Saturday, 23rd November 2024

ಸಭಾಪತಿಗಳ ಕ್ಷಮೆಯಾಚಿಸಿದರೆ ಅಮಾನತು ರದ್ದು: ಪ್ರಹ್ಲಾದ್‌ ಜೋಶಿ

ನವದೆಹಲಿ: ಸಂಸದರು ತಮ್ಮ ವರ್ತನೆಗೆ ಸಭಾಪತಿಗಳ ಬಳಿ ಕ್ಷಮೆ ಯಾಚಿಸಿ ದರೆ ಅವರ ಅಮಾನತು ರದ್ದುಗೊಳಿಸುವ ಬಗ್ಗೆ ಪರಿಶೀಲನೆ ನಡೆಸಬಹುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

ಸಂಸತ್‌ ಅಧಿವೇಶನ ಮುಂದುವರಿದಿರುವಂತೆಯೇ ರಾಜ್ಯಸಭೆಯಿಂದ ಆಮ್‌ ಆದ್ಮಿ ಪಕ್ಷದ ಸಂಸದ ಸಂಜಯ ಸಿಂಗ್‌ ಅವರನ್ನು ವಾರ ಪೂರ್ತಿ ಕಲಾಪದಿಂದ ಅಮಾನತುಗೊಳಿಸಲಾಗಿದೆ. ರಾಜ್ಯಸಭೆಯ 20 ಮತ್ತು ಲೋಕಸಭೆಯ ನಾಲ್ವರು ಸದಸ್ಯರನ್ನು ಅಮಾನತುಗೊಳಿಸಿದ್ದರ ವಿರುದ್ಧ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ಪ್ರತಿಭಟನೆ ಬಿರುಸುಗೊಳಿಸಿವೆ.

ಬೆಲೆ ಏರಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ಹೇಳುತ್ತಾ ಬಂದಿದ್ದೇವೆ. ಇದರ ಹೊರತಾಗಿಯೂ ಕೂಡ ಸಂಸದರು ಸದನದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸಚಿವ ಜೋಶಿ ದೂರಿದರು.

ನಿಯಮ ಬಾಹಿರ: ಇಪ್ಪತ್ತು ಮಂದಿ ರಾಜ್ಯಸಭೆ ಸಂಸದರ ಅಮಾನತು ಕಾನೂನು ಬಾಹಿರ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. “ಜನರ ಧ್ವನಿಯನ್ನು ಅಡಗಿಸಿ, ಏಕಪಕ್ಷೀಯವಾಗಿ ನರೇಂದ್ರ ಮೋದಿ ಸರಕಾರ ಪ್ರಜಾಸತ್ತಾತ್ಮಕ ವಲ್ಲದ ದಾರಿಯ ಮೂಲಕ ಆಡಳಿತ ನಡೆಸಲು ಅವಕಾಶ ನೀಡಲೇಬಾರದು’ ಎಂದು ಹೇಳಿದ್ದಾರೆ.

ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಜತೆಗೆ ವಿಪಕ್ಷಗಳ ನಾಯಕರು ಸಭೆ ನಡೆಸಿದ್ದಾರೆ. ವಿಪಕ್ಷಗಳ ನಾಯಕರು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ರದ್ದು ಮಾಡಬೇಕು ಎಂದು ಕೋರಿದ್ದಾರೆ. ಪ್ರತಿಕ್ರಿಯೆ ನೀಡಿದ ನಾಯ್ಡು, ಸಂಸದರು ಕ್ಷಮೆ ಕೋರಿದ ತತ್‌ಕ್ಷಣ ನಿರ್ಧಾರ ವಾಪಸ್‌ ಪಡೆಯುವುದಾಗಿ ಹೇಳಿದ್ದಾರೆ.