Friday, 22nd November 2024

ಓಲಾ…ಹೀಂಗಾಗ್ರೆ ಹ್ಯಾಂಗಲಾ …?

ವಿದೇಶವಾಸಿ

dhyapaa@gmail.com

ಓಲಾದ ಭವಿಷ್ಯ ಡೋಲಾಯಮಾನ ಎಂಬ ಅನುಮಾನವೂ ಮೂಡುತ್ತಿದೆ. ಅದಕ್ಕೆ ಪ್ರಮುಖವಾಗಿ ಎರಡು ಕಾರಣಗಳು. ಮೊದಲನೆಯದಾಗಿ, ಓಲಾ ನಡೆಯುತ್ತಿದ್ದುದೇ ಚಾಲಕರಿಂದ. ಓಲಾ ಸಂಸ್ಥೆಯಲ್ಲಿ ತನ್ನದು ಎಂದುಕೊಳ್ಳುವ ವಾಹನಗಳಿಲ್ಲ. ಅವರದ್ದೇನಿದ್ದರೂ ಗ್ರಾಹಕರು ಮತ್ತು ಚಾಲಕರ ನಡುವೆ ಸಂಬಂಧ ಏರ್ಪಡಿಸುವ ಕೆಲಸ ಮಾತ್ರ.

‘ಅಣ್ಣಾ ಚಾಮರಾಜ ಪೇಟೆಗೆ ಬರ್ತೀರಾ…?’ ’ಮೀಟರ್ ಮೇಲೆ ಐವತ್ತು ಹೆಚ್ಚು ಕೊಟ್ರೆ ಬರ್ತೀನಿ’, ’ಗುರು, ಚಿಕ್ಕಸಂದ್ರಕ್ಕೆ ಬರ್ತೀರಾ…?’ ‘ರಿಟರ್ನ್ ಯಾರೂ ಸಿಗಲ್ಲ, ಬರಲ್ಲ ಸರ್’. ‘ಭಾಯಿ, ಚೌಪಾಟಿ ಚಲೇಂಗೆ ಕ್ಯಾ…?’ ‘ನಹಿ ಸಾಬ’.

ಒಂದೆರಡು ದಶಕದ ಹಿಂದಿನವರೆಗೂ ಇದು ಮಾಮೂಲಿ ಡೈಲಾಗ್. ಬೆಂಗಳೂರಿನ ರಸ್ತೆ ಬದಿಯಲ್ಲಿ ನಿಂತು ಆಟೋದವರನ್ನು ಕೇಳಿ ಅಥವಾ ಮುಂಬೈನ ರೇಲ್ವೆ ಸ್ಟೇಷನ್ ಅಥವಾ ಹೈದರಾಬಾದ್‌ನ ಬಸ್ ಸ್ಟ್ಯಾಂಡ್‌ನಲ್ಲಿ ನಿಂತು ಟ್ಯಾಕ್ಸಿಯವರನ್ನು ಕೇಳಿ. ಈ ರೀತಿಯ ಪ್ರಶ್ನೆ, ಅದಕ್ಕೆ ಬರುವ ಉತ್ತರ ಸಾಮಾನ್ಯವಾಗಿ ಇದೇ ಇರುತ್ತಿತ್ತು. ಒಂದೋ ಮನೆಯಿಂದ ಹೊರಟು ಹಿಂತಿರುಗಿ ಮನೆಗೆ ಬರುವವರೆಗೂ ದಿನದ ಲೆಕ್ಕದಲ್ಲಿ ವಾಹನವನ್ನು ಬಾಡಿಗೆಗೆ ಪಡೆಯಬೇಕು ಅಥವಾ ಟ್ಯಾಕ್ಸಿ, ರಿಕ್ಷಾ ಡ್ರೈವರ್‌ಗಳ ಮರ್ಜಿಗೆ ಕಾದು ಪ್ರಯಾಣ ಕೈಗೊಳ್ಳಬೇಕು.

ಕೆಲವು ವರ್ಷಗಳ ಹಿಂದೆ ಕಂಪನಿಗಳು ಈ ವ್ಯವಸ್ಥೆಯ ಒಳಗೆ ಇಳಿದು, ಬಾಡಿಗೆ ವಾಹನಗಳ ವ್ಯವಹಾರ ಆರಂಭಿಸಿದ ನಂತರವೇ ಪರಿಸ್ಥಿತಿ ಬದಲಾದದ್ದು. ಭಾರತದಲ್ಲಿ ಮೆರು, ಮೆಗಾ ಟ್ಯಾಕ್ಸಿಗಳು ಪಟ್ಟಿಯಲ್ಲಿದ್ದರೂ, ಧೂಳು ಹಾರಿಸಿದ್ದು ಮಾತ್ರ ಊಬರ್ ಮತ್ತು ಓಲಾ ಟ್ಯಾಕ್ಸಿಗಳೇ. ಭಾರತದ ಟ್ಯಾಕ್ಸಿ ಸೇವಾ ಮಾರುಕಟ್ಟೆಯಲ್ಲಿ ಇಂದು ಓಲಾ ಮೊದಲನೆಯ ಸ್ಥಾನದಲ್ಲಿದೆ. ಓಲಾ ಶೇಕಡಾ ಐವತ್ತಾರು ಪ್ರತಿಶತವನ್ನು ಹೊಂದಿದ್ದರೆ, ಊಬರ್ ಶೇಕಡಾ ನಲವತ್ತರಷ್ಟಿದೆ.

ಅಲ್ಲಿಗೆ, ಈ ಆಟ ದಲ್ಲಿ ಉಳಿದವರ ಪಾತ್ರ ಏನು ಎಂದು ಪ್ರತ್ಯೇಕ ಹೇಳಬೇಕಿಲ್ಲ. ಭಾರತದಲ್ಲಿ ಶೇಕಡಾ ಐದು ಪ್ರತಿಶತದಷ್ಟು ಜನ ಮಾತ್ರ ಸ್ವಂತ ವಾಹನ ಹೊಂದಿದವರಾಗಿದ್ದಾರೆ ಎಂದರೆ ಉಳಿದ ತೊಂಬತ್ತೈದು ಪ್ರತಿಶತ ಬಾಡಿಗೆ ವಾಹನವನ್ನೇ ಅವಲಂಬಿಸಿದ್ದಾರೆ. ಸಾಮಾನ್ಯ ವರ್ಗದ ಜನರು ಕಾರು ಖರೀದಿ ಮಾಡದೇ ಒಂದು ರಾಯಲ್ ರೈಡ್ ಮಾಡಬಹುದು ಎಂದು ತೋರಿಸಿಕೊಟ್ಟದ್ದು ಓಲಾ, ಊಬರ್‌ನಂತಹ ಸಂಸ್ಥೆಗಳು.

ಸ್ವಂತ ಕಾರು ಖರೀದಿಸಬೇಕೆಂದಿಲ್ಲ, ಬ್ಯಾಂಕಿಗೆ ಪ್ರತಿ ತಿಂಗಳು ಹಣ ಕಟ್ಟಬೇಕೆಂದಿಲ್ಲ, ಡ್ರೈವರ್‌ ಗೆ ಸಂಬಳ ನೀಡಬೇಕೆಂದಿಲ್ಲ, ಗಾಡಿಗೆ ಪೆಟ್ರೋಲ್ ಹಾಕಿಸಬೇಕೆಂದಿಲ್ಲ, ಕಾಲಕಾಲಕ್ಕೆ ರಿಪೇರಿ ಮಾಡಿಸುವ, ಸರ್ವೀಸ್ ಮಾಡಿಸುವ ತಲೆ ಬಿಸಿ ಇಲ್ಲ. ಬೇಕಾದಾಗ ಕರೆಸಿ, ರಾಜರಂತೆ ಕಾಲ ಮೇಲೆ ಕಾಲು ಹಾಕಿ ಕುಳಿತು, ತಾಣ ತಲುಪಿದಾಗ ಇಳಿದು ಹೋದರೆ, ಅಲ್ಲಿಗೆ ಅದರ
ಋಣ ತೀರಿತು. ಗ್ರಾಹಕರ ದೃಷ್ಟಿಯಿಂದ ನೋಡುವುದಾದರೆ, ಒಂದು ಕಡೆ ಜೇಬಿಗೆ ಸಮಾಧಾನ, ಇನ್ನೊಂದು ಕಡೆ ಡ್ರೈವರ್‌ಗಳ ಡೌಲಿಗೆ ಉತ್ತರ.

ಇದರಲ್ಲಿ ಮಹತ್ತರ ಪಾತ್ರವಹಿಸಿದ್ದು ಓಲಾ. ಓಲಾ ಆರಂಭವಾದ ಕಥೆಯೇ ಕುತೂಹಲಕಾರಿ. ಈ ಕಥೆಯಲ್ಲಿ ಕರ್ನಾಟಕ, ಅದರಲ್ಲೂ ಬೆಂಗಳೂರು ಮತ್ತು ಬಂಡಿಪುರದ ಪಾತ್ರವೂ ಇದೆ ಎನ್ನುವುದು ಎಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲ. ಆ ಒಂದು
ಘಟನೆ ನಡೆಯದಿದ್ದರೆ ಬಹುಶಃ ಇಂದು ಓಲಾ ನಮಗೆ ಲಭ್ಯವಿರುತ್ತಿರಲಿಲ್ಲ. ಒಬ್ಬ ಅಹಂಕಾರಿ, ಆಸೆಬುರುಕ ವಾಹನ ಚಾಲಕ ನಿಂದಾಗಿ ಓಲಾದ ಉಗಮವಾಯಿತು. ಅದಕ್ಕೆ ಆ ಚಾಲಕನಿಗೆ ಧನ್ಯವಾದ ಹೇಳಬೇಕು!

ಭಾವೇಶ್ ಅಗ್ರವಾಲ್ ಓದಿದ್ದು ಮುಂಬೈನ ಐಐಟಿ ಯದರೂ ತಮ್ಮದೇ ಆದ ಟ್ರಾವೆಲ್ ಏಜನ್ಸಿ ಮಾಡಿಕೊಂಡಿದ್ದರು. ಅವರ ಜತೆ ಅದೇ ಐಐಟಿಯಲ್ಲಿ ಓದಿದ, ಕಾಲೇಜು ದಿನಗಳಲ್ಲಿ ಅವರ ಪಕ್ಕದ ಕೋಣೆ ಯಲ್ಲಿ ಉಳಿದುಕೊಂಡಿದ್ದ ಅಂಕಿತ್ ಭಾಟಿ ಕೂಡ
ಇದ್ದರು. ಇಬ್ಬರೂ ಸೇರಿ ಊರಿಂದ ಊರಿಗೆ ಅಲೆದು ತಮ್ಮ ಪ್ರಯಾಣ ಸಂಸ್ಥೆಯ ಪ್ರಚಾರ ಮಾಡುತ್ತಿದ್ದರು. ಒಂದು ಕಾಲದಲ್ಲಿ ಇಬ್ಬರೂ ಸೇರಿ ದೆಹಲಿಯಲ್ಲಿ ನಡೆದ ಓಲಂಪಿಕ್ ಪಂದ್ಯಾಟ ನಡೆಯುವ ಮೈದಾನದ, ಒಳಾಂಗಣ ಕ್ರೀಡಾಂಗಣದ ಗೇಟಿನ
ಬಳಿ ನಿಂತು ಕರಪತ್ರ ಹಂಚಿದ್ದೂ ಇದೆ. ಇದು ಒಂದು ಉದಾಹರಣೆ ಅಷ್ಟೇ, ಇಂತಹ ಅನೇಕ ಕಡೆಗಳಲ್ಲಿ ಅವರು ತಮ್ಮ ಟ್ರಾವೆಲ್ ಏಜನ್ಸಿಯ ಪ್ರಚಾರ ಮಾಡುತ್ತಿದ್ದರು.

ಭಾವೇಶ್ ಅಗ್ರವಾಲ್ ಒಮ್ಮೆ ಬೆಂಗಳೂರಿನಿಂದ ಬಂಡಿಪುರಕ್ಕೆ ಹೋಗಬೇಕಾಗಿತ್ತು. ಅದಕ್ಕಾಗಿ ಅವರು ಬಾಡಿಗೆ ಕಾರನ್ನು ಹಿಡಿದು ಹೊರಟರು. ಮಾರ್ಗ ಮಧ್ಯದಲ್ಲಿ ಚಾಲಕ ವಾಹನ ನಿಲ್ಲಿಸಿ ಮುಂದೆ ಹೋಗಬೇಕಾದರೆ ಹೆಚ್ಚಿನ ಹಣ ನೀಡಬೇಕೆಂದು ಕೇಳಿದ. ಭಾವೇಶ್ ಮೊದಲು ಅದನ್ನು ತಮಾಷೆ ಎಂದು ತಿಳಿದರಾದರೂ, ನಂತರ ಆತ ನಿಜವಾಗಿಯೂ ತಾಕೀತು ಮಾಡುತ್ತಿದ್ದುದು ತಿಳಿಯಿತು. ಹೆಚ್ಚಿನ ಹಣ ನೀಡಲು ಭಾವೇಶ್ ಒಪ್ಪದಿದ್ದಾಗ, ಬಾಡಿಗೆ ವಾಹನದ ಚಾಲಕ ಅವರನ್ನು ಮಾರ್ಗ ಮಧ್ಯದಲ್ಲಿಯೇ ಇಳಿಸಿ ಹೋಗಿದ್ದ.

ಅಂದು ನಡು ರಾತ್ರಿಯಲ್ಲಿ ಭಾವೇಶ್ ನಡೆದೇ ತಾವು ತಲುಪಬೇಕಾದ ಸ್ಥಳ ತಲುಪಿದ್ದರು. ಆದರೆ ಮನಸ್ಸು ಕುದಿಯುತ್ತಿತ್ತು. ವಿಶ್ವಾಸ ಎಂಬ ಪದಕ್ಕೆ ಅಂದು ಬೆಲೆಯೇ ಇಲ್ಲದಂತಾಗಿತ್ತು. ಅಂದು ಭಾವೇಶ್ ಮನಸ್ಸಿನಲ್ಲಿ ಹೊಸ ವಿಚಾರ ಮೊಳಕೆಯೊಡೆ ದಿತ್ತು. ದೇಶದಲ್ಲಿ ತನ್ನಂತೆಯೇ ಇನ್ನೂ ಎಷ್ಟು ಜನ ಈ ರೀತಿ ಮೋಸ ಹೋಗಿರಬಹುದು? ಚಾಲಕರು ಜನರನ್ನು ಯಾವ ಯಾವ ರೀತಿಯಲ್ಲಿ, ಎಷ್ಟೆಷ್ಟು ಲೂಟಿ ಮಾಡಿರಬಹುದು? ಅವರೆಲ್ಲ ಎಷ್ಟು ನೊಂದಿರಬಹುದು? ಎಷ್ಟು ಶಾಪ ಹಾಕಿ ರಬಹುದು? ಇದಕ್ಕೆಲ್ಲ ಪರಿಹಾರ ಹೇಗೆ? ಪ್ರಯಾಣಿಕರು ಮತ್ತು ಚಾಲಕರ ನಡುವೆ ಒಂದು ಸುರಕ್ಷತೆಯ, ಭದ್ರತೆಯ, ವಿಶ್ವಾಸಾರ್ಹತೆಯ ಸೇತುವೆ ನಿರ್ಮಾಣವಾಗಬೇಕು.

ಆ ಬಾಂಧವ್ಯದ ಸೇತುವೆಯನ್ನು ಕಟ್ಟಿಕೊಡುವ ಕೆಲಸವನ್ನು ತಾನು ಮಾಡಬೇಕು ಎಂದು ನಿರ್ಧರಿಸಿದರು. ಡಿಸೆಂಬರ್ 2010 ರಲ್ಲಿ ‘ಓಲಾ’ ಆರಂಭಿಸಿದ್ದರು ಭಾವೇಶ್. ಭಾರತದಂತಹ ದೇಶದಲ್ಲಿ ಶಿಕ್ಷಣ ಸಂಸ್ಥೆ ನಡೆಯಬಹುದು, ಆಸ್ಪತ್ರೆ ನಡೆಸಬಹುದು, ಆದರೆ ಒಂದು ಟ್ಯಾಕ್ಸಿ ಕಂಪನಿ ಕಟ್ಟಿ ನಡೆಸುತ್ತೇನೆ ಎನ್ನುವುದಕ್ಕೆ ಗುಂಡಿಗೆ ಗಟ್ಟಿ ಇರಬೇಕು. ಭಾವೇಶ್ ಕಂಡ ಕನಸಿನ ಪರಿಣಾಮವಾಗಿ ಭಾರತದ ಟ್ಯಾಕ್ಸಿ ಸೇವೆಯಲ್ಲಿ ಕ್ರಾಂತಿಯೇ ಆಯಿತು. ಇಂದು ಹತ್ತು ಲಕ್ಷಕ್ಕೂ ಹೆಚ್ಚು ವಾಹನ ಮತ್ತು ಹದಿನೈದು ಲಕ್ಷದಷ್ಟು ಚಾಲಕರು ಓಲಾದೊಂದಿಗೆ ಒಪ್ಪಂದ ಮಾಡಿಕೊಂಡಿzರೆ.

ಓಲಾದಲ್ಲಿರುವ ಕಾರುಗಳನ್ನು ಒಂದಕ್ಕೊಂದು ಜೋಡಿಸಿ ಇಟ್ಟರೆ ಸುಮಾರು ನಾಲ್ಕು ಸಾವಿರ ಕಿಲೋಮೀಟರ್ ಉದ್ದವಾಗು ತ್ತದೆಯಂತೆ. ಅಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗಲ್ಲ, ಶ್ರೀಲಂಕಾದವರೆಗೆ. ಒಂದು ಸಣ್ಣ ಲೆಕ್ಕಾಚಾರ ಮಾಡಿ ನೋಡಿ, ಓಲಾದ ಒಂದು ಕಾರು ಪ್ರತಿನಿತ್ಯ ಒಂದೇ ಕಿಲೋಮೀಟರ್ ದೂರ ಕ್ರಮಿಸಿದರೂ, ಒಟ್ಟೂ ಕಾರುಗಳು ಪ್ರಯಾಣಿಸಿದ ದೂರ ಹತ್ತು ಲಕ್ಷ ಕಿಲೋಮೀಟರ್ ಆಯಿತು. ಭೂಮಿಯಿಂದ ಚಂದ್ರನಿಗೆ ಇರುವ ದೂರ ನಾಲ್ಕು ಲಕ್ಷ ಕಿಲೋಮೀಟರ್. ಅಂದರೆ ಓಲಾ ಕ್ಯಾಬ್‌ಗಳು ಚಲಿಸುವ ದೂರ, ಭೂಮಿಯಿಂದ ಚಂದ್ರಲೋಕಕ್ಕೆ ಹೋಗಿ, ಹಿಂತಿರುಗಿ ಬರುವುದಕ್ಕಿಂತಲೂ ಹೆಚ್ಚು!

ಇಂದು ಭಾರತದ ಇನ್ನೂರ ಐವತ್ತು ನಗರಗಳ ರಸ್ತೆ ಗಳಲ್ಲಿ ಓಲಾ ಓಡಾಡುತ್ತಿದೆ. ಭಾರತದಿಂದ ಆಚೆಗೂ ವಿಸ್ತಾರಗೊಂಡು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ದೇಶಗಳಲ್ಲೂ ಸಂಚರಿಸುತ್ತಿದೆ. ಓಲಾ ಆರಂಭವಾದ ದಿನಗಳಲ್ಲಿ ಚಾಲಕರೇ
ಗ್ರಾಹಕರಿಂದ ಆದೇಶ ಪಡೆದುಕೊಳ್ಳುತ್ತಿದ್ದರು. ನಂತರದ ದಿನಗಳಲ್ಲಿ ಓಲಾ ಮೊಬೈಲ್ ಅಪ್ಲಿಕೇಷನ್ ಸಿದ್ಧವಾಯಿತು. ಅದಕ್ಕೆ ಸಹಕರಿಸಿದವರು ಅಂಕಿತ್ ಭಾಟಿ. ಇಷ್ಟಾಗಿಯೂ ಭಾವೇಶ್ ಮತ್ತು ಅಂಕಿತ್ ಸ್ವಂತ ಕಾರನ್ನು ಹೊಂದಿಲ್ಲ ಎಂದರೆ ನಂಬು ತ್ತೀರಾ? ಭಾವೇಶ್ ಓಲಾ ಆರಂಭಿಸುವಾಗ ಕೆಲವು ಸಂಗತಿ ಗಳನ್ನು ಲಕ್ಷ್ಯದಲ್ಲಿಟ್ಟುಕೊಂಡಿದ್ದರು.

ಮೊದಲನೆಯದಾಗಿ, ಬಡವರಾಗಲೀ ಶ್ರೀಮಂತರಾಗಲಿ, ಅವರ ಬೇಡಿಕೆ ಪೂರೈಸುವಂತಿರಬೇಕು. ಅದಕ್ಕಾಗಿಯೇ ಓಲಾ
ಮಿನಿ, ಓಲಾ ಪ್ರೀಮಿಯಂ ರೈಡ್ ಸಿದ್ಧವಾದವು. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಓಲಾ ಶೇರಿಂಗ್ ಕೂಡ ಆರಂಭ ವಾಯಿತು. ಒಂದೇ ವಾಹನವನ್ನು ನಾಲ್ಕಾರು ಜನ ಹಂಚಿಕೊಳ್ಳುವುದರಿಂದ ಗ್ರಾಹಕರ ಹಣವೂ ಉಳಿಯುತ್ತದೆ, ವಾಹನಗಳ ಸಂಚಾರ ಕಮ್ಮಿ ಯಾಗುತ್ತದೆ, ಪೆಟ್ರೋಲ, ಡೀಸೆಲ, ಗ್ಯಾಸ್ ನಂತಹ ಇಂಧನ ಉಳಿತಾಯವಾಗುತ್ತದೆ, ಪರಿಸರವೂ ಉಳಿಯುತ್ತದೆ ಎಂದು ಅವರು ಆಲೋಚಿಸಿದ್ದರು.

ಪರಿಣಾಮವಾಗಿ, ಓಲಾ ಸಂಸ್ಥೆ ಆರಂಭ ವಾದ ವರ್ಷ ದಿಂದ, ಕರೋನಾ ಆರಂಭವಾಗುವ ವರೆಗೂ ವಹಿವಾಟಿನಲ್ಲಿ ಪ್ರತಿ ವರ್ಷ ಶೇಕಡಾ ಮೂವತ್ತರಷ್ಟು ಅಭಿವೃದ್ಧಿ ಕಾಣುತ್ತಲೇ ಇತ್ತು. ಕಾರಿನಲ್ಲಿ ಪ್ರಯಾಣಿಸುವಾಗ ಉಚಿತವಾಗಿ ವೈ-, ದಿನಪತ್ರಿಕೆ, ಮನರಂಜನೆಗಾಗಿ ಟೆಲಿವಿಶನ್‌ನಂತಹ ಸೌಲಭ್ಯಗಳಿದ್ದರೆ, ಪ್ರಯಾಣಿಕರಿಗೆ ಅದಕ್ಕಿಂತ ಹೆಚ್ಚು ಇನ್ನೇನು ಬೇಕು? ಮೂರು ಸಾವಿರ ಜನರಿಗೆ ಉದ್ಯೋಗ ನೀಡಿರುವ ಓಲಾ ಇಂದು ಎರಡೂವರೆ ಸಾವಿರ ಕೋಟಿ ರುಪಾಯಿ ಆದಾಯ ಹೊಂದಿದೆ. ಓಲಾ ಬಸ್, ಓಲಾ ಆಟೋ ದಿಂದ ಹಿಡಿದು ಓಲಾ ಬೈಸಿಕಲ್‌ಗಳೂ ಆರಂಭವಾಗಿವೆ.

ಸಂಸ್ಥೆ ಓಲಾ -q ಆರಂಭಿಸಿತು, -ಡ್ ಪಾಂಡಾವನ್ನು ಖರೀದಿಸಿತು. ಆದರೆ ಅವು ಹೆಚ್ಚು ದಿನ ನಡೆಯಲಿಲ್ಲ. ಈ ನಡುವೆ ಸಂಸ್ಥೆ ಭಾರತ ಸರಕಾರ, ಮಹಿಂದ್ರಾ ಮತ್ತು ಸಿಮೆ ಸಂಸ್ಥೆಯೊಂದಿಗೆ ಸೇರಿ ವಿದ್ಯುತ್ ಚಾಲಿತ ವಾಹನಗಳನ್ನು ತಯಾರಿಸುವ ಕಾರ್ಯಕ್ಕೆ ಕೈ ಹಾಕಿದೆ. ತಮಿಳುನಾಡಿನಲ್ಲಿ ಐದು ನೂರು ಎಕರೆ ಜಾಗದಲ್ಲಿ ಎರಡು ಸಾವಿರದ ನಾಲ್ಕು ನೂರು ಕೋಟಿ ರುಪಾಯಿ ವೆಚ್ಚದಲ್ಲಿ ಈ ಕಾರ್ಖಾನೆ ಆರಂಭವಾದರೆ, ವಿಶ್ವದ ಅತಿ ದೊಡ್ದ ಇಲೆಕ್ಟ್ರಿಕಲ್ ವಾಹನ ಉತ್ಪಾದಿಸುವ ಕಾರ್ಖಾನೆ
ಅದಾಗಲಿದೆ. ಅದರೊಂದಿಗೆ ಸಂಸ್ಥೆ ೨೦೩೦ ರ ವೇಳೆಗೆ ದೇಶದಾದ್ಯಂತ ಒಂದು ಲಕ್ಷ ಚಾರ್ಜಿಂಗ್ ಸ್ಟೇಶನ್ ಕಟ್ಟುವ ಗುರಿಯನ್ನೂ ಹೊಂದಿದೆ.

ಇದೆಲ್ಲದರ ನಡುವೆ ಓಲಾದ ಭವಿಷ್ಯ ಡೋಲಾಯಮಾನ ಎಂಬ ಅನುಮಾನವೂ ಮೂಡುತ್ತಿದೆ. ಅದಕ್ಕೆ ಪ್ರಮುಖವಾಗಿ ಎರಡು ಕಾರಣಗಳು. ಮೊದಲನೆಯದಾಗಿ, ಓಲಾ ನಡೆಯುತ್ತಿದ್ದುದೇ ಚಾಲಕರಿಂದ. ಓಲಾ ಸಂಸ್ಥೆಯಲ್ಲಿ ತನ್ನದು ಎಂದುಕೊಳ್ಳುವ ವಾಹನಗಳಿಲ್ಲ. ಅವರದ್ದೇನಿದ್ದರೂ ಗ್ರಾಹಕರು (ಪ್ರಯಾಣಿಕರು) ಮತ್ತು ಚಾಲಕರ ನಡುವೆ ಸಂಬಂಧ ಏರ್ಪಡಿಸುವ ಕೆಲಸ ಮಾತ್ರ. ಆರಂಭದ ದಿನಗಳಲ್ಲಿ ಓಲಾ ತನ್ನ ಚಾಲಕರಿಗೆ ಮೂವತ್ತರಿಂದ ನಲವತ್ತು ಪ್ರತಿಶತದಷ್ಟು ಹಣವನ್ನು ಪ್ರೋತ್ಸಾಹದ ರೂಪದಲ್ಲಿ (ಇನ್ಸೆಂಟಿವ್) ನೀಡುತ್ತಿತ್ತು. ಚಾಲಕರು ಹೀರೋಗಳು ಎನ್ನುವ ಜಾಹೀರಾತು ಬರುತ್ತಿತ್ತು. ಈಗ ಇನ್ಸೆಂಟಿವ್ ಶೇಕಡಾ ಹತ್ತರಿಂದ ಇಪ್ಪತ್ತಕ್ಕೆ ಇಳಿದಿದೆ.

ಮೊದಲಾದರೆ ಚಾಲಕರು ಹತ್ತರಿಂದ ಇಪ್ಪತ್ತು ಪ್ರತಿಶತ ಹಣವನ್ನು ಸಂಸ್ಥೆಗೆ ನೀಡಬೇಕಾಗುತ್ತಿತ್ತು. ಅದು ಇಂದು
ದುಪ್ಪಟ್ಟಾಗಿದೆ. ಪೆಟ್ರೊಲ, ಡೀಸೆಲ್, ಸಿಎನ್‌ಜಿ ಬೆಲೆಯಲ್ಲಿ ಶೇ.೩೫ರಿಂದ ೪೦ರಷ್ಟು ಹೆಚ್ಚಿದೆ. ಅದರೊಂದಿಗೆ ಪೇಟಿಎಂ, ಗೂಗಲ್ ಪೇನಲ್ಲಿ ಹಣ ಪಾವತಿಸಿದರೆ, ಆ ಹಣ ಚಾಲಕರ ಕೈ ತಲುಪಲು ಕಮ್ಮಿ ಎಂದರೂ ನಾಲ್ಕರಿಂದ ಆರು ದಿನ ಬೇಕು. ಈ ಎಲ್ಲ ಕಾರಣಗಳಿಂದಾಗಿ ಇಂದು ಚಾಲಕರ ಮನಸ್ಥಿತಿಯೂ ಬದಲಾಗುತ್ತಿದೆ.

ಒಂದು ಲೆಕ್ಕಾಚಾರ ನೋಡಿ, ಓಲಾದಲ್ಲಿ ಒಬ್ಬ ಪ್ರಯಾಣಿಕ ಹತ್ತು ಕಿಲೋಮೀಟರ್ ಪ್ರಯಾಣಿಸಿ ಇನ್ನೂರ ಐವತ್ತು ರುಪಾಯಿ ನೀಡುತ್ತಾನೆ ಅಂದುಕೊಳ್ಳಿ. ಅದರಲ್ಲಿ ಆತ ಓಲಾ ಸಂಸ್ಥೆಗೆ ನೂರು ರುಪಾಯಿ (ಶೇಕಡಾ ನಲವತ್ತರಷ್ಟು) ನೀಡಬೇಕು.
ಡೀಸೆಲ್‌ಗೆ ಅರವತ್ತರಿಂದ ಎಪ್ಪತ್ತು ರುಪಾಯಿ (ಸಿಎನ್‌ಜಿ ಆದರೆ ಸುಮಾರು ಮೂವತ್ತು ರುಪಾಯಿ, ಪೆಟ್ರೋಲ್ ಆದರೆ ಇನ್ನೂ ಹೆಚ್ಚು) ಕೊಡಬೇಕು.

ಅದರ ಹೊರತಾಗಿ ರಿಪೇರಿ, ಟೈರ್, ಆಯಿಲ್, ಬ್ಯಾಟರಿಯಂತಹ ನಿರ್ವಹಣೆಯ ಖರ್ಚು ಬೇರೆ. ಅಲ್ಲಿಗೆ, ಅಬ್ಬಬ್ಬಾ ಎಂದರೂ ಆತನಿಗೆ ಒಂದು ಪ್ರಯಾಣಕ್ಕೆ (ಟ್ರಿಪ್) ಉಳಿಯುವುದು ಒಂದು ನೂರು ರುಪಾಯಿ ಮಾತ್ರ. ದಿನಕ್ಕೆ ಇಂತಹ ಹತ್ತು ಪ್ರಯಾಣ ಮಾಡಿದರೆ ಒಂದು ಸಾವಿರ. ಒಂದು ದಿನವೂ ರಜೆಯಿಲ್ಲದೆ ಕೆಲಸ ಮಾಡಿದರೆ ತಿಂಗಳಿಗೆ ಮೂವತ್ತು ಸಾವಿರ. ಚಾಲಕ ವಾಹನವನ್ನು ಬ್ಯಾಂಕ್ ಸಾಲ ಪಡೆದು ಖರೀದಿಸಿzದರೆ, ಪ್ರತಿ ತಿಂಗಳು ಹತ್ತರಿಂದ ಹದಿನೈದು ಸಾವಿರ ಇಎಂಐ ತುಂಬಬೇಕು.

ಉಳಿದದ್ದರಲ್ಲಿ ಆತನ ಬದುಕು ನಡೆಯಬೇಕು. ಇತ್ತೀಚೆಗೆ ಚಾಲಕರು ಅವರಾಗಿಯೇ ನಿಮ್ಮ ಬುಕಿಂಗ್ ರದ್ದು ಮಾಡುವುದು ಅಥವಾ ನಿಮ್ಮ ಬಳಿ ಬಂದು ಪ್ರಯಾಣ ರದ್ದು ಮಾಡುವಂತೆ ಕೇಳಿಕೊಳ್ಳುವುದು, ಪೇಟಿಎಂ-ಗೂಗಲ್ ಪೇ ಬದಲು ನಗದು
ನೀಡುವಂತೆ ಕೇಳಿಕೊಳ್ಳುವುದು ಎಲ್ಲವೂ ಇದೇ ಕಾರಣಕ್ಕೆ. ಅಂದರೆ ಕಾಲಚಕ್ರ ತಿರುಗಿ ಮತ್ತದೇ ಸ್ಥಾನಕ್ಕೆ ಬಂದು ನಿಂತಿತೇ ಎಂದೆನಿಸುತ್ತದೆ. ಹಾಗೇನಾದರೂ ಆದರೆ, ಭಾವೇಶ್ ಅಗ್ರವಾಲ್ ಯಾವ ಉದ್ದೇಶದಿಂದ ಇದನ್ನು ಆರಂಭಿಸಿದರೋ ಅದಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ.ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲರೂ ದೂರುವುದು ಚಾಲಕರನ್ನೇ ಹೊರತು ಸಂಸ್ಥೆಯನ್ನಲ್ಲ.

ಆದರೆ ಚಾಲಕರ ಹಿತ ಕಾಯ್ದುಕೊಳ್ಳದಿದ್ದರೆ ಅವರು ಪ್ರಯಾಣಿಕರ ಹಿತ ಕಾಯುವುದಿಲ್ಲ, ಪ್ರಯಾಣಿಕ ಅತೃಪ್ತನಾದರೆ ಸಂಸ್ಥೆ ನಡೆಯುವುದಿಲ್ಲ. ಓಲಾದಂತಹ ಸಂಸ್ಥೆ ಓಡಬೇಕಾದರೆ ಪ್ರಯಾಣಿಕ, ಚಾಲಕ, ಎರಡೂ ವರ್ಗದವರು ಖುಷಿಯಾಗಿರಬೇಕು ಎಂಬುದನ್ನು ಸಂಸ್ಥೆ ಅರಿತುಕೊಳ್ಳಬೇಕು.

ಎರಡನೆಯ ಕಾರಣ, ’ಬ್ಲೂ ಸ್ಮಾರ್ಟ್’. ಬ್ಲೂ ಸ್ಮಾರ್ಟ್ ಸಂಸ್ಥೆಯೂ ಇದೇ ಉದ್ದೇಶ ಇಟ್ಟುಕೊಂಡೇ ಹುಟ್ಟಿಕೊಂಡ ಸಂಸ್ಥೆ. ವ್ಯತ್ಯಾಸವೆಂದರೆ, ಅಲ್ಲಿ ಅವರದ್ದೇ ವಾಹನ, ಅವರದ್ದೇ ಚಾಲಕರು. ಚಾಲಕರಿಗೆ ಆರು-ಎಂಟು-ಹತ್ತು ತಾಸಿನ ಪಾಳಿ, ಅದಕ್ಕೆ ತಕ್ಕ ಸಂಬಳ. ಎಲ್ಲವೂ ವಿದ್ಯುತ್ ಚಾಲಿತ ಕಾರುಗಳು. ಇದು ಖಂಡಿತವಾಗಿಯೂ ಓಲಾ-ಊಬರ್‌ಗೆ ಟಕ್ಕರ್ ಕೊಡಲಿದೆ.
ಭಾವೇಶ್ ಅಗ್ರವಾಲ್ ಇದನ್ನು ಗಮನಿಸದೇ ಇರುವಷ್ಟು ದಡ್ಡರಲ್ಲ ಎಂಬ ಭರವಸೆ ಇದ್ದರೂ, ಇತ್ತೀಚೆಗೆ ಓಲಾ ಪರಿಸ್ಥಿತಿ ಗಮನಿಸಿದಾಗ ಭಾವೇಶ್ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದೆನಿಸುತ್ತದೆ. ಅವರು ಅಷ್ಟೊಂದು ಶ್ರಮಪಟ್ಟು ಕಟ್ಟಿದ ಸಂಸ್ಥೆ, ನೆಲಕಚ್ಚಿ ಹೋಗುವುದಕ್ಕಿಂತ ಮೊದಲು ಅವರು ಎಚ್ಚೆತ್ತುಕೊಂಡರೆ ಅವರಿಗೂ ಒಳಿತು ಪ್ರಯಾಣಿಕರಿಗೂ ಒಳಿತು.