ಉದ್ಯಮಿಗಳು ಲಾಭ ನಷ್ಟದ ಜೊತೆಗೆ ಸಾಮಾಜಿಕ ಪರಿಣಾಮಗಳತ್ತಲೂ ಗಮನಹರಿಸಬೇಕು
ಹುಬ್ಬಳ್ಳಿ : ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣಗಳ ನಡುವೆ ಅಂತಃಕರಣ ಪುನಃ ಸ್ಥಾಪನೆಯಾಗಬೇಕು. ಉದ್ಯಮಿಗಳು ಲಾಭ ನಷ್ಟದ ಜೊತೆಗೆ ಸಮಾಜದ ಮೇಲೆ ಉಂಟಾಗುವ ಪರಿಣಾಮಗಳನ್ನೂ ಅರಿತು ಹೆಜ್ಜೆಯಿಡಬೇಕು. ಕೈಗಾರಿಕೆಗಳ ಉತ್ತೇಜನಕ್ಕೆ ತೆರಿಗೆ ಪದ್ಧತಿ ಸರಳೀಕರಣಗೊಳಿಸಲು ಸ್ವಯಂ ತೆರಿಗೆ ಪದ್ಧತಿ ಜಾರಿಗೊಳಿಸಲಾಗುವುದು.ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರ ಆರ್ ಆ್ಯಂಡ್ ಡಿ ನೀತಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಖಾಸಗಿ ಹೋಟೆಲಿನಲ್ಲಿಂದು ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಹುಬ್ಬಳ್ಳಿಯ ಕರ್ನಾ ಟಕ ವಾಣಿಜ್ಯೋದ್ಯಮ ಸಂಸ್ಥೆ ಆಯೋಜಿಸಿದ್ದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು,
21 ನೇ ಶತಮಾನದಲ್ಲಿ ಕೈಗಾರಿಕಾ ರಂಗದಲ್ಲಿ ಮತ್ತೊಮ್ಮೆ ಮಹತ್ತರ ಬದಲಾವಣೆಗಳಾಗುತ್ತಿವೆ.ರಾಜ್ಯದಲ್ಲಿಯೂ ತೆರಿಗೆ ಸರಳೀ ಕರಣ ಮಾಡಿ, ಸ್ವಯಂ ಘೋಷಿತ ತೆರಿಗೆ ಪದ್ಧತಿ ಜಾರಿಗೊಳಿಸಲಾಗುವುದು.ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಿ ಫಿಟ್‌ಮೆಂಟ್ ಅಂತಿಮಗೊಳಿಸಲಾಗುವುದು.ಹಿಂದೆಂದಿಗಿಂತಲೂ ಇಂದು ಉದ್ಯಮಶೀಲತೆ ಬಹಳ ಮುಖ್ಯವಾಗಿದೆ.
ಕೈಗಾರಿಕಾ ಮತ್ತು ವಾಣಿಜ್ಯದ ಪರಿಭಾಷೆ ,ಸರ್ಕಾರದ ಚಿಂತನೆ ಎರಡೂ ಬದಲಾಗಿವೆ. ಜಾಗತೀಕರಣ ಮುಕ್ತ ಆರ್ಥಿಕ ನೀತಿಗಳು ನೇರವಾಗಿ ಜನಸಾಮಾನ್ಯನ ಮೇಲೆ ಪರಿಣಾಮ ಬೀರಿವೆ.ನಮ್ಮ ಎಲ್ಲಾ ನಿರ್ಣಯಗಳ ಹಿಂದೆ ಲಾಭ,ನಷ್ಟದ ಉದ್ದೇಶ ಮಾತ್ರ ವಲ್ಲದೇ ಸಾಮಾಜಿಕ ದೃಷ್ಟಿಯ ಅರಿವು ಸ್ಪಷ್ಟವಾಗಿರಬೇಕು.ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರಗಳು ಪರಸ್ಪರ ಪೂರಕವಾಗಿ ಸಾಗಬೇಕು. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭೆ ಇದೆ,ತಂತ್ರಜ್ಞಾನ ಆಧಾರಿತ ಕೈಗಾರಿಕೆ ಗಳನ್ನು ಸ್ಥಾಪಿಸಿ ಪ್ರತಿಭೆಯ ಸದ್ಬಳಕೆ ಮಾಡಿಕೊಳ್ಳಬೇಕು. ಮೈಸೂರು ಮಹಾರಾಜರು ಸೇರಿ ನಮ್ಮ ಅನೇಕ ಪೂರ್ವಜರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಕೈಗಾರಿಕೆಗಳನ್ನು ಸ್ಥಾಪಿಸಿ ,ಅಭಿವೃದ್ಧಿಯ ಬುನಾದಿ ಹಾಕಿದ್ದಾರೆ.
ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡಿದ್ದರು ಈ ಕಾರಣದಿಂದಾಗಿಯೇ ಇಂದು ಐಟಿ-ಬಿಟಿ ರಂಗದಲ್ಲಿ ಸಾಧನೆ ಸಾಧ್ಯವಾಗಿದೆ. ಜನ ಸಾಮಾನ್ಯರ ಚಟುವಟಿಕೆಗಳು ಹಾಗೂ ಕೆಲಸಗಳನ್ನು ಆಧರಿಸಿ ಆರ್ಥಿಕತೆ ಚಲನಶೀಲ ವಾಗುತ್ತದೆ.ಸಮಾಜದ ಕಟ್ಟಕಡೆಯ ವ್ಯಕ್ತಿಯ ಸ್ಥಾನ,ಜೀವನ ಗೌರವಿಸುವ ಕಾರ್ಯವಾಗಬೇಕು.
ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ.43 ರಷ್ಟಿದೆ.ಎಥೆನಾಲ್ ಉತ್ಪಾದನೆಯಲ್ಲಿ , ಸೆಮಿ ಕಂಡಕ್ಟರ್ ಉತ್ಪಾದನೆಯಲ್ಲಿ ರಾಜ್ಯವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರ ಆರ್ ಆ್ಯಂಡ್ ನೀತಿ ಹಾಗೂ ಉದ್ಯೋಗ ನೀತಿ ಅಂಗೀಕರಿಸಲಾಗುವುದು.ಹೆಚ್ಚು ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಪ್ರೋತ್ಸಾಹ ಹೆಚ್ಚಿಸಲಾಗುವುದು.ಮಹಿಳೆಯರಿಗೆ ಹೆಚ್ಚು ಉದ್ಯೋಗ ನೀಡಬೇಕು.ಧನಾತ್ಮಕ ಆಲೋಚನೆ,ಸಾಹಸಿ ಮನೋಭಾವ ದೊಂದಿಗೆ ಜಾಗತಿಕ ತಂತ್ರಜ್ಞಾನದ ಪ್ರಯೋಜನ ಪಡೆಯಬೇಕು.
ವಾಣಿಜ್ಯೋದ್ಯಮ ಸಂಸ್ಥೆಗಳು ಸರ್ಕಾರ ,ಉದ್ಯಮ ಹಾಗೂ ಉದ್ಯೋಗ ಸೃಜನೆಯ ನಡುವೆ ಕೊಂಡಿಗಳಾಗಬೇಕು.ಸರ್ಕಾರ ಎಲ್ಲ ನೆರವು,ಪ್ರೋತ್ಸಾಹ ನೀಡಲಿದೆ.ನವಕರ್ನಾಟಕದಿಂದ ನವಭಾರತ ನಿರ್ಮಾಣ ಘೋಷಣೆಯಂತೆ ರಾಜ್ಯದಲ್ಲಿ ಹೊಸ ಆರು ಟೌನ್‌ಷಿಪ್ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದರು.
ಬೃಹತ್ ಮತ್ತು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ,ಕೃಷಿ ಸಚಿವ ಬಿ.ಸಿ.ಪಾಟೀಲ, ಕೈಮಗ್ಗ ,ಜವಳಿ ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ,ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ,ಎಫ್‌ಕೆಸಿಸಿಐ ಅಧ್ಯಕ್ಷ ಡಾ.ಐ.ಎಸ್.ಪ್ರಸಾದ,ಕೆಸಿಸಿಐ ಅಧ್ಯಕ್ಷ ವಿನಯ್ ಜವಳಿ ಸೇರಿದಂತೆ ವಾಣಿಜ್ಯೋದ್ಯಮ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.