ಇತ್ತೀಚೆಗಿನ ಕಾಮನ್ವೆಲ್ತ್ ಗೇಮ್ಸ್ ಆವೃತ್ತಿಗಳಲ್ಲಿ ಭರ್ಜರಿ ನಿರ್ವಹಣೆಯೊಂದಿಗೆ ಮಿಂಚುತ್ತಿದ್ದ ಭಾರತ ಈ ಬಾರಿ ಶೂಟಿಂಗ್ ಸ್ಪರ್ಧೆ ಇಲ್ಲದೆ ಹಿನ್ನಡೆ ಎದುರಿಸಿದೆ. ಕುಸ್ತಿ, ಬಾಕ್ಸಿಂಗ್, ವೇಟ್ಲಿಫ್ಟಿಂಗ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, ಟೇಬಲ್ ಟೆನಿಸ್ ನಲ್ಲಿ ಹೆಚ್ಚಿನ ಪದಕ ಬಾಚಿಕೊಳ್ಳುವತ್ತ ಭಾರತ ಗಮನ ಹರಿಸಲಿದೆ.
111 ಪುರುಷರು ಮತ್ತು 104 ಮಹಿಳೆಯರ ಸಹಿತ ಭಾರತ ಒಟ್ಟು 215 ಕ್ರೀಡಾಪಟುಗಳ ತಂಡದೊಂದಿಗೆ ಕಣಕ್ಕಿಳಿಯಲಿದ್ದು, 16 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ದೆಹಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ 38 ಚಿನ್ನ, 27 ಬೆಳ್ಳಿ, 36 ಕಂಚಿನ ಸಹಿತ 101 ಪದಕ ಜಯಿಸಿದ್ದು ಕೂಟದ ಇತಿಹಾಸದಲ್ಲಿ ಭಾರತದ ಸರ್ವಶ್ರೇಷ್ಠ ನಿರ್ವಹಣೆಯಾಗಿದೆ.
2018ರ ಗೋಲ್ಡ್ಕೋಸ್ಟ್ ಗೇಮ್ಸ್ನಲ್ಲಿ ಭಾರತ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚಿನ ಸಹಿತ ಒಟ್ಟು 66 ಪದಕ ಜಯಿಸಿತ್ತು. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್ನಲ್ಲಿ 1 ಚಿನ್ನ, 2 ಬೆಳ್ಳಿ, 4 ಕಂಚಿನ ಸಹಿತ 7 ಪದಕ ಗೆದ್ದಿದ್ದ ಶ್ರೇಷ್ಠ ನಿರ್ವಹಣೆ ಭಾರತಕ್ಕೆ ಸ್ಫೂರ್ತಿ ತುಂಬಿದೆ.
22ನೇ ಕಾಮನ್ವೆಲ್ತ್ ಗೇಮ್ಸ್
72 ದೇಶಗಳು
5,054 ಕ್ರೀಡಾಪಟುಗಳು
20 ಕ್ರೀಡೆಗಳು
280 ಸ್ವರ್ಣ ಸ್ಪರ್ಧೆಗಳು
12 ದಿನಗಳು
15 ಕ್ರೀಡಾಂಗಣಗಳು
215 ಭಾರತದ ಸ್ಪರ್ಧಿಗಳು
ಪಿವಿ ಸಿಂಧು ಧ್ವಜಧಾರಿ: ನೀರಜ್ ಚೋಪ್ರಾ ಗೈರಿನಲ್ಲಿ ಒಲಿಂಪಿಕ್ಸ್ ಅವಳಿ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗುವ ಅವಕಾಶ ಒಲಿದಿದೆ. 2018ರ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಅವರು ಭಾರತದ ಧ್ವಜಧಾರಿಯಾಗಿದ್ದರು. ಆರಂಭೋತ್ಸವದ ಪಥ ಸಂಚಲನ ದಲ್ಲಿ ಭಾರತದಿಂದ ಗರಿಷ್ಠ 164 ಮಂದಿ ಭಾಗವಹಿಸಲು ಅವಕಾಶ ಲಭಿಸಿದೆ.
ಪ್ರತಿ 4 ವರ್ಷಕ್ಕೊಮ್ಮೆ ಆಯೋಜನೆಯಾಗುವ ಕಾಮನ್ವೆಲ್ತ್ ಗೇಮ್ಸ್ ಮೊದಲು ಆರಂಭ ವಾಗಿದ್ದು 1930ರಲ್ಲಿ. ಬ್ರಿಟಿಷ್ ವಸಾಹತುಗಳಾಗಿದ್ದ ದೇಶಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತವೆ. ಸದ್ಯ 52 ಸದಸ್ಯ ರಾಷ್ಟ್ರಗಳಿದ್ದು ಕೂಟದಲ್ಲಿ 72 ದೇಶಗಳು ಭಾಗ ವಹಿಸುತ್ತಿವೆ.
ಕೆನಡದ ಹ್ಯಾಮಿಲ್ಟನ್ನಲ್ಲಿ ಮೊದಲ ಬಾರಿಗೆ ಈ ಕ್ರೀಡಾಕೂಟ ನಡೆದಿತ್ತು. 1930ರಿಂದ 1950ರವರೆಗೆ ಕೂಟವನ್ನು ಬ್ರಿಟಿಷ್ ಎಂಪೈರ್ ಗೇಮ್ಸ್, 1954ರಿಂದ 66ರವರೆಗೆ ಬ್ರಿಟಿಷ್ ಎಂಪೈರ್ ಮತ್ತು ಕಾಮನ್ವೆಲ್ತ್ ಗೇಮ್ಸ್, 1970ರಿಂದ 74ರವರೆಗೆ ಬ್ರಿಟಿಷ್ ಕಾಮನ್ವೆಲ್ತ್ ಗೇಮ್ಸ್ ಎಂದು ಕರೆಯಲಾಗುತ್ತಿತ್ತು. 1978ರಿಂದ ಕಾಮನ್ವೆಲ್ತ್ ಗೇಮ್ಸ್ ಎನ್ನುವ ಹೆಸರಿನಿಂದ ಕೂಟ ಗುರುತಿಸಿಕೊಂಡಿದೆ.
ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ವರ್ಣರಂಜಿತ ಸಮಾರಂಭದೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ.
3ನೇ ಬಾರಿ ಇಂಗ್ಲೆಂಡ್ ಆತಿಥ್ಯ: ಇಂಗ್ಲೆಂಡ್ ಆತಿಥ್ಯದಲ್ಲಿ ಇದು 3ನೇ ಕಾಮನ್ವೆಲ್ತ್ ಗೇಮ್ಸ್ ಆಗಿದೆ. ಈ ಮುನ್ನ 1934 (ಲಂಡನ್) ಮತ್ತು 2002ರಲ್ಲಿ (ಮ್ಯಾಂಚೆಸ್ಟರ್) ನಡೆದಿತ್ತು. ಕಳೆದ 2 ದಶಕಗಳಲ್ಲಿ ಬ್ರಿಟನ್ನಲ್ಲಿ ಇದು 3ನೇ ಗೇಮ್ಸ್ ಆಗಿದೆ. 2014ರಲ್ಲಿ ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆದಿತ್ತು. ಇನ್ನು ಕಳೆದ 2 ದಶಕಗಳಲ್ಲಿ ಬ್ರಿಟನ್&ಆಸ್ಟ್ರೆಲಿಯಾ ಹೊರತಾಗಿ ಭಾರತ (2010) ಮಾತ್ರ ಈ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದೆ. ಮೂಲ ಯೋಜನೆಯ ಪ್ರಕಾರ ದಣ ಆಫ್ರಿಕಾದ ಡರ್ಬನ್ನಲ್ಲಿ ಈ ಕ್ರೀಡಾಕೂಟ ನಡೆಯಬೇಕಾಗಿತ್ತು. ಆರ್ಥಿಕ ಬಿಕ್ಕಟ್ಟಿನಿಂದಾಗಿ ಡರ್ಬನ್ 2017ರಲ್ಲೇ ಹಿಂದೆ ಸರಿದಿತ್ತು.