Sunday, 24th November 2024

‘ರಾಷ್ಟ್ರಪತ್ನಿ’ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ: ಕ್ಷಮೆ ಕೇಳಲ್ಲವೆಂದ ಅಧೀರ್‌

ನವದೆಹಲಿ: ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ ಅವರ ‘ರಾಷ್ಟ್ರಪತ್ನಿ’ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ ಹೊರ ಹಾಕಿದ್ದು, ಕ್ಷಮೆಗೆ ಪಟ್ಟು ಹಿಡಿದಿದೆ. ಈ ವೇಳೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ನಾನು ತಪ್ಪಾಗಿ ಹೇಳಿದ್ದೇನೆ ಎಂದು ಅಧೀರ್ ರಂಜನ್ ಚೌಧುರಿ ಹೇಳಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಅಧೀರ್ ಚೌಧರಿ ಈ ಹೇಳಿಕೆ ನೀಡಿದ್ದರು.

ಹೇಳಿಕೆಗೆ ಕಿಡಿ ಕಾರಿರುವ ಬಿಜೆಪಿ ಸಂಸದರು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಚೌಧರಿ ಅವರು ದ್ರೌಪದಿ ಮುರ್ಮು ಅವರನ್ನು ‘ರಾಷ್ಟ್ರಪತ್ನಿ’ ಎಂದು ಸಂಬೋಧಿಸಿದ್ದಾರೆ. ಕಾಂಗ್ರೆಸ್ ಬುಡಕಟ್ಟು ವಿರೋಧಿ, ದಲಿತ ಮತ್ತು ಮಹಿಳಾ ವಿರೋಧಿ ಎಂದು ದೇಶಕ್ಕೆ ತಿಳಿದಿದೆ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಕಾಂಗ್ರೆಸ್ ಸಂಸದ ಅಧೀರ್ ಚೌಧರಿ ಅವರ ‘ರಾಷ್ಟ್ರಪತ್ನಿ’ ಹೇಳಿಕೆಗೆ ಸೋನಿಯಾ ಗಾಂಧಿ ಭಾರತ ಮತ್ತು ದೇಶದ ರಾಷ್ಟ್ರಪತಿ ಗಳಲ್ಲಿ ಕ್ಷಮೆಯಾಚಿಸಬೇಕು’ ಎಂದು ಹಣಕಾಸು ಸಚಿವೆ ಮತ್ತು ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್ ಒತ್ತಯಿಸಿದರು.

ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಅಧೀರ್ ರಂಜನ್ ಚೌಧುರಿ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾನು ತಪ್ಪಾಗಿ ‘ರಾಷ್ಟ್ರಪತ್ನಿ’ ಎಂದು ಹೇಳಿದ್ದೇನೆ. ಆಡಳಿತ ಪಕ್ಷವು ಉದ್ದೇಶಪೂರ್ವಕವಾಗಿ ಚಿಕ್ಕ ವಿಷಯವನ್ನು ದೊಡದ್ದು ಮಾಡಲು ಪ್ರಯತ್ನಿಸುತ್ತಿದೆ” ಎಂದರು.