Wednesday, 4th December 2024

ಸಪ್ತ ಮಹಾತ್ಮರ ಪ್ರತಿಮೆಗಳ ಅಭೂತಪೂರ್ವ ಮೆರವಣಿಗೆ

ವಿಜಯಪುರ : ವಿಜಯಪುರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಮಹಾತ್ಮರ ಮೂರ್ತಿಗಳ ಭವ್ಯ ಮೆರವಣಿಗೆ ರವಿವಾರ ನಡೆಯಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಅಭೂತಪೂರ್ವ ಮೆರವಣಿಗೆಗೆ ಸಾಕ್ಷಿ ಯಾದರು.

ಡೊಳ್ಳು ಕುಣಿತ, ಲಂಬಾಣಿ ನೃತ್ಯ ಸೇರಿದಂತೆ ಹಲವಾರು ಕಲಾ ತಂಡಗಳ ಸಾಂಸ್ಕೃತಿಕ ಶ್ರೀಮಂತಿಕೆಯ ಮಧ್ಯದಲ್ಲಿ ಮಹಾತ್ಮರ ಮೂರ್ತಿಗಳನ್ನು ಹೊತ್ತ ಸಾಲಂಕೃತ ವಾಹನಗಳು ಸಾಗಿದವು.

ಮೆರವಣಿಗೆಯ ರೂವಾರಿ ಹಾಗೂ ನೇತೃತ್ವ ವಹಿಸಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೆರವಣಿಗೆ ಯುದ್ದಕ್ಕೂ ಮಹಾತ್ಮರಿಗೆ ಜೈಜೈಕಾರ ಹಾಕುತ್ತಾ, ಸಾರ್ವಜನಿಕರಿಗೆ ನಮಿಸುತ್ತಾ ಸಾಗಿದರು.

ಎಲ್ಲೆಲ್ಲೂ ಕೇಸರಿ ಧ್ವಜ, ಕೇಸರಿ ಶಲ್ಯ ಧರಿಸಿದ ಯುವಕರ ದಂಡು ಕಾಣಿಸಿಗುತ್ತಿತ್ತು. ಸಹಸ್ರ ಸಹಸ್ರ ಸಂಖ್ಯೆಯ ಉದ್ಘೋಷಗಳ ನಡುವೆ ಮೆರವಣಿಗೆ ವೈಭವದ ರೂಪ ಪಡೆದುಕೊಂಡಿತು.

ಹಲವಾರು ಭಕ್ತಿಗೀತೆಗಳು, ಮಹಾತ್ಮರ ಉದ್ಘೋಷಗಳು ಮುಗಿಲು ಮುಟ್ಟಿದ್ದವು. ಇದಕ್ಕೆ ಇಂಬು ನೀಡಿದಂತೆ ಡೊಳ್ಳಿನ ನಿನಾದ, ವಿವಿಧ ಸಂಗೀತ ವಾದ್ಯಗಳ ಸದ್ದು ಮೆರವಣಿಗೆಯ ಕಳೆಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಸಾಲಂಕೃತ ವಾಹನಗಳಲ್ಲಿ ೧೫ ಫೂಟ್ ಎತ್ತರ ಮಹಾರಾಣಾ ಪ್ರತಾಪ್ ಸಿಂಹ್ ಅವರ ಪ್ರತಿಮೆ, ಸರ್ದಾರ್ ವಲ್ಲಭಾಯಿ ಪಟೇಲ್, ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರಕರ್, ಶ್ರೀ ಸ್ವಾಮಿ ವಿವೇಕಾನಂದರ, ರಾಜಮಾತೆ ಅಹಲ್ಯಬಾಯಿ ಹೋಳ್ಕರ, ಲಾಲ್ ಬಹಾದ್ದೂರ ಶಾಸ್ತ್ರಿ, ನೇತಾಜಿ ಸುಭಾಷ ಚಂದ್ರ ಭೋಸ್ ಅವರ ಭವ್ಯ ಪ್ರತಿಮೆಗಳ ಭವ್ಯ ಮೆರವಣಿಗೆ ನಡೆಯಿತು.

ವಿಜಯಪುರದ ಸೆಟಲೈಟ ಬಸನಿಲ್ದಾಣದಿಂದ ಪ್ರಾರಂಭವಾಗಿ ಭವ್ಯ ಮೆರವಣಿಗೆಯು ವಾಟರ ಟ್ಯಾಂಕ್, ಶಿವಾಜಿ ವೃತ್ತ, ಸರಾಫ ಲೈನ್, ಶ್ರೀ ರಾಮ ಮಂದಿರ ರಸ್ತೆ, ಡಾ.ಹೆಡಗೆ ವಾರ ವೃತ್ತ, ಬಂಜಾರಾ ಆಸ್ಪತ್ರೆ, ಅಟಲಬಿಹಾರಿ ವಾಜಪೇಯಿ ರಸ್ತೆಯ ಗಣಪತಿ ಚೌಕ, ಅಟಲ್ ಬಿಹಾರಿ ವಾಜಪೇಯಿ ಸರ್ಕಲ್, ಕಿರಾಣಾ ಬಜಾರ ಮೂಲಕ ಸಂಚರಿಸಿ ಶ್ರೀ ಸಿದ್ಧೇಶ್ವರ ಗುಡಿ ಎದುರು ತಲುಪಿ ಸಂಪನ್ನಗೊಂಡಿತು.

ಕರ್ನಾಟಕ ಕ್ಷತ್ರೀಯ ಸಮಾಜ ಒಕ್ಕೂಟದ ಅಧ್ಯಕ್ಷ ಉದಯಸಿಂಗ್, ಪಾಲಿಕೆ ಮಾಜಿ ಸದಸ್ಯ ಪರಶುರಾಮಸಿಂಗ್ ರಜಪೂತ, ತಾನಾಜಿ ಜಾಧವ್, ಶ್ರೀ ಸಿದ್ದೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷರಾದ ಸಂ.ಗು. ಸಜ್ಜನ, ಸಿದ್ಧಸಿರಿ ಸೌಹಾರ್ದ ಸಹಕಾರಿ ನಿರ್ದೇಶಕರಾದ ಜಗದೀಶ ಕ್ಷತ್ರಿ, ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ್ ಅಣ್ಣಿಗೇರಿ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಪಾಲಿಕೆ ಮಾಜಿ ಸದಸ್ಯ ರಾಜೇಶ ದೇವಗಿರಿ, ಪ್ರೇಮಾನಂದ ಬಿರಾದಾರ, ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಸಿದ್ರಾಮಪ್ಪ ಉಪ್ಪಿನ ಮೊದಲಾದವರು ಪಾಲ್ಗೊಂಡಿದ್ದರು.