Sunday, 24th November 2024

ಜ್ಞಾನ ಗಂಗೋತ್ರಿಯ ಜತೆ ಯಾನ

ನಂಜನಗೂಡು ಪ್ರದ್ಯುಮ್ನ

ಭೈರಪ್ಪ ಅವರಂಥಹ ಜ್ಞಾನ ಭಂಡಾರದೊಂದಿಗೆ ಪ್ರಯಾಣ ಮಾಡುವ ಅಪರೂಪದ ಅವಕಾಶ ನನಗೆ ಲಭಿಸಿತ್ತು. ಇದು ನನ್ನ
ಜೀವಮಾನದ ಮರೆಯಲಾಗದ ಪ್ರಯಾಣ ಎಂಬ ಅರಿವು ನನ್ನಲ್ಲಿತ್ತು. ಅವರೇನು ಮಾತನಾಡುತ್ತಾರೆ, ನಾನಾದರು ಏನು ಮಾತನಾಡಿಸಲಿ? ಅವರೇನಾದರೂ ಕೇಳಿದರೆ, ಏನು ಉತ್ತರಿಸಲಿ ಎಂಬೆಲ್ಲ ಪ್ರಶ್ನೋತ್ತರಗಳು ನನ್ನೊಳಗೆ ಪುಟಿದೇಳು ತ್ತಿದ್ದರೂ ತೋರ್ಪಡಿಸದೇ ಮುಗ್ಗುಮ್ಮಾಗಿ ಅವರ ಹಿಂದಿನ ಸೀಟಿನಲ್ಲೇ ಕುಳಿತಿದ್ದೆ.

ನೀವು ಹೇಳಿದ್ದು ಆರು ಗಂಟೆಗಲ್ಲವೇ, ಹತ್ತು ನಿಮಿಷ ಬೇಗನೇ ಬಂದಿದ್ದೀರಿ. ಪರವಾಗಿಲ್ಲ ಒಳಗೆ ಕುಳಿತಿರಿ, ನಾನು ತಯಾರಾಗಿ ಬರುತ್ತೇನೆ ಎಂದರು. ಸಮಯ ಪಾಲನೆಯೆಂದರೆ ಹತ್ತು ನಿಮಿಷ ಮೊದಲೂ ಅಲ್ಲ ತಡವಾಗಿಯೂ ಅಲ್ಲ ಎಂಬುದನ್ನು ಸರಸ್ವತಿ ಪುತ್ರರೆಂದೇ ಖ್ಯಾತವಾಗಿರುವ ಎಸ್.ಎಲ್.ಭೈರಪ್ಪ ಅವರು ಅರ್ಥ ಮಾಡಿಸಿದ್ದರು. ನಾನು ಮೂಕನಾಗಿ ನಿಂತಿದ್ದೆ.

ಅಂದು ಶುಕ್ರವಾರ, ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಜನ್ಮದಿನ. ಅವರ ಮೂರು ಕೃತಿ ಹಾಗೂ ಜತೆಗೆ ಕಿರಣ್ ಉಪಾಧ್ಯಾಯ ಅವರ ’ವಿಶ್ವತೋಮುಖ’ ಕೃತಿಯ ಬಿಡುಗಡೆ ಸಮಾರಂಭವು ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು. ಕಾರ್ಯಕ್ರಮಕ್ಕೆ ನಾಡಿನ ಸಾಕ್ಷಿಪ್ರಜ್ಞೆ ಯೆಂದೇ ಪರಿಚಿತರಾದ ಎಸ್.ಎಲ್.ಭೈರಪ್ಪ ಅವರೇ ಮುಖ್ಯ ಅತಿಥಿ. ಓದುಗ ಮನಸ್ಸುಗಳು ಭೈರಪ್ಪ ಅವರನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದರು.

ಅಂತಹ ಭೈರಪ್ಪ ಅವರನ್ನು ಮೈಸೂರಿನಿಂದ ಬೆಂಗಳೂರಿನ ಕಾರ್ಯಕ್ರಮಕ್ಕೆ ಕರೆ ತರುವ ಹೊಣೆ ನನ್ನದಾಗಿತ್ತು. ಸುಲಭ ಸಾಧ್ಯವಲ್ಲದ ಈ ಸುದೈವ ನನ್ನ ಪಾಲಿಗೆ ಬಂದದ್ದು, ಅವರ ಜತೆ ಮೂರು ಗಂಟೆ ಪ್ರಯಾಣ ಮಾಡಿದ್ದು ನನ್ನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ವಿಶ್ವೇಶ್ವರ ಭಟ್ಟರ ಸಾಹಿತ್ಯಪ್ರೇಮಿ, ನನ್ನ ತಂದೆಯ ಆತ್ಮೀಯರು ಹಾಗೂ ನಂಜನಗೂಡಿನ ಉದ್ಯಮಿ ಎಸ್.ಸುಕುಮಾರ್ ಅವರ ಕಾರಿನಲ್ಲಿ ನಮ್ಮ ಪ್ರಯಾಣ ಸಾಗಿ ಬಂತು.

ಭೈರಪ್ಪನವರು ಸಮಯ ಪಾಲನೆಯಲ್ಲಿ ಕಟ್ಟುನಿಟ್ಟು ಎಂಬುದನ್ನು ಪತ್ರಿಕೆಯ ಸಂಪಾ ದಕೀಯ ಸಲಹೆಗಾರರಾದ ನಂಜನ ಗೂಡು ಮೋಹನ್ ಅವರು ವಾರದ ಮೊದಲಿ ನಿಂದಲೇ ನೆನಪಿಸುತ್ತಿದ್ದರು. ನಾನು ಸಮಯ ಪಾಲನೆ ಮಾಡಲಾಗದೇ ತಡ ಮಾಡಿ ನಂತರ ಯಾವುದೇ ನೆಪ ಹೇಳುವಂತಿಲ್ಲ ಎಂಬುದು ಅವರ ಕಟ್ಟಪ್ಪಣೆಯಾಗಿತ್ತು. ಅಷ್ಟೇ ನಿಷ್ಠೆಯಿಂದ ನಾನೂ ಕೂಡ ಮಾನಸಿಕವಾಗಿ ಸಿದ್ಧನಾಗಿದ್ದೆ. ಅದೇ ಉತ್ಸಾಹದಲ್ಲಿ ಸುಕುಮಾರ್ ಅವರನ್ನೂ ಕರೆದುಕೊಂಡು ಮುಂಜಾನೆ ೫.೪೫ಕ್ಕೇ ಭೈರಪ್ಪ ಅವರ ಮನೆ ಬಾಗಿಲು ಬಡಿದೆ!

ಕನ್ನಡದ ಮನಸುಗಳು ಆರಾಧಿಸುವ ಅಕ್ಷರ ಜೀವಿಯೊಬ್ಬರು ಸಹಜವಾಗಿ, ಸರಳವಾಗಿ ಮನೆ ಬಾಗಿಲು ತೆರೆದು ಬಂದರು, ಪ್ಯಾಂಟ್ ಮತ್ತು ಬನಿಯನ್‌ನಲ್ಲಿದ್ದ ಅವರನ್ನು ಒಂದು ಕ್ಷಣ ನಂಬಲೇ ಆಗಲಿಲ್ಲ. ಸರಳವಾಗಿರುವುದೇ ಶ್ರೇಯಸ್ಸು ಎಂಬಂತಿತ್ತು ಅವರ ಸರಳತೆ. ನಾವು ಬೇಗ ಹೋಗಿದ್ದರೂ, ಅವರು ಕೊಂಚವೂ ತಡ ಮಾಡದೇ ಸರಿಯಾಗಿ ಆರು ಗಂಟೆಗೆ ಸಿದ್ಧವಾಗಿ ಹೊರಬಂದರು. ಕಪ್ಪು ಪ್ಯಾಂಟ್, ನೀಲಿ ಶರ್ಟ್ ಮತ್ತು ಬ್ರೌನ್ ವೆಸ್ಟ್ ಕೋಟ್ ಧರಿಸಿ, ತಾವಿನ್ನೂ ಬರೀ 92 ವರ್ಷದ ಶಿಸ್ತಿನ ಸಿಪಾಯಿ ಎಂಬುದನ್ನು ಮತ್ತೆ ಖಚಿತ ಪಡಿಸಿದರು.

ಯಾರೊಬ್ಬರ ಸಹಾಯವಿಲ್ಲದೇ, ತಮ್ಮ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಂಡು, ತಾವೇ ಶೂ ಒರಿಸಿ ಹಾಕಿಕೊಂಡಿದ್ದನ್ನು ಮೂಖನಾಗಿ ನೋಡಿದೆ. ಅಂತಹ ಜ್ಞಾನಿಗಳೇ ಅಷ್ಟು ಸರಳವಿರುವಾಗ ನನ್ನ ಜೀವನ ಹೇಗಿರಬೇಕು ಎಂದು ಮನಸ್ಸು ನನ್ನೊಳಗೇ ತಿದ್ದಿ-ತೀಡಿ ಮಾಡಿಕೊಳ್ಳುತ್ತಿತ್ತು. ಕಾರಿನ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವೆ ಎಂದ ಭೈರಪ್ಪನವರು, ಕಾರನ್ನೇರಿದವರೇ ತಮ್ಮ ಮನೆಯ ಬಳಿ ಬಂದ ದಿನಪತ್ರಿಕೆಯನ್ನು ಕೊಳ್ಳಲು ಹೇಳಿದರು. ಅದರಂತೆ ನಾನು ವಿಶ್ವವಾಣಿ, ಕನ್ನಡಪ್ರಭ, ಮೈಸೂರು ಮಿತ್ರ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳನ್ನು ಪಡೆದುಕೊಂಡೆ.

ಅಲ್ಲಿಂದ ನಮ್ಮ ಪ್ರಯಾಣ ಆರಂಭವಾಯಿತು. ಸುಮಾರು 6.15ರಷ್ಟರಲ್ಲಿ ಕಾರು ಮೈಸೂರು-ಬೆಂಗಳೂರು ಹೆದ್ದಾರಿಗೆ ಬಂದು ಸೇರಿತು. ಆಗವರು ಪತ್ರಿಕೆ ಕೊಡಿ ಎಂದು ಕೇಳಿ ಪಡೆದು ಓದಿನೊಳಗೆ ಜಾರಿಕೊಂಡರು. ಕಾರು ರಸ್ತೆಯನ್ನು ಸೀಳಿಕೊಂಡು, ಸೂರ್ಯನ ಕಿರಣಗಳನ್ನು ಸ್ವಾಗತಿಕೊಂಡು ಮುಂದೆ ಸಾಗುತ್ತಿತ್ತು. ಕಾರಿನೊಳಗೆ ಸಂಪೂರ್ಣ ಮೌನ, ಯಾವ ಕ್ಷಣವಾದರೂ ನನ್ನನ್ನೇನಾದರೂ ಕೇಳಬಹುದೆಂಬ ಎಚ್ಚರ ನನ್ನಲ್ಲಿ!

ಪತ್ರಿಕೆ ಓದುತ್ತಲೇ ಇದ್ದರು, ಅಷ್ಟರಲ್ಲಿ ಮದ್ದೂರು ದಾಟಿ ಬಂದಿದ್ದ ನಾವು, ಸರ್ ಎಲ್ಲಿ ತಿಂಡಿ ತಿನ್ನಲು ಬಯಸುತ್ತೀರೋ ಅಲ್ಲಿ ತಿಂಡಿ ತಿನ್ನೋಣ ಎಂದು ಕೇಳಿದೆವು. ಆಗ ಅವರೇ, ರಾಮನಗರದ ಕಾಮತ್ ಲೋಕ ರುಚಿಯಲ್ಲಿ ತಿಂಡಿ ಮಾಡೋಣ, ಸ್ವಲ್ಪ ಕ್ಲೀನ್ ಆಗಿರುತ್ತದೆ ಎಂದರು. ಎಸ್, ಹಾಗೇ ಆಗಲಿ ಎಂದು ನಾವು ಸಾಗಿ ಬರುವಾಗ, ನಂಜನಗೂಡು ಮೋಹನ್ ಸರ್ ನಮಗೆ ಕರೆ ಮಾಡಿ, ಎಲ್ಲಿದ್ದೀರಿ ತಿಂಡಿ ಆಯ್ತೆ? ಎಂದು ಕೇಳಿದರು. ಇಲ್ಲ ಈಗ ಮಾಡಲು ಕಾರ್ ನಿಲ್ಲಿಸಲಿದ್ದೇವೆ ಎಂದೆವು. ಆಗವರು, ಬೇಡ ಸೂತ್ತೂರು ಶ್ರೀಗಳು, ಭೈರಪ್ಪನವರನ್ನು ಬೆಂಗಳೂರಿನ ಜಯನಗರದ ಸುತ್ತೂರು ಸದನಕ್ಕೆ ಉಪಹಾರಕ್ಕೆ ಆಹ್ವಾನಿಸಿದ್ದಾರೆ. ನೀವು ನೇರವಾಗಿ ಭೈರಪ್ಪ ಅವರನ್ನು ಅಲ್ಲಿಗೆ ಕರೆತನ್ನಿ ಎಂದು ಸೂಚಿಸಿದರು, ಇದನ್ನು ತಿಳಿಸಿದ್ದಕ್ಕೆ ಭೈರಪ್ಪನವರೂ ಸಮ್ಮತಿಸಿದರು.

ಬೆಳಗ್ಗೆ 9.30ಕ್ಕೆ ಸರಿಯಾಗಿ ನಾವು ಬೆಂಗಳೂರಿನ ಬನಶಂಕರಿಯಲ್ಲಿನ ಸುತ್ತೂರು ಸದನ ತಲುಪಿದೆವು. ಬಿಸಿಯಾದ ಬೋಳು  ಪ್ಪಿಟ್ಟು, ಇಡ್ಲಿ- ಸಾಂಬಾರು, ಕೇಸರಿಬಾತ್, ಪಕೋಡ ಮತ್ತು ಉದ್ದಿನ ವಡೆ ತಯಾರಾಗಿತ್ತು. ಭೈರಪ್ಪ ಅವರಿಗೆ ಕಾದಿರಿಸಿದ್ದ ಕೋಣೆಯಲ್ಲಿ ಅವರನ್ನು ಬಿಟ್ಟು, ಅವರಿಗೆ ಫಲಾಹಾರದ ವ್ಯವಸ್ಥೆ ಮಾಡಿ, ನಮ್ಮ ಬ್ಯಾಟಿಂಗ್ ಮುಗಿಸಿಕೊಂಡೆವು, ಸುತ್ತೂರು ಮಠ ನಿಜಕ್ಕೂ ದಾಸೋಹದ ನಿಽ. ಅಲ್ಲಿ ಪ್ರಸಾದ ಸವಿದವರೇ ಧನ್ಯ.

ಸಮಯ ಪರಿಪಾಲನೆಯಲ್ಲಿ ಸುತ್ತೂರು ಶ್ರೀಗಳು ಭೈರಪ್ಪನವರಷ್ಟೇ ಕಟ್ಟುನಿಟ್ಟು. 10 ಗಂಟೆಗೆ ಕಾರ್ಯಕ್ರಮವಿದ್ದರೆ ೧೦ಕ್ಕೆ ಸರಿಯಾಗಿ ವೇದಿಕೆ ಯಲ್ಲಿರುತ್ತಾರೆ. ಹೀಗಾಗಿ 10.30ಕ್ಕಿದ್ದ ಕಾರ್ಯಕ್ರಮಕ್ಕೆ ಸ್ವಾಮಿಗಳು 10.10ಕ್ಕೆ ಹೊರಡುವುದಾಗಿ ತಿಳಿಸಿ ದರು. ಕಾರ್ಯಕ್ರಮದ ಸ್ಥಳ ಹತ್ತಿರವಿದ್ದರೂ, ಬೆಂಗಳೂರು ಟ್ರಾಫಿಕ್ ನಂಬಲಾಗುವುದಿಲ್ಲ, ಹಾಗಾಗಿ ಬೇಗ ಹೊರಡೋಣ ಎಂದು ಶ್ರೀಗಳೇ ಹೇಳಿದರು.

ಶ್ರೀಗಳ ಕಾರಿನ ಭೈರಪ್ಪನವರು ಕುಳಿತರು, ನಾವು ಅವರನ್ನು ನಮ್ಮ ಕಾರಿನಲ್ಲಿ ಹಿಂಬಾಲಿಸಿ ಹೊರಟೆವು. 10.25ಕ್ಕೆ ಸರಿಯಾಗಿ ಕಾರ್ಯಕ್ರಮದ ಸ್ಥಳದಲ್ಲಿದ್ದೆವು. ಸಂಪಾದಕರಾದ ವಿಶ್ವೇಶ್ವರ ಭಟ್ಟರು, ಸುತ್ತೂರು ಶ್ರೀ ಹಾಗೂ ಭೈರಪ್ಪ ಅವರ ಕಾಲಿಗೆ ನಮಸ್ಕರಿಸಿ ಸಭಾಂಗಣಕ್ಕೆ ಸ್ವಾಗತಿಸಿದರು. ನಂತರ ನಡೆದ ಸಂಭ್ರಮಕ್ಕೆ ನೂರಾರು ಮಂದಿ ಸಾಕ್ಷಿಯಾದರು.
ಸಮಾರಂಭ ಮುಗಿಸಿ ಹೊರನಡೆ ಯುವಾಗ ನನ್ನ ಪಾಲಿಗೆ ಇನ್ನೊಂದು ಅನುಭೂತಿಯ ದರ್ಶನವಾಯಿತು. ಜ್ಞಾನಕ್ಕೆ ಸಿಗುವ ಸ್ಥಾನವೇನು, ಗೌರವ ವೇನು ಎಂಬುದನ್ನು ಕಣ್ಣಾರೆ ನೋಡುವ ಅವಕಾಶ ಸಿಕ್ಕಿತ್ತು.

ಸಭಾಂಗಣದಿಂದ ಹೊರಬಂದ ಭೈರಪ್ಪನವರ ಕಾಲು ಮುಟ್ಟಿ ನಮಸ್ಕರಿಸಲು ಜನರಾಶಿಯೇ ನೆರೆದಿತ್ತು. ಸ್ವಾಮೀಜಿಗಳನ್ನು ಹೊರತು ಪಡಿಸಿ ಸಾಹಿತಿ, ಬರಹಗಾರ, ಲೇಖಕರಿಗೆ ಮಾತ್ರವೇ ಈ ಮಟ್ಟಿನ ಗೌರವ ಎನಿಸುವಂತೆ ಭೈರಪ್ಪ ಹಾಗೂ ವಿಶ್ವೇಶ್ವರ ಭಟ್ ಅವರಿಗೆ ಓದುಗರು ಅಭಿಮಾನದ ಹೊಳೆ ಹರಿಸಿದ್ದರು. ಅಭಿಮಾನಿಗಳ ನಡುವೆಯೇ ಹೇಗೋ ದಾರಿ ಮಾಡಿಕೊಂಡು ಸುತ್ತೂರು ಶ್ರೀಗಳ ಕಾರಿನಲ್ಲಿ ಸುಧಾ ನಾರಾಯಣಮೂರ್ತಿ, ಭೈರಪ್ಪನವರು ಸುತ್ತೂರು ಸದನಕ್ಕೆ ಮಧ್ಯಾಹ್ನದ ಊಟಕ್ಕೆ ತೆರಳಿದರು.

ಅವರನ್ನು ಮತ್ತೊಮ್ಮೆ ನಾನು ಮತ್ತು ಸುಕುಮಾರ್ ಹಿಂಬಾಲಿಸಿದೆವು. ಊಟದ ನಂತರ ಭೈರಪ್ಪನವರು ಮತ್ತೆ ನಮ್ಮ ಕಾರಿ ನಲ್ಲಿ ಕುಳಿತರು, ಪ್ರಯಾಣ ಮೈಸೂರಿನೆಡೆ ಆರಂಭವಾಯಿತು. ದೇಶದ ಸ್ವಾತಂತ್ರ್ಯ, ಅದರ ಹಿನ್ನಲೆ, ಟಿಪ್ಪು ಸುಲ್ತಾನ, ಹೈದರಾಲಿ ಬಗೆಗಿನ ಕೆಲವು ಮುಚ್ಚಿಹೋದ ಸತ್ಯಗಳು, ದೇಶದ ಇಂದಿನ ಪರಿಸ್ಥಿತಿಗೆ ಗಾಂಧಿ, ನೆಹರು, ಇಂದಿರಾ, ಸೋನಿಯಾ ಅವರ ಕುಟುಂಬದ ಕೊಡುಗೆ ಹಾಗು ಆ ಕುಟುಂಬ ಅಪಸವ್ಯಗಳ ಬಗ್ಗೆ ಎಳೆ ಎಳೆಯಾಗಿ ವಿಚಾರ ಹಂಚಿಕೊಂಡರು.

ಆಗಿನ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುತ್ತಿರುವ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮ, ರಾಜ್ಯದವರಾದ ಎಚ್.ಡಿ.ದೇವೇಗೌಡ, ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಅವರ ತಲೆಮಾರಿನ ರಾಜಕಾರಣದ ಕೆಲವು ಸಂಗತಿಗಳು ಮತ್ತು ಪ್ರಸಂಗಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ತಾವು ಈವರೆಗೂ ಸುತ್ತಿ ಬಂದಿರುವ ದೇಶ, ವಿದೇಶಗಳ ಬಗ್ಗೆ ವಿಚಾರ ಹಂಚಿಕೊಂಡರು.

ಮನೆ ತಲುಪುವ ವೇಳೆಗಾಗಲೇ 7.30ರ ಗಡಿ ದಾಟಿತ್ತು, ನೂರರ ಹೊಸ್ತಿಲಲ್ಲಿರುವ ಹಿರಿಯ ಜೀವದ ಮುಖದಲ್ಲಿ ಎಳ್ಳಷ್ಟೂ ಆಯಾಸ ಕಂಡು ಬರಲಿಲ್ಲ. ಜ್ಞಾನಗಂಗೋತ್ರಿಯ ಮುಂದೆ ನಾನು ಲಿಲಿಪುಟ್ ಎಂದು ನನಗಾಗ ಅರಿವಾಯಿತು. ವಿಶ್ವೇಶ್ವರ ಭಟ್ಟರು ಹಿಂದೊಮ್ಮೆ ತಮ್ಮ ಲೇಖನಕ್ಕೆ ನೀಡಿದ್ದ ಶೀರ್ಷಿಕೆ ನೆನಪಾಯಿತು ‘ದೊಡ್ಡವರು ಎಂದಿಗೂ ದೊಡ್ಡವರೇ’.

ತಮ್ಮ ಅನುಭವದ ಅರ್ಧದಷ್ಟೂ ವಯಸ್ಸಾಗಿರದ ನನ್ನಂತವನ ಜತೆಗೂ ಯಾವ ಹಮ್ಮು ಬಿಮ್ಮಿಲ್ಲದೇ ತಮ್ಮನ್ನು ತಾವು ಅನಾವರಣ ಮಾಡಿಕೊಂಡರು. ಆಗೆಲ್ಲ ನನಗೆ ಜ್ಞಾನಗಂಗೋತ್ರಿ ಧುಮ್ಮಿಕ್ಕಿ ಹರಿಯುವಾಗ ಬೊಗಸೆಯಲ್ಲಿ ಹಿಡಿದು ಕೊಳ್ಳುತ್ತಿದ್ದೇನೆ ಎನಿಸುತಿತ್ತು. ಮೈಸೂರು ಬಂದಿದ್ದೇ ಗೊತ್ತಾಗಲಿಲ್ಲ, ಕುವೆಂಪು ನಗರದ ಅವರ ಮನೆ ತಲುಪಿದಾಗಲೇ ಭೈರಪ್ಪನವರು ತಮ್ಮ ಮಾತುಗಳಿಗೆ ವಿರಾಮ ನೀಡಿದರು.