Monday, 28th October 2024

ಎಪಿಎಂಸಿ ಕಾಯಿದೆಗೆ ತಿದ್ದುಪಡಿ ರೈತರಿಗೆ ಮಾರಕ

ಪಂಚಾಯಿತಿಗಳಿಗೆ ನಾಮ ನಿದೇರ್ಶನಕ್ಕೆ ವಿರೋಧ

ಬೆಂಗಳೂರು :

ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದ್ದು ಇದು ರೈತರ ಪಾಲಿಗೆ ಮಾರಕ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ತಾವು ಬೆಳೆದ ಬೆಳೆಗಳನ್ನು ಕೇಳುವವರಿಲ್ಲದೆ ರೈತ ಸಮುದಾಯ ಕಂಗಾಲಾಗಿದೆ. ಈ ಸಂದರ್ಭದಲ್ಲಿ ಕಾಯಿದೆಗೆ ತಿದ್ದುಪಡಿ ತರಲು ಹೊರಟಿರುವುದು ಅವರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದರು.

ರೈತರು ಬೆಳೆದ ತರಕಾರಿ, ಹೂ, ಭತ್ತ, ಜೋಳ, ಮಕ್ಕೆ ಜೋಳ, ಈರುಳ್ಳಿ, ತೊಗರಿ ಸೇರಿದಂತೆ ಆನೇಕ ಬೆಳೆಗಳನ್ನು ಸರ್ಕಾರ ಖರೀದಿ ಮಾಡಲೇ ಇಲ್ಲ. ಬಹುತೇಕ ರೈತರು ಖರೀದಿ ಮಾಡುವವರಿಲ್ಲದೆ ತಾವು ಬೆಳೆದ ಬೆಳೆಗಳನ್ನು ಬೀದಿಗೆ ಸುರಿಯುತ್ತಿದ್ದಾರೆ.
ಹಾಪ್ ಕಾಮ್ಸ್, ಎಪಿಎಂಸಿ ಮೂಲಕ ಖರೀದಿ ಮಾಡಿ, ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಎಂದರೆ ಕೇಳಲಿಲ್ಲ. ಜನರಲ್ಲಿ ಖರೀದಿ ಮಾಡುವ ಶಕ್ತಿ ಇದ್ದರೆ ಸರ್ಕಾರಕ್ಕೂ ಆದಾಯ ಬರುತ್ತದೆ. ಯಾರೂ ಖರೀದಿ ಮಾಡದೇ ಇದ್ದರೆ ಉತ್ಪಾದನೆ ಆಗದು, ಮಾರುಕಟ್ಟೆಯೂ ಕ್ರಿಯಾಶೀಲ ಆಗುವುದಿಲ್ಲ.

ಮೇ 5ರಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಪತ್ರ ಬರೆದು ಎಪಿಎಂಸಿ ಕಾಯಿದೆ ತಿದ್ದುಪಡಿ ಕುರಿತು ಮಾದರಿ ಪತ್ರ ಕಳುಹಿಸುತ್ತೇವೆ. ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತನ್ನಿ ಎಂದು ಹೇಳಿದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು. ರಾಜ್ಯ ಸರ್ಕಾರಗಳಿಗೆ ಈ ರೀತಿಯ ಆದೇಶ ನೀಡಲು ಹೇಗೆ ಸಾಧ್ಯ ? ಇದು ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ನಡೆಸಿರುವ ಸಂಚು. ಇದರಿಂದ ರೈತರಿಗೆ ಭಾರಿ ಅನ್ಯಾಯವಾಗುತ್ತದೆ. ಬಹು ರಾಷ್ಟ್ರೀಯ ಕಂಪನಿಗಳಿಗೆ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಈ ಕೆಲಸಕ್ಕೆ ಕೈ ಹಾಕಿದೆ.

ರೈತರಿಗೆ ಸಂಬಂಧಿಸಿದ ಕಾನೂನು ಮಾಡುವಾಗ ವಿಧಾನಸಭೆಯಲ್ಲಿ, ಸಾರ್ವಜನಿಕವಾಗಿ ಚರ್ಚೆ ಆಗಬೇಕು. ಏಕಾಏಕಿ ಆದೇಶ ಹೊರಡಿಸಿದರೆ ಹೇಗೆ ? ಸಂವಿಧಾನ ಪ್ರಕಾರ ಇದು ರಾಜ್ಯದ ಪಟ್ಟಿಯಲ್ಲಿ ಬರುವ ವಿಷಯ. ನಿರ್ಧಾರವನ್ನು ಕೇಂದ್ರ ಸರ್ಕಾರ ಆಯಾ ರಾಜ್ಯಗಳ ವಿವೇಚನೆಗೆ ಬಿಡಬೇಕು.

ತಿದ್ದುಪಡಿ ನಿರ್ಧಾರವನ್ನು ನಾವು ತೀವ್ರವಾಗಿ ವಿರೋಧ ಮಾಡುತ್ತೇವೆ. ಈ ಕುರಿತು ರೈತರ ಜೊತೆ, ಅಸೆಂಬ್ಲಿಯಲ್ಲಿ ಚರ್ಚೆ ಆಗಬೇಕು. ಅದುವರೆಗೆ ಸುಗ್ರೀವಾಜ್ಞೆ ಹೊರಡಿಸಬಾರದು. ಕಾರ್ಮಿಕರ ಕಾನೂನುಗಳನ್ನೂ ಸಸ್ಪೆಂಡ್ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ಯಾರಿಗೆ ಅನುಕೂಲ ? ಮ್ಯಾನೇಜ್‍ಮೆಂಟ್‍ಗಳಿಗೆ ಸಹಾಯ ಮಾಡಲು ಸರ್ಕಾರ ಈ ಹುನ್ನಾರ ನಡೆಸಿದೆ.

ಪಂಚಾಯಿತಿಗಳಿಗೆ ನಾಮನಿರ್ದೇಶನ ಬೇಡ :
ಗ್ರಾಮ ಪಂಚಾಯಿತಿಗಳ ಅವಧಿ ಮೇ 25ಕ್ಕೆ ಮುಗಿಯಲಿದೆ. ಚುನಾವಣೆ ಮುಂದೂಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ತೀರ್ಮಾನಿಸಿದೆ. ಜೊತೆಗೆ ಬಿಜೆಪಿ ಕಾರ್ಯಕರ್ತರನ್ನು ಪಂಚಾಯಿತಿಗಳಿಗೆ ಸದಸ್ಯರನ್ನಾಗಿ ನಾಮನಿದೇರ್ಶನ ಮಾಡುವ ನಿರ್ಧಾರವಾಗಿದೆ. ಇದಕ್ಕೂ ನಮ್ಮ ವಿರೋಧವಿದೆ. ಆರು ತಿಂಗಳ ವರೆಗೆ ಚುನಾವಣೆ ಮುಂದೂಡಲು ಕಾನೂನಿನಲ್ಲಿ ಅವಕಾಶವಿದೆ. ಬಿಜೆಪಿಯವರನ್ನು ಈಗಿರುವ ಸದಸ್ಯರನ್ನೇ ಮುಂದುವರಿಸಲಿ. ಅವರೆಲ್ಲಾ ಪಕ್ಷಾತೀತವಾಗಿ ಆಯ್ಕೆಯಾದವರು. ಆರು ತಿಂಗಳು ಅವರೇ ಮುಂದುವರಿದರೆ ತಪ್ಪೇನು ? ನಾಮನಿರ್ದೇಶನ ಮಾಡುವುದಕ್ಕೆ ನಮ್ಮ ತೀವ್ರ ವಿರೋಧವಿದೆ. ಸರ್ಕಾರ ತನ್ನ ನಿರ್ಧಾರ ಕೈ ಬಿಡದಿದ್ದರೆ ಹೋರಾಟ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.