Sunday, 24th November 2024

ವಲಸೆ ಕಾರ್ಮಿಕರ ತಪಾಸಣಾ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ, ಪರಿಶೀಲನೆ

ಧಾರವಾಡ:

ಕೋವಿಡ್-19 ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ವಲಸೆ ಕಾರ್ಮಿಕರು ಹಾಗೂ ಯಾತ್ರಿಕರು ಜಿಲ್ಲೆಗೆ ಆಗಮಿಸುವ ಮುನ್ನ ಆರೋಗ್ಯ ತಪಾಸಣೆಗಾಗಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಜಿಲ್ಲಾಡಳಿತ ಸ್ಥಾಪಿಸಿರುವ ವಲಸೆ ಕಾರ್ಮಿಕರ ತಪಾಸಣಾ ಕೇಂದ್ರಕ್ಕೆ ಬೃಹತ್, ಮಧ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜಗದೀಶ್ ಶೆಟ್ಟರ್ ಇಂದು ಸಂಜೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲೆಗೆ ಆಗಮಿಸುವ ವಲಸೆ ಕಾರ್ಮಿಕರ ನೊಂದಣಿ ಕೇಂದ್ರಕ್ಕೆ ಭೇಟಿ ನೀಡಿ, ವಲಸೆ ಕಾರ್ಮಿಕರ ವಿವರಗಳ ದಾಖಲಾತಿಯ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದ ಸಚಿವರು, ವಲಸೆ ಕಾರ್ಮಿಕರಿಗೆ ಕಲ್ಪಿಸಿರುವ ಆಸನ, ಕುಡಿಯುವ ನೀರು, ಆರೋಗ್ಯ ತಪಾಸಣೆ ಸೌಕರ್ಯಗಳ ವಿವರ ಪಡೆದರು. ಮೂಗು ಮತ್ತು ಗಂಟಲು ದ್ರವದ ಸಂಗ್ರಹಣೆ ಬೂತ್‍ಗೆ ಭೇಟಿ ನೀಡಿ ಕರ್ತವ್ಯನಿರತ ಆರೋಗ್ಯ ಸಿಬ್ಬಂದಿಯಿಂದ ಮಾಹಿತಿ ಪಡೆದರು.

ನಂತರ ಅವರು ಮಾತನಾಡಿ, ದಿನದ 24 ಗಂಟೆ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಆಯುಷ್ ವೈದ್ಯರು, ಪೊಲೀಸ್, ಪೌರಕಾರ್ಮಿಕರ ಕರ್ತವ್ಯವನ್ನು ಶ್ಲಾಘಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಅಂತರ್‍ರಾಜ್ಯ ಹಾಗೂ ಇತರ ಜಿಲ್ಲೆಗಳಿಂದ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದ ಹುಬ್ಬಳ್ಳಿ ತಾಲೂಕಿನ ಪಾಲಿಕೊಪ್ಪ ಆಗಮನ ಕೇಂದ್ರಗಳಲ್ಲಿ ನೊಂದಣಿ ಮಾಡಿಸಿ ಪ್ರಯಾಣದ ಮಾಹಿತಿ ದಾಖಲಿಸಲಾಗುತ್ತದೆ. ನಂತರ ಅವರ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಿ ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತದೆ.

ಮೇ. 07 ರಿಂದ ಇಂದು (ಮೇ.12) ರವರೆಗೆ ಜಿಲ್ಲೆಗೆ ಆಂಧ್ರಪ್ರದೇಶದಿಂದ 16, ಗೋವಾ 128, ಗುಜರಾತ್ 46, ಕೇರಳ 2, ಮಹಾರಾಷ್ಟ್ರ 219, ರಾಜಸ್ಥಾನ 14, ತಮಿಳುನಾಡು 47, ತೆಲಂಗಾಣ 33, ಮಧ್ಯಪ್ರದೇಶ 2 ಮತ್ತು ಉತ್ತರಪ್ರದೇಶದಿಂದ 4 ಹೀಗೆ ಒಟ್ಟು 10 ರಾಜ್ಯಗಳಿಂದ 511 ಜನ ವಲಸೆ ಕಾರ್ಮಿಕರ ಸೇರಿದಂತೆ ಇತರರು ಆಗಮಿಸಿದ್ದಾರೆ. ಇದರಲ್ಲಿ 184 ಜನ ಹೋಟೆಲ್ ಕ್ವಾರಂಟೈನ್ ಮತ್ತು 327 ಜನ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಟ್ಟಿದ್ದಾರೆ ಎಂದು ತಿಳಿಸಿದರು.

ಸಾಂಸ್ಥಿಕ ಕಾರಂಟೈನ್‍ಗೆ ಸಚಿವರ ಭೇಟಿ: ಜಿಲ್ಲಾಡಳಿತದಿಂದ ಪೊಲೀಸ್ ಹೆಡ್‍ಕ್ವಾರ್ಟರ್ಸ್‍ನ ಆವರಣದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದಲ್ಲಿ ಸ್ಥಾಪಿಸಲಾಗಿರುವ ಸಾಂಸ್ಥಿಕ ಕಾರಂಟೈನ್‍ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಕ್ವಾರಂಟೈನ್‍ನಲ್ಲಿರುವವರಿಗೆ ಕಲ್ಪಿಸಿರುವ ಸೌಲಭ್ಯಗಳ ಮಾಹಿತಿ ಪಡೆದರು. ಕ್ವಾರಂಟೈನ್‍ನಲ್ಲಿರುವವರಿಗೆ ನೀಡುವ ಅಗತ್ಯ ವಸ್ತುಗಳ ಕಿಟ್ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಬಿ.ಸಿ. ಸತೀಶ್, ಮಹಾನಗರ ಪಾಲಿಕೆಯ ಆಯುಕ್ತ ಡಾ: ಸುರೇಶ್ ಇಟ್ನಾಳ, ಡಿಸಿಪಿ ಕೃಷ್ಣಕಾಂತ, ಡಿವೈಎಸ್‍ಪಿ ರವಿ ನಾಯಕ, ಎಸಿಪಿ ಅನುಷಾ ಜಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ: ಯಶವಂತ ಮದೀನಕರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿರೂಪಾಕ್ಷ ಯಮಕನಮರಡಿ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿ.ಎನ್. ಪಾಟೀಲ್, ಡಿಡಿಪಿಐ ಎಂ.ಎಲ್. ಹಂಚಾಟೆ, ಡಾ: ಎಸ್.ಎಂ. ಹೊನಕೇರಿ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ತಹಶೀಲ್ದಾರ ಸಂತೋಷ ಬಿರಾದಾರ, ಕುಟುಂಬ ಕಲ್ಯಾಣಾಧಿಕಾರಿ ಡಾ:ಎಸ್.ಬಿ. ನಿಂಬಣ್ಣವರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.