಿಂಗಳ ಹಿಂದೆ ಲಯನ್ ಏರ್ ಸಂಸ್ಥೆಗೆ ಸೇರಿದ ಇದೇ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಇಂಡೋನೇಷಿಯಾದ ಜಾವ ಸಮುದ್ರಕ್ಕೆ ಬಿದ್ದು 189 ಪ್ರಯಾಣಿಕರು ಸತ್ತಿದ್ದರು.

ಹಾಗೆ ನೋಡಿದರೆ ಇದು ಅತ್ಯಾಧುನಿಕ ವಿಮಾನ. ಈ ವಿಮಾನವನ್ನು ಕಮರ್ಶಿಯಲ್ ಉದ್ದೇಶಕ್ಕೆ ಬಿಡುಗಡೆ ಮಾಡುವ ಮುನ್ನ ಎರಡು ವರ್ಷ ಪರೀಕ್ಷೆ ಮಾಡಲಾಗಿದೆ. ಜಗತ್ತಿನ ನುರಿತ ವೈಮಾನಿಕ ತಜ್ಞರು ಈ ಮಾದರಿ ವಿಮಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವೆಲ್ಲ ಆದ ನಂತರವೇ ಹಾರಾಟಕ್ಕೆ ಬಿಡಲಾಗಿದೆ. ಆದರೆ ಆರು ತಿಂಗಳ ಅವಧಿಯಲ್ಲಿ ಎರಡು ಭಾರಿ ಅಪ ಘಾತಕ್ಕೆ ತುತ್ತಾಗಿರುವುದು ಜಗತ್ತಿನೆಡೆ ವಿಮಾನ ಪ್ರಯಾಣಿ ಕರ ಜಂಘಾಬಲವನ್ನೇ ಉಡುಗಿಸಿತ್ತು.

ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವೆಂದರೆ ಜನ ಹೆದರಲಾರಂಭಿಸಿದರು. ಇದನ್ನು ಕಂಡು ಬೋಯಿಂಗ್ ಕಂಪನಿ ಕಂಗಾಲಾಯಿತು. ಕಂಪನಿಯ ಷೇರುಗಳ ಬೆಲೆ ಹಠಾತ್ ಕುಸಿಯಿತು. ಎಲ್ಲರೂ ಈ ವಿಮಾನವನ್ನು ‘ಹಾರುವ ಶವದ ಪೆಟ್ಟಿಗೆ’ ಎಂದು ಗೇಲಿ ಮಾಡಿದರು. ಕೊನೆಗೆ ಯಾಕೆ ರಿಸ್ಕ್ ತೆಗೆದುಕೊಳ್ಳಬೇಕು ಅಂತ ಅವೆಲ್ಲ ಈ ವಿಮಾನವನ್ನು ಗ್ರೌಂಡ್ ಮಾಡಲಾ ಯಿತು.

ಬೋಯಿಂಗ್ ವಿಮಾನ ತಯಾರಿಕೆ ಸಂಸ್ಥೆ ಕೆಲ ವರ್ಷಗಳ ಹಿಂದೆ, 787 ಡ್ರೀಮ್ ಲೈನರ್ ವಿಮಾನವನ್ನು ಬಿಡುಗಡೆ ಮಾಡಿದಾಗ ಇಂಥದೇ ಆತಂಕ ಮನೆ ಮಾಡಿತ್ತು. ಅದರಲ್ಲಿ ಬ್ಯಾಟರಿ ದೋಷದಿಂದಾಗಿ ಅದು ಕುಖ್ಯಾತಿ ಗಳಿಸಿತ್ತು. ಆಗ
ಬೋಯಿಂಗ್ ಸಂಸ್ಥೆ ಎ ವಿಮಾನಗಳನ್ನೂ ಶೆಡ್ಡಿಗೆ ಕಳಿಸಿತ್ತು. ಕೆಲವು ದಿನಗಳ ನಂತರ, ಈ ಭೀತಿ ನಿವಾರಣೆ ಆದ ನಂತರ,
ಪುನಃ ಹಾರಾಟಕ್ಕೆ ಬಿಟ್ಟಿತು. ಈಗ ಇದು ಎಲ್ಲರ ಅಚ್ಚುಮೆಚ್ಚಿನ ವಿಮಾನ. ಇಂಥದೇ ದುರ್ಗತಿ ಕಾನ್ ಕಾರ್ಡ್ ವಿಮಾನಕ್ಕೆ ಬಂದಿದ್ದನ್ನು ಮರೆಯುವಂತಿಲ್ಲ.

ಮಾನವ ಇತಿಹಾಸದಲ್ಲಿ ಅತ್ಯಂತ ವೇಗದ ಕಮರ್ಶಿಯಲ್ ವಿಮಾನ ಎಂಬ ಅಗ್ಗಳಿಕೆಗೆ ಪಾತ್ರವಾಗಿದ್ದ ಆ ವಿಮಾನ ಸತತ ಅಪಘಾತಗಳಿಗೆ ತುತ್ತಾಗಿ ಮ್ಯೂಸಿಯಂ ಸೇರಿದ್ದು ದುರಂತ! ಸುರಕ್ಷತೆ ಇದ್ದಲ್ಲಿ ಭಯ ಇರಬಾರದು. ವಿಪರ್ಯಾಸವೆಂದರೆ ಸುರಕ್ಷತೆ ಮತ್ತು ಭಯ ಎರಡೂ ಕೂಡಿರುವುದು ವಿಮಾನ ಪ್ರಯಾಣದಲ್ಲಿ ಮಾತ್ರ!

ನಾನು ಏನಿಲ್ಲವೆಂದರೂ ಮುನ್ನೂರಕ್ಕಿಂತ ಹೆಚ್ಚು ಸಲ ವಿದೇಶ ಪ್ರಯಾಣ ಮಾಡಿರಬಹುದು, ಪ್ರತಿ ಸಲ ದೇಶ ಸುತ್ತಾಡಿ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಾಗ ಜಗತ್ತನ್ನೇ ಜಯಿಸಿದಷ್ಟು ಸಂತಸವಾಗುತ್ತದೆ. ಆಯಸ್ಸು ಇನ್ನೂ ಇದೆ ಎಂಬುದು ಖಾತ್ರಿಯಾಗುತ್ತದೆ. ಮನದೊಳಗೇ ನಾನು ನಂಬಿದ ದೇವರಿಗೆ ದೀರ್ಘದಂಡ ನಮಸ್ಕಾರ ಹಾಕುತ್ತೇನೆ.