Sunday, 15th December 2024

ಪುಸ್ತಕವಾಗಿ ಮನೆಗೆ ನಡೆದು ಬಂದರು ಡಾ.ಗಿರಿಜಮ್ಮ !

ಯಶೋ ಬೆಳಗು

yashomathy@gmail.com

ಅವರನ್ನು ನಾನು ಮೊದಲ ಬಾರಿಗೆ ನೋಡಿದ್ದು ಬಹುಶಃ ಸೆಪ್ಟಂಬರ್ 1998ರಲ್ಲಿ. ಪ್ರೆಸ್ ಕ್ಲಬ್ಬಿನಲ್ಲಿ ಸ್ವಲ್ಪ ಕೆಲಸವಿದೆ. ನಾನು
ಬರುವವರೆಗೂ ನೀನು ಇವರೊಂದಿಗೇ ಇರು ಎಂದು ಹೇಳುತ್ತಾ ನನ್ನನ್ನು ಬೌರಿಂಗ್ ಆಸ್ಪತ್ರೆಯ ಆವರಣದಲ್ಲಿ ಡಾ. ಗಿರಿಜಮ್ಮ ನವರಿಗೆ ಒಪ್ಪಿಸಿ ಹೋಗಿದ್ದರು. ನನಗೆಲ್ಲವೂ ಹೊಸತು. ಡಾ. ಗಿರಿಜಮ್ಮನವರ ಪರಿಚಯವೂ ಇರಲಿಲ್ಲ.

ಮೊದಲ ಭೇಟಿಯ ಅವರ ಆತ್ಮೀಯ ನಗು ಒಂದು ಭರವಸೆಯನ್ನು ಹುಟ್ಟಿಹಾಕಿತ್ತು. ನೀವೇನೂ ಚಿಂತೆ ಮಾಡ್ಬೇಡಿ ರವಿ. ನಂಜೊತೆ ಸೇಫಾಗಿ ಇರ್ತಾಳೆ. ನೀವು ಹೋಗಿ ಬನ್ನಿ ಎಂದು ಕಳಿಸಿಕೊಟ್ಟಿದ್ದರು. ಎರಡು ನಿಮಿಷ ನನ್ನನ್ನೇ ತದೇಕಚಿತ್ತದಿಂದ ನೋಡಿ ಎಷ್ಟು ಚೆನ್ನಾಗಿದೆ ಮಗಾ ನಿನ್ನ ಗಲ್ಲದ ಮೇಲಿರುವ ಮಚ್ಚೆ. ನಿನ್ನನ್ನು ನಾನು ಚುಕ್ಕಿ ಅಂತ ಕರೀತೀನಿ. ಎಂದು ಮೊದಲ ಮಾತಿನ ಹೊಸ ನಾಮಕರಣವನ್ನು ಮಾಡಿದ್ದರು. ಅಂದಿನಿಂದ ಅವರು ನನ್ನನ್ನು ಭೇಟಿಯಾದಾಗಲೆ ಚುಕ್ಕೀ ಅಂತಲೇ ಕರೀತಿದ್ದುದು.

ಒಂದು ದಿನಕ್ಕೂ ನನ್ನನ್ನು ಎಲ್ಲರಂತೆ ಯಶು ಅಂತಾಗಲೀ, ಯಶೋಮತಿ ಅಂತಾಗಲೀ ಕರೆದದ್ದು ನೆನಪೇ ಇಲ್ಲ. ಅಷ್ಟರ ಅವರಿಗೆ ಪೇಷೆಂಟುಗಳನ್ನು ನೋಡಿಬರುವ ಸಮಯವಾಗಿದ್ದರಿಂದ ನನ್ನನ್ನೂ ಜತೆಗೇ ಕರೆದುಕೊಂಡು ಹೋದರು. ನೆರಳಿನಂತೆ ಸುಮ್ಮನೆ ಅವರನ್ನು ಹಿಂಬಾಲಿಸುತ್ತಿದ್ದೆ. ಸಹೋದ್ಯೋಗಿಗಳೊಂದಿಗೆ ಹಾಸ್ಯ ಚಟಾಕಿ ಗಳನ್ನು ಹಾರಿಸುತ್ತಲೇ ರೋಗಿಗಳಿಗೆ ತುಂಬುವ ಭರವಸೆಯ ಮಾತುಗಳನ್ನೆಲ್ಲ ಸುಮ್ಮನೇ ಗಮನಿಸುತ್ತಿದ್ದೆ.

ನೀನು ಹೆಚ್ಚು ಮಾತೇ ಆಡಲ್ವ ಮಗಾ? ನಾವು ನೋಡು ಡಾಕ್ಟರುಗಳ ಜತೆಗೆ ಹೇಗೆ ಫ್ಲರ್ಟ್ ಮಾಡಿಕೊಂಡು ಓಡಾಡ್ತೀವಿ ಎಂದಾಗ, ನಾನು ಹುಬ್ಬೇರಿಸಿ ಹೌದಾ? ಎಂಬಂತೆ ನೋಡಿದಾಗ healthy flirt ಎಂದು ಕಣ್ಣು ಮಿಟುಕಿಸಿ ನಕ್ಕಿದ್ದರು. ಬಣ್ಣ ಕಪ್ಪಾದರೂ ಬಹಳ ಲಕ್ಷಣ. ಕಾಸಗಲದ ಕುಂಕುಮ ಹಣೆಯ ಮೇಲೆ ಸದಾ ಸ್ಥಾಪಿತವಾಗಿರುತ್ತಿತ್ತು. ಕೊರಳಂ ಸಾದಾ ಕರಿಮಣಿಯ ಸರ ಬಿಟ್ಟರೆ ಆಭರಣ ಭೂಷಿತೆಯಾಗಿ ನಾನವರನ್ನು ನೋಡೇ ಇಲ್ಲ. ಅವರು ಕನಕಪುರದಲ್ಲಿದ್ದಾಗೊಮ್ಮೆ ಹೋಗಿ ಬಂದದ್ದು ಬಿಟ್ಟರೆ, ಬೆಂಗಳೂರಿನ ಯಡಿಯೂರು ಕೆರೆಯ ಬಳಿಯಿದ್ದ ಅವರ ಅಪಾರ್ಟ್‌ಮೆಂಟಿಗೆ ಸಾಕಷ್ಟು ಸಲ ಭೇಟಿ ನೀಡಿದ್ದೇನೆ.

ಮನೆಗೆ ಕಾಲಿಟ್ಟ ಕೂಡಲೇ ಕಾಣುತ್ತಿದ್ದ ಅಲಂಕಾರಿಕವಾಗಿಟ್ಟಿದ್ದ ಬರಿದಾದ ಮರದ ತೊಟ್ಟಿಲು ಅವರು ಏನೂ ಹೇಳ
ದೇನೇ ಅವರ ತಾಯ್ತನದ ಹಂಬಲವನ್ನೆಲ್ಲ ಮೂಕವಾಗಿ ಅರುಹುವಂತಿರುತ್ತಿತ್ತು. ಅವರ ಮಾನಸ ಪುತ್ರಿ ಚಿನ್ನುವಿನ ತುಂಟಾಟ ಗಳನ್ನು ಕೊಂಡಾಡುತ್ತಾ ಅವಳ ತಪ್ಪುಗಳನ್ನು ನಗು ನಗುತ್ತಲೇ ತಿದ್ದುತ್ತ ಸರಿಯಾದ ಮಾರ್ಗದರ್ಶನ ನೀಡುತ್ತ ಮಾನಸಿಕವಾಗಿ ದೊಡ್ಡ ಬೆಂಬಲವಾಗಿದ್ದರು. ನನಗೆ ಒಮ್ಮೊಮ್ಮೆ ಬೇಸರವಾದರೆ ಅವರ ಮನೆಗೆ ಹೋಗಿ, ಅವರದೇ ಕಾರಿನಲ್ಲಿ ಇಬ್ಬರೂ ಜಯನಗರದ ಗಿಜಿಗಿಜಿ ಜನಗಳ ನಡುವೆ ಹಣ್ಣು-ತರಕಾರಿ ಕೊಂಡು, ಸ್ಟ್ರಾಂಗ್ ಕಾಫಿ ಕುಡಿದು ಮನೆಗೆ ಮರಳುತ್ತಿದ್ದೆವು.

ಅಲ್ಲಿಂದ ನಾನು ನಮ್ಮ ಮನೆಗೆ ಹೊರಡುತ್ತಿದ್ದೆ. ಆ ದಿನಗಳಲ್ಲಿ ನಾನು ಬಹಳ ಭಾವುಕಳಾಗಿರುತ್ತಿದ್ದೆ. ಭಾವನೆಗಳು ನಾನಾ ದಿಕ್ಕುಗಳಲ್ಲಿ ಹಾರಾಡುತ್ತಾ ಹಿಡಿತಕ್ಕೆ ಸಿಗದೆ ನಾನಾ ರೂಪಗಳಲ್ಲಿ ಎದುರಾಗಿ ಹೆದರಿಕೆ ಹುಟ್ಟಿಸುತ್ತಿದ್ದವು. ಅವರ ಕೆಲಸದ ಒತ್ತಡದಲ್ಲಿ ಕೆಲವೊಮ್ಮೆ ರವಿ ಅಸಹಾಯಕರಾಗಿ ಗಿರಿಜಮ್ಮನವರಿಗೆ ನೀವಾದ್ರೂ ಒಂಚೂರು ಬುದ್ಧಿ ಹೇಳಿ ಇವಳಿಗೆ ಎಂದು ಹೇಳುತ್ತಿದ್ದರು.

ಆವೇಶಕ್ಕೆ ಬೀಳಬಾರದು ಚುಕ್ಕೀ…. ಎಲ್ಲವನ್ನೂ ಡಿಪ್ಲೊಮ್ಯಾಟಿಕ್ ಆಗಿ handle ಮಾಡಬೇಕು. ಇಲ್ಲದಿದ್ರೆ ಎಲ್ರೂ ತಾವು ಒಳ್ಳೆಯವ ರಾಗಿ ನಿನ್ನನ್ನೇ ಕೆಟ್ಟವಳನ್ನಾಗಿ ಮಾಡಿ ಬಿಡ್ತಾರೆ. ಅದರಲ್ಲೂ ಇದು ಹಿಂದೂ ದೇಶ. ಏನೇ ಕಂಪ್ಲೇಂಟುಗಳಿದ್ದರೂ ಇಲ್ಲಿ ಹೆಂಡತಿ ಯರು ತಮ್ಮ ಗಂಡಂದಿರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಸಮಾಧಾನಿಸುತ್ತಿದ್ದರು. ಯಾಕಿಷ್ಟೆಲ್ಲ ನರ ಳ್ತೀಯ? ಯಾರನ್ನಾದ್ರೂ ಮದುವೆಯಾಗಿ ಸುಖವಾಗಿರು. ನೀನು ಹೇಳಿದ್ರೆ ಅವರೇ ಮುಂದೆ ನಿಂತು ನಿನಗೆ ಮದುವೆ ಮಾಡಿಸುತ್ತಾರೆ.

ರವಿಗೆ ತುಂಬ ಒಳ್ಳೆಯ ಮನಸ್ಸಿದೆ. ಯಾರ ಬದುಕನ್ನೂ ಹಾಳು ಮಾಡುವಂಥವರಲ್ಲ ಅವರು. ಎಂದು ಕೂರಿಸಿಕೊಂಡು ಗಿಳಿಗೆ ಹೇಳಿದಂತೆ ಬುದ್ಧಿ ಹೇಳಿದ್ದರು. ಡಾಕ್ಯುಮೆಂಟರಿಗಳಿಗಾಗಿ ತಾವು ಚಿತ್ರ ನಿರ್ದೇಶಿಸುತ್ತಿದ್ದುರಿಂದ ಅದರ ಚಿತ್ರೀಕರಣಕ್ಕೆ ಲೊಕೇಶನ್ ನೋಡುವಾಗ ಜತೆಗೆ ಕರೆದುಕೊಂಡು ಹೋಗುತ್ತಿದ್ದರು. ನೋಡಲು ಚೆನ್ನಾಗಿದ್ದೀಯ. ನಿನಗೆ ನಟನೆಯಲ್ಲಿ ಆಸಕ್ತಿ ಇದೆಯಾ? ಎಂದು ಕೇಳಿದ್ದರು. ಇಲ್ಲ ಎಂದು ತಲೆಯಾಡಿಸಿದ್ದೆ. ಸಮಯ ಸಿಕ್ಕಾಗಲೆಲ್ಲ ಅವರ ಜತೆ ಭಾಷಣಗಳಿಗೂ ಕರೆದುಕೊಂಡು ಹೋಗು
ತ್ತಿದ್ದರು. ಕಾರ್ಯಕ್ರಮ ಮುಗಿದು ಮನೆಗೆ ಮರಳುವಾಗ ಸ್ಟೇಜ್ ಮೇಲೆ ಮಹಿಳೆ, ಪ್ರಗತಿ, ಹೋರಾಟ ಅಂತೆಲ್ಲ ಭಾಷಣ ಹೊಡೀ ತೀವಿ ಚುಕ್ಕೀ, ಮನೆಗೆ ಬಂದ ಮೇಲೆ ನಾವೂ ಸಹ ಎಲ್ಲರಂತೆಯೇ ಗಂಡ – ಮನೆ – ಮಕ್ಕಳು ಅಂತ ಕಾಲ ಕಳೆಯುವ ಸಾಮಾನ್ಯ ಗೃಹಿಣಿಯರೇ ಎಂದು ವಿಷಾದದಿಂದ ನಕ್ಕಿದ್ದರು.

ರವಿ ಅವರನ್ನು ಯಾವಾಗಲೂ ಡಾ. ಕಿರಿಚಮ್ಮ ಎಂದು ಹಾಸ್ಯ ಮಾಡುತ್ತಿದ್ದರು. ಬಲು ಪ್ರೀತಿ ಈ ಡಾಕ್ಟ್ರಿಗೆ ಅವರ ಗಂಡ ಅಂದರೆ, ಅದೆಷ್ಟು ಒಡವೆ ಮಾಡ್ಸಿ ಹಾಕ್ತಾರೆ. ಅವನು ಚೆನ್ನಾಗಿರಲಿ. ಚೆನ್ನಾಗಿ ಕಾಣಲಿ ಅಂತ. ಅವನಿಗೆ ನೋಡಿದರೆ ಒಂಚೂರೂ ಕೃತಜ್ಞತೆ ಇಲ್ಲ. ಕುಡಿದು ಬಂದು ಇವರನ್ನ ಅದೆಷ್ಟು ಗೋಳು ಹೊಯ್ದುಕೊಳ್ತಾನೆ. ಡ್ಯೂಟಿ ಮುಗಿಸಿ ಬಂದು ಅವನನ್ನು ಹುಡುಕಿಕೊಂಡು ತಿರುಗೋ ಕೆಲಸ ಬೇರೆ ಇವ್ರಿಗೆ. ಸಿಕ್ರೆ ಸರಿಯಾಗಿ ಒದ್ದುಬಿಡ್ತೀನಿ. ಅನ್ನುವಷ್ಟು ಸಿಟ್ಟು ಬರ್ತಿತ್ತು ರವಿಗೆ. ಇರ್ಲಿ ಬಿಡಿ ರವಿ. ಎಷ್ಟೇ ಆಗಲಿ ಗಂಡ ಅಂತ ಒಬ್ಬ ಜೊತೇಲಿದ್ದಾನೆ. ಸಮಾಜದಲ್ಲಿ ಒಂದು ಗೌರವ.

ಇಲ್ದಿದ್ರೆ ಬೀದೀಲಿ ಹೋಗೋ ನಾಯಿಗಳೆಲ್ಲ ಇಣುಕಿ ನೋಡುವಂತಾಗುತ್ತದೆ. ಎಂದು ಅದೇ ಸಮಾಧಾನದ ಮಾತಾಡುತ್ತಿದ್ದರು ಕಣ್ಣೀರೊರೆಸಿಕೊಳ್ಳುತ್ತಾ. ಒಮ್ಮೆ ಬೆಂಗಳೂರಿನ ಗೋಲ್ಡ ಫಿಂಚ್ ಹೊಟೇಲಿನಲ್ಲಿ ಡಿನ್ನರಿಗೆ ಹೋದಾಗ ಜತೆಯಾದ ಡಾ. ಗಿರಿಜಮ್ಮ ನವರು ತಮ್ಮ ಗಂಡನ ಅವಾಂತರಗಳನ್ನೆಲ್ಲ ವಿವರಿಸುತ್ತಿದ್ದರೆ ನನಗೆ ಕಣ್ಣಲ್ಲಿ ಧಳ ಧಳನೆ ನೀರು ಹರಿಯುತ್ತಿತ್ತು. ಏನು ರವೀ ಇವಳು ಇಷ್ಟು ಎಮೋಷನ್ನಲ್ಲು? ಎಂದು ನಗುತ್ತಲೇ ತಮ್ಮ ಮಾತು ಮುಂದುವರೆಸಿದ್ದರು.

ಆಗೆಲ್ಲ ಛೇ! ಎಷ್ಟು ಓದಿದರೇನು? ಎಂಥಾ ಹುzಯಲ್ಲಿದ್ದರೇನು? ಏನು ಸಾಧನೆ ಮಾಡಿದರೇನು? ಹೆಣ್ಣು ಎಷ್ಟು  ಸಹಾಯಕ ಳಾಗಿ ಬಿಡುತ್ತಾಳೆ ಈ ಸಮಾಜದೆದುರು, ಗಂಡನೆದುರು ಎಂದು ಬಹಳ ನೋವಾಗುತ್ತಿತ್ತು. ಹೋಗಲಿ ತವರು ಮನೆಯದರೂ ನೆಮ್ಮದಿ ಯಿದೆಯಾ ಅವರಿಗೆ? ಎಂದು ನೋಡಿದರೆ ಅಲ್ಲೂ ಬರೀ ಕಲ್ಲುಮನಸ್ಸುಗಳೇ. ಇವರ ಭಾವನೆಗಳಿಗೆ ಸ್ಪಂದಿಸುವ ಒಂದಾದರೂ ಜೀವವಿದ್ದುದು ಕಾಣಲಿಲ್ಲ.

ಬಹುಶಃ ಅವರಿಗೆ ತೃಪ್ತಿ ಕೊಟ್ಟಿದ್ದು ಅವರ ವೈದ್ಯಕೀಯ ವೃತ್ತಿ ಬಿಟ್ಟರೆ ಸಾಹಿತ್ಯ ಕೃಷಿ. ತಮ್ಮ ನೋವು, ಹತಾಷೆ, ಅನುಭವ ಗಳೆಲ್ಲವನ್ನೂ ಅವರು ತಮ್ಮ ಪಾತ್ರಗಳ ಮೂಲಕ ಕಥೆ ಹೆಣೆಯುತ್ತಿದ್ದರು. ಅದರ ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದರು.
ಸಾಕಷ್ಟು ವರುಷಗಳು ಕಳೆದು ಬೇರೆಯಾಗುವ ಆಲೋಚನೆಗಳು ದೂರ ಸರಿದು ಏನಾದರಾಗಲೀ ಬದುಕು ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿದಾಗ ಅದಕ್ಕೆ ಪೂರಕವಾಗಿ ಮನೆಗೊಂದು ಮಗುವಿರಲಿ ಎಂದು ಬಹಳ ಹಂಬಲಿಸಿzವು.

ಕೆಲಸದ ಒತ್ತಡಗಳಲ್ಲಿ ಅದು ಮರೀಚಿಕೆಯಾಗಿ ಮರೆಯಾಗಿಹೋಗುತ್ತದೇನೋ ಎಂಬ ಕಳವಳದಲ್ಲಿ ಒಮ್ಮೆ ಡಾ. ಗಿರಿಜಮ್ಮ ನವರನ್ನು ಭೇಟಿಯಾದಾಗ, ಬೇಕೆನಿಸಿದ ಕೂಡಲೇ ಸಿಕ್ಕಿ ಬಿಡೋಕೆ ಅದೇನು ಮಾರುಕಟ್ಟೆಯಲ್ಲಿ ಸಿಗುವ ವಸ್ತುವೆಂದುಕೊಂಡೆಯಾ ಚುಕ್ಕೀ? ಅದಕ್ಕಾಗಿ ನೀನು ಮನಸಿನ ಒಂದು ಪುಟ್ಟ ತೊಟ್ಟಿಲು ಕಟ್ಟಿ, ಮೆತ್ತನೆಯ ಹಾಸನ್ನು ಹಾಸಿ, ನಿನಗಾಗಿ ಹಂಬಲಿಸುತ್ತಿದ್ದೇನೆ ಕಂದಯ್ಯ, ಕಾಡದೇ ಬಂದು ಮಡಿಲು ತುಂಬು ಎಂದು ದಿನವೂ ಜೋಗುಳ ಹಾಡಬೇಕು.

ಹಾಗಾದಾಗ ನೋಡು ಒಂದೊಂದೇ ಪುಟ್ಟ ಅಂಬೆಗಾಲಿಟ್ಟು ಅವನು ನಿನ್ನ ಮಡಿಲೊಳಗೆ ಬಂದು ಕೂಡುತ್ತಾನೆ. ಎಂದು
ಹೇಳುತ್ತಾ ಮನಸಿಗೆ ಆವರಿಸಿದ್ದ ಆತಂಕದ ಮೋಡವನ್ನು ಕರಗಿಸಿದ್ದರು. ಆನಂತರ ಸುಮ್ಮಸುಮ್ಮನೇ ದುಗುಡಗೊಳ್ಳುವುದನ್ನು ಬಿಟ್ಟು ಒಂದಷ್ಟು ಹಿತವಾದ ಹಾಡುಗಳನ್ನು ಕೇಳುತ್ತಾ, ಉತ್ತಮವಾದ ಪುಸ್ತಕಗಳನ್ನು ಓದುತ್ತಾ ಮನಸನ್ನು ತಣ್ಣಗಿರಿಸಿ ಕೊಳ್ಳುವ ಸಕಲ ಪ್ರಯತ್ನಗಳನ್ನೂ ಮಾಡಿದೆ. ಅವರು ಹೇಳಿದಂತೆಯೇ ಹಿಮವಂತ ಮಡಿಲೊಳಗೆ ಮಗುವಾಗಿ ಕಣ್ಣರಳಿಸಿದ. ಅವನು ಹುಟ್ಟುವಾಗಲೂ ಬೆಳಗಿನ ಜಾವವೇ ಆಸ್ಪತ್ರೆಗೆ ಬಂದು ಧೈರ್ಯ ತುಂಬಿದ್ದರು. ಅವನ ಮೊದಲ ವರುಷದ ಹುಟ್ಟುಹಬ್ಬ ದಲ್ಲಿ ಉಡುಗೊರೆಯಾಗಿ ಕೊಟ್ಟ ಪುಟ್ಟ ಬೆಳ್ಳಿಯ ಗಣಪ ಇಂದಿಗೂ ನಮ್ಮ ಮನೆಯಲ್ಲಿ ಪೂಜಿಸಿಕೊಳ್ಳುತ್ತಿದ್ದಾನೆ, ಅವರ ನೆನಪಾಗಿ…
ಆನಂತರ ಅವರನ್ನು ನೋಡಿದ ನೆನಪಿಲ್ಲ. ಒಮ್ಮೆ ಬಳ್ಳಾರಿಯಿಂದ ಬೆಂಗಳೂರಿಗೆ ಬರುವ ದಾರಿಯ ನಡುವೆ ಅವರ ಫೋನು ಬಂದು ಚುಕ್ಕೀ ನಾನೀಗ ದಾವಣಗೆರೆಗೆ ಶಿ- ಆಗಿದ್ದೀನಿ ಮಗಾ, ಸಾಧ್ಯವಾದರೆ ಮಗುವನ್ನು ಕರೆದುಕೊಂಡು ಮನೆಗೆ ಬಂದು ಹೋಗು ಅಂದರು. ಅಷ್ಟರಗಲೇ ಬಹಳ ತಡವಾಗಿದ್ದರಿಂದ ಮನೆತಲುಪುವುದು ಕಷ್ಟವಾಗುತ್ತದೆ.

ಮತ್ತೊಮ್ಮೆ ಹೋಗುವಿಯಂತೆ. ಈಗ ಬಂದು ಬಿಡು ಅಂದರು ರವಿ. ಹೀಗಾಗಿ ಅಲ್ಲಿಗೆ ಹೋಗದೆ ಸೀದಾ ಮನೆಗೆ ಬಂದೆ. ಯಾಕೆ ಬರಲಿಲ್ಲ ಚುಕ್ಕೀ? ನಿನಗಾಗಿ ನಾನು ಸೀರೆ, ಮಗುವಿಗೆ ಹೊಸಬಟ್ಟೆ ಎಲ್ಲ ತಂದಿಟ್ಟಿದ್ದೆ ಎಂದು ಬೇಸರ ಮಾಡಿಕೊಂಡರು. ನಮ್ಮದೇ ಬದುಕಿನ ಏರಿಳಿತಗಳ ನಡುವೆ ಅವರ ವಿಷಯ ಮರೆತೇ ಹೋದೆ. ಕಳೆದ ವರ್ಷ ಇದೇ ಆಷಾಢ ಗಾಳಿ ಇಳಿದು ಶ್ರಾವಣ ಹನಿಯುವ ಸಮಯದಲ್ಲಿ ಡಾ. ಎಚ್. ಗಿರಿಜಮ್ಮ ಹೃದಯಾಘಾತದಿಂದ ನಮ್ಮನ್ನೆಲ್ಲ ಅಗಲಿದ್ದಾರೆ ಎಂಬ ಸುದ್ದಿ ಕೇಳಿ ನೋವಿನ ಅಲೆ ಯೊಂದು ಮನದಾಳದಿಂದ ಹೊರಬಂದಂತಾಯ್ತು. ಆದರೆ ಹಂಚಿಕೊಳ್ಳಲು ಒಂದೇ ಒಂದು ಜೀವ ಕಾಣಲಿಲ್ಲ. ಅವರು ಬರೆದಿರುವ ಕಥೆ, ಕಾದಂಬರಿಗಳಿವೆಯೇ ಹೊರತು ಅವರ ಕುರಿತು ಒಂದು ಆತ್ಮಕಥೆ ಬರಬೇಕಿತ್ತು.

ಏನೂ ಹೇಳದೇ ಹೊರಟುಬಿಟ್ಟರಲ್ಲ? ಎಂದು ಚಡಪಡಿಸುವಾಗ, ಅವರ ಬಗ್ಗೆ ಪುಸ್ತಕ ಬಂದಿದೆ ಯಶು. ನಾನು ವಿಚಾರಿಸಿ ತರಿಸುವ ವ್ಯವಸ್ಥೆ ಮಾಡ್ತೀನಿರು ಎಂದರು ಜತೆಯಲ್ಲಿರುವ ಶಶಿಕಲಾ ವಸದ್. ಆದರೆ ದುರದರಷ್ಟವಶಾತ್ ಎಲ್ಲ ಪ್ರತಿಗಳೂ ಖಾಲಿ ಯಾಗಿ ಒಂದೇ ಒಂದು ಪುಸ್ತಕ ಉಳಿದಿದೆಯಂತೆ. ಅದನ್ನು ಹೇಗಾದರೂ ಮಾಡಿ ತರಿಸಿಕೊಂಡು ಓದೋಣ ಎಂದು ಕೊಳ್ಳುತ್ತಾ ಸುಮ್ಮನಾದೆವು.

ಮೊನ್ನೆ -ಸ್ಬುಕ್ಕಿನಲ್ಲಿ ಚಿತ್ರದ ತುಣುಕೊಂದು ಕಂಡು ಅದನ್ನು ವೀಕ್ಷಿಸುವ ಅಪೇಕ್ಷೆಯಿಂದ ಅದರ ನಿರ್ಮಾಪಕರಾದ ನಿಡಸಾಲೆ ಪುಟ್ಟಸ್ವಾಮಯ್ಯನವರಿಗೆ ಕೇಳಿದಾಗ. ಎಲ್ಲ ಆಸನಗಳೂ ಭರ್ತಿಯಾಗಿವೆ. ನಿಮ್ಮೊಂದಿಗೆ ಯಾರಾದರೂ ಒಬ್ಬರನ್ನು ಮಾತ್ರ ಕರೆದುಕೊಂಡು ಬನ್ನಿ ಎಂದಾಗ, ಹೋಗಿ ಬರೋಣ ಬರ್ತೀಯಾ ಯಶು ಎಂದರು ಶಶಿಕಲಾ ವಸದ್. ಚಿತ್ರ ವೀಕ್ಷಿಸಿ ಬರುವಾಗ, ಉಡುಗೊರೆಯಾಗಿ ಕೊಟ್ಟ ಗುಲಾಬಿಯೊಂದಿಗೆ ಪುಸ್ತಕ ನಾಲ್ಕೈದು ದಿನ ಕಾರಿನ ಉಳಿದು ಬಿಟ್ಟಿತ್ತು. ಯಾವ ಪುಸ್ತಕವಿದು? ಎಂದು ತೆರೆದರೆ ಅದು ಡಾ ಹೆಚ್. ಗಿರಿಜಮ್ಮನವರ ಆತ್ಮಕಥೆ! ಕಾಡತಾವ ನೆನಪುಗಳು.

ಮನದ ಪ್ರಶ್ನೆಗಳಿಗೆಲ್ಲ ಉತ್ತರವೆಂಬಂತೆ ಪುಸ್ತಕವಾಗಿ ಮನೆಗೆ ನಡೆದು ಬಂದಿದ್ದರು ಡಾ. ಗಿರಿಜಮ್ಮ! ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಮನಸೆಲ್ಲ ಪ್ರಕ್ಷುಬ್ದ!