Saturday, 23rd November 2024

ಆಂಧ್ರ ವಿಧಾನ ಪರಿಷತ್‌ ಚುನಾವಣೆ: ಅಭ್ಯರ್ಥಿಗಳ ಹೆಸರು ಘೋಷಣೆ

ಅಮರಾವತಿ: ಮುಂಬರುವ 2023ರ ಮಾರ್ಚ್‌ನಲ್ಲಿ ಆಂಧ್ರಪ್ರದೇಶದ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಪಕ್ಷದ ಅಭ್ಯರ್ಥಿ ಗಳನ್ನು ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ಘೋಷಿಸಿದ್ದಾರೆ.

8 ತಿಂಗಳು ಮೊದಲೇ ವೈಎಸ್‌ಆರ್‌ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದು ಆಂಧ್ರ ರಾಜಕೀಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಪರಿಷತ್‌ನ ಮೂರು ಪದವೀಧರ ಕ್ಷೇತ್ರಗಳು 2023 ಮಾರ್ಚ್‌ನಲ್ಲಿ ತೆರವಾಗಲಿವೆ.

ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ ಪದವೀಧರ ಕ್ಷೇತ್ರಕ್ಕೆ ಸರ್ಕಾರ ದಲ್ಲಿ ಬ್ರಾಹ್ಮಣರ ನಿಗಮದ ಅಧ್ಯಕ್ಷ ಎಸ್.ಸುಧಾಕರ್ ಅವರಿಗೆ ಮೇಲ್ಮನೆ ಟಿಕೆಟ್ ನೀಡಲಾಗಿದೆ.

ಪ್ರಕಾಶಂ, ನೆಲ್ಲೂರು, ಚಿತ್ತೂರು ಪದವೀಧರ ಕ್ಷೇತ್ರಕ್ಕೆ ಪ್ರಕಾಶಂನ ವೈಎಸ್‌ಆರ್ ಕಾಂಗ್ರೆಸ್ ಮುಖಂಡ ಶಾಮ್ ಪ್ರಸಾದ್ ರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಕರ್ನೂಲ್, ಕಡಪಾ, ಅನಂತಪುರ ಪದವೀಧರ ಕ್ಷೇತ್ರಕ್ಕೆ ಹಾಲಿ ಶಾಸಕ ವಿ.ರವೀಂದ್ರ ರೆಡ್ಡಿ ಅವರಿಗೆ ಟಿಕೆಟ್ ಕೊಡಲಾಗಿದೆ.

ಮುಂದಿನ ವರ್ಷದ ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ವಿಧಾನಪರಿಷತ್‌ನ ಪದವೀದರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಮೊದಲೇ ಟಿಕೆಟ್ ಘೋಷಣೆ ಮಾಡುವುದರಿಂದ ಅಭ್ಯರ್ಥಿಗಳಿಗೆ ಚುನಾವಣಾ ಪೂರ್ವ ತಯಾರಿ ನಡೆಸಲು ಅನುಕೂಲ ಆಗಲಿದೆ ಎನ್ನಲಾಗಿದೆ.