Friday, 13th December 2024

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿರ

ದೆಹಲಿ:

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಹೊಸ ಔಷಧಿ ಸೇವನೆಯಿಂದ ಅಡ್ಡಪರಿಣಾಮ ಉಂಟಾಗಿ ಜ್ವರದಿಂದ ಬಳಸುತ್ತಿದ್ದ ಡಾ. ಸಿಂಗ್ ಅವರನ್ನು ಭಾನುವಾರ ಸಂಜೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಏಮ್ಸ್ ಆಸ್ಪತ್ರೆಯ ಕಾರ್ಡಿಯೊಥೋರಾಸಿಕ್ ಸೆಂಟರ್‌ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಲಾಗಿದೆ. ಜ್ವರಕ್ಕೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಮಾಜಿ ಪ್ರಧಾನಿ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು  ತಿಳಿಸಿವೆ.

ಡಾ. ಮನಮೋಹನ್ ಸಿಂಗ್ 2009ರಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನರಿ ಬೈಪಾಸ್ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವಿಶ್ವದ ಅಗ್ರಮಾನ ಆರ್ಥಿಕ ತಜ್ಞರಲ್ಲಿ ಒಬ್ಬರಾದ ಡಾ. ಸಿಂಗ್ 2004 ರಿಂದ 2014ರವರೆಗೆ ಪ್ರಧಾನಮಂತ್ರಿಯಾಗಿದ್ದರು. ಪ್ರಸ್ತುತ ಇವರು ರಾಜ್ಯಸಭಾ ಸದಸ್ಯರಾಗಿದ್ದಾರೆ.

ಗಣ್ಯರ ಹಾರೈಕೆ :
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಶೀಘ್ರ ಗುಣಮುಖರಾಗಲಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಂಪುಟ ಸಚಿವರು, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ.

ದೇವೇಗೌಡ ಹಾರೈಕೆ :

ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾರೈಸಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮನಮೋಹನ ಸಿಂಗ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಕರೋನಾ ಬಿಕ್ಕಟ್ಟಿನ ಈ ಸಮಯದಲ್ಲಿ ನಮ್ಮ ರಾಷ್ಟ್ರಕ್ಕೆ ಮನಮೋಹನಸಿಂಗ್ ಅವರ ಮಾರ್ಗದರ್ಶನ ಬೇಕಾಗಿದೆ. ಅವರ ಆರೋಗ್ಯದ ಬಗ್ಗೆ ನಮಗೆ ತೀವ್ರ ಕಾಳಜಿ ಇದೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.