Sunday, 24th November 2024

ಶಾಲಾ ಕಾಲೇಜು ದಿನಗಳು -’ಕಲಿ’ ಯುಗ

ತುಂಟರಗಾಳಿ

ಸಿನಿಗನ್ನಡ

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆ ಆಗಿವೆ. ಆದರೆ ಇಡೀ ಪಟ್ಟಿಯಲ್ಲಿ ಒಂದೂ ಕೂಡಾ ವಾವ್ ಎನಿಸುವಂಥ ಆಯ್ಕೆಗಳು ಇಲ್ಲದೇ ಇರೋದು ವಿಪರ್ಯಾಸ. ಅದೇನು ಈ ಬಾರಿಯ ಸಿನಿಮಾಗಳೇ ಹಂಗಿದ್ದವೋ ಅಥವಾ ನಮ್ಮ ಪ್ರಶಸ್ತಿ ಕೊಡುವ ಮಾನದಂಡಗಳು ಇನ್ನೂ ಅದೇ ಹಳೆಯ ಮನಸ್ಥಿತಿಯಲ್ಲಿ ಇವೆಯೋ ಗೊತ್ತಿಲ್ಲ.

ಆದರೆ ಖುಷಿ ಪಡುವಂಥ ಅಂಶಗಳು ಈ ಬಾರಿಯ ಪ್ರಶಸ್ತಿಯ ಪಟ್ಟಿಯಲ್ಲೂ ಕಡಿಮೆ ಅನ್ನೋದಂತೂ ನಿಜ. ಕನ್ನಡದ ತಲೆದಂಡ. ಡೊಳ್ಳು ಸಿನಿಮಾಗಳಿಗೆ ಪ್ರಶಸ್ತಿ ಬಂದಿದೆ ಅಂತ ಖುಷಿ ಪಡಬಹುದು ನಿಜ. ಆದರೆ ಮತ್ತದೇ, ನಮ್ಮ ಕಲೆ, ನಮ್ಮ ನಾಡು ಅನ್ನೋ ಸೆಂಟಿಮೆಂಟ್ ಇರೋ, ಬರೀ ಸಿನಿಮಾದ ಕಾನ್ಸೆ ನೋಡಿ ಪ್ರಶಸ್ತಿ ಕೊಡೋ ಹಳೆಯ ಕಾಲದ ಕಾನ್ಸೆ ಇನ್ನೂ ಇದೆ ಅನ್ನಿಸಿದ್ದು ಡೊಳ್ಳು ಚಿತ್ರಕ್ಕೆ ಬಂದ ಪ್ರಶಸ್ತಿ ನೋಡಿ.

ಇನ್ನು, ಅತ್ಯುತ್ತಮ ಚಿತ್ರ ಭಾಗದಲ್ಲಿ ಸೂರರೈ ಪೋಟ್ರು ಸಿನಿಮಾ, ಮತ್ತು ನಟ, ನಟಿಯರ ವಿಭಾಗದಲ್ಲಿ ಸೂರ್ಯ, ಅಪರ್ಣಾ ಬಾಲಮುರಳಿ, ತಾನಾಜಿ ಸಿನಿಮಾಗಾಗಿ ಅಜಯ್ ದೇವಗನ್ ಪ್ರಶಸ್ತಿ ಗೆದ್ದಿರೋದಂತೂ ತೀರಾ ಬಾಲಿಶ. ಯಾಕಂದ್ರೆ, ಆಯಾ ಚಿತ್ರಗಳಲ್ಲಿ ಅವರೆಲ್ಲರ ಅಭಿನಯ ಚೆನ್ನಾಗಿತ್ತು ಎಂದು ಹೇಳಬಹುದಷ್ಟೇ. ಆದರೆ, ಅದರಲ್ಲಿ ನ್ಯಾಷನಲ್ ಅವಾರ್ಡ್ ಕೊಡು ವಂಥದ್ದೇನೂ ಇರಲಿಲ್ಲ ಅನ್ನೋದು ಸಾಮಾನ್ಯ ಪ್ರೇಕ್ಷಕರ ಅಭಿಪ್ರಾಯ. ಇದು ಸೂರರೈ ಪೋಟ್ರು ಚಿತ್ರಕ್ಕೂ ಅನ್ವಯಿಸುತ್ತದೆ.

ಅದು, ಕ್ಯಾಪ್ಟನ್ ಗೋಪಿನಾಥ್ ಅವರ ಕಥೆ ಇರಬಹುದು, ಆದರೆ ಅದೊಂದು ಮಾಮೂಲಿ ಕಮರ್ಷಿಯಲ್ ಸಿನಿಮಾ. ಅದಕ್ಕೂ ಹೆಚ್ಚಾಗಿ ಈ ಚಿತ್ರದ ಚಿತ್ರಕಥೆಯಲ್ಲಿ ನ್ಯಾಷನಲ್ ಅವಾರ್ಡ್ ಕೊಡುವಂಥ ಅದ್ಯಾವ ಗುಣಗಳು ಕಂಡವೋ ಅಂತ ಪ್ರಶಸ್ತಿ ಕೊಟ್ಟವರೇ ಹೇಳಬೇಕು.

ಲೂಸ್ ಟಾಕ್
ವಿಶ್ವೇಶ್ವರ ಭಟ್ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ಮೊನ್ನೆ ಭರ್ಜರಿ ಹುಟ್ಟು ಹಬ್ಬ ಮಾಡಿಕೊಂಡ್ರಂತೆ?
-ಹೌದ್ರೀ, ಮೊನ್ನೆ ಶುರುವಾದ ಹಾರೈಕೆಗಳು ಇನ್ನೂ ನಿಂತಿಲ್ಲ, ನಾನು ಸದ್ಯಕ್ಕೆ WISHವೇಶ್ವರ ಭಟ್ ಆಗಿದ್ದೀನಿ.

=ಜನ ನೂರೆಂಟು ಮಾತು ಆಡೋದೂ, ನೀವು ಒಂದ್ ಮಾತು ಆಡೋದೂ ಒಂದೇ ಬಿಡಿ ಸರ್. ಸರಿ, ನೀವು ಹುಟ್ಟುಹಬ್ಬಕ್ಕೆ ಕೇಕ್ ಕಟ್ ಮಾಡಲ್ವಾ?

-ಮಾಡ್ಬೇಕು ಅಂತಿದ್ದೆ. ಅಭಿಮಾನಿಗಳು ಕೂಡ ಕೇಕ್ ತಂದಿದ್ರು, ಆದ್ರೆ, ನಾನು ಅದನ್ನ ನೋಡಿ, ಇದನ್ನ ಕಟ್ ಮಾಡ್ಬೇಕಾ, ಎಡಿಟ್ ಮಾಡ್ಬೇಕಾ ಅಂತ ಕೇಳ್ದೆ. ವಾಪಸ್ ತಗೊಂಡ್ ಹೋಗ್ಬಿಟ್ರು!

=ಬರ್ತ್ ಡೇ ಟೈಮಲ್ಲೂ ನಿಮಗೆ ಬರವಣಿಗೆಯ ಧ್ಯಾನ. ಸರಿ, ಎಲ್ರೂ ಹುಟ್ಟುಹಬ್ಬಕ್ಕೆ ಪಾರ್ಟಿ ಮಾಡಿದ್ರೆ, ನೀವು ಮಾತ್ರ ಪುಸ್ತಕ ರಿಲೀಸ್ ಮಾಡಿದ್ದೀರಲ್ಲ ಸರ್..
-ಇಲ್ಲ ಕಣ್ರೀ, ಪುಸ್ತಕ ಬಿಡುಗಡೆಗೂ ಭೈರಪ್ಪ, ಪ್ರತಾಪ್ ಸಿಂಹ ಹಿಂಗೆ ಒಳ್ಳೊಳ್ಳೆ ಪಾರ್ಟಿಗಳು ಬಂದಿದ್ರು!

=ಸಾರ್, ನಂಗೊಂದ್ ಡೌಟು, ನಾನ್ ವೆಜ್ ಅಡಿಗೆ ಮಾಡೋರನ್ನೂ ‘ಅಡಿಗೆ ಭಟ್ರು’ ಅಂತ ಕರೆಯೋದು ಸರಿನಾ?
-ಅದು, ನೀವೀಗ, ವೆಜಿಟೇರಿಯನ್ ಜೋಕ್ ಹೇಳ್ತಿರೋ ಅಥವಾ ನಾನ್ ವೆಜ್ ಜೋಕ್ ಹೇಳೋಕ್ ಹೊರಟಿದ್ದೀರೋ ಅನ್ನೋದ್ರ ಮೇಲೆ ಡಿಪೆಂಡ್ ಆಗುತ್ತೆ!

=ಸರ್, ನಿಮ್ ಬರ್ತ್ ಡೇ ಸ್ಪೆಷಲ್ ಅಂತ ಈ ಪ್ರಶ್ನೆಗೆ ಒಂದ್ ಸ್ಪೆಷಲ್ ಉತ್ರ ಕೊಡಿ. ಕವಿತೆಗೂ, ಕಾವ್ಯಕ್ಕೂ ಏನು ವ್ಯತ್ಯಾಸ?
-ನೋಡ್ರೀ ಚಳಿಗಾಲದಲ್ಲಿ, ಕವಿತೆಗಳೂ, ಮಕ್ಕಳೂ ಹುಟ್ತವೆ. ಮಕ್ಕಳ ಥರ ಕವಿತೆನೂ ಸ್ಕೂಲಿಗ್ ಸೇರಿಸಿದ್ರೆ, ಕಾಲೇಜಿಗೆ ಹೋದ ಮೇಲೆ ಕಾವ್ಯ ಆಗುತ್ತೆ!

ನೆಟ್ ಪಿಕ್ಸ್
ಖೇಮು ಒಂದು ಹುಡುಗೀನ ತುಂಬಾ ಲವ್ ಮಾಡ್ತಾ ಇದ್ದ. ಆದರೆ ಆ ಹುಡುಗಿ ಇವನನ್ನು ಇಷ್ಟ ಪಡ್ತಾ ಇರಲಿಲ್ಲ. ತುಂಬಾ ಪ್ರಯತ್ನಪಟ್ಟಮೇಲೂ ಹುಡುಗಿ ಖೇಮುವನ್ನು ಮದುವೆ ಆಗಲು ಒಪ್ಪಲಿಲ್ಲ. ಖೇಮುಗೆ ಅತಿ ದೊಡ್ಡ ನಿರಾಸೆ ಆಗುವಂತೆ ಅವಳ ಮದುವೆ ಕೂಡ ಫಿಕ್ಸ್ ಆಯ್ತು. ಈಗ ಖೇಮು ತೀರಾ ನಿರಾಸೆಗೊಳಗಾದ. ಸ್ನೇಹಿತ ಸೋಮುವನ್ನು ಎಣ್ಣೆ ಹೊಡಿಬೇಕು ಬಾ ಅಂತ ಕರೆದು ತನ್ನ ಮನಸ್ಸಿನ ನೋವನ್ನೆ ತೋಡಿಕೊಂಡ. ಅದಕ್ಕೆ ತುಂಬಾ ಯೋಚನೆ ಮಾಡಿದ ಸೋಮು, ನೋಡು ಒಂದ್ ಕೆಲ್ಸ ಮಾಡು, ಅವಳನ್ನು ಮದ್ವೆ ಆಗ್ತಾ ಇರೋ ಹುಡುಗನ ಹತ್ರ ಹೋಗಿ ನನಗೆ ಆ ಹುಡುಗಿ ಜತೆ ಅಫರ್ ಇತ್ತು ಅಂತ
ಹೇಳು.

ಆಗ ಮದುವೆ ಮುರಿದು ಬೀಳತ್ತೆ ಅಂದ. ಅವನು ಹೆಂಗ್ ನಂಬ್ತಾನೆ ಅಂತ ಕೇಳಿದ ಖೇಮು. ಅದಕ್ಕೆ ಸೋಮು ಹೇಳಿದ, ನನ್ನ ಮೈ ಮೇಲೆ ಟೋಟಲ್ 6  ಮಚ್ಚೆ ಇದೆ ಅಂತ ನನ್ ತಂಗಿ ಹತ್ರ ನಿನ್ ಹುಡುಗಿ ಹೇಳಿದ್ಳಂತೆ. ನೀನು ಸುಮ್ನೆ ಅವಳ ದೇಹದಲ್ಲಿ ಇಂಥ ಕಡೆ ಮಚ್ಚೆ ಇದೆ ಅಂತ ಮದುವೆ ಆಗೋ ಹುಡುಗನಿಗೆ ಹೇಳು. ಮದುವೆ ಮುರಿದು ಬೀಳುತ್ತೆ ಅಂತ ಹೇಳಿದ. ಸರಿ ಖೇಮು ಮರುದಿನ ಸೋಮು ಹೇಳಿದ ಪ್ಲ್ಯಾನ್ ವರ್ಕ್‌ಔಟ್ ಮಾಡೋಕೆ ಹೋಗಿ ಸಪ್ಪೆ ಮೋರೆ ಹಾಕ್ಕೊಂಡು ಬಂದ. ಅವನನ್ನು ನೋಡಿದ ಸೋಮು ಏನಾಯ್ತೋ ಅಂತ ಕೇಳಿದ.

ಅದಕ್ಕೆ ಖೇಮು ಹೇಳಿದ, ಇ ಕಣೋ, ನಮ್ಮ ಪ್ಲ್ಯಾನ್ ವರ್ಕ್ ಔಟ್ ಆಗ್ಲಿಲ್ಲ. ನಾನು ನೀನು ಹೇಳಿದ ಐಡಿಯಾ ಪ್ರಕಾರ ಹೇಳಿದ್ದಕ್ಕೆ, ಆ ಹುಡುಗ, ಅದಕ್ಕೇನಿವಾಗ? ಅಂತ ತುಂಬಾ ಕ್ಯಾಷುವಲ್ ಆಗಿ ಹೇಳಿಬಿಟ್ಟ. ವಾಪಸ್ಸು ಬಂದೆ. ಸರಿ ನೀನು ಏನಂತ ಹೇಳಿದೆ? ಅಂತ ಸೋಮು ಕೇಳಿದ. ಅದಕ್ಕೆ ಖೇಮುವಿನಿಂದ ಉತ್ತರ ಬಂತು. ನಾನ್ ಒಂದ್ ಮಾತು ಹೇಳ್ತೀನಿ. ಇದಕ್ಕೇನರ್ಥ ಅಂತ ನೀನೇ ಡಿಸೈಡ್ ಮಾಡು. ನೀನು ಮದ್ವೆ ಆಗ್ತಾ ಇರೋ ಹುಡುಗಿಯ ಎಡಗೆನ್ನೆಯ ಮೇಲೆ ಒಂದು ಮಚ್ಚೆ ಇದೆ, ಅಂತ
ಹೇಳಿದೆ.

ಲೈನ್ ಮ್ಯಾನ್
=ಅಕ್ವೇರಿಯಂನಲ್ಲಿ ಮೀನು ಸಾಕುವವರನ್ನು ಏನಂತಾರೆ?
-ವೆಜಿಟೇರಿಯ
=‘ದತ್ತು’ ಪುತ್ರ ಮದುವೆ ಆದಮೇಲೆ ಮೂರ್ನಾಲ್ಕು ಮಕ್ಕಳನ್ನ ಹುಟ್ಟಿಸಿದ್ರೆ ಅವರಪ್ಪ ಅಮ್ಮ ಏನು ಹೇಳ್ತಾರೆ?
-‘ಸಾಕು’ ಮಗ
=ಕಲಿಯುಗ ಅಂದ್ರೆ ಯಾವುದು ?
-ಜನ ಪ್ರೀತಿ ವಾಪಸ್ ಕೊಟ್ಟಷ್ಟೇ ನಿಯತ್ತಾಗಿ ಸಾಲನೂ ವಾಪಸ್ ಕೋಡೋ ಕಾಲ
=ಶಾಲಾ ಕಾಲೇಜು ದಿನಗಳನ್ನು ಏನೆನ್ನಬಹುದು ?
-‘ಕಲಿ’ಯುಗ
=ಭಯಾನಕವಾಗಿ ಗೊರಕೆ ಹೊಡೆಯುವವನು
-‘ಖರ್ರ‍ಾಟೆ’ ಕಿಂಗ್
=ಕ್ಲಬ್ ಹೌಸ್ ಹವಾ ಕಮ್ಮಿ ಆದಮೇಲೆ ಸೋಷಿಯಲ್ ಮೀಡಿಯಾ ಸ್ಟೇಟಸ್‌ಗಳು
ಫೇಸ್ಬುಕ್- ನಂಗೆ ಕಡ್ಲೇಕಾಯಿ ಅಂದ್ರೆ ಇಷ್ಟ
ಟ್ವಿಟ್ಟರ್-ನಾನು ಕಡ್ಲೇಕಾಯಿ ತಿಂತಾ ಇದ್ದೀನಿ
ಇನ್ಸ್ಟಾಗ್ರಾಮ- ನಾನು ಕಡ್ಲೇಕಾಯಿ ತಿಂತಿರೋ ಫೋಟೋ
ಯೂಟ್ಯೂಬ್- ನಾನು ಕಡ್ಲೇಕಾಯಿ ತಿಂದ ವಿಡಿಯೋ
ಕ್ಲಬ್ ಹೌಸ್ – ನಾನು ಕ್ಲಬ್ ಹೌಸ್ ಎಂಪ್ಲಾಯಿ. ಮಾಡಕೇನು ಕೆಲ್ಸ ಇಲ್ಲ, ಇನ್ನೇನ್ ಮಾಡೋದು. ಅದಕ್ಕೇ ಕಡ್ಲೆಕಾಯಿ ತಿಂತಾ ಇದ್ದೀನಿ.
=ವರ್ಷಕ್ಕೊಂದು ಫೋನ್ ಬದಲಾಯಿಸಿದರೆ ಅದು
-ಇಯರ್ ಪೋನ್
=ಎಂಬಿಎ ಮಾಡಿದವರು ಬುಕ್ ಮಾಡೋ ಫ್ಲೈಟ್ ಟಿಕೆಟ್
-ಬ್ಯುಸಿನೆಸ್ ಕ್ಲಾಸ್
=ಬುದ್ಧನಂತೆ ಆಗೋಕೆ ಇರಬೇಕಾದ ಅರ್ಹತೆ ಏನು?
-ಎಲ್ಲವನ್ನೂ ಬಿಟ್ಟು ಹೋಗೋಕೆ, ಏನಾದ್ರೂ ಇರಬೇಕು