ಹಾಸನ:
ಕೋವಿಡ್-19 ಹಿನ್ನೆಲೆಯಲ್ಲಿ ಹೊರರಾಜ್ಯಗಳ ಸಂಚಾರ ಸ್ಥಗಿತಗೊಂಡಿರುವುದರಿಂದ, ಹೊರ ರಾಜ್ಯಗಳಿಂದ ಬಂದು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ತಮ್ಮ ಸ್ವಸ್ಥಾನಕ್ಕೆ ತೆರಳಲು ಸಾಧ್ಯವಿಲ್ಲದ ಕಾರಣ, ಗುತ್ತಿಗೆದಾರರು ಅವರಿಗೆ ನಿರಂತರ ಉದ್ಯೋಗ ಕಲ್ಪಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ವಿವಿಧ ಗುತ್ತಿಗೆದಾರರೊಡನೆ ಸಭೆ ನಡೆಸಿ ಮಾತನಾಡಿದ ಅವರು ಕೆಲವು ಕಾರ್ಮಿಕರು ತಮ್ಮ ಸ್ವಸ್ಥಾನಕ್ಕೆ ತೆರಳಲು ಅರ್ಜಿ ಸಲ್ಲಿಸುತ್ತಿದ್ದು, ಗುತ್ತಿಗೆದಾರರು ಇದರ ಬಗ್ಗೆ ನಿಗಾ ವಹಿಸಬೇಕು ಎಂದರು.
ಲಾಕ್‍ಡೌನ್ ಕಾರಣದಿಂದಾಗಿ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಈ ಸಮಯದಲ್ಲಿ ಉದ್ಯೋಗ ಇಲ್ಲವಾದರೆ ಊಟ, ವಸತಿಗೆ ಬಹಳ ತೊಂದರೆಯಾಗುತ್ತದೆ. ಆ ನಿಟ್ಟಿನಲ್ಲಿ ಗುತ್ತಿಗೆದಾರರು ತಮ್ಮ ಬಳಿ ಕೆಲಸ ಮಾಡುವ ಕಾರ್ಮಿಕರಿಗೆ ಪ್ರತಿನಿತ್ಯ ಉದ್ಯೋಗಾವಕಾಶ ನೀಡಬೇಕು ಎಂದು ಸೂಚಿಸಿದರು.
1947 ಕಾರ್ಮಿಕರು ಬಿಹಾರ್‍ಗೆ ಹೋಗಲು ಅರ್ಜಿ ಸಲ್ಲಿಸಿದ್ದು, ಉದ್ಯೋಗ ನೀಡಿದರೂ ಸಹ ತಮ್ಮ ರಾಜ್ಯಗಳಿಗೆ ಹೋಗಲು ಹಠ ಮಾಡಿದಲ್ಲಿ ಅಂತವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಇಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ತಹಶೀಲ್ದಾರ್ ಶಿವಶಂಕರಪ್ಪ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಹರ್ಷ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಂಜು ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.