ಮೇ 14 ರಂದು ಭಾರೀ ಮಳೆ ಮತ್ತು ಅನಾಹುತಕಾರಿ ಭೂಕುಸಿತದಿಂದಾಗಿ ಪ್ರಯಾಣಿಕರ ಮತ್ತು ಸರಕು ರೈಲು ಸೇವೆಗಳನ್ನು ರದ್ದು ಗೊಳಿಸಲಾಗಿತ್ತು.
ತ್ರಿಪುರಾ, ಮಿಜೋರಾಂ, ಮಣಿಪುರ ಮತ್ತು ದಕ್ಷಿಣ ಅಸ್ಸಾಂಗಳನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ರೈಲು ಮಾರ್ಗವಾಗಿರುವ ದಿಮಾ ಹಸಾವೊ ಪರ್ವತ ಜಿಲ್ಲೆಯ ಮೂಲಕ ಲುಮ್ಡಿಂಗ್-ಬದರ್ಪುರ ವಿಭಾಗದಲ್ಲಿ ಜು.12 ರಂದು ಸರಕು ರೈಲು ಸೇವೆಗಳು ಪ್ರಾರಂಭ ವಾಗಿವೆ ಎಂದು ಎನ್‌ಎಫ್‌ಆರ್‌ನ ವಕ್ತಾರ ಮಾಹಿತಿ ನೀಡಿದ್ದಾರೆ.
ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳ ನೀರಿನ ಮಟ್ಟ ಏರಿಕೆಯಿಂದ ಅಸ್ಸಾಂ ಭೀಕರ ಪರಿಸ್ಥಿತಿ ಉಂಟಾಗಿತ್ತು. ಪ್ರವಾಹ ಪೀಡಿತ ಮಣಿಪುರ, ತ್ರಿಪುರಾ, ಮಿಜೋರಾಂ ಮತ್ತು ಬರಾಕ್ ಕಣಿವೆ (ದಕ್ಷಿಣ ಅಸ್ಸಾಂ) ಪ್ರದೇಶಗಳಲ್ಲಿಅಗತ್ಯ ವಸ್ತುಗಳ ಕೊರತೆಯನ್ನು ತಪ್ಪಿಸಲು, ರೈಲು ಸಂಪರ್ಕವನ್ನು ಮರಳಿ ಆರಂಭಿಸುವಲ್ಲಿ ರೈಲ್ವೆ ಅಧಿಕಾರಿಗಳು, ಎಂಜಿನಿಯರ್‌ಗಳು, ಕಾರ್ಮಿಕರು ಹಗಲಿರುಳು ಶ್ರಮಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.
ಈ ವಿಭಾಗದಲ್ಲಿ ರೈಲ್ವೇ ಸೇವೆಗಳನ್ನು ಸ್ಥಗಿತಗೊಳಿಸಿದ್ದ ಹಿನ್ನೆಲೆಯಲ್ಲಿ, ತ್ರಿಪುರಾ ಮತ್ತು ಮಿಜೋರಾಂ ಈ ಹಿಂದೆ ಬಾಂಗ್ಲಾ ದೇಶದ ಮೂಲಕ ಅಗತ್ಯ ವಸ್ತುಗಳ ಸರಬರಾಜು ಮತ್ತು ಇಂಧನವನ್ನು ತರಲು ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ್ದವು.